ಕಡಲ್ಗುದುರೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಒಂದು ಜಾತಿಯ ಕಡಲ ಕುದುರೆ

ಕಡಲ್ಗುದುರೆ[ಬದಲಾಯಿಸಿ]

ಉಷ್ಣ ಮತ್ತು ಸಮಶೀತೋಷ್ಣವಲಯಗಳ ಸಮುದ್ರದ ತೀರಪ್ರದೇಶದಲ್ಲಿ ವಾಸಿಸುವ ಒಂದು ಅಸ್ಥಿಮೀನು. ಕೊಳೆವೆ ಮೀನುಗಳ (ಪೈಪ್ಫಿಷ್) ಸಂಬಂಧಿ. ಲೋಫೋಬ್ರಾಂಕಿಯ ಗಣದ ಸಿಂಗ್ನಾತಿಡೀ ಕುಟುಂಬಕ್ಕೆ ಸೇರಿದೆ; ವೈಜ್ಞಾನಿಕ ನಾಮ ಹಿಪ್ಪೊಕ್ಯಾಂಪಸ್. ಕುದುರೆಯ ತಲೆಯಂಥದೇ ತಲೆ ಮತ್ತು ಅದೇ ರೀತಿ ಬಾಗಿರುವ ಕುತ್ತಿಗೆಯಿರುವುದರಿಂದ ಈ ಪ್ರಾಣಿಗೆ ಕಡಲ ಕುದುರೆ ಎಂಬ ಹೆಸರು ಬಂದಿದೆ. ಇದು ಸಾಮಾನ್ಯವಾಗಿ ತೀರಪ್ರದೇಶದ ಉತ್ತಳ ನೀರಿನಲ್ಲಿ ಸಮುದ್ರಜೊಂಡಿನ ಮಧ್ಯೆ ಹೇರಳವಾಗಿ ಕಂಡುಬಂದರೂ ಕೆಲವು ಸಾರಿ ನದಿಮುಖಜ ಪ್ರದೇಶದಲ್ಲೂ ಕಾಣಬರುವುದುಂಟು.[೧][೨]

ಕಡಲ್ಗುದುರೆಯ ಲಕ್ಷಣಗಳು[ಬದಲಾಯಿಸಿ]

ದೇಹ ತೆಳು, ನೀಳ ಹಾಗೂ ಸಣ್ಣದು. ಉದ್ದ ಸಾಮಾನ್ಯವಾಗಿ 7-12 ಸೆಂಮೀ ಅಮೆರಿಕದ ಪೆಸಿಫಿಕ್ ತೀರಪ್ರದೇಶದ ಹಿಪ್ಪೊಕ್ಯಾಂಪಸ್ ಇಂಜೆನ್ಸ್‌ ಎಂಬ ಪ್ರಭೇದ 30ಸೆಂಮೀ ವರೆಗೆ ಬೆಳೆದರೆ, ಫ್ಲಾರಿಡದ ಬಳಿ ವಾಸಿಸುವ ಹಿ.ಜೊಸ್ಟೆರ್ನೆ ಎಂಬುದು ಕೇವಲ 5 ಸೆಂಮೀ ಉದ್ದವಿದೆ. ದೇಹದ ಮೇಲೆ ಎಲುಬಿನ ಮೈಗಾಪು ಅಥವಾ ತಟ್ಟೆಗಳು ದಟ್ಟವಾಗಿ ಸುವ್ಯವಸ್ಥಿತ ರೀತಿಯಲ್ಲಿ ಜೋಡಣೆಗೊಂಡಿವೆ. ತಲೆಗೂ ದೇಹಕ್ಕೂ ನಡುವಿನ ಕುತ್ತಿಗೆಯ ಭಾಗ ಸುಸ್ಪಷ್ಟ. ಕೊಳವೆಯಾಕಾರದ ಮೂತಿ ಎಲುಬುಗಳ ಕೂಡಣೆಯಿಂದಾಗಿದೆ. ಮೂತಿಯ ತುದಿಯಲ್ಲಿ ಹೀರುವಂಥ ದುಂಡಾದ ಪುಟ್ಟ ಬಾಯಿ ಇದೆ. ಕಿವಿರು ಮುಚ್ಚಳದ ಅಂಚು ದೇಹದೊಡನೆ ಅಂಟಿಕೊಂಡು ಅದರ ಬಿರುಕು ಚಿಕ್ಕ ರಂಧ್ರದಂತೆ ಮೇಲ್ಭಾಗದಲ್ಲಿದೆ. ಒಂದೊಂದು ಕಣ್ಣೂ ಗೋಸುಂಬೆಯ ಕಣ್ಣಿನಂತೆ ಪ್ರತ್ಯೇಕವಾಗಿ ಚಲಿಸಬಲ್ಲುದು. ಬಾಲ ನೀಳವಾಗಿದ್ದು ತುದಿಯವರೆಗೂ ಕ್ರಮಕ್ರಮವಾಗಿ ಚೂಪಾಗುತ್ತದೆ. ಕಡಲ ಕುದುರೆ ತನ್ನ ಬಾಲದ ತುದಿಯಿಂದ ಜೊಂಡು ಮುಂತಾದವಕ್ಕೆ ತಗುಲಿಕೊಂಡು ನೆಟ್ಟಗೆ ವಿಚಿತ್ರ ಭಂಗಿಯಲ್ಲಿ ನಿಲ್ಲಬಲ್ಲುದು. ಇದಕ್ಕೆ ಬಾಲದ ಈಜುರೆಕ್ಕೆಗಳಾಗಲಿ ಶ್ರೋಣಿಯ ಈಜುರೆಕ್ಕೆಯಾಗಲೀ ಇಲ್ಲ. ಎದೆಯ ಭಾಗದಲ್ಲಿ ಒಂದು ಜೊತೆ ಬಲು ಚಿಕ್ಕವಾದ ಎದೆಯ (ಪಕ್ಟೊರಲ್) ಈಜುರೆಕ್ಕೆ ಮತ್ತು ಬೆನ್ನಿನ ಮೇಲೆ ಗುದ ಇರುವ ಮಟ್ಟದಲ್ಲಿ ಒಂದು ಬೆನ್ನಿನ ಈಜುರೆಕ್ಕೆ (ಡಾರ್ಸಲ್ ಫಿನ್) ಮಾತ್ರ ಇವೆ. ಬೆನ್ನಿನ ಈಜುರೆಕ್ಕೆಯೇ ಈಜಲು ನೆರವಾಗುವ ಪ್ರಧಾನಾಂಗ. ಇದು ಚಿಕ್ಕದಾಗಿರುವುದರಿಂದಲೂ ತೆಳುವಾಗಿ ಪಾರದರ್ಶಕವಾಗಿರುವುದರಿಂದಲೂ ಇದನ್ನು ಸುಲಭವಾಗಿ ನೋಡಲಾಗುವುದಿಲ್ಲ. ಕಡಲ್ಗುದುರೆ ಮಂದಗತಿಯಲ್ಲಿ ಮುಂಚಲಿಸುವಾಗ ಬೆನ್ನಿನ ಈಜುರೆಕ್ಕೆಯ ಸುತ್ತ ನೀರಿನಲ್ಲಿ ಮೂಡುವ ತರಂಗಗಳು ತೀವ್ರಗತಿಯಲ್ಲಿರುವುದರಿಂದ ಈ ಈಜುರೆಕ್ಕೆ ಪ್ರೊಪೆಲರ್ ತರಹ ತಿರುಗುತ್ತಿರುವಂತೆ ಕಾಣುತ್ತದೆ.[೩][೪][೫]

ಹಿಪ್ಪೊಕ್ಯಾಂಪಸ್[ಬದಲಾಯಿಸಿ]

