ಕಡಲ ಕರಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಲ ಕರಡಿ

ಕಡಲ ಕರಡಿ[ಬದಲಾಯಿಸಿ]

ಪಿನ್ನಿಪೀಡಿಯ ಗಣದ ಓಟರೈಯಿಡೀ ಕುಟುಂಬಕ್ಕೆ ಸೇರಿದ ಸಮುದ್ರವಾಸಿ ಸ್ತನಿ (ಸೀ ಬೇರ್). ಫರ್ ಸೀಲ್ (ತುಪ್ಪುಳ ಸೀಲ್) ಎಂದೂ ಕರೆಯುತ್ತಾರೆ. ಇದು ಕಡಲ ಸಿಂಹದ ಹತ್ತಿರದ ನಂಟ. ಇದರಲ್ಲಿ ಕ್ಯಾಲೊರೈನಸ್ ಮತ್ತು ಆಕೊರ್ಟ್‌ಸಿಫ್ಯಾಲಸ್ ಎಂಬ ಎರಡು ಜಾತಿಗಳು ಬಹು ಮುಖ್ಯವಾದುವು. ಇವುಗಳಲ್ಲಿ ಮೊದಲನೆಯದು ಬೆರಿಂಗ್ ಸಮುದ್ರದ ದ್ವೀಪಗಳು, ಜಪಾನ್ ಮತ್ತು ಅಮೆರಿಕದ ಕೆಲವು ಭಾಗಗಳ ನಿವಾಸಿ. ಎರಡನೆಯದು ನ್ಯೂಜಿಲೆಂಡ್, ಆಸ್ಟ್ರೇಲಿಯ, ಟಾಸ್ಮೇನಿಯ, ಅಮೆರಿಕಗಳ ಸಮುದ್ರತೀರಗಳಲ್ಲಿ ವಾಸಿಸುತ್ತದೆ.[೧][೨]

ಕಡಲ ಕರಡಿ ಲಕ್ಷಣಗಳು[ಬದಲಾಯಿಸಿ]

ಚೆನ್ನಾಗಿ ಬೆಳೆದ ಕ್ಯಾಲೊರೈನಸ್ ಜಾತಿಯ ಗಂಡು ಕಡಲ ಕರಡಿ ಸು. 6' ಉದ್ದವಿದ್ದು 500-700 ಪೌಂ. ತೂಗುತ್ತದೆ. ಹೆಣ್ಣು ಗಂಡಿಗಿಂತ ಚಿಕ್ಕದು. ಇತರ ಸೀಲ್ ಪ್ರಾಣಿಗಳಲ್ಲಿರು ವಂತೆಯೇ ಇದರ ದೇಹವೂ ಜಲವಾಸಕ್ಕೆ ಅನುಕೂಲವಾಗಿದೆ. ಮೈಮೇಲೆ ರೇಷ್ಮೆಯಂಥ ಮೃದುವಾದ ಹಾಗೂ ದಟ್ಟವಾದ ಕೂದಲಿವೆ. ಬಣ್ಣ ಕಪ್ಪು ಮಿಶ್ರಿತ ಬೂದು ಅಥವಾ ಕಂದು. ಸಾಮಾನ್ಯವಾಗಿ ನೀರಿನಲ್ಲಿಯೇ ತಮ್ಮ ಜೀವಿತವನ್ನೆಲ್ಲ ಕಳೆಯುತ್ತವೆ. ತುಂಬ ಚೆನ್ನಾಗಿ ಈಜಬಲ್ಲುವು. ನೆಲದ ಮೇಲೆ ಇತರ ಸೀಲ್ ಪ್ರಾಣಿಗಳಿಗಿಂತ ಉತ್ತಮವಾಗಿ ನಡೆಯಬಲ್ಲವು. ಸಾಮಾನ್ಯವಾಗಿ ಕೆಮ್ಮುವುದು, ಬೊಗಳುವುದು, ಗರ್ಜಿಸುವುದು ಇವುಗಳ ವಾಡಿಕೆ. ಮೀನು, ಸ್ಕ್ವಿಡ್ಡುಗಳು ಮತ್ತಿತರ ಸಾಗರದ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಸಂತಾನೋತ್ಪತ್ತಿಯ ಕ್ರಮ, ಕಾಲ ಎಲ್ಲವೂ ಕಡಲ ಸಿಂಹಗಳಲ್ಲಿನಂತೆಯೇ. ಆದರೆ ತಮ್ಮ ಅಧೀನದ ಪ್ರದೇಶದ ಸ್ವಾಮ್ಯವನ್ನು ಮತ್ತು ಹೆಣ್ಣುಗಳ ಮೇಲಿನ ತಮ್ಮ ಅಧಿಕಾರವನ್ನು ಕಾಪಾಡಿಕೊಳ್ಳುವುದರಲ್ಲಿ ಕಡಲ ಸಿಂಹಗಳಿಗಿಂತ ಇವು ಹೆಚ್ಚಿನ ಆಸಕ್ತಿ ತೋರುವುವಲ್ಲದೆ ಹೋರಾಟವನ್ನೂ ನಡೆಸುತ್ತವೆ. ಕಡಲಸಿಂಹಗಳಲ್ಲಿರುವಂತೆ ಇವುಗಳಲ್ಲಿಯೂ ದಕ್ಷಿಣದ ಕಡೆಗೆ ವಲಸೆ ಹೋಗುವ ಕ್ರಮ ಇದೆ. ಹೀಗೆ ಹೋಗುವಾಗ ತಿಮಿಂಗಿಲಗಳಿಗೆ ತುತ್ತಾಗುವುದೂ ಉಂಟು.[೩][೪]

ಆಕೊರ್ಟ್‌ಸಿಫ್ಯಾಲಸ್[ಬದಲಾಯಿಸಿ]

ಆಕೊರ್ಟ್‌ಸಿಫ್ಯಾಲಸ್ ಜಾತಿಯ ಕಡಲ ಕರಡಿಗಳು ನೋಡುವುದಕ್ಕೆ ಕ್ಯಾಲೊರೈನಸ್ ಜಾತಿಯವುಗಳಂತಿದ್ದರೂ ಗಾತ್ರದಲ್ಲಿ ಚಿಕ್ಕವು. ಇವುಗಳ ಜೀವನಕ್ರಮವೂ ಅವುಗಳಂತೆಯೇ.[೫]

ಕ್ಯಾಲೊರೈನಸ್[ಬದಲಾಯಿಸಿ]

ಈ ಎರಡು ಜಾತಿಯ ಕಡಲ ಕರಡಿಗಳು ತಮ್ಮ ಬೆಲೆಬಾಳುವ ಚರ್ಮದಿಂದ (ಫರ್) ಬಹಳ ಹೆಸರಾಗಿವೆ. ಬಹಳ ಬೇಡಿಕೆಯಿರುವ ಈ ಚರ್ಮಕ್ಕಾಗಿ ಈ ಪ್ರಾಣಿಗಳನ್ನು ಸು. 300 ವರ್ಷಗಳಿಂದಲೂ ಬೇಟೆಯಾಡುತ್ತಿದ್ದಾರೆ. ಇದರಿಂದಾಗಿ ಪ್ರಪಂಚದ ಹಲವಾರು ಕಡೆಗಳಲ್ಲಿ ಇವುಗಳ ಸಂತತಿ ನಶಿಸಿಹೋಗಿದೆ. ಅಮೆರಿಕದ ಸಂಯುಕ್ತಸಂಸ್ಥಾನಗಳು, ರಷ್ಯ, ಕೆನಡ ಮತ್ತು ಜಪಾನ್ ದೇಶಗಳು ಕಡಲ ಕರಡಿಗಳ ಪ್ರಾಮುಖ್ಯವನ್ನು ಅರಿತು ಅವುಗಳ ಬೇಟೆಯನ್ನು ನಿಯಂತ್ರಿಸಲು ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಅವುಗಳ ಸಂತತಿ ಕ್ರಮೇಣ ವರ್ಧಿಸುತ್ತ ಬಂದಿದೆ.[೬]

ಉಲ್ಲೇಖಗಳು[ಬದಲಾಯಿಸಿ]

  1. http://spongebob.wikia.com/wiki/Sea_bear
  2. http://villains.wikia.com/wiki/Sea_Bear
  3. http://spongebob.wikia.com/wiki/Sea_bear
  4. http://villains.wikia.com/wiki/Sea_Bear
  5. http://villains.wikia.com/wiki/Sea_Bear
  6. http://spongebob.wikia.com/wiki/Sea_bear