ತುಟಿ
ತುಟಿಗಳು ಮನುಷ್ಯರ ಮತ್ತು ಹಲವು ಪ್ರಾಣಿಗಳ ಮುಖದಲ್ಲಿ ಕಾಣಿಸುವ ದೇಹದ ಭಾಗವಾಗಿವೆ. ತುಟಿಗಳು ಮೃದುವಾಗಿವೆ, ಚಲಿಸಬಲ್ಲವಾಗಿವೆ, ಮತ್ತು ಆಹಾರ ಸೇವನೆಯಲ್ಲಿ ರಂಧ್ರವಾಗಿ ಮತ್ತು ಧ್ವನಿ ಹಾಗು ಮಾತಿನ ಚಲನೆಯಲ್ಲಿ ಕೆಲಸ ಮಾಡುತ್ತವೆ. ಮಾನವ ತುಟಿಗಳು ಸ್ಪರ್ಶಸಂಬಂಧಿ ಸಂವೇದನಾವಾಹಕ ಅಂಗವಾಗಿವೆ, ಮತ್ತು ಚುಂಬನ ಹಾಗು ಇತರ ಅನ್ಯೋನ್ಯತೆಯ ಕ್ರಿಯೆಗಳಲ್ಲಿ ಬಳಸಿದಾಗ ಕಾಮಪ್ರಚೋದಕವಾಗಿರಬಹುದು.
ರಚನೆ
[ಬದಲಾಯಿಸಿ]ತುಟಿ - ದಪ್ಪ ಮಡಿಕೆಯಂತೆ ಬಾಯಸುತ್ತಲೂ ಇರುವ ಅಂಗ. ಬಾಯಿ ಮುಚ್ಚಿದ್ದಾಗ ಅಥವಾ ಅರ್ಧ ತೆರೆದಿದ್ದಾಗ ಬಾಯಿಗೆ ಮೇಲೆ ಮತ್ತು ಕೆಳಗೆ ಎರಡು ಅಂಚುಗಳಾಗಿ ವ್ಯಕ್ತವಾಗುತ್ತದೆ. ಮೇಲು ತುಟಿಗೆ ಓಷ್ಠವೆಂದೂ ಕೆಳತುಟಿಗೆ ಅಧರ (ಅವುಡು) ಎಂದೂ ಬೇರೆ ಬೇರೆ ಹೆಸರಿನಿಂದ ವ್ಯವಹರಿಸುವುದಿದೆ. ಮನೋದ್ರೇಕವಾದಾಗ ಅಥವಾ ಕಷ್ಟಕೆಲಸ ಮಾಡುವಾಗ ಅವುಡು ಕಚ್ಚಿಕೊಳ್ಳುವುದು ಬಹು ಸಾಮಾನ್ಯ. ತುಟಿಯ ರಚನೆಯಲ್ಲಿ ಸ್ನಾಯು, ಮೇದಸ್ಸು ಮತ್ತು ನೂರಾರು ಅತಿ ಸಣ್ಣ ಲಾಲಾಗ್ರಂಥಿಗಳು ಹೊರಗೆ ಚರ್ಮದಿಂದಲೂ ಒಳಗೆ ಲೋಳೆ ಪೊರೆಯಿಂದಲೂ ಹೊದ್ದಿಸಲ್ಪಟ್ಟಿರುವುದು ವ್ಯಕ್ತವಾಗುತ್ತದೆ. ಸ್ನಾಯುವಿಗೆ ನರಪೂರೈಕೆಯಾಗುವುದರಿಂದ ತುಟಿಗಳನ್ನು ಯಾವ ಕಡೆಗಾದರೂ ಐಚ್ಛಿಕವಾಗಿ ಚಲಿಸಬಹುದು. ಎಷ್ಟು ದೀರ್ಘಕಾಲಿಕವಾಗಿಯಾದರೂ ತುಟಿಯನ್ನು ತೆರೆದಿರಬಹುದು ಇಲ್ಲವೆ ಮುಚ್ಚಿರಬಹುದು. ಮನೋದ್ರೇಕಕ್ಕೆ ಅನುಗುಣವಾಗಿ ಅನೈಚ್ಛಿಕವಾಗಿಯೇ ತುಟಿಗಳು ಚಲಿಸಿ ಮುಖಭಂಗಿಯ ವಿಶಿಷ್ಟತೆಗೆ ಒಂದು ಮುಖ್ಯ ಸಾಧನವಾಗಿರುವುದೂ ಉಂಟು.
ತುಟಿಯ ಲೋಳೆಪೊರೆ ತೆಳು. ಇದಕ್ಕೆ ಅಲ್ಪವಾಗಿ ಪಾರಕ ಗುಣ ಉಂಟು. ಆದ್ದರಿಂದ ಇದರ ಅಡಿಯಲ್ಲಿರುವ ರಕ್ತಯುಕ್ತ ಲೋಮನಾಳಗಳ ಕೆಂಪುಬಣ್ಣ ಗೋಚರವಾಗಿ ಲೋಳೆಪೊರೆಯೇ ಕೆಂಪಗಿರುವಂತೆ ಕಾಣಿಸುತ್ತದೆ. ಸದಾ ತೇವವಾಗಿರುವ ಲೋಳೆಪೊರೆ ಕ್ರಮೇಣ ಬದಲಾವಣೆಯಿಂದ ಶುಷ್ಕವಾದ ಚರ್ಮದ ಹೊರಮೇಲ್ಮೈ ಆಗುತ್ತದೆ. ಹೀಗೆ ಮೇಲ್ಮೈರಚನೆ ಬದಲಾಗುವ ಸ್ಥಳವೇ ಹೊರಗಿನಿಂದ ಬಾಯಿಯ ಅಂಚಾಗಿ ಕಂಡುಬರುವ ತುಟಿಯ ಕೆಂಪುಭಾಗ (ರೆಡ್ ಮಾರ್ಜಿನ್). ತುಟಿಯ ಕೆಂಪು ಅಂಚಿನಲ್ಲಿ ರೋಮಕೂಪಕ್ಕೆ (ಹೇರ್ ಫಾಲಿಕಲ್) ಸಂಬಂಧಿಸಿದಂತೆ ಜಿಡ್ಡುಗ್ರಂಥಿಗಳು (ಸೆಬೇಶಿಯಸ್ ಗ್ಲಾಂಡ್ಸ್) ಇರುವುದು ಒಂದು ವಿಶೇಷ. ಗಂಡಸರಲ್ಲಿ ಪ್ರಬುದ್ಧ ವಯಸ್ಸಾದ ಬಳಿಕ ಮೇಲ್ತುಟಿಯಲ್ಲಿ ಮೀಸೆ ಬೆಳೆಯುವುದನ್ನು ಎಲ್ಲರೂ ಬಲ್ಲರು. ಆ ಕಾಲದಿಂದ ಮುಂದೆ ಗಂಡಸರಲ್ಲಿ ಮಾತ್ರ ಗಣನೀಯ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನ್ ಇದಕ್ಕೆ ಕಾರಣ. ತುಟಿಮಧ್ಯದಲ್ಲಿ ಕೆಂಪು ಭಾಗ ಅತ್ಯಂತ ಅಗಲ. ಪಕ್ಕಕ್ಕೆ ಹೋದಂತೆ ಇದು ಕಿರಿದಾಗುತ್ತ ಬಾಯಿಮೂಲೆಗಳಲ್ಲಿ ಇಲ್ಲವಾಗುತ್ತದೆ. ಮುಖಭಾಗವನ್ನು ಗ್ರಹಿಸಬಲ್ಲ ತಜ್ಞರಿಗೆ ತುಟಿ ಒಂದು ಮುಖ್ಯ ಸಂಕೇತ. ತುಟಿಯ ಚಲನೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿ ವ್ಯಕ್ತಿಯ ಮನಸ್ಸನ್ನು ಇವರು ಅರಿಯಬಲ್ಲರು. ತುಟಿ ಚಲಿಸದೆ ಸ್ಥಿರಾಕಾರದಲ್ಲಿದ್ದರೂ ವ್ಯಕ್ತಿಯ ಸ್ವಭಾವವನ್ನು ಸ್ಥೂಲವಾಗಿ ಪತ್ತೆಮಾಡಬಹುದು ಎನ್ನಲಾಗಿದೆ. ಉದಾಹರಣೆಗೆ ದಪ್ಪತುಟಿ ಸೋಮಾರಿತನ ವಿಷಯಲಂಪಟತ್ವಗಳನ್ನೂ (ಇಂಡೊಲೆನ್ಸ್, ಸೆನ್‍ಶುಯಾಲಿಟಿ), ತೆಳುತುಟಿ ಆತಂಕ ಅತ್ಯಾಶೆಗಳ ಸ್ವಭಾವವನ್ನೂ (ಆಂಕ್ಸೈಟಿ, ಆವರಿಸ್) ಕಿರುತುಟಿ ನಿಷ್ಠುರ ನಿರ್ದಯ ಸ್ವಭಾವವನ್ನೂ (ಸ್ಟರ್ನ್, ಕೋಲ್ಡ್), ಸೂಚಿಸುವುವು ಎನ್ನಲಾಗಿದೆ. ಆದರೆ ಇವಕ್ಕೆ ವೈಜ್ಞಾನಿಕ ಅಥವಾ ಅಂಕೆ ಅಂಶಗಳ ಆಧಾರವಿರುವು ಅನುಮಾನ.
