ಕಟ್ಟಡ ರಕ್ಷಣೆ

ವಿಕಿಪೀಡಿಯ ಇಂದ
Jump to navigation Jump to search
ಚೀನಾದ ಒಂದು ಕಟ್ಟಡ

ಕಟ್ಟಡ ರಕ್ಷಣೆ : ಕಟ್ಟಡಗಳಿಗೆ ಅಪಾಯಕಾರಿಗಳಾದ ನೈಸರ್ಗಿಕ ಕಾರಣಗಳು ಪ್ರಧಾನವಾಗಿ ನಾಲ್ಕು-ಬೆಂಕಿ, ನೀರು. ಸಿಡಿಲು, ಭೂಕಂಪನ, ಆದ್ದರಿಂದ ಕಟ್ಟಡದ ನಿವೇಶನದ ಆಯ್ಕೆ, ಅಲೇಖ್ಯದ ತಯಾರಿ, ಕಟ್ಟಲು ಬಳಸುವ ವಸ್ತುಗಳ ಸಂಗ್ರಹ, ಕಟ್ಟಿದ ತರುವಾಯ ಕಟ್ಟಡದ ವಿದ್ಯುದೀಕರಣ, ಅಲಂಕರಣ ಮುಂತಾದ ಸಮಸ್ತ ಕ್ರಿಯೆಗಳಲ್ಲೂ ಈ ಅಪಾಯಕಾರಕಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಯೋಗ್ಯ ನಿವಾರಣೋಪಾಯಗಳನ್ನು ಅಳವಡಿಸಿಕೊಳ್ಳುವುದು ಕಟ್ಟಡರಚನೆಯ ಒಂದು ಪ್ರಮುಖ ಆವಶ್ಯಕತೆ.

ಬೆಂಕಿಯಿಂದ ರಕ್ಷಣೆ[ಬದಲಾಯಿಸಿ]

