ವಿಷಯಕ್ಕೆ ಹೋಗು

ಒ’ನೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಒ’ನೀಲ್: ಐರ್ಲೆಂಡಿನ ಪ್ರಥಮ ದೊರೆಯಾಗಿದ್ದ ನಿಯಲನ ವಂಶನಾಮ. ಪ್ರ.ಶ. 405ರಲ್ಲಿ ಮರಣ ಹೊಂದಿದ ನಿಯಲನ ಕಾಲದಿಂದ ಹಿಡಿದು ಪ್ರ.ಶ. 1003ರ ವರೆಗೆ ಈ ವಂಶದವರು ಹೆಚ್ಚುಕಡಿಮೆ ಅವ್ಯಾಹತವಾಗಿ ಐರ್ಲೆಂಡಿನ್ನಾಳಿದರು. ಉಯಿ ನೀಲ್ ಎಂದು ಕರೆಯಲ್ಪಡುತ್ತಿದ್ದ ಇವರ ವಂಶ ಎರಡು ಕವಲುಗಳಾಗಿ, ಒಂದು ಕವಲು ಉತ್ತರ ಐರ್ಲೆಂಡಿನಲ್ಲೂ ಇನ್ನೊಂದು ದಕ್ಷಿಣ ಐರ್ಲೆಂಡಿನಲ್ಲೂ ಆಡಳಿತ ನಡೆಸಿದುವು. ಈ ವಂಶಕ್ಕೆ ಒ’ನೀಲ್ ಎಂಬ ಹೆಸರು ಬಂದದ್ದು ಪ್ರ.ಶ. 919ರಲ್ಲಿ ಕಾಲವಾದ ನಿಯಲ್ ಗ್ಲುಂಡಬನಿಂದ. ಈತನ ಮೊಮ್ಮಗ ಡಾನೆಲ್ ಒ’ನೀಲ್.

ವಂಶಾಡಳಿತ[ಬದಲಾಯಿಸಿ]

ಪ್ರಾಚೀನ ಒ’ನೀಲರ ಸಾಹಸಗಳು ಬುಕ್ ಆಫ್ ಲಿನ್ಸ್‌ಟರ್, ಆನಲ್ಸ್‌ ಆಫ್ ದಿ ಫೋರ್ ಮಾಸ್ಟರ್ಸ್‌ ಮುಂತಾದ ಕೃತಿಗಳಲ್ಲಿ ವಿಶದವಾಗಿ ಬಂದಿವೆ. 16ನೆಯ ಶತಮಾನಕ್ಕೆ ಹಿಂದೆ ಒ’ನೀಲರ ಅಲ್ಸ್‌ಟರ್ ರಾಜ್ಯದ ಮೇಲೆ ನಾರ್ಮನ್ನರ ಮತ್ತು ಇಂಗ್ಲಿಷರ ಪ್ರಭಾವ ಅಷ್ಟೇನೂ ಇರಲಿಲ್ಲ. ನಾಮಮಾತ್ರಕ್ಕೆ ಈ ದೊರೆಗಳು ಇಂಗ್ಲೆಂಡಿನ ದೊರೆಗಳಿಗೆ ಅಧೀನರೆಂದುಕೊಳ್ಳುತ್ತಿದ್ದರು. ಅಲ್ಸ್‌ಟರಿನ ಬಹುಭಾಗದ ಮೇಲೆ ಒಡೆತನ ಹೊಂದಿದ್ದ ಇವರು ಇತರ ಭಾಗಗಳ ಒಡೆಯರೊಂದಿಗೆ ಆಗಾಗ್ಗೆ ಕದನ ಮಾಡುತ್ತಿದ್ದರು. 16ನೆಯ ಶತಮಾನದಲ್ಲಿ ಕಾನ್ ಒ’ನೀಲ್ (1484-1559) ಇಂಗ್ಲಿಷರ ವಿರುದ್ಧವಾಗಿ ತಲೆಯೆತ್ತಲೆತ್ನಿಸಿ ವಿಫಲನಾಗಿ ಎಂಟನೆಯ ಹೆನ್ರಿಯ ಒಡೆತನವನ್ನೊಪ್ಪಿಕೊಂಡು ಟೈರೋನಿನ ಅರ್ಲ್‌ ಎನಿಸಿಕೊಂಡ. ಆತನ ಮಗ ಷೇನ್ ಮತ್ತು ಇತರರು ಈ ಅವಮಾನದ ವಿರುದ್ಧ ಸಿಡಿದೆದ್ದರು. ಕಾನನ ಅನೈತಿಕ ಪುತ್ರ ಮಾಥ್ಯೂನನ್ನು ಆತನ ಉತ್ತರಾಧಿಕಾರಿಯಾಗಿ ಇಂಗ್ಲೆಂಡ್ ದೊರೆ ನೇಮಿಸಿದ. ಇದು ಐರ್ಲೆಂಡಿನ ಕಟ್ಟಳೆಗೆ ವಿರುದ್ಧವಾದದ್ದೆಂಬ ಅಸಮಾಧಾನ ಹುಟ್ಟಿತು. ಷೇನನ ಕಡೆಯವರು ಮ್ಯಾಥ್ಯೂನನ್ನು ಕೊಂದರು. ಜಗಳಗಳೂ ಸಂಧಾನಗಳೂ ನಡೆದ ಅನಂತರ ಕೊನೆಗೆ ಇಂಗ್ಲೆಂಡಿನ ಒಂದನೆಯ ಎಲಿಜ಼ಬೆತ್ ರಾಣಿ ಷೇನ್ ಒ’ನೀಲನನ್ನು ಐರ್ಲೆಂಡಿನ ಮುಖ್ಯಸ್ಥನೆಂದು ಒಪ್ಪಿಕೊಂಡಳು.

