ಓಕ್ಲಹೋಮ

ವಿಕಿಪೀಡಿಯ ಇಂದ
Jump to navigation Jump to search

ಓಕ್ಲಹೋಮ: ಅಮೆರಿಕ ಸಂಯುಕ್ತಸಂಸ್ಥಾನದ ನೈಋತ್ಯ ಭಾಗದಲ್ಲಿರುವ ಒಂದು ರಾಜ್ಯ. ಪುರ್ವದಲ್ಲಿ ಮಿಸೂóರಿ ಮತ್ತು ಆರ್ಕನ್ಸಾಸ್, ದಕ್ಷಿಣದಲ್ಲಿ ಟೆಕ್ಸಸ್, ಪಶ್ಚಿಮದಲ್ಲಿ ಟೆಕ್ಸಸ್ ಮತ್ತು ನ್ಯೂ ಮೆಕ್ಸಿಕೊ ಮತ್ತು ಉತ್ತರದಲ್ಲಿ ಕ್ಯಾನ್ಸಸ್ ಮತ್ತು ಕಾಲರಾಡೋ ರಾಜ್ಯಗಳು ಸುತ್ತುವರಿದಿವೆ. ವೈಶಾಲ್ಯದಲ್ಲಿ ಇದು ಸಂಯುಕ್ತಸಂಸ್ಥಾನದ ರಾಜ್ಯಗಳಲ್ಲಿ 18ನೆಯದು. ವಿಸ್ತೀರ್ಣ 1,81.049 ಚಕಿಮೀ; ಜನಸಂಖ್ಯೆ 3,850,568 (2013). ರಾಜಧಾನಿ ಓಕ್ಲಹೋಮ ಈ ಪ್ರದೇಶದ ಇಂಡಿಯನರ ಭಾಷೆಯಲ್ಲಿ ಓಕ್ಲಹೋಮ ಎಂದರೆ ಕೆಂಪುಜನ. ಇಂಡಿಯನರು ವಾಸವಾಗಿದ್ದ ಭಾಗಕ್ಕೆ ಈ ಹೆಸರು 1866ರಲ್ಲಿ ಪ್ರಥಮವಾಗಿ ಅನ್ವಯವಾಯಿತು. 1889ರಲ್ಲಿ ಅಮೆರಿಕನ್ ಜನವಸತಿಗೆ ಈ ಪ್ರದೇಶದ ದ್ವಾರವನ್ನು ಅಧಿಕೃತವಾಗಿ ತೆರೆದಾಗ, ಕಾನೂನಿನ ಪ್ರಕಾರ ವಿಧಿಸಲಾಗಿದ್ದ ದಿನಕ್ಕೂ ಮುಂಚೆಯೇ ಒಬ್ಬ ವ್ಯಕ್ತಿ ಈ ಸ್ಥಳಕ್ಕೆ ಧಾವಿಸಿ ತನ್ನ ಹಕ್ಕನ್ನು ಸ್ಥಾಪಿಸಲು ಯತ್ನಿಸಿದನಂತೆ. ಆದ್ದರಿಂದ ಶೀಘ್ರ ರಾಜ್ಯ (ಸೂನರ್ ಸ್ಟೇಟ್) ಎಂಬುದು ಇದರ ಜನಪ್ರಿಯ ನಾಮ.

ಮೇಲ್ಮೈ ಲಕ್ಷಣಗಳು[ಬದಲಾಯಿಸಿ]

ಆಗ್ನೇಯ ದಿಕ್ಕಿನ ಕಡೆಗೆ ಇಳಿಜಾರಾದ ಈ ಪ್ರದೇಶದ ವಾಯವ್ಯಮೂಲೆ ಸಮುದ್ರಮಟ್ಟದಿಂದ 515 ಮೀ ಗಳಷ್ಟು ಎತ್ತರವಾಗಿದ್ದರೆ, ರೆಡ್ ನದಿಯ ಪ್ರದೇಶದಲ್ಲಿ ಕೇವಲ 90 ಮೀ ಎತ್ತರವಿದೆ. ಪಶ್ಚಿಮ ಭಾಗಗಳಲ್ಲಿ ಮರಗಿಡಗಳಿಲ್ಲದ ಮೈದಾನಗಳಿದ್ದರೆ, ಪುರ್ವಭಾಗದಲ್ಲಿ ಏರುತಗ್ಗುಗಳಿಂದಲೂ ದಟ್ಟವಾದ ಕಾಡುಗಳಿಂದಲೂ ಕೂಡಿರುವ ಪರ್ವತಗಳಿವೆ. ಪುರ್ವ ದಕ್ಷಿಣ ಭಾಗಗಳಲ್ಲಿ ನಾಲ್ಕು ಪ್ರಮುಖ ಪರ್ವತಸ್ತೋಮಗಳುಂಟು. ಪಶ್ಚಿಮಕ್ಕೆ ಸಾಗಿದಂತೆ ಓeóÁರ್ಕ್ ಪರ್ವತದ ಎತ್ತರ ಕ್ರಮೇಣ ಕಡಿಮೆಯಾಗುತ್ತದೆ. ಆಗ್ನೇಯ ಭಾಗದಲ್ಲಿರುವುದು ವಾಷಿಟಾ ಪರ್ವತ. ದಕ್ಷಿಣ ಮಧ್ಯಪ್ರದೇಶದಲ್ಲಿ ಆರ್ಬಕಲ್ ಪರ್ವತಶ್ರೇಣಿಯೂ ಕೆಂಪು ಮತ್ತು ವಾಷಿಟಾ ನದೀಕಣಿವೆಗಳ ಮಧ್ಯಭಾಗದಲ್ಲಿ ವಿಂಟಾ ಪರ್ವತಗಳೂ ಇವೆ. ಪಶ್ಚಿಮದ ಮೈದಾನಗಳಲ್ಲಿ ಜಿಪ್ಸಮ್ ನಿಕ್ಷೇಪಗಳು ಹೇರಳ. ವಾಯವ್ಯಭಾಗದಲ್ಲಿ ಪ್ರಮುಖವಾಗಿರುವ ಚೌಳುಮಣ್ಣಿನ ಮೈದಾನಗಳು ಸಮತಲ ಪ್ರದೇಶಗಳು. ಒಂದೊಂದೂ 3ರಿಂದ 5 ಕಿಮೀ ಗಳಷ್ಟು ಅಗಲವಾಗಿಯೂ 13 ಕಿಮೀ ಗಳಷ್ಟು ಉದ್ದವಾಗಿಯೂ ಇವೆ. ಇಲ್ಲಿನ ಪ್ರಮುಖ ನದಿಗಳು ವಾಯವ್ಯದಿಂದ ಆಗ್ನೇಯಕ್ಕೆ ಹರಿಯುತ್ತವೆ. ಆರ್ಕನ್ಸಾಸ್ ಮುಖ್ಯ ನದಿ. ಇದು ಉತ್ತರದಲ್ಲಿ ಪಶ್ಚಿಮ ರೇಖಾಂಶ 970ಯ ಬಳಿ ರಾಜ್ಯವನ್ನು ಪ್ರವೇಶಿಸಿ ಪುರ್ವದ ಎಲ್ಲೆಯ ಮಧ್ಯಭಾಗದಲ್ಲಿ ರಾಜ್ಯವನ್ನು ದಾಟಿ ಆರ್ಕನ್ಸಾಸ್ ರಾಜ್ಯದಲ್ಲಿ ಮುಂದುವರಿಯುತ್ತದೆ. ಬಹಳಮಟ್ಟಿಗೆ ಈ ರಾಜ್ಯದ ದಕ್ಷಿಣದ ಅಂಚಿನಲ್ಲೇ ಹರಿಯುವುದು ರೆಡ್ ನದಿ. ನಾರ್ತ್ ಪೋರ್ಕ್, ವಾಷಿಟಾ, ಬ್ಲೂ, ಬಾಗಿ, ಕಿಯಾಮಿಚಿ ಇವು ರೆಡ್ ನದಿಯ ಉಪನದಿಗಳು. ಆಗ್ನೇಯ ಭಾಗದಲ್ಲಿ ಲಿಟಲ್ ಇನ್ನೊಂದು ಮುಖ್ಯನದಿ. ಮೌಂಟನ್ ಪೋರ್ಕ್ ಇದರ ಒಂದು ಮುಖ್ಯ ಉಪನದಿ. ಲಿಟಲ್ ನದಿ ಓಕ್ಲಹೋಮದ ಗಡಿ ದಾಟಿ ಹರಿದು, ಆರ್ಕನ್ಸಾಸ್ ರಾಜ್ಯದಲ್ಲಿ ರೆಡ್ ನದಿಯಲ್ಲಿ ಸಂಗಮಿಸುತ್ತದೆ.

