ವಿಷಯಕ್ಕೆ ಹೋಗು

ಒಳತೋಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳತೋಟಿ: ವಿರೋಧವಾದ ಪ್ರೇರಣೆಗಳ ಅಥವಾ ಅಸಮಂಜಸವಾದ ಕ್ರಿಯೆಗಳ ಆಕರ್ಷಕ್ಕೆ ಅಥವಾ ಅಪಕರ್ಷಕ್ಕೆ ಸಿಕ್ಕಿಬಿದ್ದು ಯಾವ ಒಂದನ್ನು ಮಾಡಬೇಕು ಅಥವಾ ಬಗೆಹರಿಸಬೇಕು ಎಂದು ತೀರ್ಮಾನಿಸಲು ತೊಳಲಾಡುತ್ತಿರುವ ವ್ಯಕ್ತಿಯ ಮಾನಸಿಕ ಪರಿಸ್ಥಿತಿ (ಕಾನ್ಫ್ಲಿಕ್ಟ್‌). ಮನುಷ್ಯನಿಗೆ ಅನೇಕ ಆಸೆಗಳಿರುವುದರ ಜೊತೆಗೆ ಭೀತಿಯೂ ಇರುತ್ತದೆ. ಇವನ ಈ ಆಸೆಗಳಲ್ಲಿ ಕೆಲವು ಅಸಮಂಜಸವಾದವು. ಮತ್ತೆ ಕೆಲವುಗಳ ಮಧ್ಯೆ ಘರ್ಷಣೆ ಇರುತ್ತದೆ. ಈತ ಯಾವ ಗುರಿ ಮುಟ್ಟಲು ಇಚ್ಛಿಸುವನೋ ಅದೇ ಗುರಿಗೆ ಭಯಪಡುವ ಸಂಭವವೂ ಉಂಟು. ಉದಾಹರಣೆಗೆ ನಾಯಿಯನ್ನು ಮುಟ್ಟಲು ಇಚ್ಛಿಸುವ ಮಗು ಅದಕ್ಕೆ ಭಯಪಟ್ಟು ಹಿಂದೆ ಮುಂದೆ ಓಡಾಡುತ್ತದೆ. ಸಾಧಾರಣವಾಗಿ ಒಳತೋಟಿಯುಳ್ಳ ವ್ಯಕ್ತಿಯ ಮಾನಸಿಕಪರಿಸ್ಥಿತಿ ವ್ಯಸನ, ಅನಿಶ್ಚಯ ಮತ್ತು ಉದ್ವೇಗಗಳಿಂದ ತುಂಬಿರುತ್ತದೆ. ಒಳತೋಟಿ ಮನೋವಿಕೃತಿಯ-ತಂತ್ರಿಕಾತಾಪದ (ನ್ಯೂರಾಸಿಸ್)-ಮುಖ್ಯ ಕಾರಣವೆಂದು ಹೆಡ್ರಸನ್ ಮತ್ತು ಗೆಲೆಸ್ಪಿ ಹೇಳುತ್ತಾರೆ. ಭಗ್ನಮನೋರಥ ಮತ್ತು ಭೀತಿಗಳ ಹಾಗೆ ಒಳತೋಟಿಯೂ ಜೀವಿಗೆ ಒಂದು ಸಮಸ್ಯೆ. ಆದಕಾರಣ ಇವೆಲ್ಲವನ್ನೂ ಒಂದೇ ರೀತಿಯ ಸಮಸ್ಯೆಗಳೆಂದು ಹೇಳಬಹುದು. ಇದನ್ನು ಬಗೆಹರಿಸುವ ಮಾರ್ಗಗಳು ಸಾಮಾನ್ಯವಾಗಿ ವ್ಯಕ್ತಿಯ ಬುದ್ಧಿಶಕ್ತಿ, ಅನುಭವ ಮತ್ತು ತಲೆದೋರಿರುವ ಒಳತೋಟಿಯ ಜಟಿಲತೆಗಳನ್ನು ಅವಲಂಬಿಸುತ್ತವೆ.

