ಓಜಿಯಾನ
ರಾಜಸ್ಥಾನ ಜಿಲ್ಲೆಯ ಭಿಲವಾಡ ರಾಜ್ಯದಲ್ಲಿರುವ ತಾಮ್ರ-ಶಿಲಾಯುಗದ ವಸತಿ ನೆಲೆ[೧]. ಅಹಾರ್ನಿಂದ ಏರಣ್ವರೆಗೆ, ಅಜ್ಮೇರ್ನಿಂದ ನವ್ದತೋಲಿಯವರೆಗೆ ಹರಡಿದ್ದ ಅಹಾರ್ ಸಂಸ್ಕೃತಿಯ ಪ್ರಮುಖ ವಸತಿ ನೆಲೆಗಳಲ್ಲೊಂದು.
ಅಹಾರ್ ಸಂಸ್ಕೃತಿ
[ಬದಲಾಯಿಸಿ]ನದಿ ಬಯಲಿನ ಸಂಸ್ಕೃತಿಯಾದ ಅಹಾರ್ಗೆ ಬೆಟ್ಟದ ಇಳಿಜಾರಿನಲ್ಲಿರುವ ಓಜಿಯಾನ ಒಂದು ಅಪವಾದ. ಅಹಾರ್ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ 2000ದಲ್ಲಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯ ಬಿ.ಆರ್. ಮೀನಾ ಮತ್ತು ಅಲೋಕ್ ತ್ರಿಪಾಠಿಯವರ ನಿರ್ದೇಶನದಲ್ಲಿ ಇಲ್ಲಿ ಉತ್ಖನನವನ್ನು ನಡೆಸಿತು. ಅಹಾರ್ ಸಂಸ್ಕೃತಿಯ ಸು.7.5 ಮೀ ದಪ್ಪದ ವಸತಿ ಪದರ ಇಲ್ಲಿ ಕಂಡುಬಂತು. ಈ ಸಂಸ್ಕೃತಿಯ ಇಷ್ಟು ದಪ್ಪದ ವಸತಿ ಪದರ ಈವರೆಗೆ ಕಂಡುಬಂದಿರುವುದು ಓಜಿಯಾನದಲ್ಲಿ ಮಾತ್ರ.
ಕಟ್ಟಡಾವಶೇಷ ಮತ್ತು ಮಣ್ಪಾತ್ರೆಯ
[ಬದಲಾಯಿಸಿ]ಕಟ್ಟಡಾವಶೇಷ ಮತ್ತು ಮಣ್ಪಾತ್ರೆಯ ಆಧಾರದ ಮೇಲೆ 3 ಉಪಹಂತಗಳನ್ನು ಗುರುತಿಸಲಾಯಿತು.
- ಮೊಟ್ಟಮೊದಲು (1ನೆಯ ಉಪಹಂತ) ಇಲ್ಲಿ ವಾಸ್ತವ್ಯ ಹೂಡಿದವರು ಕೃಷಿಕ ಜನರು. ಬಿಳಿ ರೇಖಾ ಚಿತ್ರಿತ ಕಪ್ಪು-ಕೆಂಪು ದ್ವಿವರ್ಣ ಮಣ್ಪಾತ್ರೆಯನ್ನು ಉಪಯೋಗಿಸುತ್ತಿದ್ದ ಇವರು ಒಣ ಇಟ್ಟಿಗೆಯ ಮನೆಗಳನ್ನು ಕಟ್ಟಿಕೊಂಡರು.
- 2ನೆಯ ಉಪಹಂತದಲ್ಲಿ ಗೃಹನಿರ್ಮಾಣಕ್ಕೆ ಇಟ್ಟಿಗೆಗಿಂತ ಹೆಚ್ಚಾಗಿ ಸ್ಥಳೀಯ ಕಲ್ಲುಗಳನ್ನು ಬಳಸಿಕೊಳ್ಳಲಾಯಿತು. ಸದೃಢವಾಗಿ ಕಟ್ಟಿದ ಉಗ್ರಾಣ ಮತ್ತು ಬಹು ಕೊಠಡಿಯ ಮನೆಯ ಭಾಗಗಳು ಈ ಹಂತದ ಕಟ್ಟಡಾವಶೇಷಗಳು. ಬೆಂಕಿಯ ಆಕಸ್ಮಿಕಕ್ಕೆ ಒಳಗಾದ ಮೇಲೆ ಗೋದಿಯನ್ನು ಸಂಗ್ರಹಿಸಿದ್ದ ಉಗ್ರಾಣದ ಬಳಕೆ ನಿಂತುಹೋಯಿತು.