ವಾಯುಗುಣ[ಬದಲಾಯಿಸಿ]

ಇಲ್ಲಿಯದು ಖಂಡಾಂತರ ವಾಯುಗುಣ, ಉಷ್ಣತೆ ಮತ್ತು ತೇವಗುಣಗಳಲ್ಲಿ ಬಹಳ ತಾರತಮ್ಯಗಳುಂಟು. ಪಶ್ಚಿಮ ಮತ್ತು ಮಧ್ಯಭಾಗಗಳು ಸಾಮಾನ್ಯವಾಗಿ ಪುರ್ವಭಾಗಕ್ಕಿಂತ ಹೆಚ್ಚು ತಂಪು, ಶುಷ್ಕ, ವಾಯವ್ಯದಲ್ಲಿ ವರ್ಷದ ಸರಾಸರಿ ದೈನಿಕ ಉಷ್ಣತೆ 550 ಫ್ಯಾ. (ಸು. 130 ಸೆಂ.). ವಾರ್ಷಿಕ ಸರಾಸರಿ ಮಳೆ 16.51". ಆಗ್ನೇಯದಲ್ಲಿ ಇವು ಕ್ರಮವಾಗಿ 630 ಫ್ಯಾ. ಮತ್ತು 46.53". ರಾಜ್ಯದ ಮಧ್ಯದಲ್ಲಿರುವ ಓಕ್ಲಹೋಮ ನಗರದಲ್ಲಿ ವರ್ಷದ ಸರಾಸರಿ ದೈನಿಕ ಉಷ್ಣತೆ 600. ಫ್ಯಾ., ಸರಾಸರಿ ಮಳೆ 30.22".

ಸಸ್ಯ ಮತ್ತು ಪ್ರಾಣಿವರ್ಗ[ಬದಲಾಯಿಸಿ]

ಓಕ್ಲಹೋಮದ ಪುರ್ವ ಭಾಗವನ್ನು ಬಹುತೇಕ ಕಾಡು ಆವರಿಸಿತ್ತು. ಅಲ್ಲಲ್ಲಿ ಹುಲ್ಲುಗಾವಲುಗಳಿದ್ದುವು. ಪೈನ್, ಜ್ಯೂನಿಫರ್, ಶಾಲ್ಮಲೀ, ಓಕ್, ವಿಲ್ಲೊ ಮುಂತಾದ ವೃಕ್ಷಜಾತಿಗಳು ಪ್ರಮುಖ. ಮಧ್ಯಭಾಗದಲ್ಲಿ ನದಿಗಳ ಆಚೀಚೆ ದಂಡೆಗಳಲ್ಲಿ ಮಾತ್ರ ಮರಗಳು ಬೆಳೆದಿವೆ. ಪಶ್ಚಿಮಭಾಗದಲ್ಲಿ ತೇವ ಇನ್ನೂ ಕಡಿಮೆ. ಅಲ್ಲಿ ಕೆಲವು ಕುಬ್ಜ ವೃಕ್ಷಗಳು ಮಾತ್ರ ಬೆಳೆಯುತ್ತವೆ. ಪ್ಲಂ, ನಳ್ಳಿಸೇಬು, ಚೆರಿ, ಬ್ಲ್ಯಾಕ್ ಬೆರಿ, ದ್ರಾಕ್ಷಿ, ಸ್ಟ್ರಾಬೆರಿ ಮುಂತಾದ ವನ್ಯಫಲಗಳು ಈ ರಾಜ್ಯದಲ್ಲಿ ಬೆಳೆಯುತ್ತವೆ. ವಿಚಿಟಾ ಕಾಡುಗಳಲ್ಲಿ ವನ್ಯಪ್ರಾಣಿಗಳ ನೆಲೆಯನ್ನು ಸರ್ಕಾರ ರಕ್ಷಿಸುತ್ತದೆ. ಜಿಂಕೆ, ತೋಳ, ಚಿರತೆ, ಕರಡಿ, ಮಿಂಕ್, ಒಪಾಸಂ, ಮೊಲ, ಅಳಿಲು, ಪಾರಿವಾಳ, ಬಾತುಕೋಳಿ ಇವು ಕಾಡುಗಳಲ್ಲಿ ಹೇರಳ, ಆದಿಕಾಲದಲ್ಲಿ ಕಾಡೆಮ್ಮೆಗಳು ಹೆಚ್ಚಾಗಿದ್ದುವು. ಸ್ವಚ್ಛಂದ ಮೃಗಯಾ ವಿಹಾರದ ಹಾವಳಿಯಿಂದ ಇವು ಈಗ ಕಡಿಮೆಯಾಗಿವೆ. ಅನೇಕ ಬಗೆಯ ಪಕ್ಷಿಗಳು ಇಲ್ಲಿವೆ. ಋತುಮಾನಕ್ಕೆ ಅನುಗುಣವಾಗಿ ಇವು ವಲಸೆ ಹೋಗುತ್ತವೆ.