ಇದರಲ್ಲಿ ಎರಡು ಹಂತಗಳಿವೆ-ವಸ್ತುಗಳ ಆಯ್ಕೆ ಮತ್ತು ಜೋಡಣೆಗಳಲ್ಲಿ ಬೆಂಕಿಯಿಂದ ತಟ್ಟಬಹುದಾದ ಅಪಾಯವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವುದು; ಬೆಂಕಿ ಬಿದ್ದಾಗ ಅದರ ವ್ಯಾಪ್ತಿ ಏರದಂತೆ, ಅಪಾಯ ಹೆಚ್ಚಾಗದಂತೆ ಎಚ್ಚರ ವಹಿಸುವುದು.ಮರಮುಟ್ಟುಗಳ ಬಳಕೆಯನ್ನು ಕನಿಷ್ಠ ಮಿತಿಯಲ್ಲಿಡಬೇಕು. ಇಲ್ಲಿಯೂ ಉರಿಯನ್ನು ತಡೆಯುವ ದ್ರಾವಕಗಳಿಂದ ಅವನ್ನು ಸಂಸ್ಕರಿಸುವುದು ಲೇಸು, ಸಿನಿಮಾ, ನಾಟಕಮಂದಿರಗಳು ಮುಂತಾದ ಸಾರ್ವಜನಿಕ ಕಟ್ಟಡಗಳಲ್ಲಿ ಪೀಠೋಪಕರಣಗಳು, ಪರದೆಗಳು, ಒಳಮಾಡಿಗೆ ಬಳಸುವ ಹಲಗೆಗಳು ಮುಂತಾದುವೆಲ್ಲವನ್ನೂ ಇದೇ ಬಗೆಯ ಸಂಸ್ಕರಣಕ್ಕೆ ಒಳಪಡಿಸಬೇಕು. ಅನೇಕ ದೇಶಗಳಲ್ಲಿ ಕಾಯಿದೆಯ ಮೂಲಕ ಇದನ್ನು ನಿಗದಿಮಾಡಿರುವುದುಂಟು. ಉದಾಹರಣೆಗಾಗಿ ಲಂಡನ್ ಕೌಂಟಿ ಸಭೆಯ ನಿಯಮಾವಳಿಗಳಲ್ಲಿ ಮರ, ಕ್ಯಾನ್ವಾಸ, ಹತ್ತಿಯ ಬಟ್ಟೆಗಳು ಮುಂತಾದುವನ್ನು ಕೆಲವು ದ್ರಾವಕಗಳಲ್ಲಿ ಅದ್ದಿ, ಬೆಂಕಿಬಿದ್ದಾಗ ಉರಿಯದಂತೆ ಮಾಡಬೇಕೆಂಬ ನಿಯಮವಿದೆ. ಆದರೆ ಮರಕ್ಕೆ ಬೆಂಕಿ ತಗಲಿದರೆ ಸುಡದ ಹಾಗೆ ಮಾಡುವುದು ಕಷ್ಟವಾದ್ದರಿಂದ, ಅದಕ್ಕೆ ಬದಲಾಗಿ ಬೆಂಕಿಬಿದ್ದರೆ ಉರಿಯದ ಕಲ್ನಾರಿನಂಥ ಪದಾರ್ಥಗಳನ್ನೇ ಬಳಸಬೇಕೆಂಬ ಶಾಸನ ಮಾಡಿದ್ದಾರೆ (1928). ಈಗ ನೆಲಗಳು, ಮಾಡುಗಳು ಇವನ್ನು ಬೆಂಕಿಯನ್ನು ತಡೆಯುವ ಸಾಮಗ್ರಿಗಳಿಂದಲೇ ತಯಾರಿಸಬೇಕು. ಮೆದುವಾದ ಮರವನ್ನು ಉಪಯೋಗಿಸಕೂಡದು. ಬೆಂಕಿಯ ಒಲೆಯನ್ನು ಬಳಸಬಾರದು. ಉರಿಯ ಮೇಲೆ ಕಾಣುವ ಯಾವ ಕಾಸುವ ಏರ್ಪಾಡನ್ನೂ ನಾಟಕರಂಗದ ಮೇಲೆ ಇಡಬಾರದು. ಎಣ್ಣೆ, ಹತ್ತಿ, ಕಾಗದ, ಸೆಣಬು, ಮರದ ಹಲಗೆಗಳು ಮುಂತಾದುವುಗಳ ಕಾರ್ಖಾನೆಗಳು, ದಾಸ್ತಾನುಮಳಿಗೆಗಳು ಇತ್ಯಾದಿಗಳಲ್ಲಿ ನಿರಂತರ ಜಾಗರೂಕತೆಯೊಂದೇ ಬೆಂಕಿಯಿಂದ ರಕ್ಷಣೆ ಒದಗಿಸುವ ಮಾರ್ಗ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 3 ಪಾಲು ಅಮೋನಿಯಂ ಫಾಸ್ಲಫೇಟ್, 2 ಪಾಲು ಅಮೋನಿಯಂ ನೈಟ್ರೇಟ್ ಮತ್ತು 1 ಪಾಲು ಅಮೋನಿಯಂ ಸಲ್ಫೇಟ್ ಇವುಗಳ ಮಿಶ್ರಣವನ್ನು 40 ಪಾಲು ನೀರಿನಲ್ಲಿ ಕರಗಿಸಿ ಹತ್ತಿಯ ಬಟ್ಟೆಗಳನ್ನು ಅದರಲ್ಲಿ ಅದ್ದಿ ಅವಕ್ಕೆ ಬೆಂಕಿ ತಗಲದ ಹಾಗೆ ಮಾಡುತ್ತಾರೆ. ಮುಚ್ಚಿದ ಉರುಳೆಗಳಲ್ಲಿ ಮರವನ್ನು ಇಟ್ಟು ಕೃತಕವಾಗಿ ಒತ್ತಡವನ್ನು ಪ್ರಯೋಗಿಸಿ, ಬೆಂಕಿಯನ್ನು ತಡೆಯುವ ರಾಸಾಯನಿಕಗಳು ಅದರೊಳಕ್ಕೆ ತೂರುವಂತೆ ಮಾಡುತ್ತಾರೆ. ಇಂಥ ಮರವನ್ನು ಬೆಂಕಿ ತಗಲದ ಮರವೆನ್ನುತ್ತಾರೆ. ನ್ಯೂಯಾರ್ಕ್ ನಗರದ ಕಟ್ಟಡಗಳ ಕಾನೂನಿನಲ್ಲಿ ಒಂದು ಕಟ್ಟಡ 150' ಗಿಂತ ಎತ್ತರವಾಗಿದ್ದರೆ ಹೀಗೆ ಸಂಸ್ಕರಿಸಿದ ಮರವನ್ನು ಮಾತ್ರ ಉಪಯೋಗಿಸಬೇಕೆಂಬ ನಿಯಮವಿದೆ.

