ವಿಷಯಕ್ಕೆ ಹೋಗು

ಓಲೊಫ್ ವಾನ್ ಡಾಲಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಲೊಫ್ ವಾನ್ ಡಾಲಿನ್ (1708-1763). ಪ್ರಖ್ಯಾತ ಸ್ವೀಡಿಷ್ ಲೇಖಕ. ಸ್ವೀಡಿಷ್ ಗದ್ಯದ ನಿರ್ಮಾಪಕನೆಂದು ಹೆಸರಾಗಿದ್ದಾನೆ.

ಬದುಕು, ಬರಹ[ಬದಲಾಯಿಸಿ]

ಹಾಲೆಂಡಿನ ಎನ್‍ಬರ್ಗ್ ಹಳ್ಳಿಯ ಪಾದ್ರಿಯ ಮಗನಾದ್ದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ. ತನ್ನ ಹದಿನೆಂಟನೆಯ ವಯಸ್ಸಿನ ವೇಳೆಗೆ ಲುಂಡ್ ವಿಶ್ವವಿದ್ಯಾಲಯದ ಪದವಿ ಪಡೆದು, 1726ರಲ್ಲಿ ಸ್ವೀಡನ್ನಿನ ಸರ್ಕಾರದ ಕೆಲಸಕ್ಕೆ ಸೇರಿದ. ಸ್ಟಾಕ್‍ಹೋಮಿನ ರಾಜಮನೆತನದವರೊಬ್ಬರ ಮನೆಯಲ್ಲಿ ಅಧ್ಯಾಪಕನಾಗಿ 1727ರಲ್ಲಿ ನೇಮಕಗೊಂಡುದರಿಂದ ಅರಮನೆಯ ವ್ಯವಹಾರಗಳಲ್ಲಿ ಪ್ರವೇಶದ ಅವಕಾಶ ಸಿಕ್ಕಿತು. ಸಮಯಕವಿತ್ವದ ಚುರುಕು ಈತನ ಮುಖ್ಯ ಗುಣವೆಂದು ಎಲ್ಲರೂ ಹೊಗಳುತ್ತಿದ್ದರು. ಈ ಆಶುಕವಿತೆಗಳಲ್ಲಿ ವ್ಯಂಗ್ಯ, ಚಾಟಿಯಂತೆ ಪೆಟ್ಟುಕೊಡುವ ವಿಡಂಬನೆ ಮುಖ್ಯ ಅಂಶಗಳಾಗಿದ್ದು ಜನಪ್ರಿಯತೆ ಗಳಿಸಿದುವು. ಇಂಗ್ಲಿಷ್ ಹಾಗೂ ಫ್ರೆಂಚ್ ಸಾಹಿತ್ಯಗಳನ್ನು ಮೆಚ್ಚಿಕೊಂಡಿದ್ದ ಈತ ಅಡಿಸನ್ನನ ಸ್ಪೆಕ್ಟೇಟರ್ ರೀತಿಯಲ್ಲಿ ಸ್ವಾನ್ಸ್‍ಕಾ ಆರ್ಗಸ್ ವಾರಪತ್ರಿಕೆಯನ್ನು 1732ರಿಂದ 1734ರ ವರೆಗೆ ಪ್ರಕಟಿಸಿದ. ಆಗಿನ ಹೊಸ ವಿಚಾರಗಳು ಸ್ವೀಡನ್ನಿಗೆ ಬರಲು ಈ ಪತ್ರಿಕೆಯಲ್ಲಿ ಈತ ಬರೆದ ಲೇಖನಗಳೇ ಕಾರಣವಾಗಿ ನವೋದಯದ ಜನಕನೆಂದು ಹೆಸರು ಪಡೆದ. ಅಲ್ಲಿಯ ವಿಚಾರಗಳಷ್ಟೇ ಪ್ರಮುಖವಾದುದು ಇವನ ಬರೆವಣಿಗೆಯ ಶೈಲಿ ಹಾಗೂ ಭಾಷೆಯ ಸ್ಪಂದನ. ಆದ್ದರಿಂದಲೇ ಆಧುನಿಕ ಸ್ವೀಡಿಷ್ ಗದ್ಯದ ನಿರ್ಮಾಪಕನೆಂಬ ಹೆಸರು ಈತನಿಗೆ ಬಂತು. ಫ್ರಾನ್ಸಿನ ರಾಷ್ಟ್ರೀಯ ರಂಗಭೂಮಿಯಂತೆಯೇ ಸ್ವೀಡನ್ನಿನಲ್ಲಿಯೂ ನಾಟಕ ಪರಂಪರೆಯನ್ನು ಸೃಷ್ಟಿಸಲು ಈತ ಪ್ರಯತ್ನಿಸಿದ. ಕೋಲಿಯರನ ನಾಟಕದ ಆಧಾರದ ಮೇಲೆ "ಹೊಟ್ಟೆಕಿಚ್ಚಿನ ಗಂಡ" ಎಂಬ ವಿನೋದ ನಾಟಕವನ್ನು ರೇಸಿನನ ರೀತಿಯಲ್ಲಿ ಬ್ರಿನ್‍ಹಿಲ್ಡ ಎಂಬ ದುರಂತನಾಟಕವನ್ನು 1738ರಲ್ಲಿ ರಚಿಸಿ ಆಡಿಸಿದ. ಆದರೆ ಈತ ಬೇರೆ ನಾಟಕಗಳನ್ನು ಬರೆದರೂ ನಾಟಕದ ನೆಲೆ ನಿಲ್ಲಿಸುವಲ್ಲಿ ಈತನ ಪ್ರಯತ್ನಗಳು ವಿಫಲವಾದುವು. ಈತನ ನಾಟಕಗಳು ಓದಲಿಕ್ಕಾಗಲೀ ಆಡಲಿಕ್ಕಾಗಲೀ ಚೆನ್ನಾಗಿರಲಿಲ್ಲವೆಂಬುದೇ ಇದಕ್ಕೆ ಕಾರಣ. ರಾಜಕೀಯ ಆಂದೋಲನದಲ್ಲಿ ಸ್ವೀಡನ್ನಿನಲ್ಲಿ ಬದುಕಿ ಬಾಳಿದ್ದುದರ ಜೊತೆಗೆ ರಾಜಮನೆತನದ ಸಂಬಂಧವನ್ನು ಪಡೆದುಕೊಂಡಿದ್ದರು. ರಾಜಕೀಯ ಟೀಕೆಗಳನ್ನೊಳಗೊಂಡ ಲೇಖನಗಳನ್ನೂ ಪುಸ್ತಕಗಳನ್ನೂ ರಚಿಸಿದ. ರಷ್ಯದ ವಿರುದ್ಧ ಯುದ್ಧ ಬೇಡವೆಂದು ಪ್ರತಿಪಾದಿಸುವ ಕೃತಿ ಸಾಗನ್ ಓಮ್ ಹಾಸ್ತೆನ್ 1740ರಲ್ಲಿ ಪ್ರಕಟವಾಯಿತು. ಇಂಗ್ಲಿಷ್ ಲೇಖಕ ಸ್ವಿಫ್ಟ್‍ನನ್ನು ಅನುಸರಿಸಿ ವಿಡಂಬನೆಯನ್ನು ಬಳಸಿಕೊಂಡಿರುವ ಈ ಕೃತಿಯೇ ಇವನ ಅತ್ಯುತ್ತಮ ರಚನೆ. ಯುದ್ಧದ ದುರಂತ ದೇಶದ ಮೇಲೆ ಎರಗಿದಾಗ ತನ್ನ ಮಹಾಕಾವ್ಯ ಸ್ವೇನ್ಸ್‍ಕಾಫ್ರಿಹ್ರ್ಟೆ (ಸ್ವೀಡಿಷ್ ಸ್ವಾತಂತ್ರ್ಯ) ಎಂಬುದನ್ನು ಪ್ರಕಟಿಸಿದ (1742). ರಾಜಕೀಯ ಪಕ್ಷಗಳೆಲ್ಲ ವಿಸರ್ಜನೆಯಾಗಿ ಕೇವಲ ಅರಮನೆಯ ಆಡಳಿತವೊಂದೇ ದೇಶವನ್ನು ಕಾಪಾಡಬಲ್ಲದೆಂಬುದು ಈತನ ವಿಚಾರವಾಗಿದ್ದು ಈ ಕಾವ್ಯದಲ್ಲಿ ಬಹಳ ಪ್ರಬಲವಾಗಿ ಅದನ್ನು ಪ್ರತಿಪಾದಿಸಿದ್ದಾನೆ. ಇದರಿಂದ ಅರಮನೆಯವರ ಪ್ರೀತಿ ಸಂಪಾದಿಸಿದ. ಅಧಿಕಾರದಲ್ಲಿ ಉನ್ನತ ಸ್ಥಾನ ಲಭಿಸಿತು. ಅರಮನೆಯಲ್ಲಿ ರಾಜಕುಮಾರ ಗಸ್ಟೇವಸ್‍ಗೆ (ಮುಂದೆ ಅರಸು ಗಸ್ಟೇವಸ್ III) ಪಾಠಹೇಳುವ ಅಧ್ಯಾಪಕನೆಂದು ಈತ ನೇಮಕಗೊಂಡಿದ್ದು 1750ರಲ್ಲಿ. ಈತನಿಗೆ ನೋಬ್ಲ್ (ಇಂಗ್ಲೆಂಡಿನ ಸರ್ ಎಂಬುದರ ಹಾಗೆ) ಪದವಿಯನ್ನು ನೀಡಲಾಯಿತು (1751). ರಾಣಿ ಲೂಯಿಸಾಳ ರಾಜಕೀಯ ವ್ಯೂಹದಲ್ಲಿ ಬಿಡಿಸಿಕೊಳ್ಳಲಾರದಷ್ಟು ಆಳವಾಗಿ ಸಿಕ್ಕಿಕೊಂಡ ಈತ ಅವಮಾನಕ್ಕೆ ಗುರಿಯಾಗಿ 1756ರಲ್ಲಿ ಅರಮನೆಯಿಂದ ಹೊರದೂಡಲ್ಪಟ್ಟ. 1761ರ ವರೆಗೂ ಈ ಕಳಂಕ ಇವನ ಮೇಲಿದ್ದು 1761ರಲ್ಲಿ ಮತ್ತೆ ಅರಮನೆಯ ವಿಶ್ವಾಸಕ್ಕೆ ಪಾತ್ರವಾಗಿ ಮೊದಲಿನ ಅಧಿಕಾರಕ್ಕೇ ಬಂದ. ಆದರೆ ಮಾನಸಿಕವಾಗಿ ದೈಹಿಕವಾಗಿ ಈ ಕಾಲದಲ್ಲಿ ತುಂಬ ನರಳಿದ. 1763ರ ಆಗಸ್ಟ್ 12ರಂದು ಅತ್ಯಂತ ಖಿನ್ನವಾಗಿ ತೀರಿಕೊಂಡ. ಈತನಿಗೆ ಇತಿಹಾಸದ ಬಗ್ಗೆ ತುಂಬ ಆಸಕ್ತಿ ಇತ್ತು. 1747 ರಿಂದ 1762ರ ಕಾಲದಲ್ಲಿ ಈತ ಸ್ವೀಡಿಷ್ ರಾಜಮನೆತನದ ಇತಿಹಾಸ-ಸ್ವಿಯಾ ರೀಕೆಸ್ ಹಿಸ್ಟೋರಿಯಾವನ್ನು ಮುರು ಸಂಪುಟಗಳಲ್ಲಿ ಪ್ರಕಟಿಸಿದ. ಇದು ಆಧುನಿಕ ಇತಿಹಾಸಕ್ಕೆ ಇವನ ಅಮೂಲ್ಯ ಕೊಡುಗೆಯಾಗಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: