ವಿಷಯಕ್ಕೆ ಹೋಗು

ಓಡೊನೇಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಓಡೊನೇಟ

ಓಡೊನೇಟ: ಕೊಡತಿಕೀಟ (ಡ್ರೇಗನ್ ಫ್ಲೈ), ಕನ್ಯಾಕೀಟ (ಡ್ಯಾಮ್ಸೆಲ್ ಫ್ಲೈ) ಮುಂತಾದ ಕೀಟಗಳನ್ನೊಳಗೊಂಡ ಒಂದು ಗಣ. ಇದರಲ್ಲಿ ಮೂರು ಉಪಗಣಗಳಿವೆ; 1 ಅನೈಸಾಪ್ಟಿರ, 2 ಜೈ಼ಗಾಪ್ಟಿರ, 3 ಅನೈಸೊಜೈ಼ಗಾಪ್ಟಿರ.

ಅನೈಸಾಪ್ಟೆರ ಉಪಗಣಕ್ಕೆ ಸೇರಿದ ಸುಮಾರು 1000 ಬೇರೆ ಬೇರೆ ಜಾತಿಯ ಕೀಟಗಳಿಗೆ ಸಾಮಾನ್ಯವಾಗಿ ಕೊಡತಿಹುಳು ಎಂಬ ಹೆಸರನ್ನು ಬಳಸುವುದುಂಟು. ಇನ್ನೊಂದು ಉಪಗಣವಾದ ಜೈ಼ಗಾಪ್ಟೆರಕ್ಕೆ ಸೇರಿದ ಕೀಟಗಳನ್ನು ಕನ್ಯಾಕೀಟಗಳೆಂದು ಕರೆಯುತ್ತಾರೆ. ಎರಡು ಗುಂಪಿನವು ಕೊಳ, ಕೆರೆ, ಹಳ್ಳಗಳ ಅಂಚಿನಲ್ಲಿ ಹಾರಾಡುವ ಸುಂದರ ಕೀಟಗಳು. ತಲೆ ದಪ್ಪ; ಅದರ ಇಕ್ಕೆಲಗಳಲ್ಲೂ ದೊಡ್ಡ ಹೊಳೆಯುವ ಕಣ್ಣುಗಳಿವೆ. ಎದೆ ದಪ್ಪ ಮತ್ತು ದೃಢವಾಗಿದೆ. ಹೊಟ್ಟೆ ನೀಳವಾಗಿದೆ. ಇದು 10 ಖಂಡಗಳಾಗಿ ವಿಭಾಗವಾಗಿದೆ. ಕಾಲುಗಳು ಆರು, ಸಮರೂಪದ ನಾಲ್ಕು ತೆಳುವಾದ ರೆಕ್ಕೆಗಳಿವೆ. ವಿಶ್ರಾಂತ ಸ್ಥಿತಿಯಲ್ಲಿ ಕೊಡತಿ ಕೀಟಗಳಲ್ಲಿ ರೆಕ್ಕೆಗಳು ಅಗಲವಾಗಿ ಹರಡಿಕೊಂಡಿರುತ್ತವೆ. ಆದರೆ ಕನ್ಯಾಕೀಟಗಳಲ್ಲಿ ಅವು ಜೊತೆಗೂಡಿರುತ್ತವೆ.

ಕೊಡತಿ ಮತ್ತು ಕನ್ಯಾಕೀಟಗಳ ಆಹಾರ ಸೊಳ್ಳೆಮರಿಗಳು ಹಾಗೂ ನೀರಿನಲ್ಲಿ ವಾಸಿಸುವ ಇತರ ಸಣ್ಣಪುಟ್ಟ ಕೀಟಗಳು. ಆದ್ದರಿಂದ ಸೊಳ್ಳೆಗಳ ನಿಯಂತ್ರಣದಲ್ಲಿ ಇವು ಬಹಳ ಸಹಕಾರಿಯಾಗಿವೆ.

ಮೊಟ್ಟೆಗಳ ಮೂಲಕ ಸಂತಾನಾಭಿವೃದ್ಧಿ, ಹೆಣ್ಣುಕೀಟ ಮೊಟ್ಟೆಗಳನ್ನು ನೀರಿನಲ್ಲಿ ಅಥವಾ ಅದರ ಬಳಿ ಇಡುತ್ತದೆ. ಮೊಟ್ಟೆಯೊಡೆದು ಹೊರಬರುವ ಡಿಂಬ ಸಂಪುರ್ಣ ಜಲವಾಸಿ, ಪ್ರೋಟೋಜೋ಼ವ ಗುಂಪಿನ ಜೀವಿಗಳೂ ಸಣ್ಣ ಸಣ್ಣ ಕೀಟಗಳೂ ಸೊಳ್ಳೆಮರಿಗಳೂ ಇದಕ್ಕೆ ಆಹಾರ. ಡಿಂಬದಿಂದ ರೂಪಾಂತರಣಗೊಳ್ಳಲು ಸುಮಾರು ಒಂದರಿಂದ ನಾಲ್ಕು ವರ್ಷಗಳು ತೆಗೆದುಕೊಳ್ಳುವುದು. ಮೂರನೆಯ ಉಪಗಣವಾದ ಅನೈಜೈ಼ಗಾಪ್ಟೆರದಲ್ಲಿ ಕೇವಲ ಎರಡು ಪ್ರಭೇದಗಳಿವೆ (ನೋಡಿ- ಕನ್ಯಾಕೀಟ; ಕೊಡತಿಕೀಟ).

"https://kn.wikipedia.org/w/index.php?title=ಓಡೊನೇಟ&oldid=1075023" ಇಂದ ಪಡೆಯಲ್ಪಟ್ಟಿದೆ