ಕಾರ್ಯಗಳು
[ಬದಲಾಯಿಸಿ]ವರ್ಣೋಚ್ಚಾರಣೆಗೆ ತುಟಿಚಲನೆ ಅಗತ್ಯ. ಪವರ್ಗದ ವ್ಯಂಜನಗಳನ್ನು ಕ್ಷಣಿಕವಾಗಿ ತುಟಿಯನ್ನು ಮುಚ್ಚಿಬಿಡುವುದರಿಂದ ಮಾತ್ರ ಉಚ್ಚರಿಸಬಹುದು ಅಷ್ಟೆ. ಆದ್ದರಿಂದ ಈ ಗುಂಪಿನ ವರ್ಣಗಳಿಗೆ ಓಷ್ಠ್ಯಗಳೆಂದು ಹೆಸರು. ಫಕಾರ (ಈ) ವಕಾರಗಳು ದಂತಗಳಿಗೆ ತುಟಿತಾಕಸಿಯೇ ಉಚ್ಚರಿಸುವಂಥವು. ಸ್ವರವರ್ಣಗಳನ್ನು ಉಚ್ಚರಿಸುವಾಗ ತುಟಿಗಳನ್ನು ತೆರೆದೇ ಇರಬೇಕಲ್ಲದೆ ಕೆಲವು ವೇಳೆ ನಿರ್ದಿಷ್ಟ ಚಲನೆಯೂ ಅಗತ್ಯವಾಗಿರುತ್ತದೆ. ಎ ಏ ಐಗಳನ್ನು ಉಚ್ಚರಿಸುವಾಗ ತುಟಿಯನ್ನು ಅಗಲವಾಗಿ ತೆರೆದಿಡಬೇಕು. ಉ ಊ ಒ ಓಗಳನ್ನು ಉಚ್ಚರಿಸುವಾಗ ತುಟಿಗಳನ್ನು ಭಾಗಶಃ ಮುಚ್ಚಿರಬೇಕು ಎಂಬುದನ್ನು ಎಲ್ಲರೂ ಗ್ರಹಿಸಿರಬಹುದು. ಆಹಾರ ಸೇವನೆಯಲ್ಲೂ ತುಟಿಯ ಚಲನೆ ಅಗತ್ಯ. ನವಜಾತ ಶಿಶುವಿನ ತುಟಿಗೆ ಮೈಕೈ ಸೋಕಿಸಿದರೆ ಅದು ಚೀಪುವಂತೆ ತಾನಾಗಿಯೇ ಆಕೃತಿಗೊಳ್ಳುತ್ತದೆ. ಇದು ಒಂದು ವಿಧೇಯಕ (ಕಂಪಲ್ಸಿವ್) ಕ್ರಿಯೆ. ಆಹಾರವನ್ನು ಹಲ್ಲುಗಳು ಅಗಿಯಲು ಅನುಕೂಲವಾಗುವಂತೆ ತುಟಿಗಳು ಮುಚ್ಚಿಕೊಂಡು ಆಹಾರವನ್ನು ಹಲ್ಲುಗಳ ನಡುವೆ ಸಿಕ್ಕಿಸುತ್ತವೆ. ಬಾಯಿಯ ಮುಂಭಾಗದಲ್ಲಿ ಇರುವ ಘನದ್ರವ ಪದಾರ್ಥಗಳನ್ನು ನುಂಗಲು ತುಟಿಯನ್ನು ಮುಚ್ಚಿಕೊಳ್ಳುವುದು ಅಗತ್ಯ. ನಗುವಾಗ ಮತ್ತು ದುಃಖದಿಂದ ಅಳುವಂತಾದಾಗಿ ಕಂಡುಬರುವ ತುಟಿಚಲನೆ ಎಲ್ಲರಿಗೂ ಗೊತ್ತು.
