ಕಂದು ಆಲ್ಗೆ

ವಿಕಿಪೀಡಿಯ ಇಂದ
Jump to navigation Jump to search

ಕಂದು ಆಲ್ಗೆ : ಆಲ್ಗೆ ಸಸ್ಯಗಳ ಗುಂಪಿನ ಒಂದು ವರ್ಗ (ಫಿಯೋಫೈಸೀ-ಬ್ರೌನ್ ಆಲ್ಗೆ). ಇವು ಪ್ರಮುಖವಾಗಿ ಚಾಕೊಲೇಟ್ ಕೆಂಪು ಬಣ್ಣವಾದ್ದರಿಂದ ಈ ಹೆಸರು ಬಂದಿದೆ. ಇದರಲ್ಲಿ ಸು. 240 ಜಾತಿ ಮತ್ತು ಸು. 1500 ಪ್ರಭೇದಗಳಿವೆ. ಮೂರು ಪ್ರಭೇದಗಳನ್ನು ಬಿಟ್ಟು ಉಳಿದವೆಲ್ಲ ಸಮುದ್ರವಾಸಿಗಳು. ಮುಖ್ಯವಾಗಿ ಉತ್ತರ ಸಮಶೀತೋಷ್ಣವಲಯದ ಸಾಗರ ಮತ್ತು ಶೀತವಲಯದ ಸಾಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಭಾರತ ಮತ್ತು ಇತರ ಉಷ್ಣವಲಯದ ಸಮುದ್ರಗಳಲ್ಲಿ ಡಿಕ್ಟಿಯೋಟೇಲಿಸ್ ಗಣದ ಮತ್ತು ಸಾಗಾರ್ಯ್‌ಸಮ್ ಜಾತಿಯ ಆಲ್ಗೆಗಳು ಹೇರಳವಾಗಿ ಕಂಡುಬರುತ್ತವೆ.

ದೇಹರಚನೆ[ಬದಲಾಯಿಸಿ]