- 3ನೆಯ ಉಪಹಂತದಲ್ಲಿ ಜನಜೀವನ ದಲ್ಲಾದ ಬದಲಾವಣೆಯನ್ನು ತಡಿಕೆ ಮನೆಯ ಅವಶೇಷಗಳು ಸೂಚಿಸುತ್ತವೆ. ಈ ವಸತಿ ಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು.
ವೈಶಿಷ್ಟ್ಯ
[ಬದಲಾಯಿಸಿ]3 ಉಪಹಂತಗಳಲ್ಲಿಯೂ ಬಿಳಿ ಚಿತ್ರಿತ ಕಪ್ಪು-ಕೆಂಪು ದ್ವಿವರ್ಣ ಪಾತ್ರೆ ಬಳಕೆಯಲ್ಲಿತ್ತು. ಆದರೆ ಇದರ ಆಕಾರ ಹಾಗೂ ಇದನ್ನು ಸುಡುವ ತಂತ್ರವಿಧಾನ ಕಾಲದಿಂದ ಕಾಲಕ್ಕೆ ಬದಲಾಯಿತು. ಕೆಂಪುಪಾತ್ರೆ, ಕಪ್ಪುಪಾತ್ರೆ, ಬೂದುಪಾತ್ರೆ ಹಾಗೂ ಕಂದುಬಣ್ಣದ ಪಾತ್ರೆಗಳನ್ನೂ ಈ ಜನ ಉಪಯೋಗಿಸುತ್ತಿದ್ದರು. ಇಲ್ಲಿನ ಮತ್ತೊಂದು ವೈಶಿಷ್ಟ್ಯ ಬಿಳಿಬಣ್ಣದಿಂದ ಅಲಂಕರಿಸಿದ ಪುಟ್ಟಪುಟ್ಟ ಸುಡಾವೆ ಮಣ್ಣಿನ ಗೂಳಿಗಳು. ಇಂತಹ ಗೂಳಿಗೊಂಬೆಗಳು ಯಾವ ಸಮಕಾಲೀನ ಸಂಸ್ಕೃತಿಯಲ್ಲಿಯೂ ಈವರೆಗೆ ಕಂಡುಬಂದಿಲ್ಲ. ಇವನ್ನು ಸಮಾಜದ ಪರಂಪರಿಕಾ ಚರಣೆಯಲ್ಲಿ ಬಳಸುತ್ತಿದ್ದಂತೆ ತೋರುತ್ತದೆ. ಇಲ್ಲಿನ ಜನರು ಸುಡಾವೆ ಮಣ್ಣಿನಲ್ಲಿ ದನದ ಆಕೃತಿಗಳನ್ನೂ ತಯಾರಿಸುತ್ತಿದ್ದುದು ಮತ್ತೊಂದು ವಿಶೇಷ. ಈ ಜನರ ಇತರ ಅವಶೇಷಗಳೆಂದರೆ ತಾಮ್ರದ ತೆಳು ಹಾಳೆಯಿಂದ ಮಾಡಿದ ಸಣ್ಣ ಕೊಡಲಿ, ತಾಮ್ರದ ಬಳೆ ಮತ್ತು ಉಂಗುರ, ಹರಪ್ಪ ಮಾದರಿಯ ಫಯನ್ಸ್ ಗಾಜಿನ ಮಣಿ, ಸುಡಾವೆ ಮಣ್ಣಿನ ತಕಲಿ, ಬಿಲ್ಲೆ, ಆಟಿಕೆಯ ಗಾಡಿಯ ಚಕ್ರಗಳು, ಅರೆಯುವ ಕಲ್ಲು ಇತ್ಯಾದಿ. ಈ ನೆಲೆಯ ಕಾಲಮಾನ ಪ್ರ.ಶ.ಪೂ.ಸು.3-2ನೆಯ ಸಹಸ್ರಮಾನ.
ಉಲ್ಲೇಖಗಳು
[ಬದಲಾಯಿಸಿ]