ಆರೋಗ್ಯವಂತರ ತುಟಿಯ ಕೆಂಪು ಬಣ್ಣ ವಿಶಿಷ್ಟವಾದದ್ದು. ರಕ್ತಕಣ ಕೊರತೆಯ ರೋಗದಿಂದ (ಅನೀಮಿಯ) ನರಳುತ್ತಿರುವವರಲ್ಲಿ ತುಟಿ ಬಿಳಿಚಿದಂತಾಗಿರುತ್ತದೆ. ತುಟಿ ನೀಲಿಗಟ್ಟಿರುವುದು ಗುಂಡಿಗೆ ಫುಪ್ಪುಸಗಳ ಕೆಲವು ವಿಶೇಷ ರೋಗಗಳ ಸಂಕೇತ. ಜ್ವರದಲ್ಲಿ ತುಟಿ ಒಣಗಿ ಒಡೆದಿರುವುದಲ್ಲದೆ ಸಿಪ್ಪೆ ಸುಲಿಯುತ್ತಿರಬಹುದು. ತುಟಿಗಳ ಕಪ್ಪು ಬಣ್ಣ ನಮ್ಮ ಸೌಂದರ್ಯವನ್ನು ಹಾಳುಮಾಡುವುದರಲ್ಲಿ ಸಂದೇಹವಿಲ್ಲ, ಕಪ್ಪು ಬಣ್ಣದ ತುಟಿ ಆರೈಕೆ ಸಲಹೆಗಳು ಪಾಲಿಸಲೇ ಬೇಕು. ಗುಲಾಬಿ ದಳಗಳಂತೆ ಅರಳುವ ಗುಲಾಬಿ ತುಟಿಗಳು ಚೆನ್ನಾಗಿ ಕಾಣುವುದಲ್ಲದೆ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಗುಲಾಬಿ ತುಟಿಗಳು ಎಲ್ಲರಿಗೂ ಸಿಗದ ಅತ್ಯುತ್ತಮ ಕೊಡುಗೆಯಾಗಿದೆ. ಕೆಲವರ ತುಟಿಗಳು ಕಾಲಕ್ರಮೇಣ ಕಪ್ಪಾಗುತ್ತವೆ. ಕಪ್ಪು ತುಟಿಗಳಿಗೆ ದೊಡ್ಡ ಕಾರಣ ಸಿಗರೇಟ್ ಬಳಕೆ [೧]. ತುಟಿಯ ಲೋಳೆಪೊರೆಯಲ್ಲಿ ದಪ್ಪಗುಳ್ಳೆಗಳು (ಸಾಮಾನ್ಯವಾಗಿ ಆಚೀಚೆ ಕಡೆ ಎರಡು) ಕಂಡುಬರಬಹುದು. ವರ್ಣರಹಿತ ಲೋಳೆಯುಕ್ತ ದ್ರವ ತುಂಬಿರುವ ಇವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕುವುದೊಂದೇ ಚಿಕಿತ್ಸೆ. ತುಟಿಯಲ್ಲಿ ಏಡಿಗಂತಿ ಆಗುವುದು ಅಪರೂಪವಲ್ಲ. ಮಧ್ಯ ವಯಸ್ಸು ಕಳೆದ ಗಂಡಸರಲ್ಲಿ ಇದು ಹೆಚ್ಚು. ವಕ್ರದಂತದಿಂದ ನಿರಂತರವಾಗಿ ತುಟಿಯನ್ನು ಗಾಹಗೊಳಿಸುತ್ತಿರುವ ಸ್ಥಿತಿ ಮತ್ತು ಮಣ್ಣಿನ ಪುಟ್ಟ ಕೊಳವೆಯಲ್ಲಿ ತಂಬಾಕು ಸೇದುತ್ತ ದೀರ್ಘಕಾಲದಿಂದಲೂ ತುಟಿಯನ್ನು ಆಗಾಗ್ಗೆ ಸುಟ್ಟುಕೊಳ್ಳುತ್ತಿರುವುದು- ಇವು ತುಟಿಯಲ್ಲಿ ಏಡಿಗಂತಿ ಆಗುವುದಕ್ಕೆ ಮುಖ್ಯ ಕಾರಣಗಳು. ಗಡುಸಾದ ಸಣ್ಣಗಂಟಾಗಿ ಏಡಿಗಂತಿ ಪ್ರಾರಂಭವಾಗುತ್ತದೆ. ಕ್ರಮೇಣ ಗಾತ್ರವೃದ್ಧಿಯಾಗಿ ಕೊನೆಗೆ ವ್ರಣವಾಗುವುದು ಇದರ ಲಕ್ಷಣ. ಕತ್ತಿನಲ್ಲಿರುವ ದುಗ್ಧರಸ ಗ್ರಂಥಿಗಳು ತುಟಿಯಲ್ಲಿ ಏಡಿಗಂತಿ ಕಂಡುಬಂದ ತರುಣದಲ್ಲೆ ಊತಗೊಳ್ಳುತ್ತದೆ. ತತ್‍ಕ್ಷಣದ ರೋಗ ನಿದಾನ ಹಾಗೂ ಶಸ್ತ್ರಚಿಕಿತ್ಸೆ ಅತ್ಯಗತ್ಯವಾದ ಸ್ಥಿತಿ ಇದು. ಆಜನ್ಮ ನ್ಯೂನತೆಗಳಲ್ಲಿ ಸೀಳುತುಟಿ (ಹರಿದತುಟಿ ) ಮುಖ್ಯ.
