ವಿಷಯಕ್ಕೆ ಹೋಗು

ಕಂಚಿಕಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಚಿಕಲ್ಲು ಕೂಡ ಭೂತಾರಾಧನೆ ದೈವರಾಧನೆಗೂ ಮುಂಚೆ ಇದ್ದ 'ನಂಬಿದ ಸತ್ಯಗಳ' ಅರಾಧನೆಯ ಒಂದು ವಿಸ್ತೃತ ರೂಪ. ಕುಲಭಾಂದವರ ಅರಾಧನೆಯನ್ನು ತುಳುವರು ತಮ್ಮ ಆದಿ ಅಲಡೆಯಲ್ಲಿ ಅರಾಧಿಸಿದ ಪ್ರಥಮ ಸಂಕೇತವೇ ಕಂಚಿಕಲ್ಲು. ಇಲ್ಲಿ ಆಲಡೆಯೆಂದರೆ ಪ್ರಸ್ತುತ ಗುರುತಿಸಿಕೊಂಡಿರುವ ಸಿರಿ ಆಲಡೆ ಅಲ್ಲ. ಇದಕ್ಕಿಂತಲೂ ಮೊದಲು ಆದಿ ಅಲಡೆ ಎಂಬ ವ್ಯವಸ್ಥೆ ಇತ್ತು‌. ಆ ಅಲಡೆಯಲ್ಲಿ ಅರಾಧನೆ ಪಡೆಯುತ್ತಿದ್ದವರು ಗತಿಸಿದ ಹಿರಿಯರು. ಜಾತಿ ವ್ಯವಸ್ಥೆ ರೂಪುಗೊಳ್ಳುವ ಮುಂಚೆ‌ 16 ಕುಲಗಳ ಪರಿಕಲ್ಪನೆಯಲ್ಲಿ ಅಂದಿನ ತುಳುವರ ಬದುಕು ಬೇಟೆಯ ಯುಗದೊಂದಿಗೆ ಆರಂಭಗೊಂಡಿರುವುದು ಒಪ್ಪುವಂತಹ ವಿಚಾರ.

ಕಂಚಿಕಲ್ಲಿನ ಉಲ್ಲೇಖ

[ಬದಲಾಯಿಸಿ]

ತುಳುವಿನಲ್ಲಿ ಕಂಚಿ ಎಂಬ ಶಬ್ಧಕ್ಕೆ ಅಂಗ ಎಂಬ ಆರ್ಥ ವಿದ್ದು 'ಕಂಚಿಕಳಲಿ' ಎಂದರೆ ಅಂಗ‌ಸಾಧನೆ ನಡೆಯುವ ಸ್ಥಳವೆಂದು ಅಂಚನ್ ಅವರು ತಮ್ಮ ಕೃತಿಯಲ್ಲಿ ಗುರುತಿಸಿದ್ದಾರೆ. ಈ ಬಗ್ಗೆ ಒಂದು ನುಡಿಗಟ್ಟು ಅವರ ಕೃತಿಯಲ್ಲಿ ಉಲ್ಲೇಖವಾಗಿದೆ. 'ಊರುಗಾಪಿನ ಕಂಚಿಕಳಲಿ ಸಾದಗದ ಕೊಟ್ಯ ಕಟ್ಟಾಯೆರ್' ಅಂದರೆ ಊರಿಗೆ ಅನುಕೂಲವಾಗುವಂತೆ ಅಂಗ ಸಾಧನೆಯ ಕೊಟ್ಟಿಗೆ ಕಟ್ಟಿಸಿದರು ಎಂಬುದು.[]

ಕಂಚಿಕಲ್ಲಿನ ಗುರುತುವಿಕೆ

[ಬದಲಾಯಿಸಿ]

ತುಳುವರ ಪ್ರಾಚೀನ ಆದಿ ಆಲಡೆಯಲ್ಲಿ ಇದ್ದ ಎರಡು ಕಂಚಿಕಲ್ಲು ಕರಿ ಬಂಡೆಕಲ್ಲುಗಳಾಗಿದ್ದು ನಾವು ಪೂರ್ವಕ್ಕೆ ಮುಖಮಾಡಿ‌ ನಿಂತಾಗ ನಮ್ಮ ಬಲಭಾಗಕ್ಕೆ ಇರುವ ಕಲ್ಲು 'ಹೆಣ್ಣು' ಮತ್ತು ಎಡಭಾಗಕ್ಕೆ ಇರುವ ಕಲ್ಲು 'ಗಂಡು' ಎಂದು ಗುರುತಿಸಲಾಗುತ್ತದೆ. ಅಯಾ ಕುಲದಲ್ಲಿ ಹುಟ್ಟಿ ಗತಿಸಿದ ಸಮಸ್ತ ಹೆಣ್ಣು - ಗಂಡುಗಳ ಪ್ರತೀಕವಾಗಿ ಈ ಜೋಡು ಕಲ್ಲುಗಳನ್ನು ನೆಟ್ಟು ಅರಾಧನೆ ನಡೆಸಿದ ಪ್ರಾಚೀನ ತುಳುವರ ಈ ಪರಂಪರೆ ಇಂದಿನ ದೇವರ ಕಲ್ಪನೆಗಳಾದ 'ಸುಗುಣ'- 'ಸಾಕಾರ' ಮತ್ತು 'ನಿರ್ಗುಣ- ನಿರಾಕಾರ' ಎಂಬ ಪರಿಕಲ್ಪನೆಗಳಂತೆ ಕೇವಲ ಭಾವನಾತ್ಮಕ ನೆಲೆಯಲ್ಲೇ ನಿಲ್ಲದೇ ನಿಸರ್ಗದಲ್ಲಿ ಬೆರೆಯುವ ಒಂದು ವಾಸ್ತವ ಪರಿಕಲ್ಪನೆ ಎಂದು ಅಂಚನ್ ಅವರು ಹೇಳುತ್ತಾರೆ.

