ಒರಿಸ್ಸಾದ ಶಾಸನಗಳು ಮತ್ತು ನಾಣ್ಯಗಳು
ಒರಿಸ್ಸದ ಶಾಸನಗಳು ಮತ್ತು ನಾಣ್ಯಗಳು: ಒರಿಸ್ಸದ ಪ್ರಾಚೀನ ಹಾಗೂ ಮಧ್ಯಕಾಲೀನ ಚರಿತ್ರೆಯನ್ನು ತಿಳಿಯಲು ಅಲ್ಲಿನ ನಾಣ್ಯಗಳಿಗಿಂತ ಶಿಲಾ ಮತ್ತು ತಾಮ್ರಶಾಸನಗಳು ಹೆಚ್ಚಿನ ಮಾಹಿತಿಯನ್ನೊದಗಿಸುತ್ತವೆ. ಒರಿಸ್ಸದ ಅತ್ಯಂತ ಪ್ರಾಚೀನ ಶಾಸನಗಳೆಂದರೆ ಮೌರ್ಯರಾಜನಾದ ಅಶೋಕನ ಕಾಲದವು. ಭುವನೇಶ್ವರದ ಸಮೀಪದಲ್ಲಿರುವ ಧೌಲಿ ಎಂಬಲ್ಲಿಯೂ ಮತ್ತು ಗಂಜಾಂ ಜಿಲ್ಲೆಯ ಜೌಗಡ ಎಂಬಲ್ಲಿಯೂ ಇವು ದೊರೆತಿವೆ. ಇವುಗಳಿಂದ ಈ ಭಾಗ ಮೌರ್ಯಚಕ್ರಾಧಿಪತ್ಯಕ್ಕೆ ಸೇರಿದ್ದಿತೆಂದೂ ಧೌಲಿ ಮತ್ತು ಜೌಗಡಗಳಿಂದ ಇದನ್ನು ಇಬ್ಬರು ಪ್ರಾಂತಾಧಿಕಾರಿಗಳು ಆಳುತ್ತಿದ್ದರೆಂದೂ ಗೊತ್ತಾಗುತ್ತದೆ. ಚೇದಿವಂಶದ ರಾಜನಾದ ಖಾರವೇಲನ ಹಾಥಿ ಗುಂಫ ಶಾಸನವೇ (ಪ್ರ.ಶ.ಪು. 2ನೆಯ ಶತಮಾನ) ಒರಿಸ್ಸದ ಶಾಸನಗಳಲ್ಲಿ ಮುಂದಿನದು. ಈ ಶಾಸನ ಪುರಿ ಜಿಲ್ಲೆಯ ಉದಯಗಿರಿಗೆ ಸಮೀಪದಲ್ಲಿರುವ ಗುಹೆಯೊಂದರಲ್ಲಿ ದೊರೆಯಿತು. ಖಾರವೇಲನ ದಿಗ್ವಿಜಯಗಳನ್ನು ಇದು ಕಾಲಕ್ರಮವಾಗಿ ವರ್ಣಿಸುತ್ತದೆ. ಒರಿಸ್ಸ ದೇಶದ ಅಂದಿನ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯಲು ಈ ಶಾಸನ ಬಹು ಉಪಯುಕ್ತವಾಗಿದೆ.