ಮೆತ್ತಗೆ ಕೆಂಪಗಿರುವ ತುಟಿ ಆರೋಗ್ಯ ಹಾಗೂ ಸೌಂದರ್ಯದ ಲಕ್ಷಣ [೨]. ತುಟಿಯನ್ನು ಈ ಸ್ಥಿತಿಯಲ್ಲಿ ಇಟ್ಟುಕೊಂಡಿರಲು ಸೂಕ್ತವಾದ ಆರೋಗ್ಯಕ್ರಮಗಳಲ್ಲದೆ ಸೌಂದರ್ಯವರ್ಧಕ ಕ್ರಮಗಳೂ (ಕಾಸ್ಮೆಟಿಕ್) ಅಪೇಕ್ಷಣೀಯ. ಆದರೆ ಬಜಾರಿನಲ್ಲಿ ಸಿಕ್ಕುವ ಅಗ್ಗದ ತುಟಿಕಡ್ಡಿಗಳಿಂದ (ಲಿಪ್‍ಸ್ಟಿಕ್) ಬಹುವೇಳೆ ಅನುಕೂಲಕ್ಕಿಂತ ಅಪಾಯ ಹೆಚ್ಚು ಎನ್ನವುದನ್ನು ಮನಗಂಡು ಎಚ್ಚರಿಕೆಯಿಂದಿರಬೇಕು. ತುಟಿಯನ್ನು ಒಣಗಿಸುವ ಇಂಥ ಬಣ್ಣಗಳ ಬದಲು ಲೇಪನಗಳ ಬಳಕೆ ಉತ್ತಮ.
ಸೀಳು ತುಟಿ (ಸಿರಿ ಬಾಯಿ)
[ಬದಲಾಯಿಸಿ]ತುಟಿ, ಬಾಯಿಗಳಿಗೆ ಸಂಬಂಧಿಸಿದಂಥ ಒಂದು ಆಜನ್ಮ ನ್ಯೂನತೆ (ಕ್ಲೆಫ್ಟ್ ಲಿಪ್). ಈ ನ್ಯೂನತೆಯೊಡನೆ ಜನಿಸುವ ಮಕ್ಕಳ ಸಂಖ್ಯೆ ಸಾಕಷ್ಟು ಇದೆ ಎಂದು ಹೇಳಲಾಗಿದೆ. ಭಾರತಕ್ಕೆ ಹೋಲಿಸುವಾಗ ಸಣ್ಣದಾಗಿರುವ ಮತ್ತು ಕಡಿಮೆ ಜನನ ಸಂಖ್ಯೆ ಇರುವ ಬ್ರಿಟನ್ನಿನಲ್ಲಿ ವರ್ಷಕ್ಕೆ ಸುಮಾರು 800ರಷ್ಟು ಮಕ್ಕಳು ಈ ನ್ಯೂನತೆಯೊಡನೆ ಜನಿಸುತ್ತದೆ ಎಂದು ತಿಳಿದಿದೆ. ಭಾರತವನ್ನು ಕುರಿತಂತೆ ಖಚಿತ ವಿವರ ಇಲ್ಲ. ಸಿರಿಬಾಯಿಗಳಲ್ಲಿ 17%ರಷ್ಟು ವಂಶಪಾರಂಪರ್ಯವಾಗಿಯೂ 10%ರಷ್ಟು ಗದೆಯಾಕಾರದ ಪಾದ (ಕ್ಲಬ್ ಫುಟ್), ದ್ರವ ತುಂಬಿದ ತಲೆ (ಹೈಡ್ರೊ ಕೆಫಲಸ್) ಮೊದಲಾದ ಇತರ ಆಜನ್ಮ ನ್ಯೂನತೆಗಳಿಂದ (ಕಂಜೆನಿಟಲ್ ಡಿಫೆಕ್ಟ್) ಕೂಡಿಯೂ ಇರುವುದನ್ನು ಕಾಣಬಹುದು.