ಪ್ರಪಂಚದಲ್ಲಿ ಸಂಭವಿಸುವ ವಾರ್ಷಿಕ ದುರ್ಮರಣಗಳು[ಬದಲಾಯಿಸಿ]

ಪ್ರಪಂಚದಲ್ಲಿ ಸಂಭವಿಸುವ ವಾರ್ಷಿಕ ದುರ್ಮರಣಗಳು ಮತ್ತು ಸಂಪತ್ತಿನ ನಾಶ-ಇವುಗಳ ಕಾರಕಗಳಲ್ಲಿ ಮೊದಲ ಸ್ಥಾನ ಬೆಂಕಿಗೇ ಮೀಸಲು. ಆದ್ದರಿಂದ ಬೆಂಕಿಯ ಆಕಸ್ಮಿಕಗಳಿಂದ ಜನ ಹಾಗೂ ಸಂಪತ್ತಿನ ರಕ್ಷಣೆ ಎಲ್ಲ ನಾಗರಿಕ ಸರ್ಕಾರಗಳ ಮತ್ತು ಜನರ ಪ್ರಧಾನ ಹೊಣೆ. ದೊಡ್ಡ ನಗರಗಳಲ್ಲಿ ಒಂದೊಂದು ಸಾರಿ ಬೆಂಕಿ ಬಿದ್ದಾಗಲೂ ಬಂಡವಾಳ ಬಹುಪಾಲು ನಷ್ಟವಾಗುತ್ತದೆ. ಆಸ್ತಿಗಳನ್ನು ವಿಮೆ ಮಾಡುವ ಪದ್ಧತಿಯಿಂದ ಈ ನಷ್ಟ ಬಹು ಜನರಲ್ಲಿ ಹಂಚಿಹೋಗುತ್ತದೆ, ನಿಜ, ಆದರೆ ನಷ್ಟಗೊಂಡ ಸಂಪತ್ತನ್ನೂ ಮರಣಗೊಂಡ ಜನರನ್ನೂ ಹಿಂದೆ ಪಡೆಯಲಾಗುವುದಿಲ್ಲವಷ್ಟೆ. ಬೆಂಕಿಯನ್ನು ತಡೆಯಬಲ್ಲ ಸಾಮಗ್ರಿಗಳಿಂದ ಕಟ್ಟಡಗಳನ್ನು ಕಟ್ಟಿ ಒಂದು ವೇಳೆ ಬೆಂಕಿಬಿದ್ದರೂ ಅದು ಹರಡದ ಹಾಗೆ ಮಾಡಲು ಒಂದು ಕಟ್ಟಡವನ್ನು ಇನ್ನೊಂದರಿಂದ ಪ್ರತ್ಯೇಕಿಸಬೇಕು. ಬೆಂಕಿಬಿದ್ದರೆ ಸುಡಬಹುದಾದ ಸಾಮಾನುಗಳನ್ನು ತುಂಬಿರುವ ಅಥವಾ ಅಪಾಯವೊದಗಬಹುದಾದ ಕೈಗಾರಿಕೆಗಳಿರುವ ದೊಡ್ಡ ಕಟ್ಟಡಗಳಲ್ಲಿ ಗೊಡೆಗಳು, ಮಾಡುಗಳು, ನೆಲಗಳು ಮತ್ತು ತೊಲೆಗಳು ಬೆಂಕಿಯನ್ನು ಎದುರಿಸುವ ಹಾಗಿರಬೇಕು. ಒಂದು ವೇಳೆ ಬೆಂಕಿ ತಗಲಿದರೆ ಅದು ಹರಡಬಹುದಾದ ಮಹಡಿಯ ಮೆಟ್ಟಲುಗಳು ಮತ್ತು ಸಾಮಾನುಗಳನ್ನು ಎತ್ತುವ ಯಂತ್ರಗಳು ಅಪಾಯವನ್ನು ಹರಡುತ್ತವೆ. ಒಂದು ಕಟ್ಟಡವನ್ನು ನಾವು ಯಾವುದಕ್ಕಾಗಿ ಬಳಸುತ್ತೇವೆಯೋ ಅದರಲ್ಲಿಯೇ ಬೆಂಕಿಯನ್ನು ಉತ್ಪತ್ತಿಮಾಡಬಹುದಾದ ಕಾರಣಗಳಿರುತ್ತವೆ. ಉದಾಹರಣೆಗೆ ಯಂತ್ರಗಳ ತಿಕ್ಕಾಟ, ಬೆಂಕಿ ಹೊತ್ತಬಹುದಾದ ಧೂಮಗಳು, ದ್ರವೀಕರಿಸಿದ ಮತ್ತು ಪುಡಿಮಾಡಿದ ಇಂಧನಗಳೂ, ಸ್ಥಾಯೀ ವಿದ್ಯುಚ್ಛಕ್ತಿ (ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ)-ಇವು ಇರುವಲ್ಲಿ ಬೆಂಕಿ ಹೊತ್ತುವ ಸಂಭವ ಇದ್ದೇ ಇರುತ್ತದೆ.