ಆರಾಧನೆ

[ಬದಲಾಯಿಸಿ]

ಸಮಾಜದ ಗಂಡು ಹೆಣ್ಣೆಂಬ ಎರಡು ಜಾತಿಗಳನ್ನು ಸಮಾನವಾಗಿ ಕಾಣುವ‌ ತುಳುವರ ಅಂದಿನ ಸಂಸ್ಕೃತಿ ಜೋಡಿ ಕಂಚಿಕಲ್ಲಿನಲ್ಲಿ ಪ್ರತಿನಿಧಿಸುವ ಈ ಅಪೂರ್ವ ವ್ಯವಸ್ಥೆ ಯಾವುದೇ ಲಿಂಗ ಬೇಧ, ಅಸ್ಪರ್ಶತೆಯ ಮಡಿಮೈಲಿಗಳಿಲ್ಲದೆ ಅರಾಧನೆಗೊಳ್ಳುತ್ತಿದ್ದ ಉಚ್ಚ ಮಟ್ಟದ ಪವಿತ್ರ ಅರಾಧನೆಯಾಗಿತ್ತು

ಪದ್ಧತಿ

[ಬದಲಾಯಿಸಿ]

ತುಳುವರ ಅಲೆಮಾರಿ ಜೀವನ ಮತ್ತು ಅಂದಿನ ಸಾವಿರ ಸಾವಿರ ವರ್ಷಗಳ ಪ್ರಾಚೀನ ಬದುಕು‌ ಮುಖ್ಯವಾಗಿ ಬೇಟೆಯನ್ನೇ ಅವಲಂಬಿಸಿತ್ತು. ಆಹಾರಕ್ಕಾಗಿ ನಡೆಸುತ್ತಿದ್ದ ಸಮೂಹ ಸಂಸ್ಕೃತಿಯ 'ಬೇಟೆ'ಯ ಆರಂಭ ಮತ್ತು ಅಂತ್ಯದ ಕಾರ್ಯಗಳು ಕಡ್ಡಾಯವಾಗಿ ನಡೆಯುತ್ತಿದ್ದದು ಇದೇ ಕಂಚಿಕಲ್ಲುಗಳಿದ್ದ ಆದಿ ಅಲಡೆಯಲ್ಲಿ. ಅಯಾ ಕುಲದ ಮೂಲದ ಆಲಡೆಯಿಂದ ಹೊರಟ‌ ಬೇರೆ ಬೇರೆ ಕುಲದವರು ಒಂದು ತಾಣದಲ್ಲಿ ಸಂಧಿಸುತ್ತಿದ್ದರು. ಆ ತಾಣಕ್ಕೆ ಪಂಜಿಕಲ್ಲು ಎಂಬ ಹೆಸರು ಇತ್ತು. ಈ ಪಂಜಿಕಲ್ಲಿನಲ್ಲಿ ಬೇಟೆಯ ಮೃಗಮಾಂಸದ ವಿತರಣೆ ಆದ ಬಳಿಕ ತಮ್ಮ ಪಾಲಿನ ಬೇಟೆಯ ಪಾಲನ್ನು ಪಡೆದುಕೊಂಡು ತಮ್ಮ ತಮ್ಮ ಆಲಡೆಗೆ ಬಂದು ಅಲ್ಲಿ ನಂಬಿದ ಸತ್ಯಗಳ ಕಂಚಿಕಲ್ಲುಗಳಿಗೆ ಮಾಂಸವನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುವುದು ತುಳುವರ ಪ್ರಾಚೀನ ಸಂಸ್ಕೃತಿಯ ಒಂದು ಬಹು ಮುಖ್ಯ ಪದ್ದತಿ. ಈ ಎರಡು ಜೋಡಿಕಲ್ಲುಗಳಿಗೆ ಕಲ್ಲುಕುಟಿಕ ಮತ್ತು ಕಲ್ಲುರುಟಿ ಎಂಬ ಹೆಸರಗಳಿದ್ದು ಇವುಗಳನ್ನು ಸಂಯುಕ್ತವಾಗಿ ಕಂಚಿಕಲ್ಲ್ ಎಂದು ಕರೆಯುತ್ತಿದ್ದರು. ಈ ಕಲ್ಲುರುಟಿ ಕಲ್ಲುಕುಟಿಕಗಳಿಗೂ ಈಗಿನ ಕಲ್ಕುಡ ಕಲ್ಲುರ್ಟಿ ದೈವಗಳಿಗೂ ಯಾವುದೇ ಸಂಬಂಧವಿಲ್ಲವೆಂಬುವುದನ್ನು ಇಲ್ಲಿ ಪರಿಗಣಿಸಬೇಕು. ಈ ಕಂಚಿಕಲ್ಲಿನ ಅರಾಧನೆಗೂ ಒಂದು ಕೂಡು ಕಟ್ಟು ಮತ್ತು ಅರಾಧನ ವ್ಯವಸ್ಥೆ ಇತ್ತು. ಅಯಾ ಕುಲದ ಹಿರಿಯ ಯಜಮಾನ ಯಜಮಾನಿಗೆ ಕಾಪಾಡ‌ ಕಪಾಡ್ತಿಯಿರೆಂಬ ಹೆಸರಿತ್ತು. ಇವರೇ‌ ಕುಲದ ಮುಖ್ಯ ಮಾರ್ಗದರ್ಶಕರಾಗಿದ್ದರು. ಕಾಲಾಂತರದಲ್ಲಿ ಈ‌ ಪದವಿಗೆ ಪರ್ಯಾಯವಾಗಿ 'ಪಾಲವ' ಮತ್ತು ಮುಕ್ಕಾರಿ ಎಂಬ ಶಬ್ದಗಳು ಬಳಕೆಯಾಗಿತ್ತು.

