ಔಷಧ ಗಿಡದಿಂದ ಪೊಸಿಟಿವ್ ಎನರ್ಜಿ
ಶಕ್ತಿಪ್ರಕೃತಿಯೇ ಹಾಗೆ ಆದರಲ್ಲಿ ಯಾವಾಗಲೂ ಆಧ್ಯಾತ್ಮಿಕ ಎನರ್ಜಿಯೊಂದು ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಆದರೆ ಮನೆಯೊಳಗೆ ಕೃತಕ ವಸ್ತುಗಳೇ ತುಂಬಿರುವುದರಿಂದ ಅಂತಹ ಶಕ್ತಿ ಒಳಗೆ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ನೈಸರ್ಗಿಕ ಶಕ್ತಿ ಮನೆಯೊಳಗೆ ಹರಿಯುವಂತೆ ಮಾಡಲು ಇನ್ನಷ್ಟು ಯತ್ನಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಅಷ್ಟೇನೂ ಕಷ್ಟ ಪಡಬೇಕಾಗಿಲ್ಲ. ಮನೆಯೊಳಗೆ ಗಿಡ, ಹೂ, ಗಿಡಮೂಲಿಕೆಗಳನ್ನು ಬೆಳೆದರೆ ಸಾಕು. ಸ್ವಲ್ಪವೇ ದಿನದಳಲ್ಲಿ ಮನೆಯೊಳಗೆ ಪೊಸೆಟಿವ್ ಎನರ್ಜಿ ಹರಿದಾಡುವುದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ.
ಕರಿಬೇವು : ಅಡುಗೆ ಮನೆಯ ಯಾವುದೇ ತಿಂಡಿ ಇರಲಿ ಅದಕ್ಕೆ ಕರಿಬೇವು ಸೇರಿಸಿದರೆ ಘಮಘಮ. ಇದು ಮನೆಯೊಳಗೆ ಸುಲಭವಾಗಿ ಬೆಳೆಯುತ್ತದೆ. ಪಾಟ್ನಲ್ಲಿ ಕರಿಬೇವನ್ನುಬೆಳೆಯಬಹುದು. ಆರಂಭದಲ್ಲಿ ಇದಕ್ಕೆ ಒಂದು ಆಧಾರ ಸ್ತಂಭ ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಬೀಳುತ್ತಿರಬೇಕು. ಜೊತೆಗೆ ದಿನಕ್ಕೊಮ್ಮೆ ನೀರು ಹಾಕಬೇಕು.
ಪುದಿನಾ : ಪುದಿನಾ ಒಂದು ತಂಪುಕಾರಕ ಸೊಪ್ಪು. ಇದರ ಬಳಕೆ ಆಯುರ್ವೇದದಲ್ಲಿ ಸಾಕಷ್ಟಿದೆ. ಉತ್ತಮ ಮಣ್ಣು ಕಿಟಕಿಯಿಂದ ಒಂದಿಷ್ಟು ಸೂರ್ಯ ಬೆಳಕು ಇದರ ಬೆಳವಣಿಗೆಗೆ ಸಾಕು. ಇದು ಬೇಗನೆ ಬೆಳೆಯುತ್ತದೆ. ಚಿಕ್ಕ ಪಾಟ್ನಲ್ಲಿ ಇದರ ಬೀಜಗಳನ್ನು ಹರವಿ ಬಿಡಿ. ಆದರೆ ಪಾಟ್ ಇಡುವ ಜಾಗದಲ್ಲಿ ಸೂರ್ಯ ಬಿಸಿಲು ಪ್ರಖರವಾಗಿ ಬೀಳಬಾರದು. ಹಾಗೆಂದು ಕಡಿಮೆಯೂ ಆಗಬಾರದು.
ಕೊತ್ತಂಬರಿ ಸೊಪ್ಪು : ಇದಂತೂ ಪ್ರತಿಯೊಂದು ಅಡುಗೆಗೂ ಬೇಕೇ ಬೇಕು. ದಿನ ನಿತ್ಯದ ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪನ್ನು ಕೂಡ ಮನೆಯೊಳಗೆ ಬೆಳೆಯಬಹುದು. ಅಗಲವಾದ ಪಾಟ್ನಲ್ಲಿ ಮಣ್ಣು ತುಂಬಿ ಅದರಲ್ಲಿ ದನಿಯಾ ಬೀಜಗಳನ್ನು ಹರಡಿ ಬಿಡಿ. ದಿನಕ್ಕೆ ಒಂದಿಷ್ಟು ನೀರು ಹಾಕುತ್ತಿರಿ. ಸೂರ್ಯನ ಬೆಳಕು ಪಾಟ್ ಮೇಲೆ ಬೀಳುವಂತಿರಲಿ. ಕೆಲವೇ ದಿನಗಳಲ್ಲಿ ಇದು ಮೊಳೆತು ಚಿಗುರು ಬಿಡುತ್ತದೆ. ಇದರ ಜೊತೆಗೆ ಲೆಮೆನ್ ಗಾಸ್ ಕೂಡ ಬೆಳೆಸಿ.
ಪರ್ಸ್ಲೆ : ಕನ್ನಡದಲ್ಲಿ ಅಚ್ಚುಮೂಡ ಎಂದು ಕರೆಯಲಾಗುವ ಇದು ಕೂಡ ಮನೆಯಲ್ಲಿ ಎನರ್ಜಿ ಹೆಚ್ಚಿಸಲು ಕಾರಣವಾಗುತ್ತದೆ. ಪಾಟ್ನಲ್ಲಿ ಮಣ್ಣು ಹರಡಿ ಇದರಲ್ಲಿ ಬೀಜಗಳನ್ನು ಬಿತ್ತಬೇಕು. ಇದು ನಿಧಾನವಾಗಿ ಮೊಳಕೆಯೊಡುವ ಕಾರಣ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಗಾಳಿ ಮತ್ತು ಬೆಳಕು ಚೆನ್ನಾಗಿ ಆಡುವ ಪ್ರದೇಶದಲ್ಲಿ ಇದು ಬೆಳೆಯುತ್ತದೆ. ಹಾಗೆಂದು ನೇರ ಸೂರ್ಯ ಬೆಳಕು ಇದರ ಮೇಲೆ ಬೀಳಬಾರದು.