ಸೀಳು ತುಟಿ ಮತ್ತು ಸೀಳು ತಾಲುಗಳು ಗರ್ಭಕೋಶದಲ್ಲಿ ಭ್ರೂಣವು ಬೆಳೆಯುವಾಗ ಕೆಲವು ಭಾಗಗಳ ಕೂಡಿಕೆಯಾಗದಿರುವುದರ ಪರಿಣಾಮ. ಮೇಲೆ ಸೂಚಿಸಿರುವಂತೆ ಆನುವಂಶಿಕ ಅಂಶಗಳು (ಜೆನೆಟಿಕ್ ಫ್ಯಾಕ್ಟರ್ಸ್) ಇದರಲ್ಲಿ ಪಾತ್ರ ವಹಿಸುವುದು ವ್ಯಕ್ತವಾಗಿದ್ದರೂ ಬೆಳೆವಣಿಗೆ ಕಾಲದಲ್ಲಿ ಭ್ರೂಣದ ಪರಿಸರದ ಪ್ರಭಾವವೂ ಗಣನೀಯವೆಂದು ಹೇಳಲಾಗಿದೆ. 1 ಸೀಳು ತುಟಿ ಮಾತ್ರ 2 ಸೀಳು ತುಟಿ ಮತ್ತು ಸೀಳು ತಾಳು (ಸೀಳು ಅಂಗುಳು) 3 ಸೀಳು ತಾಳು ಮಾತ್ರ
ಸೀಳು ತುಟಿ ಮಾತ್ರ: ಮೇಲು ತುಟಿ ಸಾಮಾನ್ಯವಾಗಿ ಒಂದು ಪಾಶ್ರ್ವದಲ್ಲಿ ಮಾತ್ರ ಸೀಳಿದಂತಿರುತ್ತದೆ. ತುಟಿಯ ಬಲಭಾಗಕ್ಕಿಂತ ಎಡಭಾಗದಲ್ಲಿ ಸೀಳಾಗಿರುವುದೇ ಹೆಚ್ಚು. ಜನಿಸಿದ 2.500 ಮಕ್ಕಳಿಗೆ ಒಬ್ಬರಲ್ಲಿ ಇದನ್ನು ಕಾಣಬಹುದು. 15%ರಲ್ಲಿ ತುಟಿಯ ಎರಡು ಭಾಗಗಳಲ್ಲೂ ಸೀಳು ಇರುತ್ತದೆ. ಮೊಲದ ಮೇಲ್ತುಟಿಯನ್ನು ಹೋಲುವುದರಿಂದ ಇದಕ್ಕೆ ಮೊಲದುಟಿ (ಹೇರ್‍ಲಿಪ್) ಎಂಬ ಹೆಸರಿದೆ. ಗಂಡುಶಿಶುಗಳಿಗಿಂತ ಹೆಣ್ಣುಶಿಶುಗಳಲ್ಲೇ ಸೀಳು ತುಟಿಗಳು ಹೆಚ್ಚು.
ಸಿರಿಬಾಯಿ ವ್ಯಕ್ತಿಗೆ ಎರಡು ಬಗೆಯ ತೊಂದರೆಗಳಿರುವುವು: ಕಾರ್ಯಾಚರಣೆಗೆ ಧsÀಕ್ಕೆಯಾಗುವುದು ಮತ್ತು ರೂಪ ವಿಕೃತಿಗೊಳ್ಳುವುದು. ಕಾರ್ಯಾಚರಣೆ ಧಕ್ಕೆಯಲ್ಲಿ ಮುಖ್ಯವಾದುದು ಹೀರಲು ಸಾಧ್ಯವಾಗದಿರುವುದು. ತಂದೆ ತಾಯಿಯರು ತ್ವರಿತವಾಗಿ ಈ ನ್ಯೂನತೆಯನ್ನು ಸರಿಪಡಿಸಬೇಕು.