ಉದ್ಯಾನ ಮತ್ತು ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಇಲ್ಲಿಯ ನದೀಪ್ರವಾಹಗಳನ್ನು ತಡೆಗಟ್ಟುವ ಸಲುವಾಗಿ ಹಲವಾರು ಜಲಾಶಯಗಳನ್ನು ನಿರ್ಮಿಸಲಾಗಿದೆ. ಅವುಗಳ ಪೈಕಿ ಯುಫಾಲ ಬಲು ದೊಡ್ಡದು. ಇದರ ನೀರು ಕೆನೆಡಿಯನ್ ನದಿ ಮತ್ತು ಉಪನದಿಗಳಲ್ಲಿ ಸುಮಾರು 208 ಕಿಮೀ ಉದ್ದದವರೆಗೂ ಚಾಚಿದೆ. ಟೆಕ್ಲೋಮ ಇನ್ನೊಂದು, ರೆಡ್ ಮತ್ತು ವಾಷಿಟಾ ನದಿಗಳಲ್ಲಿ 160 ಕಿಮೀಗಳವರೆಗೆ ಇದರ ನೀರು ಹರಡಿದೆ. ಚೆರೊಕೀಸ್ ಸರೋವರದ ನೀರು ನಿಯೋಷೋ ನದಿಯಲ್ಲಿ 104 ಕಿಮೀಗಳವರೆಗೂ ಪೋರ್ಟ್ ಗಿಬ್ಸನ್ ನೀರು ಆರ್ಕನ್ಸಾ ಮತ್ತು ಸಿಮರಾನ್ ನದಿಗಳಲ್ಲಿ 64 ಕಿಮೀಗಳವರೆಗೊ ಟೆನ್ ಕಿಲರ್ ಸರೋವರದ ನೀರು ಇಲಿನಾಯ್ ನದಿಯಲ್ಲಿ 40 ಕಿಮೀಗಳವರೆಗೊ ಚಾಚಿವೆ. ಮೀನುಗಾರಿಕೆ ಮತ್ತು ದೋಣಿವಿಹಾರಗಳಿಗೆ ಅನುಕೂಲಕರವಾದ ಇಂಥ ಸರೋವರಗಳು ಲಕ್ಷಾಂತರ ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಓಕ್ಲಹೋಮದ ಪ್ರಕೃತಿಸೌಂದರ್ಯದ ಬೀಡಾದ ಅನೇಕ ಉದ್ಯಾನಗಳಲ್ಲಿ ಅಲಬಾಸ್ಟರ್ ಗುಹೆಗಳು, ಕುದಿಯುವ ನೀರಿನ ಬುಗ್ಗೆಗಳು, ಬೀವರ್ಸ್‌ ಬೆಂಡ್ ಉದ್ಯಾನ, ಗ್ರೀನ್ ಲೀಫ್ ಉದ್ಯಾನ, ಲೇಕ್ ಮುರ್ರೆ ಉದ್ಯಾನ, ಒಸೇಜ್ ಬೆಟ್ಟಗಳ ಉದ್ಯಾನ, ರಾಬರ್ಸ್‌ ಕೇವ್ (ದರೋಡೆಗಾರರ ಗುಹೆ) ಉದ್ಯಾನ, ರೋಮನ್ ನೋಸ್ ಉದ್ಯಾನ, ಬಾಗಿ ಡಿಪೋ ಸ್ಮಾರಕ ಉದ್ಯಾನ, ಪ್ಲಾಟ್ ರಾಷ್ಟ್ರೀಯ ಉದ್ಯಾನ ಮುಂತಾದವು ಸುಪ್ರಸಿದ್ಧವಾದವು. ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಗಳನ್ನು ಓಕ್ಲಹೋಮ ಇತಿಹಾಸ ಸಂಘ ನಡೆಸಿಕೊಂಡು ಬರುತ್ತಿದೆ. ಟಲ್ಸದಲ್ಲಿರುವ ಗಿಲ್ಕ್ರೀಸ್ ಕಲಾ ಮತ್ತು ಇತಿಹಾಸ ಸಂಸ್ಥೆ, ನಾರ್ಮನ್ನಲ್ಲಿರುವ ವಸ್ತುಸಂಗ್ರಹಾಲಯ, ಸ್ಟೂವಾಲ್ ವಸ್ತುಸಂಗ್ರಹಾಲಯ, ಬಾರ್ಟಲ್ಸ್‌ವಿಲ್ಲೆಯ ವುಲೆರಾಕ್ ವಸ್ತುಸಂಗ್ರಹಾಲಯ ಇವು ಇತರ ಕೆಲವು ಮುಖ್ಯ ಸಂಸ್ಥೆಗಳು.

ಜನಸಂಖ್ಯೆ[ಬದಲಾಯಿಸಿ]

ಬಿಳಿಯರು ಇಲ್ಲಿಗೆ ಬಂದಾಗ ಈ ಪ್ರದೇಶ ಅಮೆರಿಕನ್ ಇಂಡಿಯನರ ಆವಾಸಸ್ಥಾನವಾಗಿತ್ತು. ಅಮೆರಿಕ ಸಂಯುಕ್ತಸಂಸ್ಥಾನ 1820ರ ಅನಂತರ ಇತರ ಗಿರಿಜನರನ್ನು ಈ ಪ್ರದೇಶದಲ್ಲಿ ನೆಲೆಸಲು ಪ್ರೇರೇಪಿಸಿತು. ಈ ವಲಸೆಗಾರರು ತಮ್ಮ ಸರ್ಕಾರ, ಶಾಲಾಪದ್ಧತಿ ಮತ್ತು ಇತರ ಪದ್ಧತಿಗಳನ್ನು ಇಲ್ಲಿ ಸ್ಥಾಪಿಸಿದರು. ಅನಂತರವೂ ಕೇಂದ್ರ ಸರ್ಕಾರದ ಉತ್ತೇಜನದಿಂದ ಇತರ ಜನರೂ ವಲಸೆ ಬಂದರು. 20ನೆಯ ಶತಮಾನದ ಮಧ್ಯಭಾಗದ ವೇಳೆಗೆ ಸಂಯುಕ್ತ ಸಂಸ್ಥಾನದ ಇಂಡಿಯನರಲ್ಲಿ 1/2 ಭಾಗದಷ್ಟು ಜನ ಇಲ್ಲಿ ವಾಸಿಸುತ್ತಿದ್ದರು. ಕ್ರಮೇಣ ಅಂತರ್ಜನಾಂಗ ವಿವಾಹಗಳು ರೂಢಿಗೆ ಬಂದು ಜನಾಂಗಗಳ ಬೆರಕೆಯಾಯಿತು. ಇಂಡಿಯನರಿಗೆ ಕೊಟ್ಟು ಉಳಿದ ನೆಲವನ್ನು ಸರ್ಕಾರ ಇತರರಿಗೆ ಹಂಚಿತು. 1889ರಿಂದ 1910ರ ವರೆಗೆ ವಿಭಿನ್ನ ಐರೋಪ್ಯ ರಾಷ್ಟ್ರೀಯ ಮೂಲಗಳ ಜನ ಇಲ್ಲಿಗೆ ಬಂದು ನೆಲೆಸಿದರು. ಇದರಿಂದ ರಾಜ್ಯದ ಜನಸಂಖ್ಯೆ ಶೀಘ್ರಗತಿಯಲ್ಲಿ ಬೆಳೆಯಲಾರಂಭಿಸಿತು. 1907ರಲ್ಲಿ 14,14,177 ಇದ್ದ ಜನಸಂಖ್ಯೆ 1930ರ ವೇಳೆಗೆ 23,96,040ಕ್ಕೆ ಏರಿತು. 1950ರಲ್ಲಿ ಇದು 22,33,351ಕ್ಕೆ ಇಳಿಯಿತು. ವ್ಯವಸಾಯವನ್ನು ಯಾಂತ್ರೀಕರಣ ಗೊಳಿಸಿದ್ದರಿಂದ ಅನೇಕರು ಕೈಗಾರಿಕೆಯಲ್ಲಿ ಉದ್ಯೋಗ ದೊರಕಿಸಿಕೊಳ್ಳಲು ಇತರ ಪ್ರದೇಶಗಳಿಗೆ ವಲಸೆ ಹೋದುದೇ ಈ ಇಳಿತಕ್ಕೆ ಕಾರಣ. ಪುನಃ 1960ರ ವೇಳೆಗೆ ಜನಸಂಖ್ಯೆ 23,28,284ಕ್ಕೆ ಏರಿತು. ಎರಡನೆಯ ಮಹಾಯುದ್ಧದ ಅನಂತರ ನೀಗ್ರೊಗಳ ಜನಸಂಖ್ಯೆ ಬೆಳೆದಿದೆ. ಅಂತರ್ಯುದ್ಧಕ್ಕೆ ಮುನ್ನ ಗುಲಾಮರಾಗಿದ್ದು ಅನಂತರ ವಿಮೋಚನೆ ಪಡೆದ ನೀಗ್ರೊ ಜನರ ಸಂತತಿಯವರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಇತಿಹಾಸ[ಬದಲಾಯಿಸಿ]

10,000 ವರ್ಷಗಳಿಗೂ ಮುನ್ನ ಮಾನವರು ಈ ರಾಜ್ಯದ ಪ್ರದೇಶದಲ್ಲಿ ಕಾಣಿಸಿಕೊಂಡು, ಓeóÁರ್ಕ್ ಬೆಟ್ಟಗಳ ಬಳಿಯ ನದೀದಂಡೆಗಳಲ್ಲೂ ಪಾನ್ಹ್ಯಾಂಡಲ್ನ ವಾಯವ್ಯ ಪ್ರದೇಶದಲ್ಲಿರುವ ಗುಹೆಗಳಲ್ಲೂ ವಾಸಿಸುತ್ತಿದ್ದರೆಂಬುದು ಪ್ರಾಕ್ತನ ಸಂಶೋಧನೆಗಳಿಂದ ತಿಳಿದುಬಂದಿದೆ. ಕ್ಲೋವಿಸ್ ಸಂಸ್ಕೃತಿಗೆ ಸೇರುವ ಕಲ್ಲಿನ ಆಯುಧಗಳು ಆನೆಯೊಂದರ ಅವಶೇಷಗಳೊಂದಿಗೆ ಕ್ಯಾಡೋ ಜಿಲ್ಲೆಯಲ್ಲಿ ದೊರಕಿವೆ. 4,000 ವರ್ಷಗಳಷ್ಟು ಹಳೆಯದಾದ ವ್ಯವಸಾಯಜೀವಿ ಜನರ ಅವಶೇಷಗಳು ಪಾನ್ಹ್ಯಾಂಡಲ್ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಬುಟ್ಟಿಗಳು, ಚರ್ಮದ ಚೀಲಗಳು, ಕಲ್ಲಿನ ಹೆರೆಯುವ ಆಯುಧಗಳು ಮತ್ತು ಚಾಕು ಇವರ ಉಪಕರಣಗಳಾಗಿದ್ದುವು. ಒರಟು ಮಡಕೆಗಳೂ ಧಾನ್ಯಗಳೂ ಮೂಳೆಯ ಮೀನುಗಳೂ ಮೂಳೆ ಮತ್ತು ಕೊಂಬಿನ ಇತರ ಆಯುಧಗಳೂ ಇವರಲ್ಲಿ ಬಳಕೆಯಲ್ಲಿದ್ದುವು. ಪ್ರ.ಶ. 850ರ ಸುಮಾರಿಗೆ ಸೇರಿದ ಮಹತ್ತರ ದೇವಾಲಯದ ಅವಶೇಷಗಳನ್ನು ಲೇಫ್ಲೋರ್ ಜಿಲ್ಲೆಯ ಸ್ಪೈರೋನಗರದ ಬಳಿ ಕಾಣಬಹುದು. ಉನ್ನತ ನಾಗರಿಕತೆಯ ಕುರುಹುಗಳಿರುವ ಈ ಜನ ತಾಮ್ರ ಮತ್ತು ಶಿಲೋಪಕರಣಗಳನ್ನು ಬಳಸುತ್ತಿದ್ದರು.