ಬೆಂಕಿಯಲ್ಲಿ ಉರಿಯಬಹುದಾದ ಸಾಮಗ್ರಿ[ಬದಲಾಯಿಸಿ]

ಬೆಂಕಿಯಲ್ಲಿ ಉರಿಯಬಹುದಾದ ಸಾಮಗ್ರಿಯನ್ನು ಒಂದೇ ಕಡೆ ಕೂಡಿಟ್ಟರೆ ಒಂದು ಸಾರಿ ಬೆಂಕಿ ತಗಲಿದರೆ, ಎಲ್ಲವೂ ಸೂರೆ ಹೋಗಬಹುದು. ಅದಕ್ಕಾಗಿ ಬೆಲೆಬಾಳುವ ಸಾಮಗ್ರಿಗಳನ್ನು ಒಂದು ವೇಳೆ ಬೆಂಕಿ ತಗಲಿದರೂ, ಆಗುವ ನಷ್ಟ ಬಹಳ ಹೆಚ್ಚಾಗದಂತೆ ರಾಶಿಗಳಾಗಿ ಬೇರ್ಪಡಿಸಿ ಕೂಡಿಡುವುದು ಉತ್ತಮ. ಇದೇ ಕಾರಣಕ್ಕಾಗಿ ಸಾಮಾನುದಾಸ್ತಾನು ಮಳಿಗೆಗಳಲ್ಲಿ ಬೆಂಕಿಯನ್ನು ಆರಿಸುವ ಅನುಕೂಲತೆಗಳಿದ್ದರೂ ಅವನ್ನು ಬಹಳ ದೊಡ್ಡದಾಗಿ ಮಾಡಬಾರದು. ಎಲ್ಲಕ್ಕಿಂತಲೂ ಹೆಚ್ಚಾಗಿ, ಒಂದು ಉಗ್ರಾಣಕ್ಕೆ ಬೆಂಕಿ ತಗಲಿದರೆ ಅದರಲ್ಲಿ ಇರುವ ಜನ ಬೇಗ ಹೊರಗೆ ಹೋಗುವಂತೆ ಮಾರ್ಗಗಳಿರುವುದು ಅವಶ್ಯಕ. ಒಂದೊಂದು ಕಾರ್ಖಾನೆಯಲ್ಲಿಯೂ ಕೊನೆಯ ಪಕ್ಷ ಎರಡು ಪ್ರತ್ಯೇಕ ನಿರ್ಗಮನದ್ವಾರಗಳಿಂದ ಜನರು ಹೊರಗೆ ಹೋಗುವ ವ್ಯವಸ್ಥೆ ಇರಬೇಕು. (ನೋಡಿ-ಅಗ್ನ್ಯಬಾಧಿತ-ಕಟ್ಟಡ). ಪ್ರತ್ಯೇಕವಾದ ಜಾಗಗಳಿಂದ ಒಳಗಿದ್ದ ಜನ ಹೊರಗೆ ಹೋಗುವ ಹಾಗಿರಬೇಕು. ಬೆಂಕಿಯನ್ನು ಆರಿಸುವ ವಿಧಾನಗಳಿಗೆ (ನೋಡಿ-ಅಗ್ನಿಶಾಮಕದಳ) (ಎಚ್.ಸಿ.ಕೆ.)