ಚಿಕಿತ್ಸೆ
[ಬದಲಾಯಿಸಿ]ಚಿಕಿತ್ಸೆಗೆ ಸರಿಯಾದ ಕಾಲ ಮಗು ಹುಟ್ಟಿದ ಮೂರು ತಿಂಗಳಿಗೆ ಅಂದರೆ ಮಗು ಸುಮಾರು 4 ಕೆ.ಜಿ. ತೂಕವಿದ್ದಾಗ. ಇದರಲ್ಲಿ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಆದರೆ ಶಸ್ತ್ರಕಾರ್ಯದಲ್ಲಿ ಗಣಿಸಬೇಕಾದ ಧ್ಯೇಯಗಳು: 1 ಬಾಯಿಯ ವರ್ತುಲ ಸ್ನಾಯುವಿನ (ಓರಲ್ ಸ್ಟಿಂಕ್ಟರ್) ಸಂಪೂರ್ಣತೆಯನ್ನು ಉಳಿಸಿಕೊಳ್ಳುವುದು: 2 ತುಟಿಯ ಕೆಂಪು ಲೋಳೆಪೊರೆಯ ಅಂಚನ್ನು (ರೆಡ್ ಮಾರ್ಜಿನ್) ಅಸ್ತವ್ಯಸ್ತಗೊಳ್ಳದಂತೆ ಮಾಡುವುದು: 3 ತುಟಿಯ ಚಲನೆ ಮತ್ತು ಮೂಗಿನ ನ್ಯೂನತೆಗಳನ್ನು ಸರಿಪಡಿಸುವುದು.
ಸೀಳು ತುಟಿ ಮತ್ತು ಸೀಳು ತಾಳು
[ಬದಲಾಯಿಸಿ]ಸೀಳು ತಾಳು ಸಾಮಾನ್ಯವಾಗಿ ಸೀಳು ತುಟಿಯೊಡನೆಯೇ ಕೂಡಿರುತ್ತದೆ. ಇದರಲ್ಲಿ ಮೂರು ಬಗೆಗಳಿವೆ: 1 ತುಟಿಯ ಒಂದು ಕಡೆ ಮಾತ್ರ ಸೀಳು ಇದ್ದು ಅದು ಕಠಿಣ ಮತ್ತು ಮೃದು ತಾಳಿನಲ್ಲಿ ಮುಂದುವರಿಯುವುದು; 2 ಎರಡೂ ಕಡೆ ತುಟಿ ಸೀಳಾಗಿದ್ದು ಕೆಳದರ್ಜೆಯ ಪ್ರಾಣಿಗಳಲ್ಲಿರುವಂತೆ ಆ ಸೀಳುಗಳ ನಡುವೆ ಮೂತಿ ಆಕಾರವಾಗಿ ಚಾಚಿರುವ ಸೀಳು ತಾಳು; ಮತ್ತು 3 ಕಠಿಣ ಮತ್ತು ಮೃದು ತಾಳುಗಳಲ್ಲಿ ಮಾತ್ರ ಇರುವ ಸೀಳು.
ಸ್ಪಷ್ಟವಾಗಿ ಮಾತಾಡಲು ತೊಂದರೆಯಾಗುವುದೇ ಈ ನ್ಯೂನತೆಯ ಪ್ರಮುಖ ದೋಷ. ಸ್ಪಷ್ಟ ಉಚ್ಚಾರಣೆಗೆ ಬಾಯಿಯ ಅಟ್ಟದ ಸಂಪೂರ್ಣತೆ ಮತ್ತು ಗಂಟಲಿನ ಮೇಲುಭಾಗವನ್ನು ಕೆಳಭಾಗದಿಂದ ಬೇರ್ಪಡಿಸುವಿಕೆ ಅವಶ್ಯಕ. ಸ್ವರಗಳ ಉಚ್ಚಾರಣೆಯಲ್ಲಿ ಸ್ವಲ್ಪ ಮಾತ್ರ ಬದಲಾವಣೆ ಆಗುತ್ತದೆ. ಆದರೆ ತುಟಿ, ನಾಲಗೆ ಮತ್ತು ತಾಳುಗಳಿಂದ ಉಚ್ಚರಿಸುವ ವ್ಯಂಜನಗಳು ಮುಖ್ಯವಾಗಿ ಪ, ಡ, ಟ, ಢ, ಸ, ಕ-ಹೆಚ್ಚು ವ್ಯತ್ಯಾಸ ಹೊಂದುತ್ತದೆ.