ಶಿಲಾಶಾಸನಗಳು ಒರಿಸ್ಸದ ಪ್ರಾಚೀನ ಚರಿತ್ರೆಯನ್ನು ತಿಳಿಯಲು ಸಹಾಯಕವಾದರೆ, ತಾಮ್ರಶಾಸನಗಳು ಪ್ರ.ಶ. 4ನೆಯ ಶತಮಾನದಿಂದ ಈಚಿನ ಚರಿತ್ರೆಯನ್ನು ತಿಳಿಯಲು ಉಪಯುಕ್ತವಾಗಿವೆ. ಆಂಧ್ರದ ಶ್ರೀಕಾಕುಳಂ ಮತ್ತು ಗಂಜಾಂ ಜಿಲ್ಲೆಗಳಲ್ಲಿ ದೊರೆತಿರುವ ಶಿಲಾಶಾಸನಗಳು ದಕ್ಷಿಣ ಒರಿಸ್ಸದಲ್ಲಿ ಆಳಿದ ಮಥರರು, ವಸಿಷ್ಠರು ಮುಂತಾದ ರಾಜವಂಶಗಳ ಚರಿತ್ರೆಯನ್ನು ತಿಳಿಸುತ್ತವೆ. ಪುರಿ, ಕಟಕ್ ಮತ್ತು ಗಂಜಾಂ ಜಿಲ್ಲೆಗಳಲ್ಲಿ ದೊರಕಿರುವ ಶಿಲಾಶಾಸನಗಳು ಪ್ರ.ಶ. 5-7ರವರೆಗೆ ಒರಿಸ್ಸದಲ್ಲಿ ಆಳಿದ ಶೈಲೋದ್ಭವ ರಾಜರ ಕಾಲದಲ್ಲಿದ್ದ ರಾಜಕೀಯ ಮತ್ತು ಸಾಂಸ್ಕೃತಿಕ ಸ್ಥಿತಿಗಳನ್ನು ವಿವರಿಸುತ್ತವೆ.
7ನೆಯ ಶತಮಾನದ ಅನಂತರದ ಚರಿತ್ರೆಯನ್ನು ತಿಳಿಸುವ ತಾಮ್ರ ಶಾಸನಗಳು ಒರಿಸ್ಸದ ಎಲ್ಲೆಡೆಯಲ್ಲಿಯೂ ಬಹುಸಂಖ್ಯೆಯಲ್ಲಿ ದೊರೆತಿವೆ. ಒರಿಸ್ಸದಲ್ಲಿ ಬ್ರಿಟಿಷರು ಆಳ್ವಿಕೆಯನ್ನು ಸ್ಥಾಪನೆ ಮಾಡುವವರೆಗೂ ಆಗಿಹೋದ ರಾಜವಂಶಗಳ ಚರಿತ್ರೆಯನ್ನು ಈ ಶಾಸನಗಳಿಂದ ತಿಳಿಯಬಹುದು. ಈ ಶಾಸನಗಳಲ್ಲಿ ಬಹುಪಾಲು ಭುವನೇಶ್ವರ, ಪುರಿ, ಮುಖಲಿಂಗಂ, ಶ್ರೀಕೂರ್ಮಂ ಮತ್ತು ಸಿಂಹಾಚಲಂ ದೇವಾಲಯಗಳಲ್ಲಿ ದೊರೆತಿವೆ. ಇವು ಪ್ರಮುಖ ರಾಜಮನೆತನಗಳಾದ ಗಂಗರು, ಗಜಪತಿಗಳು ಮುಂತಾದವರ ಚರಿತ್ರೆಯನ್ನು ತಿಳಿಸುವುದಲ್ಲದೆ, ಇತರ ರಾಜಮನೆತನಗಳಾದ ಭೌಮಕರರು, ಭಾಂಜರು ಮತ್ತು ಕೇಸರಿಗಳ ಸಾಧನೆಗಳನ್ನೂ ತಿಳಿಸುತ್ತವೆ.
