ಕಂಬುಜದ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬು ಸ್ವಾಯಂಭುವನೆಂಬ ಭಾರತೀಯ ಶಿವಭಕ್ತನೊಬ್ಬ ಪತ್ನಿಯ ಮರಣದಿಂದ ದುಃಖಿತನಾಗಿ, ತನ್ನ ದೇಶವನ್ನು ಬಿಟ್ಟು ಕಂಬುಜ ದೇಶ ತಲುಪಿದ. ತನ್ನ ಜೀವನವನ್ನು ಕೊನೆಗಾಣಿಸಿಕೊಳ್ಳಬೇಕೆಂದು ಯೋಚಿಸುತ್ತಿರುವಾಗ ಒಂದು ಸರ್ಪ ಅವನಿಗೆ ಬುದ್ಧಿವಾದ ಹೇಳಿತು. ಅದರ ಮಾತಿನಂತೆ ಕಂಬು ಆತ್ಮಹತ್ಯೆ ಮಾಡಿಕೊಳ್ಳದೆ ಅಲ್ಲಿಯೇ ಇದ್ದು ಕೊನೆಗೆ ರಾಜನಾದ. ಆದ್ದರಿಂದ ಈ ದೇಶಕ್ಕೆ ಕಂಬುಜ ಎಂಬ ಹೆಸರು ಬಂತೆಂದು ಒಂದು ಐತಿಹ್ಯವಿದೆ. ಮತ್ತೊಂದು ಕಥೆಯ ಪ್ರಕಾರ ಕೌಂಡಿನ್ಯನೆಂಬ ಬ್ರಾಹ್ಮಣ ದೇವರ ಆಜ್ಞೆಯಂತೆ ಆ ರಾಜ್ಯಕ್ಕೆ ಹೋಗಿ ಅಲ್ಲಿಯ ರಾಣಿಯನ್ನು ಸೋಲಿಸಿ ತಾನೇ ರಾಜನಾದನೆಂದು ತಿಳಿಯುತ್ತದೆ. ಒಟ್ಟಿನಲ್ಲಿ ಪ್ರ.ಶ. 1ನೆಯ ಶತಮಾನದ ಹೊತ್ತಿಗೆ ಭಾರತೀಯರು ಕಂಬುಜಕ್ಕೆ ಹೋಗಿ ಅಲ್ಲಿ ರಾಜ್ಯ ಕಟ್ಟಿದರೆಂಬುದು ಖಚಿತ.

ಫೂನಾನ್[ಬದಲಾಯಿಸಿ]

ಈ ದೇಶವನ್ನು ಚೀನೀಯರು ಮೊಟ್ಟಮೊದಲು ಫೂನಾನ್ ಎಂದು ಕರೆದರು. ಹ್ಯುಯೆನ್ತೀನ್ ಅಥವಾ ಹ್ಯುಯೆನ್ಚೆನ್ ಎಂಬ ಭಾರತೀಯನೇ ಫೂನಾನಿನ ಮೊದಲನೆಯ ದೊರೆ. ಫೂನಾನಿನ ಅನಾಗರಿಕ ಜನ ಉಡುಗೆ ತೊಡುಗೆಗಳನ್ನು ಹಾಕಿಕೊಳ್ಳುವಂತೆ ಮಾಡಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಸು. 200ರಲ್ಲಿ ಆಳಿದ ಫಾನ್ ಚೆಮಾನ್ ಫೂನಾನಿನ ಬೆಳೆವಣಿಗೆಗೆ ಕಾರಣನಾದ ದೊರೆ. ಸಯಾಂ, ಲಾವೋಸ್, ಮಲಯ ಪರ್ಯಾಯದ್ವೀಪ ಮುಂತಾದವನ್ನು ಈತ ಆಳುತ್ತಿದ್ದ. ಅನಂತರ ಆಳಿದ ಫಾನ್ಚೆನ್ ದೊರೆ ಚೀನದೊಡನೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದ. ಸು. 5ನೆಯ ಶತಮಾನದ ಆದಿಭಾಗದಲ್ಲಿ ಇಂದ್ರವರ್ಮನೆಂಬ ರಾಜ ಆಳಿದ. ಅನಂತರ ಆಳಿದ ಜಯವರ್ಮ ಚೀನದೊಡನೆ ಮೈತ್ರಿ ಬೆಳೆಸಿದ. ಈತ ಶೈವಮತಾವಲಂಬಿ. ಇವನ ಮಗನಾದ ರುದ್ರವರ್ಮ 514ರಲ್ಲಿ ರಾಜನಾದ. ಇವನ ಅನಂತರ ಫೂನಾನ್ ರಾಜ್ಯದ ಪ್ರಾಮುಖ್ಯ ಕಳೆದುಹೋಯಿತು.

ಕಂಬುಜವಂಶದ ಅರಸರ ಆಳ್ವಿಕೆ[ಬದಲಾಯಿಸಿ]

7ನೆಯ ಶತಮಾನದಿಂದ ಈ ರಾಜ್ಯ ಕಂಬುಜವಂಶದ ಅರಸರ ಆಳ್ವಿಕೆಗೆ ಒಳಪಟ್ಟು, 14ನೆಯ ಶತಮಾನದವರೆಗೆ ಅವರ ಆಳ್ವಿಕೆಗೆ ಸೇರಿತ್ತು, ಶ್ರುತವರ್ಮನೇ ಈ ವಂಶದಲ್ಲಿ ನಮಗೆ ತಿಳಿದಿರುವ ಪ್ರಾಚೀನತಮ ದೊರೆ. ಇವನ ಮಗ ಶ್ರೇಷ್ಠ ವರ್ಮ ಶ್ರೇಷ್ಠಪುರವೆಂಬ ರಾಜಧಾನಿಯನ್ನು ಸ್ಥಾಪಿಸಿ ಅಲ್ಲಿ ಭದ್ರೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದ. ಅನಂತರ ಈ ರಾಜ್ಯ ಭವವರ್ಮನ ವಂಶಸ್ಥರಿಗೆ ಸೇರಿತು. ಭವಪುರ ಇವನ ರಾಜಧಾನಿ. ಇವನ ಮಗನೇ ಮಹೇಂದ್ರವರ್ಮ. ಈತ 616ರಲ್ಲಿ ಮರಣ ಹೊಂದಲು ಇವನ ಮಗ ಈಶಾನವರ್ಮ ರಾಜನಾದ. ಇವನೇ ಈಶಾನಪುರದ (ಈಗಿನ ಸಂಬೊರ್ ಪ್ರೆಕುಕ್) ನಿರ್ಮಾತ. ಇವನ ಅನಂತರ ಎರಡನೆಯ ಭವವರ್ಮ, ಜಯವರ್ಮ ಮುಂತಾದ ರಾಜರು ಆಳಿದರೂ ಅವರ ಆಳ್ವಿಕೆಯಲ್ಲಿ ಗಮನಾರ್ಹವಾದ ಅಂಶಗಳೇನೂ ಇಲ್ಲ.

ಎರಡನೆಯ ಜಯವರ್ಮರ ಆಳ್ವಿಕೆ[ಬದಲಾಯಿಸಿ]