ಆಕರ್ಷಣೆಗೆ (ವೇಲೆನ್ಸ್‌) ಅಥವಾ ಗುರಿಗೆ ಆಕರ್ಷಕ ಮತ್ತು ಅಪಕರ್ಷಕ ಗುಣಗಳೆರಡುಂಟು. ಒಂದು ಗುರಿ ಒಬ್ಬ ವ್ಯಕ್ತಿಗೆ ಹಿತವಾಗಿರಬಹುದು ಅಥವಾ ಅಹಿತವಾಗಿರಬಹುದು. ಕರ್ಷಣೆಯ ಈ ಎರಡು ಗುಣಗಳಿಂದ ಒಳತೋಟಿಯನ್ನು ಮೂಲತಃ ಮೂರು ಬಗೆಯಾಗಿ ವಿಂಗಡಿಸಬಹುದು; ವ್ಯಕ್ತಿ ಎರಡು ಸರಿಸಮನಾದ ಆಕರ್ಷಕ ಗುಣವುಳ್ಳ ಗುರಿಗಳ ಮಧ್ಯೆ ಸಿಕ್ಕಿಬಿದ್ದು, ಯಾವುದು ಉತ್ತಮ, ಯಾವುದು ಅಲ್ಪವೆಂದು ಚಿಂತಿಸಿ ತೀರ್ಮಾನಿಸಲು ಕಷ್ಟಪಡುತ್ತಿರುವ ಪರಿಸ್ಥಿತಿ ಒಂದು. ಇದನ್ನು ಆಕರ್ಷಕ-ಆಕರ್ಷಕ ಒಳತೋಟಿ (ಅಪ್ರೋಚ್-ಅಪ್ರೋಚ್ ಕಾನ್ಫ್ಲಿಕ್ಟ್‌) ಎಂದು ಕರೆಯಲಾಗಿದೆ . ಕಾರಣ, ಎರಡು ಗುರಿಗಳೂ ಹಿತವಾದವು. ಅವುಗಳಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ, ಎಂದು ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ತೀರ್ಮಾನಿಸಿದರೆ ಸಮಸ್ಯೆ ಪರಿಹಾರವಾದಂತೆಯೆ. ಉದಾಹರಣೆಗೆ ಭೂರಿಯನನ ಕತ್ತೆ ಎರಡು ಹುಲ್ಲುಮೆದೆಗಳ ಮಧ್ಯೆ ನಿಂತು ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ತೀರ್ಮಾನಿಸಲಾಗದೆ ಪ್ರಾಣಬಿಟ್ಟಿತು ಎಂದು ಒಂದು ಕಟ್ಟುಕಥೆ ತಿಳಿಸುತ್ತದೆ. ಇದು ಜೀವನದಲ್ಲಿ ಸಾಧ್ಯವಿಲ್ಲ. ಏಕೆಂದರೆ ಯಾವ ವ್ಯಕ್ತಿಯೂ ಅಷ್ಟು ಮೂರ್ಖನಾಗಲಾರ. ಆದರೂ ಒಂದು ತೀರ್ಮಾನಕ್ಕೆ ಬರುವ ಮೊದಲೇ ಗುರಿಗಳೆರಡೂ ಇಲ್ಲದ ಹಾಗೆ ಆಗುವ ಸಂಭವ ನಿಜಜೀವನದಲ್ಲುಂಟು. ಅಲ್ಲದೆ ಯಾವುದಾದರೂ ಒಂದು ಕಾರಣದಿಂದ ಒಂದು ಗುರಿಯ ಕಡೆ ತಿರುಗಿದರೆ, ಆ ಗುರಿ ದೊಡ್ಡದಾಗಿಯೂ ಹೆಚ್ಚು ಆಕರ್ಷಕವಾಗಿಯೂ ಕಾಣಬಹುದು. ಆಗ ಆ ಗುರಿಯನ್ನು ಸಾಧಿಸಲಾಗುವುದು. ಸಾಧಾರಣವಾಗಿ ಈ ತರಹದ ಒಳತೋಟಿಯನ್ನು ಬೇಗನೆ ಮತ್ತು ಸುಲಭವಾಗಿ ಬಗೆಹರಿಸಬಹುದು.

