ಓಫಿಯೂರಾಯ್ಡಿಯ
ಓಫಿಯೂರಾಯ್ಡಿಯ: ಕಂಟಕ ಚರ್ಮಿಗಳ (ಎಕಿನೊಡರ್ಮೇಟ) ವಂಶದ ಒಂದು ವರ್ಗ. ಸಮುದ್ರಜೀವಿಗಳಾದ ಪೆಡಸುನಕ್ಷತ್ರಗಳು (ಬ್ರಿಟಲ್ ಸ್ಟಾರ್ಸ್) ಇದಕ್ಕೆ ಉದಾಹರಣೆ. ದೇಹದಲ್ಲಿ ಮಧ್ಯದ ತಟ್ಟೆಯೂ ಕಿರಣಗಳಂತೆ ಚಾಚಿರುವ ಐದು ತೋಳುಗಳೂ ಇವೆ. ತೆಳುವಾದ ದುಂಡುತೋಳುಗಳು ಮಧ್ಯ ತಟ್ಟೆಯಿಂದ ಸ್ಪಷ್ಟವಾಗಿ ಭಿನ್ನತೆಯನ್ನು ಪ್ರದರ್ಶಿಸುತ್ತವೆ; ಇವು ಬಾಯಿವರೆಗೆ ಒಳಚಾಚಿಕೊಂಡು ಒಟ್ಟುಗೂಡಿ ಬಾಯಿಯ ಸುತ್ತಲೂ ಒಂದು ಆಧಾರ ಕಟ್ಟಿನಂತಾಗಿರುವುದು. ತೋಳುಗಳು ಬಿಡಿ. ತುದಿಯಲ್ಲಿ ಮೊನಚಾಗಿರುತ್ತವೆ. ಕೆಲವು ಪೆಡಸುನಕ್ಷತ್ರಗಳಲ್ಲಿ (ಯೂರಿಯೇಲಿ ಗಣದವು) ತೋಳುಗಳು ತುದಿಯಲ್ಲಿ ಕವಲೊಡೆದು ಸುತ್ತಲೂ ಒಂದು ರೀತಿಯ ಬಲೆಯನ್ನು ರಚಿಸಿಕೊಂಡಿವೆ.
ಬಾಯಿ ಮಧ್ಯ ತಟ್ಟೆಯ ಅಧೋಭಾಗದ ನಡುವೆ ಇದೆ. ಆಂಬುಲ್ಯಾಕ್ರಲ್ ಕಾಲುವೆಗಳಾಗಲಿ ಆಸನದ್ವಾರವಾಗಲಿ ಇರುವುದಿಲ್ಲ. ಮರಿಯಲ್ಲಿ ಊಧರ್ವ್‌ಭಾಗದಲ್ಲಿರುವ ಮ್ಯಾಡ್ರಿಪೊರೈಟ್ ತಟ್ಟೆ ಪ್ರೌಢಜೀವಿಯ ಅಧೋಭಾಗಕ್ಕೆ ಸ್ಥಳಾಂತರವಾಗುವುದು. ಮೈಮೇಲಿನ ಚರ್ಮದ ಕೆಳಗೆ ತೆಳುವಾದ ಸುಣ್ಣದ ರಚನೆಯ ಫಲಕಗಳಿವೆ. ಇವುಗಳ ಇಕ್ಕಡೆ ಗಳಲ್ಲಿ ಸಣ್ಣ ಅಥವಾ ಉದ್ದವಾದ ಮುಳ್ಳುಗಳಂಥ ರಚನೆಗಳು ಹೊರಬಾಗುತ್ತವೆ. ಕೆಲವು ಪೆಡಸುನಕ್ಷತ್ರಗಳಲ್ಲಿ ಫಲಕಗಳ (ಪ್ಲೇಟ್) ಬದಲು ಹರಳಿನಂಥ ಸುಣ್ಣದ ರಚನೆಗಳಿವೆ. ಅಧೋಭಾಗದಲ್ಲಿ ೫ ಜೊತೆ ಸಣ್ಣ ಚೀಲಗಳಿವೆ. ಇವು ಜನನ ಕುಹರದೊಳಕ್ಕೆ ತೆರೆಯುತ್ತವೆ. ಜನನೇಂದ್ರಿಯಗಳಲ್ಲಿ ಉತ್ಪತ್ತಿಯಾಗುವ ಪ್ರಜನನ ಜೀವಕಣಗಳೂ ಇವುಗಳಲ್ಲಿ ಬಂದು ಸೇರುವುವು. ಆ ಕುಹರಗಳು ಉಸಿರಾಡುವ ಮತ್ತು ವಿಸರ್ಜಿಸುವ ಕಾರ್ಯಗಳನ್ನೂ ನಡೆಸುತ್ತದೆ. ತೋಳುಗಳ ಚರ್ಮದ ಒಳಭಾಗದಲ್ಲಿ ಇರುವ ಆಂಬುಲ್ಯಾಕ್ರಲ್ ಫಲಕಗಳು ಅವಕ್ಕೆ ಆಧಾರವಾಗಿರುವುವು. ನಳಿಕೆಪಾದಗಳು ತೋಳುಗಳ ಪಕ್ಕಗಳಲ್ಲಿನ ಫಲಕಗಳ ಮಧ್ಯದಲ್ಲಿರುವ ಸಂದಿಗಳಿಂದ ಹೊರಬರುವುವು. ಒಂದೊಂದು ತೋಳಿನೊಳಗೂ ದೇಹಾಂತರಾ ವಕಾಶ, ನರತಂತು, ಆಂಬುಲ್ಯಾಕ್ರಲ್ ನಾಳಗಳು ಇವೆಲ್ಲವೂ ಸಾಗಿ ಬಂದಿರುತ್ತವೆ. ದೇಹಾಂತರಾವಕಾಶ ಸೀಲಾಮಿಕ್ ಅನುಲೇಪಕ ಕಣಗಳಿಂದ ಆವೃತವಾಗಿದೆ. ದೇಹದ ಹೊದಿಕೆ ಹೊರ ಮತ್ತು ಒಳಪೊರೆಗಳ ಮಧ್ಯೆ ವ್ಯಾಪಿಸಿರುವುದು. ಆಂಬುಲ್ಯಾಕ್ರಲ್ ನಾಳಗಳಲ್ಲಿ ಚಲಿಸುವ ದ್ರವದಲ್ಲಿ ಹಿಮೊಗ್ಲೋಬಿನ ತುಂಬಿದ ಅಮೀಬಾಕಾರದ ಜೀವಕಣಗಳಿವೆ. ಆಸ್ಟೆರಾಯ್ಡಿಯ ವರ್ಗದ ಪ್ರಾಣಿಗಳಲ್ಲಿರುವ ಟೀಡ್ಮನ್ ಕೋಶಗಳು ಈ ಗುಂಪಿನವುಗಳಲ್ಲಿ ಇರುವುದಿಲ್ಲ.
ಜೀರ್ಣಾಂಗಗಳಲ್ಲಿ ಬಾಯಿ, ಅನ್ನನಾಳ ಮತ್ತು ಚೀಲದಂಥ ಜಠರವೂ ಇವೆ. ಗುದದ್ವಾರವಿಲ್ಲ. ಜಲಪರಿಚಲನಾಂಗವ್ಯೂಹ (ವಾಟರ್ ವ್ಯಾಸ್ಕುಲರ್ ಸಿಸ್ಟಮ್) : ಅಧೋ ಭಾಗದಲ್ಲಿರುವ ರಂಧ್ರಮಯವಾದ ಮ್ಯಾಡ್ರಿಪೊರೈಟ್ ತಟ್ಟೆಯಿಂದ ಮುಚ್ಚಲ್ಪಟ್ಟ ಶಿಲಾನಾಳ ಆಂಬ್ರುಲ್ಯಾಕ್ರಲ್ ಉಂಗುರನಾಳವನ್ನು ಸೇರುವುದು. ಈ ನಾಳದಿಂದ ಹೊರಡುವ 5 ಆಂಬ್ಯುಲ್ಯಾಕ್ರಲ್ ನಾಳಗಳು ತೋಳುಗಳೊಳಗೆ ಹಾದುಹೋಗಿರುತ್ತವೆ. ಆಂಬ್ಯುಲ್ಯಾಕ್ರಲ್ ನಾಳಗಳ ಇಕ್ಕೆಲಗಳಲ್ಲಿ ನಳಿಕೆಪಾದಗಳಿವೆ. ನಳಿಕೆಪಾದಗಳಿಗೆ ಆಂಪ್ಯುಲೆಗಳಾಗಲಿ ಹೀರುಬಟ್ಟಲುಗಳಾಗಲಿ ಇರುವುದಿಲ್ಲ. ನಳಿಕೆಪಾದಗಳು ಪ್ರಾಣಿಯ ಚಲನೆಯಲ್ಲಿ ಪಾಲುಗೊಳ್ಳುವುದಕ್ಕಿಂತ ಹೆಚ್ಚಾಗಿ ಉಸಿರಾಟಕ್ಕೂ ಪರಿಸರದ ಅರಿವು ಪಡೆಯಲೂ ಸಹಕಾರಿಯಾಗಿವೆ. ಉಂಗುರನಾಳಕ್ಕೆ ಸೇರಿಕೊಂಡಂತೆ 4 ಪೋಲಿಯನ್ ಕೋಶಗಳಿವೆ (ವೆಸಿಕಲ್. ಜನನಕುಹರಗಳ ಒಳಮುಖ ಶಿಲಕೆಗಳುಳ್ಳ ಜೀವಕಣಗಳಿಂದ ಆವೃತವಾಗಿದೆ. ಅದರಲ್ಲಿ ಸಮುದ್ರದ ನೀರು ಯಾವಾಗಲೂ ಚಲಿಸುತ್ತಿರುತ್ತದೆ; ಆದ್ದರಿಂದ ಅದು ಉಸಿರಾಡಲೂ ಸಹಕಾರಿಯಾಗಬಹುದು ನರಮಂಡಲ ಮತ್ತು ಅದರಿಂದ ಹೊರಡುವ ತೋಳಿನ ನರದ ತಂತುಗಳು ಫಲಕಗಳ ತಳಭಾಗದಲ್ಲಿರುವುವು.
ಪೆಡಸು ನಕ್ಷತ್ರಗಳು ಏಕಲಿಂಗಗಳು; ಆದರೆ ಆಂಫಿಯೂರದಲ್ಲಿ ಹೆಣ್ಣು ಮತ್ತು ಗಂಡು ಜನನಾಂಗಗಳು ಒಂದೇ ಜೀವಿಯಲ್ಲಿರುತ್ತವೆ. ಒಂದೇ ವೇಳೆಯಲ್ಲಿ ತತ್ತಿಗಳೂ ವೀರ್ಯಾಣುಗಳೂ ಉತ್ಪತ್ತಿಯಾಗುತ್ತದೆ. ಉತ್ಪಾದನಾಂಗಗಳು ಜೋಡಿಜೋಡಿಯಾಗಿ ಕವಲೊಡೆದುಕೊಂಡು ತ್ರಿಜ್ಯಾಂತರ ಸ್ಥಾನಗಳಲ್ಲಿರುವುವು. ಪೆಂಟಿಸಿರಸ್ ಮತ್ತು ಇನ್ನು ಕೆಲವು ಜಾತಿಗಳಲ್ಲಿ 10 ಜೊತೆ ಉತ್ಪಾದನಾಂಗಗಳಿರುವುವು. ಇವು 10 ಜೊತೆ ಜನನ ಕುಹರಗಳಿಗೆ ಅಂಟಿರುವುವು. ಜೀವನ ಚರಿತ್ರೆಯಲ್ಲಿ ಉಭಯಪಾಶರ್ವ್ ಸಮಾಂಗತೆಯನ್ನು ತೋರುವ ಓಫಿಯೋಪ್ಲುಟಿಯಸ್ ಎಂಬ ಹೆಸರಿನ ಡಿಂಬದ ಅವಸ್ಥೆಯುಂಟು. ಇದು ರೂಪ ಪರಿವರ್ತನೆಯಾಗಿ ಅರೀಯ ಸಮಾಂಗತೆಯುಳ್ಳ (ರೇಡಿಯಲ್ ಸಿಮೆಟ್ರೆ) ಪ್ರೌಢಜೀವಿಯಾಗುವುದು. ಡಿಂಬದ ಅಂಗಾಂಗಗಳೆಲ್ಲವೂ ಪ್ರೌಢಜೀವಿಯಲ್ಲಿಯೂ ಮುಂದುವರಿಯುವುವು.
ದಕ್ಷಿಣ ಧ್ರುವ ಸಮುದ್ರದಲ್ಲಿ ಜೀವಿಸುವ ಓಫಿಯೋಫ್ಲೂಕಸ್ಗಳು ಮರಿಗಳನ್ನೇ ಈದು ಅವನ್ನು ಸಾಕುತ್ತವೆ. ಷೆಡಸುನಕ್ಷತ್ರಗಳು ಸಮುದ್ರದಲ್ಲಿ ಸರಾಗವಾಗಿ ಈಜಬಲ್ಲವು. ಕೆಲವು ವೇಳೆ ಬಹಳ ನಿಧಾನವಾಗಿ ಚಲಿಸುವುವು. ತೋಳುಗಳನ್ನು ಸುಲಭವಾಗಿ ಬಗ್ಗಿಸಬಲ್ಲವಾದುವುದರಿಂದ ಬಂಡೆಗಳ ಕಂಡಿಗಳನ್ನು ಹೊಕ್ಕು ಅಲ್ಲಿ ಜೀವಿಸುವುವು. ಸಾಮಾನ್ಯವಾಗಿ ಸಮುದ್ರತಳದ ಮರಳಿನಲ್ಲಿ ಹೂತಿದ್ದು ರಾತ್ರಿಯ ವೇಳೆ ಚುರುಕಾಗಿ ಓಡಾಡುವುವು.