1541ರಲ್ಲಿ ಸ್ಪ್ಯಾನಿಷರು ಇಲ್ಲಿ ಆಕ್ರಮಣಕಾರ್ಯ ನಡೆಸಿದರು. ಆಗ ಇದು ಐರೋಪ್ಯಸಂಪರ್ಕ ಪಡೆಯಿತು. 18ನೆಯ ಶತಮಾನದಲ್ಲಿ ಈ ಪ್ರದೇಶ ಫ್ರೆಂಚರ ಆಡಳಿತಕ್ಕೆ ಸೇರಿತ್ತು. ಈಗಲೂ ಫ್ರೆಂಚ್ ಹೆಸರುಗಳುಳ್ಳ ಪರ್ವತ ಮತ್ತು ನದಿಗಳನ್ನು ಇಲ್ಲಿ ಕಾಣಬಹುದು. 1830ರ ಶಾಸನದ ಪ್ರಕಾರ ಮಿಸಿಸಿಪಿ ನದಿಯ ಪುರ್ವ ಪ್ರದೇಶಗಳಲ್ಲಿದ್ದ ಇಂಡಿಯನರನ್ನು ಅದರ ಪಶ್ಚಿಮಕ್ಕೆ ಕಳುಹಿಸಲಾಯಿತು. ನಾಗರಿಕ ಬುಡಕಟ್ಟುಗಳೆಂದು ಹೆಸರಾದ ಚೋಕ್ಟಾ, ಕ್ರೀಕ್ (ಮುಸ್ಕೋಗಿಯನ್), ಸೆಮಿನೋಲ್, ಚೆರೋಕೀ ಮತ್ತು ಚಿಕ್ಕಸಾ ಪಂಗಡಗಳನ್ನು ಇಂಡಿಯನರ ವಸಾಹತುಗಳಿಗೆ 1830-42ರಲ್ಲಿ ಸಾಗಿಸಲಾಯಿತು. ಇವರು ತಮ್ಮವೇ ಆದ ಆಡಳಿತಗಳನ್ನು ಏರ್ಪಡಿಸಿಕೊಂಡು ಕ್ರಮೇಣ ಅಭಿವೃದ್ಧಿ ಹೊಂದುತ್ತಿದ್ದರು. ಸಾಮಾನ್ಯವಾಗಿ ದಕ್ಷಿಣದ ಸಂಸ್ಥಾನಗಳೊಂದಿಗೆ ಸಾಮ್ಯ ಪಡೆದಿದ್ದ ಈ ಜನ ಗುಲಾಮ ಪದ್ಧತಿಯ ನಿವಾರಣೆಗಾಗಿ ನಡೆದ ಅಮೆರಿಕದ ಅಂತರ್ಯುದ್ಧದಲ್ಲಿ ತಾಟಸ್ಥ್ಯ ವಹಿಸಬೇಕೆಂದು ಬಂiÀÄಸಿದರೂ ಕ್ರಮೇಣ ಇಲ್ಲಿ ದಕ್ಷಿಣದ ಒಕ್ಕೂಟ ರಾಜ್ಯಗಳ ಪರವಾದ ನೀತಿ ಬೆಳೆಯುತ್ತಿತ್ತು. 1861 ಅಕ್ಟೋಬರ್ನಲ್ಲಿ ಈ ರಾಜ್ಯಗಳೊಂದಿಗೆ ಆಲ್ಬರ್ಟ್ ಪೈಕನ ನೇತೃತ್ವದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಅದರ ವಿರೋಧಿಗಳು ಒಪೊತ್ಲೆಯ ಹೋಲನ ನೇತೃತ್ವದಲ್ಲಿ ಈ ಒಕ್ಕೂಟದ ಸೈನ್ಯಗಳನ್ನು ಎದುರಿಸಿದರು. ಇವರು ಸೋತು ಕ್ಯಾನ್ಸಸ್ ಪ್ರದೇಶಕ್ಕೆ ಓಡಿಹೋದರು. 1862ರ ಅಂತ್ಯಭಾಗದಲ್ಲಿ ಸಂಯುಕ್ತಸಂಸ್ಥಾನದ ಏಕತಾ ಸೈನ್ಯ ಈ ಪ್ರದೇಶವನ್ನು ಪ್ರವೇಶಿಸಿ ಪೋರ್ಟ್ ಗಿಬ್ಬನ್ ಪ್ರದೇಶವನ್ನು ವಶಪಡಿಸಿಕೊಂಡಿತು. ಈ ಯುದ್ಧದ ಪರಿಣಾಮವಾಗಿ ರಾಜ್ಯಕ್ಕೆ ಹೆಚ್ಚು ನಷ್ಟವಾಯಿತಾದರೂ 1865 ಜೂನ್ 23ರಂದು ಅಂತಿಮವಾಗಿ ವಿಜಯ ಗಳಿಸಿದ ಏಕತಾ ಪಕ್ಷ ಸಹಾಯದಿಂದ ಗುಲಾಮ ಪದ್ಧತಿ ನಿರ್ನಾಮವಾಯಿತು. ಪಶ್ಚಿಮದ ಕೆಲಪ್ರದೇಶಗಳು ಈ ರಾಜ್ಯದ ಕೈಬಿಟ್ಟುವು. ಈ ಪ್ರದೇಶಗಳಲ್ಲಿ ಬೇರೆ ಇಂಡಿಯನರನ್ನು ಸ್ಥಾಪಿಸಲಾಯಿತು. ಆಗಾಗ್ಗೆ ದಂಗೆಯೇಳುತ್ತಿದ್ದ ಈ ಜನರನ್ನು ಬಲಾತ್ಕಾರವಾಗಿ ಹದ್ದಿನಲ್ಲಿಡಬೇಕಾಗಿತ್ತು. 1875 ಜೂನ್ ತಿಂಗಳ ಪೋರ್ಟ್‌ಸಿಲ್ ದಂಗೆಯೇ ಕೊನೆಯದು. ಅನಂತರ ಇಲ್ಲಿ ಶಾಶ್ವತ ಶಾಂತಿಯೇರ್ಪಟ್ಟಿತು. ಕ್ರಮೇಣ ಇಲ್ಲಿ ಬಿಳಿಯರ ಪ್ರಭಾವ ಬೆಳೆಯಲಾರಂಭಿಸಿತು. 1872ರಲ್ಲಿ ಈ ಪ್ರದೇಶದ ಮೂಲಕ ರೈಲುಮಾರ್ಗ ರಚಿಸಲಾಯಿತು. ಐದು ನಾಗರಿಕ ಪಂಗಡಗಳ ಮತ್ತು ವಸತಿಕಾರರ ಮಧ್ಯೆ ವೈಮನಸ್ಯವುಂಟಾಗುತ್ತಿದ್ದುದರಿಂದ ಸರ್ಕಾರ ಆಗಾಗ್ಗೆ ತಲೆಹಾಕುತ್ತಿರಬೇಕಾಗಿತ್ತು. 1889 ಏಪ್ರಿಲ್ನಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಲು ಸಾವಿರಾರು ಮಂದಿ ಧಾವಿಸಿ ಬಂದರು. ಗುತ್ತೀ ಮತ್ತು ಓಕ್ಲಹೋಮ ನಗರಗಳು ಹುಟ್ಟಿಕೊಂಡದ್ದು ಆಗ. 1890 ಮೇ 20ರಂದು ಪಶ್ಚಿಮದ ಪ್ರದೇಶಗಳನ್ನು ಓಕ್ಲಹೋಮ ರಾಜ್ಯವೆಂದು ಘೋಷಿಸಲಾಯಿತು, 1907 ನವೆಂಬರಿನಲ್ಲಿ ಇಂಡಿಯನರ ಪ್ರದೇಶಗಳನ್ನೂ ಓಕ್ಲಹೋಮವನ್ನೂ ಒಟ್ಟುಗೂಡಿಸಿ ಅದನ್ನು 46ನೆಯ ರಾಜ್ಯವನ್ನಾಗಿ ಸಂಯುಕ್ತಸಂಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು. ಈ ರಾಜ್ಯ ಸಂಯುಕ್ತಸಂಸ್ಥಾನದ ಅಂಗವಾಗಿ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ.

ಆಡಳಿತ[ಬದಲಾಯಿಸಿ]

ಓಕ್ಲಹೋಮ ರಾಜ್ಯವನ್ನು 77 ಜಿಲ್ಲೆಗಳಾಗಿ ವಿಭಾಗಿಸಲಾಗಿದ್ದು, ಅಲ್ಲಿ 506 ಪಟ್ಟಣಗಳೂ ನಗರಗಳೂ 105 ವಿಶೇಷ ಪ್ರಾಂತ್ಯಗಳೂ ಇವೆ. ಜಿಲ್ಲೆಗಳು ವಿಸ್ತಾರದಲ್ಲಿ ವಿಭಿನ್ನವಾಗಿವೆ. ಅಂತೆಯೇ ಇಲ್ಲಿ ವಿರಳ ಜನಸಂಖ್ಯೆಯ ಜಿಲ್ಲೆಗಳೂ ತೀವ್ರ ಜನಸಾಂದ್ರತೆ ಜಿಲ್ಲೆಗಳೂ ಇವೆ. 1907 ಸೆಪ್ಟೆಂಬರ್ 17ರಂದು ಅಸ್ತಿತ್ವಕ್ಕೆ ಬಂದ ಈ ರಾಜ್ಯದ ಸಂವಿಧಾನ 1959ರ ಹೊತ್ತಿಗೆ 42 ಬಾರಿ ತಿದ್ದುಪಡಿಗಳಿಗೊಳಗಾಯಿತು. ಮತದಾರರು ಸಂಯುಕ್ತಸಂಸ್ಥಾನದ ಪ್ರಜೆಗಳಾಗಿರಬೇಕು. 21 ವರ್ಷಕ್ಕೆ ಮೇಲ್ಪಟ್ಟಿದ್ದು, ಆ ರಾಜ್ಯದಲ್ಲಿ ಕನಿಷ್ಠಪಕ್ಷ ಒಂದು ವರ್ಷ, ಜಿಲ್ಲೆಯಲ್ಲಿ ಆರು ತಿಂಗಳು ಮತ್ತು ಕ್ಷೇತ್ರದಲ್ಲಿ 30 ದಿನಗಳಾದರೂ ವಾಸಿಸಿರಬೇಕು. ಎಲ್ಲ ಮುಖ್ಯ ಅಧಿಕಾರಿಗಳನ್ನೂ ಚುನಾಯಿಸಲಾಗುತ್ತದೆ. ಓಕ್ಲಹೋಮದಿಂದ ಇಬ್ಬರು ಸೆನೆಟರ್ ಮತ್ತು ಆರು ಪ್ರತಿನಿಧಿಗಳನ್ನು ಚುನಾಯಿಸಲಾಗುತ್ತದೆ.

ಗವರ್ನರ್ ಮುಖ್ಯ ಕಾರ್ಯನಿರ್ವಾಹಕ. ಈತನನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆರಿಸಲಾಗುತ್ತದೆ. ಎರಡನೆಯ ಬಾರಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು 1966ರ ತಿದ್ದುಪಡಿಯ ಪ್ರಕಾರ ಆತನಿಗೆ ನೀಡಲಾಗಿದೆ. ಆತನಲ್ಲದೆ ಲೆಫ್ಟಿನೆಂಟ್-ಗವರ್ನರ್, ರಾಜ್ಯಸಚಿವ, ಕೋಶಾಧಿಕಾರಿ, ನ್ಯಾಯಾಂಗ ಸಚಿವ, ವಿದ್ಯಾನಿರ್ವಾಹಕ, ಗಣಿಗಳ ನಿರ್ದೇಶಕ ಮುಂತಾದ ಹನ್ನೆರಡು ಅಧಿಕಾರಿಗಳನ್ನು ನಾಲ್ಕು ವರ್ಷಗಳಿಗೊಮ್ಮೆ ಆರಿಸಲಾಗುತ್ತದೆ. ಆಡಳಿತ ಕಾರ್ಯನಿರ್ವಹಣೆಗೆ ಇವರಲ್ಲದೆ 60ಕ್ಕೂ ಮೇಲ್ಪಟ್ಟ ಅಧಿಕಾರಿಗಳು, ಸಮಿತಿಗಳು, ಇಲಾಖೆಗಳು ಮತ್ತು ಮಂಡಳಿಗಳು ನೇಮಕವಾಗುತ್ತವೆ. ರಾಜ್ಯದ ಶಾಸಕಾಂಗದಲ್ಲಿ 48 ಸೆನೆಟರುಗಳೂ 99 ಪ್ರತಿನಿಧಿಗಳೂ ಇರುತ್ತಾರೆ. ಸಂಯುಕ್ತಸಂಸ್ಥಾನದ ಕಾಂಗ್ರೆಸ್ಸಿಗೆ ಅರ್ಧಭಾಗ ಸೆನೆಟರುಗಳನ್ನೂ ಎಲ್ಲ ಪ್ರತಿನಿಧಿಗಳನ್ನೂ ಎರಡು ವರ್ಷಕ್ಕೊಮ್ಮೆ ಚುನಾಯಿಸಲಾಗುತ್ತದೆ. ನ್ಯಾಯನಿರ್ವಹಣೆ ಶ್ರೇಷ್ಠ ನ್ಯಾಯಾಲಯದ ಹೊಣೆ. ಆರು ವರ್ಷಗಳ ಅವಧಿಯಿರುವ 9 ಮಂದಿ ನ್ಯಾಯಾಧೀಶರನ್ನು ಈ ಸಂಸ್ಥೆಗೆ ಆಯ್ಕೆ ಮಾಡಲಾಗುತ್ತದೆ. ಇದರ ಸಹಾಯಕ್ಕೆ ಅಪರಾಧ ನ್ಯಾಯಾಲಯವೂ ಜಿಲ್ಲಾ ನ್ಯಾಯಾಲಯಗಳೂ ಇವೆ. ಇವಲ್ಲದೆ ಕೆಲವು ಜನನಿಬಿಡ ಜಿಲ್ಲೆಗಳಲ್ಲಿ ಉನ್ನತ ನ್ಯಾಯಾಲಯಗಳೂ ಇವೆ. 1965ರ ಮಸೂದೆಯ ಪ್ರಕಾರ ಜಿಲ್ಲಾ ನ್ಯಾಯಾಧಿಕಾರಿಗಳನ್ನು ಚುನಾಯಿಸಬಹುದಾಗಿದೆ.

ಜಿಲ್ಲೆಯ ಆಡಳಿತ ನಿರ್ವಹಣೆಗೆ ಕಮಿಷನರುಗಳನ್ನು ಆಯ್ಕೆ ಮಾಡಲಾಗುತ್ತದೆ. ಇವರಲ್ಲದೆ ಷರೀಫ್, ಅಟಾರ್ನಿ, ನ್ಯಾಯಾಧೀಶ, ಗುಮಾಸ್ತ, ನ್ಯಾಯಾಲಯದ ಗುಮಾಸ್ತ ಮುಂತಾದ ಹಲವಾರು ಜಿಲ್ಲಾಮಟ್ಟದ ಅಧಿಕಾರಿಗಳಿರುತ್ತಾರೆ. ಇವರನ್ನು ಎರಡು ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ. ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಮೂಲಗಳು ಬೇರೆ ಬೇರೆ. ಖನಿಜೋತ್ಪನ್ನಗಳ ಮೇಲಿನ ತೆರಿಗೆಗಳು ರಾಜ್ಯಾದಾಯದ ಮುಖ್ಯ ಮೂಲ. ಸಾರಿಗೆ ವಾಹನಗಳ ಮೇಲಣ ಸುಂಕ ಮತ್ತು ವಿವಿಧ ಇಲಾಖೆಗಳ ಆದಾಯ ಇದಕ್ಕೆ ಪುರಕ. ಸ್ಥಳೀಯ ಸಂಸ್ಥೆಗಳ ಆದಾಯ ಮುಖ್ಯವಾಗಿ ಆಸ್ತಿಯ ಮೇಲಣ ತೆರಿಗೆಗಳಿಂದ ಬರುತ್ತದೆ. 1965ರ ಕಾಯಿದೆಂiÀiಲ್ಲಿ ಮಾರಾಟ ತೆರಿಗೆಯನ್ನು ವಿಧಿಸಲು ಅವಕಾಶ ಮಾಡಿದೆ. ಈ ಆದಾಯ ಸ್ಥಳೀಯ ಸಂಸ್ಥೆಗಳಿಗೆ ಮೀಸಲು. ಸಾರಿಗೆ ಮಾರ್ಗ, ವಿದ್ಯಾಭ್ಯಾಸ, ಸಾಲದ ಬಿಡುಗಡೆ ಮತ್ತು ಜನೋಪಯೋಗಿ ಕಾರ್ಯ ಇವು ಮುಖ್ಯ ವ್ಯಯದ ಬಾಬುಗಳು.

