ಕಗೆಮುಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಗೆಮುಶ ೧೯೮೦ ರಲ್ಲಿ ಹೊರಬಂದ ಅಕಿರಾ ಕುರೊಸಾವಾರವರು ನಿರ್ದೇಶಿಸಿದ ಜಪಾನ್ ದೇಶದ ಚಿತ್ರ. ಜಪಾನೀಸ್ ಭಾಷೆಯಲ್ಲಿ 'ಕಗೆಮುಶ' ಎಂದರೆ 'ನೇಪಥ್ಯದ ಯೋಧ' ಎಂಬರ್ಥ ಮೂಡುತ್ತದೆ.

ಕಥೆಯ ಸಾರಾಂಶ[ಬದಲಾಯಿಸಿ]

ಈ ಚಿತ್ರದ ಕಥೆ ೧೫೭೦ರಿಂದ ೧೫೭೫ರವರೆಗೆ ಜಪಾನಿನಲ್ಲಿ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸು ನಡೆಸಿದ ಕೊನೆಯ ಹಂತದ ಯುದ್ಧಗಳನ್ನು ಆಧರಿಸಲ್ಪಟ್ಟಿದೆ. ಜಪಾನ್ ದೇಶವನ್ನು ಒಂದುಗೂಡಿಸುವ ಮುನ್ನ ಇವರಿಬ್ಬರು ಹೋರಾಡಿದ ವಿರೋಧಿಗಳನ್ನು ಕುರಿತದ್ದು, ಈ ಚಿತ್ರ.

ಟಕೇಡಾ ಶಿಂಗೆನ್, ಕಾಯ್ ನ ದೊರೆ ಇವರಿಬ್ಬರ ಪರಮ ಶತ್ರು. ೧೫೭೩ರಲ್ಲಿ ಟೊಗುಕಾವಾ ಅರಮನೆಯನ್ನು ಸಂಪೂರ್ಣವಾಗಿ ಶಿಂಗೆನ್ ನ ಸೈನಿಕರು ಸುತ್ತುವರಿದಿರುತ್ತಾರೆ. ವಿಜಯ ಇನ್ನೇನು ಹತ್ತಿರವಿರುವಂತೆಯೇ ವಿಪರ್ಯಾಸವೆಂಬಂತೆ ದೂರಗಾಮಿ ಬಂದೂಕಿನಿಂದ ಸಿಡಿದ ಗುಂಡೊಂದು ಶಿಂಗೆನ್ ಗೆ ತಗುಲಿ, ಶಿಂಗೆನ್ ಗಾಯಗೊಳ್ಳುತ್ತಾನೆ. ಗಾಯಗೊಂಡ ದೊರೆಯ ಕೊನೆಯ ಆಸೆ ಟೊಕುಗಾವಾ ಅರಮನೆಯನ್ನು ಆಕ್ರಮಿಸಿಕೊಳ್ಳುವುದಾದರೂ, ತನ್ನ ಸಹಚರರಿಗೆ ಒಗ್ಗಟ್ಟಿನಿಂದಿರಲು, ಟೊಕುಗಾವಾ ಅರಮನೆಯನ್ನು ಮತ್ತೊಮ್ಮೆ ಆಕ್ರಮಣ ಮಾಡದಿರಲು ಸಲಹೆ ನೀಡುತ್ತಾನೆ. ಮೂರು ವರ್ಷಗಳ ಕಾಲ ತನ್ನ ಸಾವನ್ನು ಗೌಪ್ಯವಾಗಿಡಿ ಎಂದು ಆಜ್ಞೆಯಿತ್ತು ಮರಣವನ್ನಪ್ಪುತ್ತಾನೆ. ಆ ಹಂತದಲ್ಲಿ ಶಿಂಗೆನ್ ಸಾವಿನ ಸುದ್ದಿ ಹಬ್ಬಿದಲ್ಲಿ ಇಡಿಯ ಟಕೇಡಾ ಪಂಗಡಕ್ಕೇ ವಿನಾಶ ಕಾದಿರುತ್ತದೆ. ಪರಾಕ್ರಮಿಯಾದ, ಶೂರನೆಂದು ಶತ್ರುಗಳಿಂದ ಗೌರವವನ್ನು ಪಡೆದ ಶಿಂಗೆನ್ ನ ನಾಯಕತ್ವ ಮಹತ್ವದ್ದಾಗಿರುತ್ತದೆ.