ನೀರಿನಿಂದ ಹೊರತಂದಾಗ ಅಥವಾ ಇತರ ರೀತಿಯಲ್ಲಿ ಕಾಟ ಕೊಟ್ಟಾಗ ಪೆಡಸು ನಕ್ಷತ್ರಗಳು ತಮ್ಮ ಮಧ್ಯಭಾಗವಾದ ತಟ್ಟೆಯನ್ನು ಉಳಿಸಿಕೊಂಡು ತೋಳುಗಳನ್ನು ಸ್ವಲ್ಪಸ್ವಲ್ಪವಾಗಿ ಕಡಿದುಕೊಳ್ಳುವುವು. ಅನಂತರ ಸ್ವಲ್ಪಸ್ವಲ್ಪವಾಗಿ ಬೆಳೆದು ಮತ್ತು 5 ತೋಳುಗಳುಳ್ಳ ಜೀವಿಗಳಾಗುವುವು. ತನಗೆ ತಾನೇ ತನ್ನ ತೋಳುಗಳನ್ನು ಕಡಿದುಕೊಳ್ಳುವುದು ಈ ಪ್ರಾಣಿಗೆ ಸ್ವಾಭಾವಿಕ. ಕಡಿದುಹೋದ ಒಂದು ತೋಳು ಕೆಲವು ವೇಳೆ ಪುರ್ಣವಾದ ಜೀವಿಯಾಗುವುದುಂಟು. ಇದು ಒಂದು ರೀತಿಯ ಪುನರುತ್ಪಾದನೆಯೆಂದು ಕರೆಯಬಹುದು.
ಓಫಿಯೂರಾಯ್ಡಿಯ ವರ್ಗದಲ್ಲಿ 4 ಉಪವರ್ಗಗಳಿವೆ, ಲಿಸೋಫಿಯೂರೆ, ಸ್ಟ್ರೆಪ್ಪೋಫಿಯೂರೆ, ಕ್ಲಾಡೊಫಿಯೂರೆ, ಜೈಗೋಫಿಯೂರೆ- ಇವೇ ಆ ನಾಲ್ಕು ಉಪವರ್ಗಗಳು. ಲಿಸೋಫಿಯೂರೆಯ ಪ್ರಾಣಿಗಳಲ್ಲಿ ಆಂಬುಲ್ಯಾಕ್ರಲ್ ಕೋಡುಗಳುಳ್ಳ ತೋಳುಗಳಿದ್ದವು. ಈ ಜೀವಿಗಳು ಸೈಲ್ಯೂರಿಯನ್ ಮತ್ತು ಡಿವೋನಿಯನ್ ಯುಗದಲ್ಲಿ ಅಳಿದುಹೋದುವು. ಸ್ಟ್ರೆಪ್ಟೊಫಿಯೂರೆಯ ಪ್ರಾಣಿಗಳಲ್ಲಿ ಅಂಬುಲ್ಯಾಕ್ರಲ್ ಫಲಕಗಳು, ಚಲನೆಗೆ ಎಡೆಕೊಡುವ ಕೀಲುಗಳಂತೆ ಜೋಡಣೆಯಾಗಿದ್ದವು. ಕ್ಲಾಡೊಫಿಯೂರೆಯ ಪ್ರಾಣಿಗಳಲ್ಲಿ ಆಂಬುಲ್ಯಾಕ್ರಲ್ ಫಲಕಗಳು ಕೂಡುವೆಡೆಗಳಲ್ಲಿ ಉಸುಬಿನ ಗಡಿಯಾರದಂಥ ಅಂಚುಗಳಿರುವುವು. ತೋಳುಗಳು ಕವಲೊಡೆದಿರಬಹುದು. ಜೈಗೋಫಿಯೂರೆಯ ಪ್ರಾಣಿಗಳಲ್ಲಿ ಫಲಕಗಳು ಹೆಚ್ಚಿನ ಚಲನಕ್ಕೆ ಅವಕಾಶವಿಲ್ಲದಂತೆ ಜೋಡಣೆಯಾಗಿವೆ. ಫಲಕಗಳ ಅಂಚುಗಳಲ್ಲಿ ಸಣ್ಣ ಸಣ್ಣ ದಿಬ್ಬಗಳು ಮತ್ತು ಅವುಗಳ ಅಳವಡಿಕೆಗೆ ಸೂಕ್ತವೆನಿಸುವ ಗುಳಿಗಳಲ್ಲಿ ಇರುವುವು. ಇತ್ತೀಚೆಗೆ ಓಫಿಯೂರಾಯ್ಡಿಯ ವರ್ಗವನ್ನು ಓಫಿಯೂರಿ ಮತ್ತು ಯೂರಿಯೇಲಿ ಎಂಬ ಎರಡು ಗಣಗಳಾಗಿ ವಿಂಗಡಿಸುತ್ತಾರೆ. ಮೊದಲನೆಯದರಲ್ಲಿ 12 ಕುಟುಂಬಗಳು ಎರಡನೆಯದರಲ್ಲಿ 4 ಕುಟುಂಬಗಳೂ ಇವೆ.