ಎರಡನೆಯ ಜಯವರ್ಮ 802ರಲ್ಲಿ ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದ, ಈತ ಭಾರತದಿಂದ ಬಂದಿದ್ದ ಹಿರಣ್ಯದಾಮನೆಂಬ ಬ್ರಾಹ್ಮಣನನ್ನು ಆಹ್ವಾನಿಸಿ. ದೇವರಾಜಲಿಂಗ ಉಪಾಸನೆಯೆಂಬ ಧಾರ್ಮಿಕ ಕಾರ್ಯವನ್ನು ಪ್ರಾರಂಭಿಸಿದ. ಪರ್ವತಗಳಲ್ಲಿ ಈಶ್ವರಲಿಂಗಗಳನ್ನು ಸ್ಥಾಪಿಸುವುದೇ ಇದರ ಮೂಲತತ್ತ್ವ. ಇದೇ ಆಂಕೋರ್ವಾಟ್ನಂಥ ಶಿಲ್ಪಕಲಾ ಕೃತಿಗಳಿಗೆ ತಳಹದಿಯಾಯಿತು. ಈತ ಇಂದ್ರಪುರ, ಹರಿಹರಾಲಯ, ಅಮರೇಂದ್ರಪುರ, ಮಹೇಂದ್ರಪರ್ವತ ಮುಂತಾದ ನಗರಗಳನ್ನು ಸ್ಥಾಪಿಸಿದ. ಕಂಬುಜದ ಚರಿತ್ರೆಯಲ್ಲಿ ಈತನೇ ಮೊದಲನೆಯ ಶ್ರೇಷ್ಠದೊರೆ. ಈತ 850ರಲ್ಲಿ ಮರಣ ಹೊಂದಲು ಇವನ ಮಗ ಮೂರನೆಯ ಜಯವರ್ಮ ರಾಜನಾದ. ಇವನ ಮರಣಾನಂತರ ಇಂದ್ರವರ್ಮನ ವಂಶಸ್ಥರು ಕಂಬುಜದ ರಾಜರಾದರು. 877ರಲ್ಲಿ ರಾಜನಾದ ಇಂದ್ರವರ್ಮ ಜಾವ ಚಂಪಗಳ ಮೇಲೆ ಅಧಿಪತ್ಯ ಹೊಂದಿದ್ದ. ಅನಂತರ 889ರಲ್ಲಿ ಯಶೋವರ್ಮ ರಾಜನಾದ. ಇವನ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಕಂಬುಜದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿತ್ತು. ಈತ ಅನೇಕ ಆಶ್ರಮಗಳನ್ನು ನಿರ್ಮಿಸಿ, ಕಂಬುಜದಲ್ಲಿ ಹಿಂದೂಧರ್ಮ ಬೆಳೆಯಲು ಸಹಾಯಕನಾದ. ಈತ ಆಂಕೋರಿನಿಂದ ಯಶೋಧರಪುರಕ್ಕೆ ರಾಜಧಾನಿಯನ್ನು ಬದಲಾಯಿಸಿದ. ಅನೇಕ ದೇವಾಲಯಗಳನ್ನು ಯಶೋಧರಪುರದಲ್ಲಿ ನಿರ್ಮಿಸಿದ ಯಶೋವರ್ಮ 900ರಲ್ಲಿ ಮರಣಹೊಂದಿದ. ಸ್ವಲ್ಪಕಾಲದ ಅನಂತರ ಆಳಿದ ನಾಲ್ಕನೆಯ ಜಯವರ್ಮ ಕೊಹ್ಕೆರ್ ಎಂಬಲ್ಲಿಗೆ ರಾಜಧಾನಿಯನ್ನು ಬದಲಾಯಿಸಿ ಅನೇಕ ದೇವಾಲಯಗಳನ್ನು ನಿರ್ಮಿಸಿ ಪ್ರಸಿದ್ಧನಾದ. 941ರಲ್ಲಿ ಈತ ಮರಣಹೊಂದಲು ರಾಜೇಂದ್ರವರ್ಮ (944-68) ದೊರೆಯಾದ. ಇವನೂ ಅನೇಕ ದೇವಾಲಯಗಳನ್ನು ಕಟ್ಟಿಸಿ ಪ್ರಸಿದ್ಧನಾಗಿದ್ದಾನೆ.

ಮೊದಲನೆಯ ಸೂರ್ಯವರ್ಮ (1002-1050) ಬರ್ಮ (ಮಯನ್ಮಾರ್)[ಬದಲಾಯಿಸಿ]

ಅನಂತರ ಆಳಿದ ರಾಜರುಗಳಲ್ಲಿ ಮುಖ್ಯರಾದವರು ಮೊದಲನೆಯ ಮತ್ತು ಎರಡನೆಯ ಸೂರ್ಯವರ್ಮ. ಮೊದಲನೆಯ ಸೂರ್ಯವರ್ಮ (1002-1050) ಬರ್ಮ (ಮಯನ್ಮಾರ್) ಮತ್ತು ಸಯಾಮ್ಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಈತ ಕಾವ್ಯ, ಭಾಷ್ಯ, ಧರ್ಮಶಾಸ್ತ್ರ ಮತ್ತು ಷಡ್ದರ್ಶನಗಳಲ್ಲಿ ಪಂಡಿತ. ಬೌದ್ಧಧರ್ಮಾವಲಂಬಿಯಾಗಿದ್ದರೂ ಶೈವ ಮತ್ತು ವೈಷ್ಣವ ದೇವಾಲಯಗಳನ್ನು ನಿರ್ಮಿಸಿದ. ಇವನ ಅನಂತರ ಎರಡನೆಯ ಉದಯಾದಿತ್ಯವರ್ಮ, ಮೂರನೆಯ ಹರ್ಷವರ್ಮ ಮತ್ತು ಆರನೆಯ ಜಯವರ್ಮ ಕ್ರಮವಾಗಿ ಆಳಿದರು. ಅನಂತರ, ಎಂದರೆ 1113ರಲ್ಲಿ ಎರಡನೆಯ ಸೂರ್ಯವರ್ಮ ರಾಜನಾದ ಕೆಳ ಬರ್ಮ ಮತ್ತು ಮಲಯ ಪರ್ಯಾಯದ್ವೀಪಗಳು ಇವನ ಆಳ್ವಿಕೆಗೆ ಸೇರಿದ್ದುವು. ಚೀನೀರಾಜ ಈತನನ್ನು ಗೌರವಿಸಿ ರಾಯಭಾರಿಗಳನ್ನು ಕಳುಹಿಸಿದ್ದ. ತನ್ನ ರಾಜಗುರುವಾದ ದಿವಾಕರ ಪಂಡಿತನ ನೇತೃತ್ವದಲ್ಲಿ ಈತ ಕೋಟಿಹೋಮ, ಲಕ್ಷಹೋಮ, ಮಹಾಹೋಮ ಮುಂತಾದ ಯಾಗಗಳನ್ನು ಮಾಡಿದ. ಆಂಕೋರ್ವಾಟ್ ವಾಸ್ತುಶಿಲ್ಪಕೃತಿಯನ್ನು ನಿರ್ಮಿಸಿ ಎರಡನೆಯ ಸೂರ್ಯವರ್ಮ ಇತಿಹಾಸದಲ್ಲಿ ಅಮರನಾಗಿದ್ದಾನೆ. 1145ರಲ್ಲಿ ಈತ ಕಾಲವಾದಾಗ ಧರಣೀಂದ್ರವರ್ಮ ರಾಜನಾದ.