ನೀರಿನಿಂದ ರಕ್ಷಣೆ[ಬದಲಾಯಿಸಿ]

ಮಳೆಗಾಲದಲ್ಲಿ ಇರಿಸಲಿನ ಹೊಡೆತದಿಂದ, ಅಡಿಪಾಯದ ಸುತ್ತಲೂ ನಿಂತ ನೀರಿನಿಂದ, ತೋಡು ಹೊಳೆ ನದಿಗಳ ಪ್ರವಾಹ ಉಕ್ಕಿಬರುವುದರಿಂದ ಕಟ್ಟಡಗಳಿಗೆ ಅಪಾಯ ಉಂಟು. ಸಿಮೆಂಟ್-ಕಾಂಕ್ರೀಟ್ ರಚನೆಗಳಲ್ಲಿ ಇರಿಸಲಿನಿಂದ ಕಟ್ಟಡದ ಗೋಡೆಗಳಿಗೆ ಆಗುವ ಹಾನಿ ಪ್ರಾಯಶಃ ಏನೂ ಇಲ್ಲ. ಆದರೆ ಇದರಿಂದ ಕಟ್ಟಡದ ಒಳಗೆ ತೇವ ವ್ಯಾಪಿಸಿ ಅಲ್ಲಿನ ಸಾಮಗ್ರಿಗಳಿಗೆ ನಷ್ಟ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದಾಹರಣೆಗೆ ಆಹಾರದ ಪದಾರ್ಥಗಳು, ಕಾಗದ, ಬಟ್ಟೆ ಮುಂತಾದವುಗಳ ಉಗ್ರಾಣಗಳಲ್ಲಿ ಇಂಥ ರಕ್ಷಣೆ ತೀರ ಅವಶ್ಯ. ಕಟ್ಟಡದ ಹೊರವಲಯದ ಭೂಮಿಯ ಮೇಲೆ ನೀರು ನಿಂತರೆ ಅಡಿಪಾಯಕ್ಕೆ ಅಪಾಯವಾಗುವುದುಂಟು. ಆ ಭಾಗವನ್ನೆಲ್ಲ ಹೊರಕ್ಕೆ ಇಳಿಜಾರಾಗಿರುವಂತೆ ಕಾಂಕ್ರೀಟಿನಿಂದ ಮುಚ್ಚಿ ಅಥವಾ ಬೇಕಾದಂತೆ ಚರಂಡಿಗಳನ್ನು ತೋಡಿ ನೀರು ನಿಲ್ಲದಂತೆ ಮಾಡಬೇಕು.ಜಲಪ್ರವಾಹದಿಂದ ಒದಗುವ ಅಪಾಯ ಗುರುತರವಾದದ್ದು. ಬ್ರಹ್ಮಪುತ್ರಾ, ಗೋದಾವರಿ, ಕೋಸಿ ಮುಂತಾದ ನದಿಗಳು ತುಂಬುನೆರೆಯಿಂದ ಪ್ರವಹಿಸುವಾಗ ಅವುಗಳ ದಂಡೆಗಳಲ್ಲಿರುವ ನಗರಗಳಿಗೆ ತೀವ್ರ ಹಾನಿ ಆಗುವುದು ನಮ್ಮ ದೇಶದಲ್ಲಿನ ವಾರ್ಷಿಕ ಅನುಭವ. ನಗರದ ನಿವೇಶನಗಳನ್ನು ದೂರದ ಎತ್ತರ ಪ್ರದೇಶಗಳಿಗೆ ವರ್ಗಾಯಿಸುವುದು ಒಂದು ರಕ್ಷಣೋಪಾಯ, ಹಲವಾರು ಶತಕಗಳಿಂದ ವಿಕಸಿಸಿ ಬೆಳೆದುಬಂದಿರುವ ಈ ನಗರಗಳ ಬುಡ ಕೀಳುವುದು ಅಷ್ಟೇನು ಸುಲಭ ವಿಧಾನವಲ್ಲ. ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ನೀರಿನ ಸ್ವಚ್ಛಂದ ಹರಿವನ್ನು ಅಂಕೆಗೆ ತಂದು ನೆರೆಯ ಹಾವಳಿಯನ್ನು ನಿಯಂತ್ರಿಸುವುದು ಎರಡನೆಯ ರಕ್ಷಣೋಪಾಯ. ಸ್ವಾತಂತ್ರ್ಯಾನಂತರ ಭಾರತದಲ್ಲಿ ತ್ವರಿತಗತಿಯಿಂದ ಅಧಿಕ ಸಂಖ್ಯೆಯಲ್ಲಿ ಕಟ್ಟಿರುವ, ಕಟ್ಟಲಾಗುತ್ತಿರುವ ನೀರಾವರಿ ಯೋಜನೆಗಳ ಉದ್ದೇಶಗಳಲ್ಲಿ ನದೀ ದಂಡೆಗಳ ನಗರ ರಕ್ಷಣೆಯೂ ಒಂದು. ಮೂರನೆಯ ಒಂದು ರಕ್ಷಣೋಪಾಯವೂ ಇದೆ. ನದೀ ದಂಡೆಗಳ ಆಸುಪಾಸಿನಲ್ಲಿ ಕಟ್ಟುವ ಕಟ್ಟಡಗಳ ರಚನೆಯಲ್ಲಿಯೇ ಯೋಗ್ಯಮಾರ್ಪಾಡುಗಳನ್ನು ಮಾಡಬೇಕು. ತಳಪಾಯಗಳ ರಚನೆ, ಗೋಡೆಗಳ ವಿನ್ಯಾಸ, ನೆರೆನೀರು ಬಂದಾಗ ಹರಿದು ಹೋಗಲು ಕಟ್ಟಡ ಕಟ್ಟಡಗಳ ನಡುವೆ ನಾಲೆಗಳು ಮುಂತಾದ ವಿಶಿಷ್ಟ ವಿಧಾನಗಳಿಂದ ಸಮರ್ಪಕ ರಕ್ಷಣೆ ಒದಗಿಸಬಹುದು.[೧]