ಓಫಿಯೂರಾಯ್ಡಿಯ ವರ್ಗದಲ್ಲಿ ಸು. 1,700 ಪ್ರಭೇದಗಳಿವೆ. ಈ ಸಂಖ್ಯೆ ಎಕಿನೊಡರ್ಮೇಟ ವಂಶದ ಇತರ ವರ್ಗಗಳ ಸಂಖ್ಯೆಗಿಂತ ಬಹಳ ಹೆಚ್ಚಿನದಾಗಿದ್ದು ಪೆಡಸು ನಕ್ಷತ್ರಗಳು ಉಳಿದ ಎಕಿನೊಡರ್ಮ್ ಪ್ರಾಣಿಗಳಿಗಿಂತ ಬಹು ಯಶಸ್ವಿ ಗುಂಪೆಂದು ತೋರಿಸುತ್ತದೆ. ಬಹುಶಃ ಇದಕ್ಕೆ ಕಾರಣ ಅವುಗಳ ಪುಟ್ಟ ಗಾತ್ರ ಮತ್ತು ನಿಶಾಚರ ಸ್ವಭಾವ, ಇದರಿಂದಾಗಿ ಇವು ಬೇರೆ ಪ್ರಾಣಿಗಳ ಗಮನದಿಂದ ತಪ್ಪಿಸಿಕೊಂಡಿವೆ. ಪ್ರಪಂಚದ ಎಲ್ಲ ಸಾಗರಗಳಲ್ಲಿಯೂ ಹೇರಳವಾಗಿ ಕಾಣಬರುವ ಇವು ಬಹು ಚುರುಕಾದ ಪ್ರಾಣಿಗಳು, ಮುಖ್ಯವಾದ ಕೆಲವು ಉದಾಹರಣೆಗಳು: ಓಫಿಯೋನೇಮಿಸ್ ಮಾರ್ಮೋರೇಟ ಎಂಬುವು ಸಮುದ್ರದ ತಳದಲ್ಲಿ ಮರಳಿನಲ್ಲಿರುತ್ತವೆ. ಓಫಿಯಾಕ್ಟಿಸ್ ಸವಿನಿ. ಓಫಿಯೋಫ್ರಾಗ್ಮಸ್ ರೆಲಿಕ್ಟಸ್, ಓಫಿಯೋಕೋಮ ಸ್ಕೋಲೋಪೆಂಡ್ರಿನ ಮತ್ತು ಓಫಿಯೋತ್ರಿಕ್ಸ ಹಿರ್ಸುಟ ಇವು ಭಾರತದ ಕೃಸಾಡೈ ಮತ್ತು ಪಾಂಬನ್ ಸಮುದ್ರಗಳಲ್ಲಿ ಜೀವಿಸುವುವು. ಆಸ್ಟರೋನಿಕ್ಸ್, ಓಫಿಯೊಲೆಪಿಸ್, ಓಫಿಯೊಮ್ಯೂಸಿಯಮ್ ಗಾರ್ಗನೊಸಿಫ್ಯಾಲಸ್ ಮುಂತಾದುವು ಪ್ರಪಂಚದ ಬೇರೆಡೆ ದೊರಕುವ ಕೆಲವು ಮುಖ್ಯ ಜಾತಿಗಳು.