ಒರಿಸ್ಸದಲ್ಲಿ ದೊರೆತಿರುವ ಪ್ರಾಚೀನತಮ ನಾಣ್ಯ ಕುಶಾನ ರಾಜವಂಶಕ್ಕೆ ಸೇರಿದುದು. ಪುರಿ ಮತ್ತು ಗಂಜಾಂ ಜಿಲ್ಲೆಗಳಲ್ಲಿ ಕಾನಿಷ್ಕ ಮತ್ತು ಹುವಿಷ್ಕರ ತಾಮ್ರದ ನಾಣ್ಯಗಳು ದೊರೆತಿವೆ. ಭುವನೇಶ್ವರಕ್ಕೆ ಸಮೀಪದಲ್ಲಿರುವ ಶಿಶುಪಾಲಘರ್ ಎಂಬಲ್ಲಿ ಆದ ಅಗೆತದಲ್ಲಿ ಒಂದು ಕಡೆ ಕುಶಾನ ಚಿಹ್ನೆಯೂ ಮತ್ತೊಂದು ಕಡೆ ರೋಮನ್ನರದೆಂದು ಹೇಳಬಹುದಾದ ಚಿಹ್ನೆಯೂ ಉಳ್ಳ ಚಿನ್ನದ ನಾಣ್ಯವೊಂದು ಸಿಕ್ಕಿದೆ. ಈ ನಾಣ್ಯ ಕುಶಾನ ರಾಜವಂಶದ ವಾಸುದೇವನ ನಾಣ್ಯವೆಂದು ಆಲ್ತೇಕರರು ನಿರ್ಧರಿಸಿದ್ದಾರೆ. ಈ ಕುಶಾನರ ನಾಣ್ಯಗಳಿಂದ ಒರಿಸ್ಸ ಪ್ರಸಕ್ತಶಕೆಯ ಮೊದಲ ಶತಮಾನಗಳಲ್ಲಿ ಕುಶಾನರ ಆಳ್ವಿಕೆಗೆ ಒಳಪಟ್ಟಿದ್ದಿತೆಂದು ಗೊತ್ತಾಗುತ್ತದೆ.
ಮಯೂರ್ ಭಂಜ್ನಲ್ಲಿ ದೊರೆತಿರುವ ಚಿನ್ನದ ನಾಣ್ಯಗಳು ಗುಪ್ತರಾಜವಂಶಕ್ಕೆ ಸೇರಿದವು. ಇವುಗಳಿಂದ ಒರಿಸ್ಸದಲ್ಲಿ ಗುಪ್ತರ ಪ್ರಭಾವವಿದ್ದುದು ಗೊತ್ತಾಗುತ್ತದೆ. ಟಂಕೆಗಳೆಂದು ಕರೆಯಲಾಗುವ ನಾಣ್ಯಗಳು ಒರಿಸ್ಸದ ಅನೇಕ ಕಡೆಗಳಲ್ಲಿ ದೊರೆತಿವೆ. ಇವನ್ನು ವಿದ್ವಾಂಸರು ಪುರಿ-ಕುಶಾನ ನಾಣ್ಯವೆಂದು ಕರೆಯುತ್ತಾರೆ. ಏಕೆಂದರೆ ಇವಕ್ಕೂ ಕುಶಾನರ ನಾಣ್ಯಗಳಿಗೂ ಬಹು ಹೋಲಿಕೆಗಳಿವೆ. ಈ ನಾಣ್ಯಗಳು ಒರಿಸ್ಸದಲ್ಲಿ ಪ್ರ.ಶ. 4-7ನೆಯ ಶತಮಾನದವರೆಗೆ ಆಳಿದ ಸ್ಥಳೀಯ ರಾಜರುಗಳ ನಾಣ್ಯಗಳೆಂದು ಹೇಳಬಹುದು.
ಗಂಗರ ಚಿನ್ನದ ನಾಣ್ಯಗಳನ್ನು ಫನಂ ಎಂದು ಕರೆಯುತ್ತಾರೆ. ಇವುಗಳ ಮೇಲೆ ಗಂಗರ ರಾಜಚಿಹ್ನೆಯಾದ ವೃಷಭದ ಚಿತ್ರವಿದೆ. ಗಂಗರಾಜರ ಕಾಲದಲ್ಲಿ ಒರಿಸ್ಸದ ಆರ್ಥಿಕ ಸ್ಥಿತಿ ಎಷ್ಟೊಂದು ಚೆನ್ನಾಗಿದ್ದಿತೆಂದು ಈ ಚಿನ್ನದ ನಾಣ್ಯಗಳಿಂದ ತಿಳಿಯುತ್ತದೆ. ಇವಲ್ಲದೆ ದೆಹಲಿಯ ಸುಲ್ತಾನರ ಅನೇಕ ನಾಣ್ಯಗಳೂ ಮತ್ತು ಮೊಗಲರ ಅನೇಕ ನಾಣ್ಯಗಳೂ ಒರಿಸ್ಸದ ವಿವಿಧ ಭಾಗಗಳಲ್ಲಿ ದೊರೆತಿವೆ.