ಸಿಡಿಲಿನಿಂದ ರಕ್ಷಣೆ[ಬದಲಾಯಿಸಿ]

ಗಗನಚುಂಬಿ ಸೌಧಗಳಿಗೆ, ವಿಶಾಲ ಪ್ರದೇಶಗಳಲ್ಲಿ ಒಂಟಿಯಾಗಿ ನಿಂತಿರುವ ಮನೆಗಳಿಗೆ, ವಿಶೇಷವಾಗಿ ಲೋಹಗಳ ಬಳಕೆಯಿಂದ ನಿರ್ಮಿಸಿದ ಕಟ್ಟಡಗಳಿಗೆ ಸಿಡಿಲಿನ ಹೊಡೆತ ತಾಗಿ ಅದರಿಂದ ಬೆಂಕಿಯ ಉತ್ಪಾದನೆಯಾಗುವುದು ವಿರಳವಲ್ಲ. ಇಂಥವುಗಳಿಗೆ ಸಿಡಿಲುಗ್ರಾಹಕಗಳನ್ನು ಅಳವಡಿಸಿ ಮಿಂಚಿನಲ್ಲಿ ಪ್ರವಹಿಸುವ ವಿದ್ಯುಚ್ಛಕ್ತಿಯನ್ನು ಅವುಗಳ ಮೂಲಕ ಭೂಮಿಗೆ ಒಯ್ದು ಕಟ್ಟಡಗಳನ್ನು ರಕ್ಷಿಸುತ್ತಾರೆ.