ಅನಂತರ ಕಂಬುಜದಲ್ಲಿ ಒಳಜಗಳಗಳು ಪ್ರಾರಂಭವಾದುವು. ಇವುಗಳನ್ನೆಲ್ಲ ಅಡಗಿಸಿ ಕಂಬುಜವನ್ನು ಒಟ್ಟುಗೂಡಿಸಿದ ಕೀರ್ತಿ ಏಳನೆಯ ಜಯವರ್ಮನಿಗೆ (1811-18) ಸೇರುತ್ತದೆ. ಇವನೇ ಕಂಬುಜದ ಕೊನೆಯ ಶ್ರೇಷ್ಠ ದೊರೆ. ಕಂಬುಜಕ್ಕೆ ತೊಂದರೆ ಕೊಡುತ್ತಿದ್ದ ಚಂಪರಾಜ್ಯವನ್ನು ಈತ ಹತ್ತಿಕ್ಕಿದ, ಅದು ಕಂಬುಜದ ಅಧೀನಕ್ಕೊಳಪಟ್ಟಿತು. ಈತ ಅನ್ನಾಂ ರಾಜ್ಯದ ಮೇಲೂ ಅನೇಕ ಯುದ್ಧಗಳನ್ನು ಮಾಡಿದ. ಇವನ ರಾಜ್ಯ ಬಹಳ ವಿಸ್ತಾರವಾಗಿದ್ದು. ಉತ್ತರ ಸಯಾಮ್, ಕೆಳ ಬರ್ಮ, ಟಾಂಕಿಂಗ್, ಮಲಯ ಪರ್ಯಾಯದ್ವೀಪ ಇವನ್ನೆಲ್ಲ ಒಳಗೊಂಡಿತ್ತು. ಜಯವರ್ಮ ಶೂರನೂ ಧೀರನೂ ಮಾತ್ರವಲ್ಲದೆ ಕಲೆಗಳಿಗೆ ಆಶ್ರಯದಾತನೂ ಆಗಿದ್ದ. ಆಂಕೋರ್ ಥೊಂ ಎಂಬ ನಗರವನ್ನು ನಿರ್ಮಿಸಿ ವಾಸ್ತುಶಿಲ್ಪ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾನೆ. ಬಂiÀiÁನ್ ದೇವಾಲಯದ ಗೋಪುರಗಳಲ್ಲಿರುವ ಲೋಕೇಶ್ವರನ ಬೃಹದಾಕಾರದ ಶಿಲ್ಪಗಳೂ ಇಂದಿಗೂ ಅಳಿಯದೆ ಉಳಿದಿವೆ. ಈತ ಅನೇಕ ಔಷಧಾಲಯಗಳನ್ನೂ ಆಶ್ರಮಗಳನ್ನೂ ಗ್ರಂಥಾಲಯಗಳನ್ನೂ ನೀರಾವರಿ ವ್ಯವಸ್ಥೆಗಳನ್ನೂ ನಿರ್ಮಿಸಿದ. ಚುಟಾಕುವಾನನೆಂಬ ಚೀನಿ ಚರಿತ್ರಕಾರ ಏಳನೆಯ ಜಯವರ್ಮನ ಕಾಲದಲ್ಲಿ ಕಂಬುಜದಲ್ಲಿ ಸಂಚಾರ ಮಾಡಿ, ತಾನು ಕಂಡ ವಿಷಯಗಳನ್ನೆಲ್ಲ ಬರೆದಿದ್ದಾನೆ. ಇದರಿಂದ ಜಯವರ್ಮನ ಕಾಲದಲ್ಲಿ ಕಂಬುಜ ದೇಶ ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ವಿಶೇಷ ಮಹತ್ತ್ವಸ್ಥಾನ ಪಡೆದಿತ್ತೆಂದು ಗೊತ್ತಾಗುತ್ತದೆ.