ಕಂದು ಅಲ್ಗೆಗಳ ದೇಹರಚನೆಯಲ್ಲಿ ವೈವಿಧ್ಯವಿದೆ. ಕೆಲವು ಸೂಕ್ಷ್ಮರೂಪಿಗಳಾದರೂ ಹೆಚ್ಚಿನವು ದೈತ್ಯಾಕಾರದವು. ಉದಾಹರಣೆಗೆ 30 ಮೀ ಗಿಂತ ಹೆಚ್ಚು ಉದ್ದಕ್ಕೆ ಬೆಳೆಯುವ ಮ್ಯಾಕ್ರೊಸಿಸ್ಟಿಸ್, ಲ್ಯಾಮಿನೇರಿಯ, ನೀರಿಯೊಸಿಸ್ಟಿಸ್ ಇತ್ಯಾದಿ. ಎಲ್ಲವೂ ಒಟ್ಟಿನಲ್ಲಿ ಬಹುಕಣಜೀವಿಗಳೇ. ಆದರೆ ಗಾತ್ರ, ಆಕಾರ, ರೂಪ ಬೆಳೆವಣಿಗೆಯ ರೀತಿ ಮುಂತಾದುವುಗಳಲ್ಲೆಲ್ಲ ವೈವಿಧ್ಯವಿದೆ. ಎಕ್ಟೋಕಾರ್ಪಸ್, ಸ್ಪೇಸಿಲೇರಿಯ ಪ್ರಭೇದಗಳಲ್ಲಿ ಎಳೆಯಂಥ ದೇಹವಿದೆ. ಡಿಕ್ಟಿಯೋಟೇಲಿಸ್ ಗಣದವುಗಳಲ್ಲಿ ದೇಹ ಪಟ್ಟಿಯಂತಿದೆ. ಹಟಿರೋಚೆನರೇಟ ಮತ್ತು ಸೈಕ್ಲೋಸ್ಟೋರಿ ವಿಭಾಗದ ಸಸ್ಯಗಳ ದೇಹದಲ್ಲಿ ಕಾಂಡ, ಬೇರು ಮತ್ತು ಎಲೆಗಳಂಥ ಭಾಗಗಳಿವೆ. ಕಂದು ಆಲ್ಗೆ ಸಸ್ಯಗಳ ಜೀವಕೋಶಗಳಲ್ಲಿ ಒಂದೊಂದೇ ಕಣಬೀಜ (ನ್ಯೂಕ್ಲಿಯಸ್) ಇರುವುದೂ ಕ್ಲೋರೋಫಿಲ್ ಎ ಮತ್ತು ಬಿ, b - ಕ್ಯಾರೋಟೀನ್ ಮತ್ತು ಫ್ಯೂಕೋeಗ್ಸಾಂತಿನ್ ಎಂಬ ಬಣ್ಣಗಳಿಂದ ಕೂಡಿದ ಪ್ಲಾಸ್ಟಿಡ್ಡುಗಳಿರುವುದೂ ಇವುಗಳ ಮುಖ್ಯ ಲಕ್ಷಣಗಳು. ದ್ಯುತಿಸಂಶ್ಲೇಷಣ ಕ್ರಿಯೆಯ ಉತ್ಪತ್ತಿ ಪಿಷ್ಟ ಪದಾರ್ಥವಲ್ಲ, ಲ್ಯಾಮಿನೇರಿನ್ ಮತ್ತು ಮ್ಯಾನಿಟಾಲ್ ಎಂಬ ವಿಶಿಷ್ಟ ಬಗೆಯ ಕಾರ್ಬೊಹೈಡ್ರೇಟುಗಳು. ಕೊಂಚ ಕೊಬ್ಬು ಹಾಗೂ ಪೈಸೋಡ್ ಅಥವಾ ಪ್ಯುಕೋಸ್ ಎಂಬ ಸಾವಯವ ಪದಾರ್ಥಗಳೂ ಇರುತ್ತವೆ. ಜೀವಕೋಶವನ್ನು ಆವರಿಸಿರುವ ಗೋಡೆಯಲ್ಲಿ ಮೂರು ಪದರಗಳಿವೆ. ಒಳಪದರ ಸೆಲ್ಯುಲೋಸಿನಿಂದಾದದ್ದು. ಮಧ್ಯ ಪದರದಲ್ಲಿ ಪೆಕ್ಟಿಕ್ ಸಂಯುಕ್ತಗಳಿವೆ. ಹೊರಪದರದಲ್ಲಿ ಆಲ್ಜಿನ್ ಎಂಬ ವಿಶೇಷ ಬಗೆಯ ಲೋಳೆ ವಸ್ತುವಿದೆ.

ವಂಶಾಭಿವೃದ್ಧಿ[ಬದಲಾಯಿಸಿ]