ಪ್ರಮುಖರು[ಬದಲಾಯಿಸಿ]

ಈ ಕಾಲದಲ್ಲಿ ಐರ್ಲೆಂಡಿನಲ್ಲಿ ಒ’ನೀಲ್ ಮನೆತನದ ಮೂರು ಮಂದಿ ಪ್ರಮುಖರಿದ್ದರು. ಅವರು ಷೇನ್, ಟರ್ಲೊ ಮತ್ತು ಹ್ಯೂ. ಷೇನ್ ಲಂಡನಿನಲ್ಲಿದ್ದಾಗ ಅವನನ್ನು ಎತ್ತಿಹಾಕಿ ತಾನು ಐರಿಷ್ ಪಂಗಡದ ಮುಖ್ಯನಾಗಬೇಕೆಂದು ಟರ್ಲೊ ಸಂಚುಹೂಡಿದ. ಷೇನ್ ಐರ್ಲೆಂಡಿಗೆ ವಾಪಸು ಬಂದು ತನ್ನ ಅಧಿಕಾರವನ್ನು ಪುನಃ ಸ್ಥಾಪಿಸಿ, ತನ್ನ ವಿರುದ್ದ ಸಂಚುಹೂಡಿದ್ದವರ ಮೇಲೆ ಸೇಡು ತೀರಿಸಿಕೊಳ್ಳುವ ಕಾರ್ಯದಲ್ಲಿ ಉದ್ಯುಕ್ತನಾದ. ಇಂಗ್ಲೆಂಡಿನ ರಾಣಿ ಕೊನೆಗೂ ಷೇನನ ಬೇಡಿಕೆಗಳನ್ನೆಲ್ಲ ಒಪ್ಪಿದಳು. ಆದರೆ ಚಕ್ರ ಬದಲಾಯಿತು. ಷೇನನ ವಿರುದ್ಧಶಕ್ತಿಗಳು ಪ್ರಬಲವಾದುವು. ಕೊನೆಗೆ ಷೇನ್ ಸೋತು ಕೊಲೆಗೆ ಈಡಾದ. ಷೇನನ ಅನಂತರ ಮುಖ್ಯಸ್ಥನಾದಾತ ಟರ್ಲೊ ಒ’ನೀಲ್ (ಸು. 1530-95). ಟರ್ಲೊ ತನ್ನ ದಾಯಾದಿ ಬ್ರಿಯಾನ್ ಒ’ನೀಲನನ್ನು ಕೊಲ್ಲಿಸಿ ಅಧಿಕಾರಕ್ಕೆ ಬಂದು ಹದಿನೆಂಟು ವರ್ಷ ಕಾಲ ಹೆಣಗಾಡಿ ಕೊನೆಗೆ ಪಂಗಡ ಮುಖ್ಯಸ್ಥನ (ಒ’ನೀಲ್) ಸ್ಥಾನವನ್ನು ಬ್ರಿಯಾನನ ಮಗ ಹ್ಯೂಗೆ ಒಪ್ಪಿಸಿದ. ಹ್ಯೂ ಒ’ನೀಲ್ (ಸು. 1540-1616) ಟೈರೋನಿನ ಎರಡನೆಯ ಅರ್ಲ್. ಮಹಾ ಅರ್ಲ್ ಎಂದು ಈತನ ಖ್ಯಾತಿ. ಷೇನನ ಮರಣಾನಂತರ ಈತ ಟರ್ಲೊ ವಿರುದ್ಧ ಕಾದಾಡುತ್ತಿದ್ದು ಕೊನೆಗೂ ಒ’ನೀಲ್ ಸ್ಥಾನ ಗಳಿಸಿದ. ಹ್ಯೂಗೂ ಟರ್ಲೊವಿಗೂ ಪದೇ ಪದೇ ಬಡಿದಾಟಗಳಾಗುತ್ತಿದ್ದು ಇಂಗ್ಲಿಷರು ಟರ್ಲೊವಿಗೆ ಬೆಂಬಲ ನೀಡಿ ಇವರಿಬ್ಬರ ದ್ವೇಷವನ್ನು ಬಿಸಿಯಾಗಿಟ್ಟಿದ್ದರು. ಈ ಅಂತಃಕಲಹಗಳಿಂದ ಐರ್ಲೆಂಡಿನ ಶಕ್ತಿ ಕುಂದಿ ತಮ್ಮ ಪ್ರಭಾವ ಉಳಿಯುವುದೆಂದು ಅವರು ಬಗೆದಿದ್ದರು. ಆದರೆ ಹ್ಯೂ ಅಧಿಕಾರಕ್ಕೆ ಬಂದ ಮೇಲೆ ಅವರ ಮೇಲೆಯೇ ತಿರುಗಿಬಿದ್ದ. ಇಂಗ್ಲಿಷ್ ಅಧಿಕಾರಿ ಸರ್ ಜಾನ್ ನಾರಿಸನ ಸೋದರಿಯೊಂದಿಗೆ ಪ್ರಣಯಕಲಾಪ ನಡೆಸಿ ಅವಳೊಂದಿಗೆ ಓಡಿಹೋಗಿ, ಅನಂತರ ಸರ್ ಜಾನನ ಕಾದಾಟಗಳಲ್ಲಿ ಆತನಿಗೆ ನೆರವು ನೀಡಿ, ಮತ್ತೆ ತಿರುಗಿ ಬಿದ್ದು, ಸ್ಪೇನ್ ಸ್ಕಾಟ್ಲೆಂಡುಗಳ ನೆರವು ಬಯಸಿ ಇಂಗ್ಲಿಷರ ವಿರುದ್ಧ ಅವನ್ನು ಎತ್ತಿಕಟ್ಟಿದ. ಇವನನ್ನಡಗಿಸಲು ಇಂಗ್ಲಿಷರು ಸರ್ ಜಾನ್ ನಾರಿಸನನ್ನೇ ಕಳಿಸಿದರು. ಹ್ಯೂ ಮಣಿಯಲಿಲ್ಲ. ಅನಂತರ ಈತ ಇಂಗ್ಲಿಷರನ್ನು ಎದುರು ಹಾಕಿಕೊಳ್ಳದೆ ಎಚ್ಚರ ವಹಿಸಿ, ಸ್ಪೇನಿನ ಸಹಾಯಕ್ಕಾಗಿ ಕಾಯುತ್ತ ಕುಳಿತ. 1598ರಲ್ಲಿ ಇಂಗ್ಲೆಂಡಿನ ರಾಣಿಯಿಂದ ಕ್ಷಮಾದಾನ ದೊರಕಿತು. ಆದರೆ ಮತ್ತೆ ಇವನಿಗೂ ಇಂಗ್ಲಿಷರಿಗೂ ವಿರಸ ಬೆಳೆಯಿತು. ಕೊನೆಗೆ ಸೋತು ದೇಶತ್ಯಾಗ ಮಾಡಿ, ಸ್ಪೇನಿಗೆ ಹೋಗಬೇಕೆಂದು ಸಮುದ್ರಯಾನ ಮಾಡುತ್ತಿದ್ದಾಗ ಗಾಳಿ ನೆದರ್ಲೆಂಡ್ಸಿನತ್ತ ಹಡಗನ್ನು ಕೊಂಡೊಯ್ದಿತು.

ಅಲ್ಲಿಂದ ಸಂಸಾರಸಮೇತ ರೋಮಿಗೆ ಹೋದ. ಈತ ಮರಣಹೊಂದಿದ್ದು ಅಲ್ಲೇ. ಸರ್ ಫೆಲಿಮ್ ಒ’ನೀಲ್ (ಸು. 1604-53), ಒವೆನ್ ರೋ ಒನೀಲ್ (ಸು. 1590-1649), ಡೇನಿಯಲ್ ಒನೀಲ್ (ಸು. 1612-64) ಮತ್ತು ಹ್ಯೂ ಒ’ನೀಲ್ ಈ ವಂಶದ ಇತರ ಕೆಲವು ಪ್ರಮುಖರು. ಮುಂದಿನ ತಲೆಮಾರಿನ ಒ’ನೀಲರು ಯೋಧರಾಗಿ ಪ್ರಾಮುಖ್ಯ ಗಳಿಸಿದ್ದರು.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಒ’ನೀಲ್&oldid=1231898" ಇಂದ ಪಡೆಯಲ್ಪಟ್ಟಿದೆ