ಕಂಬುಜದಲ್ಲಿ ಸಮರ್ಥ ರಾಜರ ಅಭಾವದಿಂದ ಒಳಜಗಳಗಳು ಪ್ರಾರಂಭ[ಬದಲಾಯಿಸಿ]

ಏಳನೆಯ ಜಯವರ್ಮನ ಮರಣಾನಂತರ ಕಂಬುಜದಲ್ಲಿ ಸಮರ್ಥ ರಾಜರ ಅಭಾವದಿಂದ ಒಳಜಗಳಗಳು ಪ್ರಾರಂಭವಾದುವು. ಸಾಲದುದಕ್ಕೆ ಮಂಗೋಲ್ ಮುಖಂಡ ಕುಬ್ಲಾಖಾನನಿಗೆ 1285ರಲ್ಲಿ ಕಂಬುಜ ಶರಣಾಗತವಾಯಿತು. 1327ರಲ್ಲಿ ಆಳುತ್ತಿದ್ದ ಜಯವರ್ಮ ಪರಮೇಶ್ವರ ಕಂಬುಜದ ಹಿಂದೂ ರಾಜ್ಯದ ಕೊನೆಯ ದೊರೆ. ಅನಂತರ ಥೈ ರಾಜ್ಯ ರಾಮ ಕಮ್ಹೆಂಗನ ನೇತೃತ್ವದಲ್ಲಿ ಕಂಬುಜದ ಮೇಲೆ ದಾಳಿ ನಡೆಸಿತು. ಇತ್ತಕಡೆ ಅನ್ನಾಂ ರಾಜ್ಯ ಬಲಯುತವಾಗುತ್ತಿತ್ತು. ಥೈ ಮತ್ತು ಅನ್ನಾಂ ರಾಜ್ಯಗಳ ರಾಜ್ಯ ವಿಸ್ತರಣೆಯಿಂದಾಗಿ ಕಂಬುಜ ನಾಶವಾಯಿತು.

ಕಂಬುಜದ ಚರಿತ್ರೆ[ಬದಲಾಯಿಸಿ]