ಭೂಕಂಪನದಿಂದ ರಕ್ಷಣೆ[ಬದಲಾಯಿಸಿ]

ನೈಸರ್ಗಿಕ ಭೂಕಂಪದ ಜೊತೆಗೆ ಕಾರ್ಖಾನೆಗಳಿಂದಲೂ ನೆಲದ ಅದಿರುವಿಕೆ ಆಗುತ್ತಿರುತ್ತದೆ. ಉದಾಹರಣೆಗೆ ರೈಲ್ವೆ ಹಳಿಯ ಸಮೀಪದ ಕಟ್ಟಡಗಳ ಅಡಿಪಾಯಗಳು ರೈಲುಬಂಡಿ ಸಾಗುವಾಗಲೆಲ್ಲ ಸಂಭವಿಸುವ ನೆಲದ ಅದಿರುವಿಕೆಯನ್ನು ಇದುರಿಸಿ ಕಟ್ಟಡಗಳಿಗೆ ರಕ್ಷಣೆ ಒದಗಿಸುವಂತಿರಬೇಕು. ಆಧುನಿಕ ಕಟ್ಟಡ ನಿರ್ಮಾಣತಂತ್ರ ಈ ಸಮಸ್ಯೆಯನ್ನು ಪರಿಶೀಲಿಸಿ ಧಕ್ಕಾನಿರೋಧಕ ರಚನೆಗಳನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗಿದೆ. ಎಲ್ಲ ಮಹಾನಗರಗಳಲ್ಲಿಯೂ ಇಂಥ ಕಟ್ಟಡಗಳು ಈಗ ಸಾಮಾನ್ಯವಾಗಿವೆ.ನೈಸರ್ಗಿಕ ಭೂಕಂಪನಗಳು ಸರ್ವಪ್ರದೇಶವ್ಯಾಪಿಗಳಲ್ಲ, ಸಾರ್ವಕಾಲಿಕ ಘಟನೆಗಳಲ್ಲ. ಆದರೂ ಅವು ಸಾಮಾನ್ಯವಾಗಿ ತಲೆದೋರುವ ಭೂಕಂಪನಪಟ್ಟಿಯ ಪ್ರದೇಶಗಳಲ್ಲಿ ವಿಶಿಷ್ಟ ಮಾದರಿಯ ನಿರ್ಮಾಣಗಳು ಅನಿವಾರ್ಯವಾಗಿವೆ. ಕಂಪನ ಎಷ್ಟೇ ತೀವ್ರವಾಗಿದ್ದರೂ ಕಟ್ಟಡ ಕುಸಿಯಬಾರದು. ಕುಸಿದಾಗಲೂ ಜನ, ಸಂಪತ್ತುಗಳಿಗೆ ಆಗುವ ನಷ್ಟ ಕನಿಷ್ಠವಾಗಿರಬೇಕು. ಕಟ್ಟಡಗಳು ಸುಲಭಸಾಧ್ಯವಾಗಿರಬೇಕು. ಇವೇ ಮುಂತಾದುವು ಇಂಥ ರಚನೆಗಳ ಹಿಂದೆ ಇರುವ ಮಾರ್ಗದರ್ಶೀ ಸೂತ್ರಗಳು, ಜಪಾನಿನಲ್ಲಿ ಮತ್ತು ಮಹಾರಾಷ್ಟ್ರದ ಕೊಯ್ನಾದಲ್ಲಿ ಇಂಥ ಭೂಕಂಪನ ಧಕ್ಕಾನಿರೋಧಕ ಕಟ್ಟಡಗಳನ್ನು ಕಾಣಬಹುದು.[೨]

ಉಲ್ಲೇಖಗಳು[ಬದಲಾಯಿಸಿ]