ಕುಲದ ಹಿರಿಯ ಹೆಂಗಸು ಮತ್ತು ಗಂಡಸು ಹಾಗು ಅವರ ಕೂಡು ಕುಟುಂಬ ಕುಲ ಭಾಂದವರು ಸೇರಿ ತಮ್ಮ ಆದಿ ಅಲಡೆಯ ಕಂಚಿ ಕಲ್ಲಿನಲ್ಲಿ ಎರಡು ಬಾಳೆ ಎಲೆಗಳನ್ನು ಹಾಕಿ ಅದರಲ್ಲಿ ಎಡೆ ಬಡಿಸಿ ನಂತರ ಎಲ್ಲರೂ ಸೇರಿ, ಒಂದು ಕಾಲದಲ್ಲಿ ‌ತಮ್ಮ ಕುಲದ ಸದಸ್ಯರಾಗಿದ್ದವರು ಇಂದು ಕಣ್ಮರೆಯಾಗಿರುವ ಹಿರಿಯರನ್ನು ಸ್ಮರಿಸಿ ಬಡಿಸಿದ ಎಡೆಯನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತಿದ್ದರು. ಆ ಅಲಡೆಯ ನೆಲದ ಮಣ್ಣನೇ ಕರಿಗಂಧವಾಗಿ ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದಾದ ನಂತರ ಕುಲದ ಹಿರಿಯ ಹೆಂಗಸು ಮುಕ್ಕಾಲ್ದಿಯಾಗಿ ಹಿರಿಯ ಗಂಡಸು ಕಾಪಾಡನಾಗಿ ಕುಲಬಾಂದವರೆಲ್ಲ ಸೇರಿಕೊಂಡು ತಮ್ಮ ಆದಿ ಆಲಡೆಯ ಮರದ ಸುತ್ತು ನಿಂತು 'ಕಂಚಿಕಲ್ಲಿಗೆ' ಮಂಡಲಾಕಾರದಲ್ಲಿ ಕುಣಿಯುವ ವಿಶಿಷ್ಟ ಪರಂಪರೆ ಅಂದಿನ ಪ್ರಾಚೀನ ತುಳುವರಲ್ಲಿ ಇತ್ತು. ಆದರೆ ಅಂಚನ್ ಅವರು ಹೇಳುವ ಪ್ರಕಾರ ಲಿಂಗ ಸಮಾನತೆಯ ಜೊತೆ ಕುಲಬಾಂಧವ್ಯಗಳನ್ನು ಗಟ್ಟಿಗೊಳಿಸುವ ಸಮೂಹ ಚಿಂತನೆಯ ಈ ಆಚರಣೆ ಯಾವಾಗ ಊಳಿಗಮಾನ್ಯ ವ್ಯವಸ್ಥೆಯ ಹಲ್ಲೆಗೆ ಒಳಗಾಯಿತೋ ಅಂದಿನಿಂದ ಅವು ಜಾತಿ, ವರ್ಗ, ಮತ ಮತ್ತು ಲಿಂಗ ಬೇಧಗಳನ್ನು ಜೋಡಿಸಿಕೊಂಡು ಮೂಲ ಪರಂಪರೆಯ ನಾಶಕ್ಕೆ ನಾಂದಿಹಾಡಿತು.

ಉಲ್ಲೇಖಗಳು

[ಬದಲಾಯಿಸಿ]
  1. Templates, Borneo. "ಕಂಚಿಕಲ್ಲು - ತುಳುವರ ಪುನರ್ಜನ್ಮರಹಿತ ಒಂದು ಅನನ್ಯ ನಂಬಿಕೆ". Retrieved 19 July 2024.