ಎರಡನೆಯದನ್ನು ಅಪಕರ್ಷಕ-ಅಪಕರ್ಷಕ ಒಳತೋಟಿ (ಅವಾಯ್ಡೆನ್ಸ್‌-ಅವಾಯ್ಡೆನ್ಸ್‌ ಕಾನ್ಫ್ಲಿಕ್ಟ್‌) ಎಂದು ಕರೆಯಲಾಗಿದೆ . ಇದರಲ್ಲಿ ವ್ಯಕ್ತಿ ಎರಡು ಅಹಿತಕರವಾದ ಅಥವಾ ಭಯಂಕರವಾದ ಸನ್ನಿವೇಶಗಳ ಮಧ್ಯೆ ಸಿಕ್ಕಿಕೊಂಡಿದ್ದಾನೆ. ಇವನಿಗೆ ಇರುವ ಎರಡು ಮಾರ್ಗಗಳಲ್ಲಿ ಯಾವ ಒಂದನ್ನು ಹಿಡಿದು ಹೋದರೂ ಅಪಾಯ ತಪ್ಪದು. ಬೇರೆ ಮಾರ್ಗವಿಲ್ಲದಿದ್ದರೆ, ವ್ಯಕ್ತಿ ಈ ಸಂದಿಗ್ಧ ಪರಿಸ್ಥಿತಿಯನ್ನು ಬಿಡಿಸುವ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತಾನೆ. ಒಂದನ್ನು ಎದುರಿಸಲು ಪ್ರಯತ್ನಿಸಿದರೆ, ಅದು ಅತಿ ದೊಡ್ಡದಾಗಿ ಮತ್ತು ಅತಿ ಭಯಾನಕವಾಗಿ ಕಾಣಿಸುತ್ತದೆ. ಮತ್ತೊಂದು ಕಡೆ ತಿರುಗಿದಾಗ ಅದೂ ಹಾಗೆಯೇ ಕಾಣುತ್ತದೆ. ಆದಕಾರಣ ಇಂಥ ಪರಿಸ್ಥಿತಿಗಳಿಗೆ ಒಳಪಟ್ಟ ವ್ಯಕ್ತಿ ಅತಿ ವ್ಯಸನ, ತ್ರಾಸ ಮತ್ತು ಒತ್ತಡಗಳಿಗೆ ತುತ್ತಾಗುತ್ತಾನೆ. ಇದನ್ನು ಬಗೆಹರಿಸಲು ಹೆಚ್ಚು ಕಾಲ ಸಹ ಬೇಕಾಗಿ ಮನಸ್ಸು ಡೋಲಾಯಮಾನವಾಗುತ್ತದೆ. ಅನಿಶ್ಚಯ, ಅಹಿತ ಮತ್ತು ಒತ್ತಡಗಳಿಂದ ವ್ಯಕ್ತಿತ್ವಕ್ಕೆ ಕೆಲವು ವೇಳೆ ತೊಂದರೆ ಬರಬಹುದು. ಇಂಥ ಸಂದಿಗ್ಧ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಹೋಗಲು ವ್ಯಕ್ತಿ ಕೆಲವು ವೇಳೆ ಯಾವ ಮಾರ್ಗವನ್ನಾದರೂ ಹುಡುಕಲು ಹೊರಡುತ್ತಾನೆ. ಕೆಲವು ವೇಳೆ ಇದರ ಫಲಿತಾಂಶವೇ ವಿಲೋಪನ ಮತ್ತು ಅಪರಾಧವೆಂದು ಗಮನಿಸಲಾಗಿದೆ.