ಈ ವರ್ಗದ ಸಸ್ಯಗಳ ವಂಶಾಭಿವೃದ್ಧಿ ಸ್ವಾರಸ್ಯಕರವಾಗಿದೆ. ಜೀವನಚಕ್ರದಲ್ಲಿ ಒಂದಾದಮೇಲೆ ಮತ್ತೊಂದು ಪರ್ಯಾಯವಾಗಿ ಬರುವ ಎರಡು ಪೀಳಿಗೆಗಳು (ಜನರೇಷನ್) ಇವೆ. ಲಿಂಗಕಣಗಳನ್ನು (ಗ್ಯಾಮೀಟ್ಸ್‌) ಉತ್ಪತ್ತಿ ಮಾಡುವ ಪೀಳಿಗೆಗೆ ಗ್ಯಾಮಿಟೋಫೈಟ್ ಎಂದೂ ಸ್ಫೋರುಗಳನ್ನು ಉತ್ಪತ್ತಿ ಮಾಡುವ ಪೀಳಿಗೆಗೆ ಸ್ಫೋರೋಫೈಟ್ ಎಂದೂ ಹೆಸರು. ಈ ಬಗೆಯ ಪರ್ಯಾಯವನ್ನು ಪೀಳಿಗೆಗಳ ಪರ್ಯಾಯಕ್ರಮ ಎನ್ನುತ್ತಾರೆ. ಐಸೊಜನರೇಟಿ ಗುಂಪಿನ ಎಕ್ಟೋಕಾರ್ಪಸ್ ಮುಂತಾದ ಜಾತಿಗಳಲ್ಲಿ ಎರಡೂ ಪೀಳಿಗೆಗಳಲ್ಲಿನ ದೇಹ (ಥಾಲಸ್ಸು) ಒಂದೇ ವಿಧವಾಗಿರುತ್ತದೆ. ಇಲ್ಲಿನ ಪರ್ಯಾಯಕ್ಕೆ ಸಮರೂಪ ಪೀಳಿಗೆಗಳ ಪರ್ಯಾಯಕ್ರಮ ಎಂದು ಹೆಸರು. ಹೆಟರೋಜನರೇಟಿ ಗುಂಪಿಗೆ ಸೇರಿದ ಲ್ಯಾಮಿನೇರಿಯ, ಡಿಕ್ಟಿಫೈಟ್ ಪೀಳಿಗೆ ದೊಡ್ಡದಾಗಿ ಪ್ರಧಾನವಾಗಿಯೂ ಇರುತ್ತದೆ. ಇದಕ್ಕೆ ಅಸಮರೂಪ ಪೀಳಿಗೆಗಳ ಪರ್ಯಾಯಕ್ರಮ ಎಂದು ಹೆಸರು. ಪ್ಯುಕಸ್, ಸಾರ್ಗ್ಯಾಸಮ್ ಪರ್ಯಾಯಕ್ರಮ ಇಲ್ಲವೆಂದೇ ಹೇಳಬಹುದು. ಇಲ್ಲಿ ಸ್ಪೋರೋಫೈಟ್ ಪೀಳಿಗೆ ಮಾತ್ರ ಪ್ರಧಾನವಾದುದು. ಸಂತಾನಾಭಿವೃದ್ಧಿಯ ಕಾಲದಲ್ಲಿ ಸ್ಪೋರೋಫೈಟ್ ಪೀಳಿಗೆಯ ಥಾಲಸ್ಸಿನಲ್ಲಿ ಒಂದೇ ಕೋಶವುಳ್ಳ ಯೂನಿಲಾಕ್ಯುಲರ್ ಸ್ಟೋರಾಂಜಿಯಗಳೆಂಬ ಅಂಗಗಳು ಹುಟ್ಟುತ್ತವೆ. ಇವುಗಳಲ್ಲಿ ಅಸಂಖ್ಯವಾಗಿ ಜ಼Äವೊಸ್ಪೋರುಗಳು ಉತ್ಪತ್ತಿಯಾಗುತ್ತವೆ. ಬಿಡುಗಡೆ ಹೊಂದಿದ ಇವು ಸೂಕ್ತ ಪರಿಸ್ಥಿತಿಯಲ್ಲಿ ಮೊಳೆತು ಥಾಲಸ್ಸಿನಲ್ಲಿ ಹಲವಾರು ಕೋóವುಳ್ಳ ಪ್ಲುರಿಲಾಕ್ಯುಲರ್ ಸ್ಪೊರಾಂಜಿಯಗಳು ಮೂಡುತ್ತವೆ. ಇವು ವಿಪುಲ ಸಂಖ್ಯೆಯಲ್ಲಿ ಲಿಂಗಕಣಗಳನ್ನು (ಗ್ಯಾಮೀಟ್ಸ್‌) ಉತ್ಪಾದಿಸುತ್ತವೆ. ಲಿಂಗಕಣಗಳು ಸ್ಪೊರಾಂಜಿಯಗಳಿಂದ ಹೊರಬಂದು ಒಂದರೊಡನೊಂದು ಸಂಯೋಗ ಹೊಂದಿ ಜೈ಼ಗೋಟುಗಳಾಗುತ್ತವೆ. ಮುಂದೆ ಈ ಜೈ಼ಗೋಟ್ ಮೊಳೆತು ಸ್ಪೋರೋಫೈಟ್ ಸಸ್ಯವಾಗಿ ಬೆಳೆಯುತ್ತದೆ. ಲಿಂಗಕಣಗಳು ಸಮರೂಪ ಹೊಂದಿರಬಹುದು. ಉದಾಹರಣೆಗೆ ಎಕ್ಬೋಕಾರ್ಪಸ್. ಇಂಥ ಲಿಂಗಕಣಗಳ ಸಂಯೋಗಕ್ಕೆ ಸಮಲಿಂಗಕಣ ಸಂಯೋಗ (ಐಸೊಗ್ಯಾಮಿ) ಎಂದು ಹೆಸರು. ಕಟ್ಲೇರಿಯ ಜಾತಿಯಲ್ಲಿ ಲಿಂಗಕಣಗಳು ಅಸಮರೂಪವಾದುವು. ಇಂಥ ಸಂಯೋಗವನ್ನು ಅಸಮಲಿಂಗಕಣ ಸಂಯೋಗ (ಅನ್ ಐಸೊಗ್ಯಾಮಿ) ಎನ್ನುತ್ತಾರೆ. ಇನ್ನು ಕೆಲವು ಜಾತಿಗಳಲ್ಲಿ (ಲ್ಯಾಮಿನೇರಿಯ, ಪ್ಯುಕಸ್ ಇತ್ಯಾದಿ) ಗಂಡುಲಿಂಗಕಣಗಳು ಚಿಕ್ಕವು. ಅವುಗಳಿಗೆ ಚಲನಶಕ್ತಿ ಇದೆ. ಹೆಣ್ಣು ಲಿಂಗಕಣಗಳು ದೊಡ್ಡವು. ಅವು ಚಲಿಸಲಾರವು. ಇಂಥ ಗ್ಯಾಮೀಟುಗಳ ಸಂಯೋಗಕ್ಕೆ ಊಗ್ಯಾಮಿ ಎಂದು ಹೆಸರು. ಸೈಕ್ಲೋಸ್ಟೋರಿ ಗುಂಪಿನ ಆಲ್ಗೆಯಾದ ಫ್ಯೂಕಸ್ನಲ್ಲಿ ಯೂನಿಲಾಕ್ಯುಲರ್ ಸ್ಪೊರಾಂಜಿಯಗಳಲ್ಲಿ ಉತ್ಪತ್ತಿಯಾಗುವ ಸ್ಟೋರುಗಳೇ ನೇರವಾಗಿ ಲಿಂಗಕಣಗಳಂತೆ ವರ್ತಿಸುತ್ತವೆ. ಅಲ್ಲದೆ ಸ್ಪೊರಾಂಜಿಯಗಳು ಕಾನ್ಸೆಪ್ಟಕಲ್ಲುಗಳೆಂಬ ವಿಶಿಷ್ಟ ಬಗೆಯ ಕುಹರಗಳಲ್ಲಿ ಉತ್ಪತ್ತಿಯಾಗುತ್ತವೆ.