1-14ನೆಯ ಶತಮಾನದವರೆಗಿನ ಕಂಬುಜದ ಚರಿತ್ರೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ವಿಶೇಷವಾಗಿ ಕಾಣುತ್ತದೆ. ಇಲ್ಲಿಯ ರಾಜರು ಕೌಟಿಲ್ಯ, ಮನು ಮುಂತಾದವರ ಗ್ರಂಥಗಳನ್ನೇ ಮಾದರಿಯಾಗಿಟ್ಟುಕೊಂಡು ರಾಜ್ಯವಾಳುತ್ತಿದ್ದರು. ರಾಜ ದೈವಾಂಶಸಂಭೂತನೆಂಬ ಭಾವನೆ ಬೇರೂರಿತ್ತು. ರಾಮ ರಾಜ್ಯಕ್ಕೆ ಸಮನಾಗಿ ತಮ್ಮ ರಾಜ್ಯವಿರಬೇಕೆಂದು ಅವರ ಅಪೇಕ್ಷೆ. ಪ್ರಾಚೀನ ಕಂಬುಜದ ಸಾಮಾಜಿಕ ಜೀವನದಲ್ಲಿ ವರ್ಣಾಶ್ರಮಧರ್ಮಗಳು ಮಹತ್ತ್ವದ ಪಾತ್ರ ವಹಿಸಿದ್ದುವು. ಪುರಾಣೋಕ್ತ ಹಿಂದೂ ಧರ್ಮ ಚೆನ್ನಾಗಿ ಬೇರೂರಿತ್ತು. ಶೈವ ಮತ್ತು ವೈಷ್ಣವ ಧರ್ಮಗಳು ವಿಶೇಷವಾಗಿ ಬಳಕೆಯಲ್ಲಿದ್ದುವು. ವಿಷ್ಣು, ಶಿವ, ಲಕ್ಷ್ಮಿ, ದುರ್ಗಾ, ಸರಸ್ವತಿ, ಅಗ್ನಿ ಮುಂತಾದ ದೇವತೆಗಳ ಸ್ತೋತ್ರಗಳು ಶಾಸನಗಳಲ್ಲಿ ಕಾಣಸಿಗುತ್ತವೆ. ವೇದ, ವೇದಾಂಗ, ಉಪನಿಷತ್ತು, ಧರ್ಮಶಾಸ್ತ್ರ, ಮುಂತಾದವುಗಳಲ್ಲಿ ಪರಿಣತರಾದ ಅನೇಕ ಪಂಡಿತರ ಹೆಸರು ಶಾಸನಗಳಲ್ಲಿ ಕಾಣಬರುತ್ತವೆ. ರಾಮಾಯಣ, ಮಹಾಭಾರತ ಮತ್ತು ಇತರ ಪುರಾಣಗಳ ವಾಚನ ಮತ್ತು ಶ್ರವಣ ಕಂಬುಜದ ಆಶ್ರಮಗಳಲ್ಲಿ ದಿನದಿನವೂ ನಡೆಯುತ್ತಿದ್ದುವು. ಆಶ್ರಮಗಳನ್ನು ನಿರ್ಮಿಸುವುದು ಮತ್ತು ಅವಕ್ಕೆ ದತ್ತಿಗಳನ್ನು ಬಿಡುವುದು ಮುಖ್ಯ ಧಾರ್ಮಿಕ ಕಾರ್ಯಗಳಾಗಿದ್ದುವು. 9ನೆಯ ಶತಮಾನದಿಂದ ಕಂಬುಜದಲ್ಲಿ ಸಂಸ್ಕೃತ ಭಾಷೆ ಉನ್ನತ ಮಟ್ಟದಲ್ಲಿತ್ತು. ಈ ಕಾಲಕ್ಕೆ ಸೇರಿದ ನೂರಾರು ಸಂಸ್ಕೃತ ಶಾಸನಗಳು ಬೆಳಕಿಗೆ ಬಂದಿವೆ. ಕೆಲವಂತೂ ಉತ್ತಮ ಕಾವ್ಯಗಳಾಗಿವೆ. ಸಂಸ್ಕೃತದ ಎಲ್ಲ ಛಂದಸ್ಸುಗಳನ್ನೂ ಕಂಬುಜದ ಕವಿಗಳು ಸರಳವಾಗಿ ಬಳಸಿದ್ದಾರೆ. ಪಾಣಿನಿಯ ಅಷ್ಟಾಧ್ಯಾಯಿತಿ, ಮನುಸ್ಮೃತಿ, ರಾಮಾಯಣ, ಪತಂಜಲಿಯ ಮಹಾಭಾಷ್ಯ, ವಾತ್ಸಾಯನನ ಕಾಮಸೂತ್ರ, ಹರಿವಂಶ ಮುಂತಾದ ಗ್ರಂಥಗಳು ಜನಾನುರಾಗ ಗಳಿಸಿದ್ದುವು. ಕಾಳಿದಾಸ ಶ್ರೇಷ್ಠ ಕವಿಯೆಂದು ಪರಿಗಣಿತನಾಗಿದ್ದ. ಕಂಬುಜದ ಅನೇಕ ಶಾಸನಗಳಲ್ಲಿ ರಘುವಂಶದ ನಾಲ್ಕು ಶ್ಲೋಕಗಳು ಉದಾಹೃತವಾಗಿವೆ. ಪ್ರವರಸೇನ, ಮಯೂರ, ಗುಣಾಢ್ಯ ಮುಂತಾದವರ ಹೆಸರುಗಳು ಶಾಸನದಲ್ಲಿ ಬರುತ್ತವೆ. ವಾಸ್ತುಶಿಲ್ಪ ಕಲೆಯಲ್ಲಂತೂ ಭಾರತೀಯ ಮಾರ್ಗದ ಪೂರ್ಣಛಾಯೆಯೇ ಎದ್ದು ಕಾಣುತ್ತದೆ. ಆಂಕೋರ್ವಾಟ್ ಆಂಕೋರ್ ಥೊಮ್ನಲ್ಲಿರುವಂಥ ಶಿಲ್ಪಗಳು ನಿರ್ಮಾಣವಾದುದು ಕಂಬುಜದಲ್ಲಿ. ಇವೆಲ್ಲವೂ ಅದು ಭಾರತದೊಡನೆ ಸಾಧಿಸಿದ ಸಖ್ಯದ ಫಲ.re

ಉಲ್ಲೇಖಗಳು[ಬದಲಾಯಿಸಿ]