ಮೂರನೆಯದನ್ನು ಆಕರ್ಷಕ-ಅಪಕರ್ಷಕ ಒಳತೋಟಿ ಎಂದು ಕರೆಯಲಾಗಿದೆ . ಇಲ್ಲಿ ಸಾಧಿಸಬೇಕಾದ ಗುರಿ ಒಂದೇ. ಆದರೆ ಅದು ಹಿತ ಮತ್ತು ಅಪಾಯಗಳೆಡರಿಂದಲೂ ಕೂಡಿದೆ. ಉದಾಹರಣೆಗೆ ಒಬ್ಬ ಯುವಕ ಒಬ್ಬ ತರುಣಿಯನ್ನು ಪ್ರೇಮಿಸಲಿಚ್ಛಿಸುತ್ತಾನೆ. ಆದರೆ ಸಮಾಜದ ಬಹಿಷ್ಕಾರ ಮತ್ತು ಆಕೆ ತನ್ನನ್ನು ನಿರಾಕರಿಸಬಹುದೆಂಬ ಭಯದಿಂದ ಆಕೆಯನ್ನು ಕೇಳಲು ಭೀತಿಪಡುತ್ತಾನೆ. ಇದು ಫ್ರಾಯ್ಡನ ಪ್ರಕಾರ ಇಡ್ (ಸಾಹಸ ಪ್ರವೃತ್ತಿ) ಮತ್ತು ಅತಿ ಅಹಂಗಳ (ಸೂಪರ್ ಈಗೊ) ಮಧ್ಯೆ ಇರುವ ಘರ್ಷಣೆ. ಇದು ಸಹ ವ್ಯಕ್ತಿಯ ಮನಸ್ಸಿನ ಮೇಲೆ ತ್ರಾಸವನ್ನುಂಟುಮಾಡುತ್ತದೆ. ಹಿಂದೆ ಹೇಳಿದ ಸಂದಿಗ್ಧ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಇಂಥ ಒಳತೋಟಿಯಿಂದ ಪಾರಾಗುವುದು ಅತಿ ಕಷ್ಟ. ವ್ಯಕ್ತಿ ಎಲ್ಲಿಗೆ ಹೋದರೂ ಅಲ್ಲಿಗೆ ಅದನ್ನು ಜೊತೆಯಲ್ಲಿಯೆ ಕೊಂಡು ಹೋಗುತ್ತಾನೆ. ಇದರಿಂದ ತಪ್ಪಿಸಿಕೊಂಡು ಓಡಿಹೋಗಲು ಸಾಧ್ಯವಿಲ್ಲ. ಸಮಸ್ಯೆ ಪರಿಹರಿಸಲೇಬೆಕು. ಇಲ್ಲವಾದರೆ, ವ್ಯಕ್ತಿತ್ವದ ಶಾಂತಿಗೆ ಇದು ಒಂದು ದೊಡ್ಡ ಹೊರೆಯಾಗುತ್ತದೆ. ಆಕರ್ಷಕ-ಆಕರ್ಷಕ ಒಳತೋಟಿ ಕೆಲವು ವೇಳೆ ದ್ವಿ ಆಕರ್ಷಕ-ಅಪಕರ್ಷಕ ಒಳತೋಟಿ (ಡಬಲ್ ಅಪ್ರೋಚ್-ಆವಾಯ್ಡೆನ್ಸ್‌ ಕಾನ್ಫ್ಲಿಕ್ಟ್‌) ಆಗುವ ಸಂಭವವುಂಟು. ಈ ಆಕರ್ಷಕ ಗುರಿಗಳನ್ನು ಸಾಧಿಸಲಾಗದಿರುವುದು ಅಪಾಯಕರವೆಂದು ಭಾವಿಸಿದಾಗ ಹೀಗಾಗುತ್ತದೆ. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ತರಗತಿ ಮತ್ತು ಆಟಗಳೆರಡರಲ್ಲಿಯೂ ಉನ್ನತ ಪದವಿ ಪಡೆಯಲು ಇಚ್ಛಿಸಿದಾಗ, ಒಂದನ್ನು ಗಳಿಸಲು ಮಾಡಿದ ಕಾಲವಿನಿಯೋಗದಿಂದ ಮತ್ತೊಂದನ್ನು ಗಳಿಸಲು ಅಡ್ಡಿಯಾಗುತ್ತದೆ. ಆಗ ಆತ ಎರಡರಲ್ಲಿ ಯಾವುದನ್ನೂ ಬಿಡಲು ಇಚ್ಛಿಸುವುದಿಲ್ಲ. ಹಾಗೆ ಬಿಡುವುದು ಅಪಾಯಕರವೆಂದು ಭಾವಿಸುತ್ತಾನೆ.