ವಿದ್ಯಾಭ್ಯಾಸ[ಬದಲಾಯಿಸಿ]

ಸಾರ್ವಜನಿಕ ವಿದ್ಯಾಸಂಸ್ಥೆಗಳು ರಾಜ್ಯ ಮತ್ತು ಜಿಲ್ಲಾ ವಿದ್ಯಾಧಿಕಾರಿಗಳ ಆಡಳಿತಕ್ಕೊಳಪಟ್ಟಿದೆ. ಸುಮಾರು 5,00,000 ವಿದ್ಯಾರ್ಥಿಗಳಿಗಾಗಿ 20,00,00,000 ಡಾಲರುಗಳ ಖರ್ಚು ಮಾಡಲಾಗುತ್ತದೆ. 1965ರಲ್ಲಿ ಶೇಕಡ 25ರಷ್ಟು ಹೆಚ್ಚುವರಿ ಖರ್ಚಿಗೆ ಒಪ್ಪಿಗೆ ನೀಡಲಾಯಿತು. ರಾಜ್ಯಘಟಕ ಜಿಲ್ಲೆಗಳಿಗೆ ಹೊಸ ವಿದ್ಯಾತೆರಿಗೆಗಳನ್ನು ವಿಧಿಸಲು ಸಹ ಸಮ್ಮತಿ ನೀಡಲಾಯಿತು. ಪ್ರೌಢ ವಿದ್ಯಾಭ್ಯಾಸ ಎಲ್ಲ ವಿದ್ಯಾಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ಮಂಡಲಿಯೊಂದರ ನೇತೃತ್ವದಲ್ಲಿ ನಡೆಯುತ್ತದೆ. ಓಕ್ಲಹೋಮ ವಿಶ್ವವಿದ್ಯಾಲಯ 1892ರಲ್ಲಿ ಪ್ರಾರಂಭವಾಯಿತು. ಇದು ಕಲೆ, ವಿಜ್ಞಾನ, ಫಾರ್ಮಸಿ, ಎಂಜಿನಿಯರಿಂಗ್, ನ್ಯಾಯಾಂಗ, ವಾಣಿಜ್ಯ, ವೈದ್ಯ ಮತ್ತು ದಾದಿವಿದ್ಯೆಗಳಿಗೆ ಸಂಬಂಧಿಸಿದ ಶಾಲಾಕಾಲೇಜುಗಳನ್ನು ನಡೆಸುತ್ತದಲ್ಲದೆ, 1928ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದ ಅಚ್ಚುಕೂಟ ತನ್ನ ಉತ್ತಮ ಪ್ರಕಟನೆಗಳಿಂದ ಅಪಾರ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಗೆ ಸೇರಿದ ಬಾನುಲಿ ಸಂಸ್ಥೆಯೂ ಒಂದಿದೆ. ಓಕ್ಲಹೋಮ ಕೃಷಿ ಮತ್ತು ಅನ್ವಯ ವಿಜ್ಞಾನ ವಿಶ್ವವಿದ್ಯಾಲಯ 1890ರಲ್ಲಿ ಸ್ಥಾಪಿತವಾದ ಕೃಷಿ ಮತ್ತು ತಾಂತ್ರಿಕ ಕಾಲೇಜಿನಿಂದ ಬೆಳೆದು ಬಂದಿದೆ. ಇವಲ್ಲದೆ ಇನ್ನೂ ಹಲವಾರು ಉನ್ನತ ವ್ಯಾಸಂಗ ಸಂಸ್ಥೆಗಳು ಇಲ್ಲಿವೆ. ಆರೋಗ್ಯ ಮತ್ತು ಸಾರ್ವಜನಿಕ ಉಪಯೋಗ ಕಾರ್ಯಗಳು: ರಾಜ್ಯ ಸರ್ಕಾರ ತಪ್ಪಿತಸ್ಥರ ಸುಧಾರಣಾ ಕೇಂದ್ರಗಳ ಮತ್ತು ಜನೋಪಯೋಗಿ ಸಂಸ್ಥೆಗಳ ಕಾರ್ಯಚಟುವಟಿಕೆಗಳ ನಿರ್ದೇಶನಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಿದೆ. ಮನೋವ್ಯಾಧಿಗಳ ವೈದ್ಯಶಾಲೆ, ಕ್ಷಯರೋಗ ವೈದ್ಯಶಾಲೆ, ಮಕ್ಕಳ ಮಾನಸಿಕ ಸುಧಾರಣಾ ಶಾಲೆ ಮತ್ತು ಕಿವುಡ, ಕುರುಡ ಮತ್ತು ಅನಾಥ ಕೇಂದ್ರಗಳನ್ನು ಹಲವಾರು ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇವಲ್ಲದೆ ಅಪರಾಧಿಗಳ ಸುಧಾರಣೆ ಮತ್ತು ಪುನರ್ವಸತಿ ಕಾರ್ಯದಲ್ಲೂ ಆಸಕ್ತಿ ವಹಿಸಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಉತ್ತಮ ಕಾರ್ಯಗಳನ್ನು ಕೈಗೊಂಡಿದೆ. ರಾಜ್ಯದ 77 ಜಿಲ್ಲೆಗಳ ಪೈಕಿ ಐವತ್ತರಲ್ಲಿ ಆರೋಗ್ಯ ಇಲಾಖೆಗಳಿದ್ದು ಶೇಕಡ 80 ಜನರ ಆರೋಗ್ಯ ರಕ್ಷಣೆಯನ್ನು ನಿರ್ವಹಿಸುತ್ತವೆ. ಓಕ್ಲಹೋಮ ಸಾರ್ವಜನಿಕ ಕ್ಷೇಮಾಭ್ಯುದಯ ಇಲಾಖೆ ಆಶ್ರಿತ ಮಕ್ಕಳ, ವೃದ್ಧರ, ಅಂಗಹೀನರ, ಕುರುಡರ ಒಳಿತನ್ನು ಸಾಧಿಸಲು ಶ್ರಮಿಸುತ್ತಿದೆ.

ಅರ್ಥವ್ಯವಸ್ಥೆ: 1889ರಲ್ಲಿ ಬಿಳಿಯರ ಪ್ರವೇಶವಾಗುವುದಕ್ಕೆ ಮೊದಲು ಪಶುಪಾಲನೆ ಈ ಪ್ರದೇಶದ ಮುಖ್ಯ ಕಸಬಾಗಿತ್ತು. ಅನಂತರ ವ್ಯವಸಾಯ ಪ್ರಧಾನವಾಗಿ ಬೆಳೆಯಿತು. 1960ರ ವೇಳೆಗೆ 84,000 ಜಮೀನುಗಳೂ ಪಶುಪಾಲನ ಕ್ಷೇತ್ರಗಳೂ ಇದ್ದುವು. ಸಾಗುವಳಿಯಲ್ಲಿದ್ದ ನೆಲ 4,00,00,000 ಎಕರೆ. ಇದರಲ್ಲಿ 2/3 ಭಾಗದಲ್ಲಿ ಮಾಲೀಕರೇ ಸ್ವಂತ ಬೇಸಾಯ ನಡೆಸುತ್ತಿದ್ದರು. 1960ರ ಸುಮಾರಿನಲ್ಲಿ ವ್ಯವಸಾಯ ಕಾರ್ಯಗಳಲ್ಲಿ ಯಂತ್ರದ ಬಳಕೆ ಹೆಚ್ಚಿತು. ಇದರಿಂದ ಪ್ರಗತಿಯ ವೇಗ ಅಧಿಕವಾಗಿದೆ. ಭೂಸಾರ ರಕ್ಷಣೆ, ನೀರಾವರಿ ಪುರೈಕೆ, ಪ್ರವಾಹಗಳ ಹಾವಳಿಯ ತಡೆ ಮುಂತಾದ ಕಾರ್ಯಗಳಿಗೆ ಹೆಚ್ಚಿನ ಗಮನ ಕೊಡಲಾಗಿದೆ.