ಹಿಪ್ಪೊಕ್ಯಾಂಪಸ್ ಜಾತಿಯ ಕಡಲ್ಗುದುರೆಯಲ್ಲಿ ಹೆಣ್ಣುಗಂಡುಗಳ ದೇಹ ರಚನೆ ಸ್ವಲ್ಪ ಬೇರೆ ಬೇರೆ. ಗಂಡಿನಲ್ಲಿ ಉದರಭಾಗದ ತಳದಲ್ಲಿ ದೇಹಕ್ಕೆ ಅಂಟಿಕೊಂಡಂತೆ ಕಾಂಗರೂ ಪ್ರಾಣಿಗಳಿಗಿರುವಂತೆ ಒಂದು ಕಾಪುಗೂಡು ಸಂಚಿಯಿದೆ (ಬ್ರೂಡ್ ಪೌಚ್). ಈ ಸಂಚಿಯ ಮುಂಭಾಗದಲ್ಲಿ ಒಂದು ಚಿಕ್ಕ ರಂಧ್ರವಿದೆ. ಋತುಗಾಲ ಬಂದಾಗ ಹೆಣ್ಣು ಗಂಡನ್ನು ಹುಡುಕಿ ಬಂದು ಶೃಂಗಾರವಿಲಾಸವನ್ನು ಪ್ರಾರಂಭಿಸುತ್ತದೆ. ತನ್ನ ಜನನೇಂದ್ರಿಯದಿಂದ ಒಂದು ಅಂಡ ನಿಕ್ಷೇಪವನ್ನು ಬೆಳೆಸಿಕೊಂಡು ಗಂಡಿನ ಸಂಚಿಯಲ್ಲಿ ತನ್ನ ಅಂಡಾಣುಗಳನ್ನು ತುಂಬುತ್ತದೆ. ಅಂಡಾಣುಗಳು ಸಂಚಿಯನ್ನು ಸೇರುವಾಗ ಗಂಡಿನ ಶುಕ್ರಾಣುಗಳಿಂದ ಸೇಚನಗೊಳ್ಳುತ್ತವೆ. ಈ ಕ್ರಿಯೆ ಆದ ಮೇಲೆ ರಂಧ್ರ ಮುಚ್ಚಿಹೋಗುತ್ತದೆ. ಸಂಚಿಯ ಒಳಗೋಡೆಯ ಪೊರೆಯಲ್ಲಿ ಉತ್ಪತ್ತಿಯಾಗುವ ಸ್ರಾವ ಬೆಳೆಯುವ ಭ್ರೂಣಗಳಿಗೆ ಪೋಷಕಾಂಶವನ್ನು ಒದಗಿಸುತ್ತದೆ. ಗಂಡು ಪ್ರಾಣಿಯೇ ಅಂಡಾಣುಗಳನ್ನು ಸಂಚಿಯಲ್ಲಿ ಧರಿಸಿ ಪೋಷಣೆ ಕೊಟ್ಟು ಮರಿಗಳು ಬೆಳೆವವರೆಗೂ ದಾದಿತನ ಮಾಡುತ್ತದೆ. ಸಂಚಿಯಲ್ಲಿ 40-45 ದಿನಗಳ ಕಾಲ ಬೆಳೆದ ಮೇಲೆ ಮರಿಗಳು ಒಂದೊಂದಾಗಿ ಹೊರಬರುತ್ತವೆ. ಮರಿಗಳು ಹೊರಬರುವಾಗ ಗಂಡು ತನ್ನ ಹೊಟ್ಟೆಯನ್ನು ಬಂಡೆಗೊ ಅಥವಾ ಚಿಪ್ಪಿಗೊ ಉಜ್ಜುವುದನ್ನು ನೋಡಿದರೆ ಅದು ಪ್ರಸವವೇದನೆಯನ್ನು ಅನುಭವಿಸುತ್ತಿರುವಂತೆ ಕಾಣುತ್ತದೆ.[೬][೭]

ಫಿಲ್ಲೋಟೆರಿಕ್ಸ್‌ ಈಕ್ವಸ್[ಬದಲಾಯಿಸಿ]

ದಕ್ಷಿಣ ಆಸ್ಟ್ರೇಲಿಯ ತೀರಪ್ರದೇಶಕ್ಕೆ ಸೀಮಿತವಾಗಿರುವ ಫಿಲ್ಲೋಟೆರಿಕ್ಸ್‌ ಈಕ್ವಸ್ ಎಂಬ ಜಾತಿಯನ್ನೂ ಕಡಲ್ಗುದುರೆಯೆಂದು ಕರೆಯುವುದುಂಟು. ಇದರಲ್ಲಿ ದೇಹದ ಮೇಲಿನಿಂದ ಹೊರಚಾಚಿರುವ ಉಪಾಂಗಗಳು ಜೊಂಡಿನ ಬಣ್ಣ ರಚನೆಗಳಿಂದ ಕೂಡಿರುವುದ ರಿಂದ ಅವನ್ನು ಅವುಗಳ ಪರಿಸರದಲ್ಲಿ ಗುರುತಿಸುವುದು ಬಹಳ ಕಷ್ಟ.[೮][೯]

ಉಲ್ಲೇಖಗಳು[ಬದಲಾಯಿಸಿ]

  1. http://animals.nationalgeographic.com/animals/fish/sea-horse/
  2. http://www.nationalgeographic.com/animals/fish/hub/seahorses/
  3. http://www.marinespecies.org/aphia.php?p=taxdetails&id=126224
  4. http://www.dictionary.com/browse/sea-horse
  5. http://www.nationalgeographic.com/animals/fish/hub/seahorses/
  6. http://www.marinespecies.org/aphia.php?p=taxdetails&id=126224
  7. http://www.dictionary.com/browse/sea-horse
  8. http://www.dictionary.com/browse/sea-horse
  9. http://www.nationalgeographic.com/animals/fish/hub/seahorses/