ಶಿಂಗೆನ್ ನ ಕೊನೆಯ ಆಜ್ಞೆಯನ್ನು ಪೂರೈಸಲು ಅವನ ಕೆಳಗಿದ್ದ ಮಂತ್ರಿಗಳು (ಪಾಲಕರು - ಸಮುರಾಯ್) ಮರಣ ಹೊಂದಿದ ದೊರೆಯಂತೆಯೇ ಇರುವ ಕಳ್ಳನೊಬ್ಬನನ್ನು ಕರೆತರುತ್ತಾರೆ. ಇವನು ಮುಂದೆ ದೊರೆಯಂತೆ ನಟಿಸುವ ದೊರೆಯ ನಕಲು.

ಟಕೇಡಾ ಪಂಗಡವನ್ನು ಹೊಡೆದುರುಳಿಸಲು ಅವಕಾಶವನ್ನು ಯಾವಾಗಲೂ ಎದುರು ನೊಡುತ್ತಿದ್ದ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸು, ಶಿಂಗೆನ್ ಸಾವಿನ ಬಗ್ಗೆ ಗಾಳಿ ಸುದ್ದಿ ಕಿವಿಗೆ ಬಿದ್ದು, ಧೃಡಪಡಿಸಿಕೊಳ್ಳಲು ಗೂಢಚರರನ್ನು ಕಳುಹಿಸುತ್ತಾರೆ. ದೊರೆಯ ನೆರಳಂತೆ ಇರುವವನ ನಟನೆ ಯಶಸ್ವಿಯಾಗಿ ಕೆಲಕಾಲ ಎಲ್ಲರೂ ದೊರೆ ಬದುಕಿದ್ದಾನೆಂಬ ಸುಳ್ಳನ್ನು ನಂಬುತ್ತಾರೆ. ಈ ಮಧ್ಯೆ ಶಿಂಗೆನ್ ನ ಮಗ ಕತ್ಸುುಯೋರಿ ತನ್ನ ತಂದೆಯ ಕೊನೆಯ ಆಜ್ಞೆಯನ್ನು ಉಲ್ಲಂಘಿಸಿ ಟೊಗುಕಾವಾ ಅರಮನೆಯ ಮೇಲೆ ಮತ್ತೊಮ್ಮೆ ಆಕ್ರಮಣ ನಡೆಸಿ ಯಶಸ್ವಿಯೂ ಆಗುತ್ತಾನೆ. ಈ ‌ಯಶಸ್ಸಿನಿಂದ ಪ್ರೇರಿತರಾದ ಹಾಗೂ ದೊರೆಯ ನಕಲಿಯನ್ನು ಇನ್ನಷ್ಟು ದಿನ ಸಂಬಾಳಿಸುವ ಕಷ್ಟಕ್ಕೆ ಒಗ್ಗದ ಮಂತ್ರಿಗಳು ಪಟ್ಟಕ್ಕೆ ಉತ್ತರಾಧಿಕಾರಿಯಾಗಿಲ್ಲದಿದ್ದರೂ ಕೂಡ ಕತ್ಸುಯೋರಿಯನ್ನು ನಾಯಕನನ್ನಾಗಿ ಮಾಡುತ್ತಾರೆ (ಸಾವನ್ನಪ್ಪಿದ ದೊರೆ, ತನ್ನ ಮೊಮ್ಮಗನನ್ನು ಉತ್ತರಾಧಿಕಾರಿಯಾಗಿ ಈ ಹಿಂದೆ ಹೆಸರಿಸಿರುತ್ತಾನೆ).

ಅಧಿಕಾರ ಪಡೆದ ಕೂಡಲೇ ಕತ್ಸುಯೋರಿ ತನ್ನೆಲ್ಲ ಸೈನ್ಯವನ್ನು ಒಗ್ಗೂಡಿಸಿ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸುಗಳ ಮೇಲೆ ಯುದ್ಧಕ್ಕೆ ಹೊರಡುತ್ತಾನೆ. ಸುಸಜ್ಜಿವಾಗಿ ಭದ್ರವಾಗಿದ್ದ ಟಕೇಡಾ ರಾಜ್ಯವನ್ನು ತೊರೆದು ತಾನಾಗಿಯೇ ಯುದ್ಧಕ್ಕೆ ಹೋದರೆ ಸೋಲು ತಪ್ಪದು ಎಂದು ಮಂತ್ರಿಗಳು ಬುದ್ಧಿ ಹೇಳಿದರೂ ಕೇಳದೆ ಕತ್ಸುಯೋರಿ ಸೈನ್ಯವನ್ನು ಯುದ್ಧಕ್ಕೆ ಎಡೆ ಮಾಡುತ್ತಾನೆ. ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸುಗಳ ಸೈನ್ಯ ಚಿಕ್ಕದಾದರೂ, ಗುಂಡಿನ ದಾಳಿಯಿಂದ ಬೃಹತ್ತಾದ ಟಕೇಡಾ ಸೈನ್ಯವನ್ನು ನುಚ್ಚು ನೂರು ಮಾಡುತ್ತಾರೆ, ಚಿತ್ರ ಇವರುಗಳ ಸಾವಿನೊಂದಿಗೆ ಮುಗಿಯುತ್ತದೆ. ಹಿಂದೊಮ್ಮೆ ಶಿಂಗೆನ್ ರಾಜನ ನೆರಳಂತೆ ನಟಿಸಿದ ನಕಲಿ, ಕೊನೆಯಲ್ಲಿ ಶಿಂಗೇನ್ ಚಿಹ್ನೆಯಾದ 'ಪರ್ವತ, ಕಾಡು, ಜ್ವಾಲೆ' ಬಾವುಟವನ್ನು ಹಿಡಿಯ ಹೋಗಿ ಗುಂಡಿಗೆ ಬಲಿಯಾಗುವುದನ್ನು ಚಿತ್ರೀಕರಿಸಿರುವ ರೀತಿ ವಿಮರ್ಶಕರಿಂದ ಹೊಗಳಲ್ಪಟ್ಟಿದೆ. ವಿಪರ್ಯಾಸವೆಂಬಂತೆ ದೊರೆಗೆ ಅತೀವ ಗೌರವವನ್ನು ಹೊಂದಿದ್ದ ಅವನ ನೆರಳಾಗಿ ನಟಿಸಿದವನು ದೊರೆಯನ್ನು ಸಮಾಧಿ ಮಾಡಿದ ನದಿಯಲ್ಲೇ ಕೊನೆಯುಸಿರೆಳೆಯುತ್ತಾನೆ.

ನಿರ್ದೇಶನ[ಬದಲಾಯಿಸಿ]

ಅಕಿರಾ ಕುರೋಸಾವಾರವರ ಮತ್ತೊಂದು ಚಿತ್ರವಿದು. ಹಲವು ಪ್ರಶಸ್ತಿಗಳನ್ನು ಈ ಚಿತ್ರ ಪಡೆಯಿತು. ಅಲ್ಲದೇ ವಿಮರ್ಶಕರಿಂದ ಕುರೊಸಾವಾರವರ ಅತ್ಯಂತ ವರ್ಣಭರಿತ ಚಿತ್ರವೆಂದು ಹೊಗಳಲ್ಪಟ್ಟಿದೆ.

"https://kn.wikipedia.org/w/index.php?title=ಕಗೆಮುಶ&oldid=1048857" ಇಂದ ಪಡೆಯಲ್ಪಟ್ಟಿದೆ