ವ್ಯವಸಾಯೋತ್ಪನ್ನಗಳಲ್ಲಿ ಅಗ್ರಸ್ಥಾನ ಗೋದಿಯದು. ಹತ್ತಿಯೂ ಮುಖ್ಯ, ಓಟ್ಸ್‌, ಬಟಾಣಿ, ಧಾನ್ಯಗಳು, ಬಗೆ ಬಗೆಯ ಹಣ್ಣುಗಳು ಇತರ ಮುಖ್ಯ ಬೆಳೆಗಳು. ದನದ ಮಾಂಸದ ಕೈಗಾರಿಕೆ ಬಹಳ ಲಾಭದಾಯಕ, ಮಾಂಸಕ್ಕಾಗಿ ಸು. 40,00,000 ದನಗಳನ್ನು ಸಾಕಲಾಗುತ್ತಿದೆ. ಹಂದಿ, ಕುರಿ, ಕುದುರೆ ಮತ್ತು ಹೇಸರ ಕತ್ತೆಗಳು ಇತರ ಸಾಕುಪ್ರಾಣಿಗಳು, ಮರದ ದಿಮ್ಮಿ ಆಗ್ನೇಯ ಭಾಗದ ಮುಖ್ಯ ಸಾಧನ. ಮರದ ಉತ್ಪನ್ನ ಕೈಗಾರಿಕೆ ಇಲ್ಲಿ ಬೆಳೆದಿದೆ. ವಾರ್ಷಿಕ ಮೌಲ್ಯ ಸುಮಾರು 80,00,000 ಡಾಲರುಗಳು.

ತೈಲೋತ್ಪಾದನೆಯೂ ಒಂದು ಮುಖ್ಯ ಉದ್ಯೋಗ. ಇದರ ವಾರ್ಷಿಕ ಉತ್ಪನ್ನದ ಮೌಲ್ಯ 70,00,00,000 ಡಾಲರುಗಳು. ಸಂಯುಕ್ತಸಂಸ್ಥಾನದ ತೈಲೋತ್ಪಾದನೆಯಲ್ಲಿ ಈ ರಾಜ್ಯದ್ದು ತೃತೀಯ ಸ್ಥಾನ. ತವರ, ಸೀಸ, ಲವಣ, ಡಾಲೊಮೈಟ್, ಗ್ರ್ಯಾನೈಟ್, ಮರಳು ಮತ್ತು ಜಲ್ಲಿಕಲ್ಲು, ಸುಣ್ಣಕಲ್ಲು, ವಿವಿಧ ರೀತಿಯ ಜೇಡಿಮಣ್ಣಗಳು, ಜಿಪ್ಸಮ್, ಆಸ್ಫಾಲ್ಟ್‌, ಸಿಲಿಕ ಮುಂತಾದ ಖನಿಜಗಳು ರಾಜ್ಯದಲ್ಲಿ ದೊರಕುತ್ತವೆ. ಹೀಲಿಯಂ ಕೂಡ ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತಿದ್ದು, ಸಂಯುಕ್ತಸಂಸ್ಥಾನದಲ್ಲಿ ಎರಡನೆಯ ಹೀಲಿಯಂ ಕಾರ್ಖಾನೆ 1959ರಲ್ಲಿ ಕೀಯೆಸ್ನಲ್ಲಿ ಸ್ಥಾಪಿತವಾಯಿತು. ವ್ಯವಸಾಯ ಮತ್ತು ಖನಿಜ ಸಂಪತ್ತುಗಳ ಮೇಲೆ ಆಧಾರಿತವಾಗಿರುವ ಅನೇಕ ಕಾರ್ಖಾನೆಗಳು ರಾಜ್ಯದಲ್ಲಿವೆ. ಮಾಂಸಾಹಾರ ತಯಾರಿಕೆ. ಶೇಖರಣೆ, ಧಾನ್ಯಗಳಿಂದ ಹಿಟ್ಟು ತಯಾರಿಕೆ, ದನಗಳ ಆಹಾರ ತಯಾರಿಕೆ, ಬಟ್ಟೆ ತಯಾರಿಕೆ, ಗಾಜಿನ ತಯಾರಿಕೆ, ಲೋಹಗಾರಿಕೆ ಮುಂತಾದವು 95,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುತ್ತವೆ.

ಸಾರಿಗೆ ವ್ಯವಸ್ಥೆ[ಬದಲಾಯಿಸಿ]

ಇಲ್ಲಿ ಸುಮಾರು 8,000 ಕಿಮೀಗಳಷ್ಟು ಉದ್ದದ ರೈಲು ರಸ್ತೆಗಳಿದ್ದು ರಾಜ್ಯದ ಎಲ್ಲ ಮೂಲೆಗಳಿಗೂ ಸಂಪರ್ಕ ಏರ್ಪಟ್ಟಿದೆ. ಮುಖ್ಯ ಸಾರ್ವಜನಿಕ ರಸ್ತೆಗಳ ಉದ್ದ 16,000 ಕಿಮೀಗಳು. ಪ್ರಮುಖ ನಗರಗಳಿಗೆ ವಿಮಾನಸಾರಿಗೆ ಸೌಕರ್ಯವಿದೆ. ಆರ್ಕನ್ಸಾ ನದಿಯ ಮುಖಾಂತರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಹೊಣೆ ಸಂಯುಕ್ತಸಂಸ್ಥಾನದ ಆಂತರಿಕ ಜಲಮಾರ್ಗ ಅಭಿವೃದ್ಧಿ ಸಂಸ್ಥೆಯ ಹೊಣೆ. ಓಕ್ಲಹೋಮ ನಗರ ಇಲ್ಲಿಯ ರಾಜಧಾನಿ. ಜನಸಂಖ್ಯೆ 5,06,132. ಇತರ ಮುಖ್ಯ ನಗರಗಳು ಇವು (2013ರಲ್ಲಿದ್ದಂತೆ ಇವುಗಳ ಜನಸಂಖ್ಯೆಗಳನ್ನು ಆವರಣಗಳೊಳಗೆ ಕೊಟ್ಟಿದೆ): ಟಲ್ಸ (393,987); ಇದು ತೈಲಶುದ್ಧೀಕರಣ ಕೇಂದ್ರ. ಈನಿಡ್ (49,854) ತೈಲಶುದ್ಧೀಕರಣ ಮತ್ತು ಆಹಾರ ತಯಾರಿಕೆಗೆ ಪ್ರಸಿದ್ಧ, ಲಾಟನ್ (98,376) ಪಶುಪಾಲನೆ, ಗೋದಿ ಮತ್ತು ಹತ್ತಿ ಬೆಳೆಗಳ ಕೇಂದ್ರ. ಮಸ್ಕೋಗಿಯಲ್ಲಿ (38,981) ಅಮೆರಿಕನ್ ಇಂಡಿಯನರು ಹೆಚ್ಚಾಗಿದ್ದಾರೆ. ಓಕ್ಲಹೋಮ ವಿಶ್ವವಿದ್ಯಾಲಯ ಪೀಠವಿರುವುದು ನಾರ್ಮನಿನಲ್ಲಿ (115,562). (ಬಿ.ಕೆ.ಜಿ.; ಎನ್.ಎ.)

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಓಕ್ಲಹೋಮ&oldid=631950" ಇಂದ ಪಡೆಯಲ್ಪಟ್ಟಿದೆ