ಚಿಕಿತ್ಸೆ
[ಬದಲಾಯಿಸಿ]ತುಟಿಯ ನ್ಯೂನತೆಯನ್ನು ಎಳೆತನದ ಸುಮಾರು ಮೂರನೆಯ ತಿಂಗಳಲ್ಲಿ ಸರಿಪಡಿಸಿದರೆ ತಾಲುವನ್ನು ಮಗುವು ಮಾತಾಡಲು ಪ್ರಾರಂಭಿಸುವ ಮೊದಲು ಅಂದರೆ 1ರಿಂದ 1.5 ವರ್ಷದೊಳಗೆ ಸರಿಪಡಿಸಬೇಕು. ಶಸ್ತ್ರಚಿಕಿತ್ಸೆಯ ಗುರಿ ಮುಖ್ಯವಾಗಿ ಮೂರು: 1 ಕಠಿಣ ಮತ್ತು ಮೃದು ತಾಲುಗಳಲ್ಲಿಯ ಬಿರುಕನ್ನು ಕೂಡಿಸುವುದು; 2 ಮೃದು ತಾಳು ಚಲಿಸುವಂತೆ ಮಾಡಿ ಅದನ್ನು ಹಿಂದಕ್ಕೆ ಗಂಟಲಿನ ವರೆಗೆ ವರ್ಗಾಯಿಸುವುದು; 3 ಸ್ನಾಯುಕಾರ್ಯದ ಎಲ್ಲ ವಿಧದ ತೊಂದರೆಯನ್ನು ನಿವಾರಿಸುವುದು.
ಮಗು ದೊಡ್ಡದಾಗಿದ್ದರೆ ಕೆಲವು ವೇಳೆ ವಾಕ್ ಚಿಕಿತ್ಸೆ (ಸ್ಪೀಚ್ ಥೆರಪಿ) ಅವಶ್ಯಕವಾಗುತ್ತದೆ.
ಸೀಳು ತಾಳು ಮಾತ್ರ : ಇದು ಕೂಡ ಹುಟ್ಟಿನಿಂದಲೇ ಬರುವ ನ್ಯೂನತೆ. ಗರ್ಭಸ್ಥಭ್ರೂಣದಲ್ಲಿ ಶಿಶುವಿನ ಮುಖಕ್ಕೆ ಸಂಬಂಧಿಸಿದ ಭಾಗಗಳ ಸಕಾಲಿಕ ಜೋಡಣೆ ವಿಫಲವಾಗುವುದರಿಂದ ತಲೆದೋರುತ್ತದೆ. ಕಠಿಣ ಹಾಗೂ ಮೃದು ಅಂಗುಳಗಳೆರಡರ ಮೂಲಕ ಮೂಗಿನವರೆಗೂ ಈ ಸೀಳು ಹಾದು ಹೋಗಿರುವುದುಂಟು; ಇಲ್ಲವೇ ಆ ಮೊದಲೇ ಯಾವುದೋ ಹಂತದಲ್ಲಿ ನಿಂತಿರುವುದೂ ಉಂಟು. ಬಹುತೇಕ ಸೀಳುತಾಳು ಸಿರಿಬಾಯಿಯೊಡನೆ ತಲೆದೋರುತ್ತದೆ.
ಛಾಯಾಂಕಣ
[ಬದಲಾಯಿಸಿ]-
The labial coronary arteries, etc.
-
The Kiss, by Francesco Hayez, 1859
-
Lipstick
-
Two women in Uganda whose lips have been cut off by Lord's Resistance Army rebels
-
Rocky Horror Picture Show shadow casting lips
ಉಲ್ಲೇಖಗಳು
[ಬದಲಾಯಿಸಿ]- ↑ "ಕಪ್ಪು ತುಟಿಗಳಿಗೆ ಮನೆಮದ್ದುಗಳು". Kannadanews.today. October 19, 2021.
- ↑ "ತುಟಿಯ ಆರೈಕೆ ಸಲಹೆಗಳು". Kannadanews.today. October 19, 2021.