ಈ ಎಲ್ಲ ವಿಧದ ಒಳತೋಟಿಗಳಲ್ಲಿ ಒಂದು ಸಾಮಾನ್ಯ ಗುಣವನ್ನು ಕಾಣಬಹುದು. ಅದು ಭಾವತೀವ್ರತೆ, ಉದ್ವೇಗ, ಈ ಭಾವತೀವ್ರತೆ ಅಥವಾ ಉದ್ವೇಗವನ್ನು ಕಡಿಮೆ ಮಾಡುವುದು ವ್ಯಕ್ತಿಗೆ ಅವಶ್ಯಕ. ಇಂಥ ಸಂದರ್ಭಗಳಲ್ಲಿ ಪ್ರತ್ಯಕ್ಷಾನುಭವ (ಪರ್ಸೆಪ್ಷನ್), ಸಾಹಚರ್ಯ (ಅಸೋಸಿಯೇಷನ್), ಸ್ಮೃತಿ (ರಿಮೆಂಬರಿಂಗ್), ಸಮಸ್ಯಾಪರಿಹಾರ (ಪ್ರಾಬ್ಲೆಮ್ ಸಾಲ್ವಿಂಗ್), ಯೋಚನೆ (ಥಿಂಕಿಂಗ್) ಇವು ಸಹಾಯಕವಾಗುತ್ತವೆ. ಒಳತೋಟಿ ಭಗ್ನಮನೋರಥಕ್ಕೆ ಮಾರ್ಗವಾದಾಗ ಅನಂತರದ ಪರಿಹಾರದ ವಿಧಾನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಒಂದನೆಯದು ಪ್ರಚೋದನೆಯನ್ನು ಮಾರ್ಪಾಡು ಮಾಡುವ ವಿಸ್ಥಾಪನೆ ಅಥವಾ ಸ್ಥಾನಪಲ್ಲಟ (ಡಿಸ್ಪ್ಲೇಸ್ಮೆಂಟ್), ದಮನ (ರಿಪ್ರೆಷನ್), ಪ್ರತ್ಯಕ್ಷಾನುಭವ ಜಾಗರೂಕತೆ ಮತ್ತು ಪ್ರತ್ಯಕ್ಷಾನುಭವದ ರಕ್ಷಣೆ (ಪರ್ಸೆಪ್ಚುಯಲ್ ವಿಜಿಲೆನ್ಸ್‌) ಮತ್ತು ವಿವೇಚನಾ ಪರತೆ (ರ್ಯಾಷನಲೈಸೇಷನ್)ಅಂತಃಕ್ಷೇಪಣೆ (ಇನ್ಪ್ರೊಜೆಕ್ಷನ್) ಮತ್ತು ಪ್ರಕ್ಷೇಪಣೆಗಳನ್ನು (ಪ್ರೊಜೆಕ್ಷನ್) ಒಳಗೊಂಡಿದೆ. ಎರಡನೆಯದು ಪ್ರತಿಕ್ರಿಯೆಯನ್ನು ಮಾರ್ಪಾಡು ಮಾಡುವ ಪರಿಹಾರ (ಕಾಂಪೆನ್ಸೇಷನ್) ಅತಿ ಪರಿಹಾರ (ಓವರ್-ಕಾಂಪೆನ್ಸೇಷನ್) ಉದಾತ್ತೀಕರಣ (ಸಬ್ಲಿಮೇಷನ್) ಪ್ರತಿಕ್ರಿಯಾರೂಪಣ (ರಿಯಾಕ್ಷನ್ ಫಾರ್ಮೇಷನ್) ಪ್ರತಿಗಮನ (ರಿಗ್ರೆಷನ್) ಮತ್ತು ಇಚ್ಛಾಕಲ್ಪಿತ ಯೋಚನೆಗಳನ್ನು (ಆಸ್ಟಿಸ್ಟಿಕ್ ಥಿಂಕಿಂಗ್) ಒಳಗೊಂಡಿದೆ. ಇವೆಲ್ಲವೂ ಭಗ್ನಮನೋರಥವನ್ನು ಸ್ವಲ್ಪಮಟ್ಟಿಗೆ ಹಗುರಮಾಡುತ್ತವೆ. ಇದರಿಂದ ಸಮಸ್ಯೆ ಪುರ್ಣವಾಗಿ ಬಗೆಹರಿಯಲಾರದು. ಭಗ್ನಮನೋರಥದಿಂದ ತಂತ್ರಿಕಾತಾಪ ಪ್ರಾರಂಭವಾಗಬಹುದು. ಈ ರೋಗದ ಲಕ್ಷಣವೂ (ಸಿಮ್ಟಂ) ಭಗ್ನ ಮನೋರಥದ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಕೊನೆಯದಾಗಿ, ಇಂಥ ವಿಷಮಸ್ಥಿತಿಗಳನ್ನು ಚಿಕಿತ್ಸೆ ಮಾಡುವ ಕಾಲದಲ್ಲಿ ಮನೋವಿಜ್ಞಾನಿ ಒಳತೋಟಿಯನ್ನು ಪಾರು ಮಾಡುವ ಅಥವಾ ಹೆಚ್ಚು ಮಾಡುವ ಈ ಕೆಳಗಿನ 4 ನಿಯಮಗಳನ್ನು ತಿಳಿದಿರಬೇಕು:

  1. ಗುರಿ ಹತ್ತಿರವಿದ್ದಷ್ಟೂ ಅದನ್ನು ತಲುಪುವ ಅಕಾಂಕ್ಷೆ ಹೆಚ್ಚು, ಇದನ್ನು ಆಕರ್ಷಕ ಪ್ರವಣತೆ (ಅಪ್ರೋಚ್ ಗ್ರೇಡಿಯೆಂಟ್) ಎಂದು ಕರೆಯುತ್ತಾರೆ.
  2. ಭೀತಿಯ ಸ್ಥಳ ಹತ್ತಿರವಿದ್ದಷ್ಟೂ ಅದರಿಂದ ತಪ್ಪಿಸಿಕೊಳ್ಳುವ ಆಕಾಂಕ್ಷೆ ಹೆಚ್ಚು. ಇದನ್ನು ಅಪಕರ್ಷಕ ಪ್ರವಣತೆ (ಅವಾಯ್ಡೆನ್ಸ್‌ ಗ್ರೇಡಿಯೆಂಟ್) ಎಂದು ಕರೆಯುತ್ತಾರೆ.
  3. ಆಕರ್ಷಣ ಪ್ರವಣತೆಗಿಂತ ಅಪಕರ್ಷಣ ಪ್ರವಣತೆ ಜಾಸ್ತಿಯಾಗಿರುತ್ತದೆ.
  4. ಆಕರ್ಷಕದ ಅಥವಾ ಅಪಕರ್ಷಕದ ಶಕ್ತಿ, ಅದಕ್ಕೆ ಆಧಾರವಾಗಿರುವ ಪ್ರೇರಣೆಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಅಂದರೆ, ಪ್ರೇರಣೆಗಳ ಶಕ್ತಿ ಪ್ರಬಲವಾಗಿದ್ದಂತೆ ಆಕರ್ಷಕ-ಅಪಕರ್ಷಕ ಶಕ್ತಿಯೂ ಪ್ರಬಲವಾಗಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಒಳತೋಟಿ&oldid=1232432" ಇಂದ ಪಡೆಯಲ್ಪಟ್ಟಿದೆ