ಉಪಯೋಗಗಳು[ಬದಲಾಯಿಸಿ]

ಸಮುದ್ರ ಕಳೆಗಳೆಂದು ಪರಿಗಣಿತವಾಗಿರುವ ಕಂದು ಆಲ್ಗೆಗಳು ಆರ್ಥಿಕ ಪ್ರಾಮುಖ್ಯ ಪಡೆದಿವೆ. ಇವುಗಳಿಂದ ಸುಲಭವಾಗಿ ಪಡೆಯಬಹುದಾದ ಆಲ್ಜಿನ್ನನ್ನು ಐಸ್ಕ್ರೀಮ್, ಟೂತ್ಪೇಸ್ಟ್‌, ಸುಗಂಧದ್ರವ್ಯ. ಸಾಬೂನು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ರಬ್ಬರನ್ನು ಪರಿಷ್ಕಾರಗೊಳಿಸುವಾಗ ಇದನ್ನು ಬಳಸುವ ರೂಢಿಯಿದೆ. ಲ್ಯಾಮಿನೇರಿಯ ಮತ್ತು ಏಲೇರಿಯ ಪ್ರಭೇದಗಳಿಂದ ಕೊಂಬು ಎಂದು ಕರೆಯಲಾಗುವ ಆಹಾರ ವಸ್ತುವನ್ನು ತಯಾರಿಸುತ್ತಾರೆ. ಜಪಾನಿನಲ್ಲಿ ಇದನ್ನು ಮೀನು, ಮಾಂಸ ಮುಂತಾದುವುಗಳೊಡನೆ ಬೆರೆಸಿ ಆಹಾರವಾಗಿ ಉಪಯೋಗಿಸುತ್ತಾರೆ. ಒಂದು ಕಾಲದಲ್ಲಿ ಈ ಆಲ್ಗೆಗಳಿಂದ ಅಯೊಡೀನ್ ಮತ್ತು ಪೊಟ್ಯಾಸಿಯಂಗಳನ್ನು ಬೇರ್ಪಡಿಸುತ್ತಿದ್ದರು.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: