ಒರಿಸ್ಸಾದ ವಾಸ್ತುಶಿಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒರಿಸ್ಸದ ವಾಸ್ತುಶಿಲ್ಪ: ಅತ್ಯಂತ ಪ್ರಾಚೀನ (750-900) ದೇವಾಲಯಗಳಾದ ಪರಶುರಾಮೇಶ್ವರ ಮತ್ತು ವೈತಾಲ್ ದೇವಾಲಯಗಳು ಒರಿಸ್ಸ ಶೈಲಿಯ ಉಗಮವನ್ನು ತಿಳಿಯಲು ಬಹು ಸಹಾಯಕವಾಗಿವೆ. ಪರಶುರಾಮೇಶ್ವರ ದೇವಾಲಯ 48 ಅಡಿ ಉದ್ದವಾಗಿದ್ದು, 44 ಅಡಿ ಎತ್ತರದ ಶಿಖರವನ್ನು ಹೊಂದಿದೆ. ಶಿಖರ ನಾಜೂಕಾಗಿಲ್ಲ. ಕೆಲವು ವಿಷಯಗಳಲ್ಲಿ ಇದು ಐಹೊಳೆಯ ದೇವಾಲಯಗಳನ್ನು ಹೋಲಿದರೆ, ಮತ್ತೆ ಕೆಲವು ಅಂಶಗಳಲ್ಲಿ ಗುಪ್ತರ ಶೈಲಿಯ ಪ್ರಭಾವವನ್ನು ವ್ಯಕ್ತಪಡಿಸುತ್ತದೆ. ವೈತಾಲ್ ದೇವಾಲಯ ಸಣ್ಣದಾಗಿದ್ದರೂ ಪರಶುರಾಮೇಶ್ವರ ದೇವಾಲಯಕ್ಕಿಂತ ಅಂದವಾಗಿದ್ದು ಉತ್ತರ ಮತ್ತು ದಕ್ಷಿಣ ವಾಸ್ತುಶೈಲಿಗಳ ಸಮ್ಮಿಳನದಂತಿದೆ. ಭುವನೇಶ್ವರ ನಗರದ ಹೊರಗಿರುವ ಮುಕ್ತೇಶ್ವರ (975). ಭುವನೇಶ್ವರದ ಲಿಂಗರಾಜ (1000) ಮತ್ತು ಪುರಿಯ ಜಗನ್ನಾಥ (1100) ದೇವಾಲಯಗಳು ಒರಿಸ್ಸ ವಾಸ್ತುಶಿಲ್ಪದ ಎರಡನೆಯ ಹಂತಕ್ಕೆ ಉತ್ತಮ ಉದಾಹರಣೆಗಳು. ಮುಕ್ತೇಶ್ವರ ದೇವಾಲಯದಲ್ಲಿ ಒಳಗಿನ ಗೋಡೆಗಳು ಶಿಲ್ಪಗಳಿಂದ ಅಲಂಕೃತವಾಗಿರುವುದನ್ನು ಗಮನಿಸಬೇಕು. 159 ಮೀ ಉದ್ದ ಮತ್ತು 142 ಮೀ ಅಗಲ ಪ್ರದೇಶದಲ್ಲಿರುವ ಲಿಂಗರಾಜ ದೇವಾಲಯ ಎತ್ತರವಾದ ಗೋಡೆಯಿಂದ ಆವೃತವಾಗಿದೆ. ಇದರಲ್ಲಿ ಮೂಲ ದೇವಾಲಯದ ಮಾದರಿಯಲ್ಲಿಯೇ ಇರುವ ಸಣ್ಣ ದೇವಾಲಯಗಳು ಅನೇಕವಿದೆ. ಲಿಂಗರಾಜ ದೇವಾಲಯದ ನಾಟ್ಯಮಂದಿರ ಮತ್ತು ಭೋಗಮಂದಿರಗಳು ಮುಂದೆ ದೇವಾಲಯಕ್ಕೆ ಸೇರಿಸಲ್ಪಟ್ಟವು. ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ದೇವಾಲಯದ ಮೇಲಿರುವ 125 ಅಡಿ ಎತ್ತರದ ಶಿಖರ. ಒಳಬಾಗುಳ್ಳ ಅಲಂಕೃತವಾದ ಈ ಶಿಖರ ಅತ್ಯಂತ ಮನಮೋಹಕವಾಗಿದೆ. ದೇವಾಲಯದ ಹೊರ ಮತ್ತು ಒಳಗೋಡೆಗಳು ಸುಂದರ ಶಿಲ್ಪಗಳಿಂದ ತುಂಬಿವೆ. 1100ರಲ್ಲಿ ಅನಂತವರ್ಮ ಚೋಡಗಂಗ ರಾಜ ಪುರಿಯ ಜಗನ್ನಾಥ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ. ಇದು ಎಲ್ಲ ವಿಧಗಳಲ್ಲಿಯೂ ಲಿಂಗರಾಜ ದೇವಾಲಯವನ್ನೇ ಹೋಲುತ್ತದೆ. 310 ಅಡಿ ಉದ್ದ, 80 ಅಡಿ ಅಗಲವಿರುವ ಜಗನ್ನಾಥ ದೇವಾಲಯದ ಶಿಖರ 200 ಅಡಿ ಎತ್ತರವಿದೆ. ಇದು ಸಣ್ಣ ದಿಣ್ಣೆಯ ಮೇಲೆ ನಿರ್ಮಿತವಾಗಿರುವುದರಿಂದ, ಎತ್ತರದ ಈ ಶಿಖರ ಐದಾರು ಮೈಲಿಗಳ ದೂರದಿಂದಲೂ ಬೃಹದಾಕಾರವಾಗಿ ಎದ್ದು ಕಾಣುತ್ತದೆ. ಸಮುದ್ರದ ಗಾಳಿಯ ಹೊಡೆತಕ್ಕೆ ಸಿಕ್ಕಿರುವ ಈ ದೇವಾಲಯ ಲಿಂಗರಾಜ ದೇವಾಲಯದಷ್ಟು ಸುಂದರವಾಗಿ ಕಾಣುವುದಿಲ್ಲ. ಇಲ್ಲಿಯ ನಾಟ್ಯಮಂದಿರ 25 ಮೀ ಪಾಶರ್ವ್‌ದ ಚೌಕಾಕಾರದಲ್ಲಿದ್ದು, ಇದರ ಚಾವಣಿ ಹದಿನಾರು ಕಂಬಗಳ ಮೇಲೆ ನಿಂತಿದೆ. ಒರಿಸ್ಸದಲ್ಲಿರುವ ಕೆಲವೇ ಸ್ತಂಭಮಂಟಪಗಳಲ್ಲಿ ಇದು ಮುಖ್ಯ ವಾದುದು. ಜಗನ್ನಾಥ ದೇವಾಲಯದ ಸುತ್ತಲೂ ಅನೇಕ ಸಣ್ಣ ದೇವಾಲಯ ಗಳಿವೆ. ಇವೆಲ್ಲವೂ ಸಮಾನ ಕೇಂದ್ರಗಳಾದ ಮೂರು ಗೋಡೆ ಗಳೊಳಗೆ ಇವೆ. ಈ ಗೋಡೆಗಳ ಮಧ್ಯದಲ್ಲಿ ಗೋಪುರಗಳಿವೆ.

ಒರಿಸ್ಸ ಶೈಲಿಯ ಮೂರನೆಯ ಹಂತ 1100-1250ರ ಅವಧಿಯಲ್ಲಿ ಬೆಳೆಯಿತು. ಈ ಹಂತದ ದೇವಾಲಯಗಳು ಸಾಮಾನ್ಯವಾಗಿ ಗಾತ್ರದಲ್ಲಿ ಮಧ್ಯಮವರ್ಗಕ್ಕೆ ಸೇರಿದವು. ಅಂದರೆ ಮುಕ್ತೇಶ್ವರದಷ್ಟು ಸಣ್ಣವೂ ಅಲ್ಲ. ಲಿಂಗರಾಜದಷ್ಟು ದೊಡ್ಡವೂ ಅಲ್ಲ, ಭುವನೇಶ್ವರದಲ್ಲಿಯೇ ಈ ರೀತಿಯ ಸು. ಹನ್ನೆರಡು ದೇವಾಲಯಗಳಿವೆ. ಸಾಮಾನ್ಯವಾಗಿ ಅವುಗಳಲ್ಲಿ ಬಹು ಮುಖ್ಯವಾದ ದೇವುಲ್ ಮತ್ತು ಜಗಮೋಹನ್ ಎಂಬ ಭಾಗಗಳು ಮಾತ್ರ ಇರುತ್ತವೆ. ನಾಟ್ಯಮಂದಿರಗಳು ಸಾಮಾನ್ಯವಾಗಿ ಇರುವುದಿಲ್ಲ. ಭುವನೇಶ್ವರದ ಅನಂತವಾಸುದೇವ ದೇವಾಲಯ 125 ಅಡಿ ಉದ್ದ 40 ಅಡಿ ಅಗಲವಿದ್ದು ಅದರ ಶಿಖರ 68 ಅಡಿ ಇದೆ. ಇದೇ ಹಂತದ ಮತ್ತೊಂದು ದೇವಾಲಯ, ಭುವನೇಶ್ವರದ ರಾಜರಾಣಿ ದೇವಾಲಯ. ಇದರಲ್ಲಿ ದೇವುಲ್ ಮಾತ್ರ ಪುರ್ಣವಾಗಿದ್ದು, ಜಗಮೋಹನ್ ಪುರ್ಣವಾಗಿ ನಿರ್ಮಾಣವಾಗಿಲ್ಲ. ಈ ಹಂತದ ಅತ್ಯಂತ ಮುಖ್ಯ ಉದಾಹರಣೆ ಕೋಣಾರ್ಕದ ಸೂರ್ಯ ದೇವಾಲಯ. ಸಮುದ್ರ ತೀರದಲ್ಲಿದ್ದು ಪುರಿಯಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಈ ದೇವಾಲಯ ನರಸಿಂಹದೇವನಿಂದ (1238-63) ನಿರ್ಮಾಣ ಮಾಡಲ್ಪಟ್ಟಿತು. ಇದರ ಬಹುಭಾಗ ಈಗ ಹಾಳುಬಿದ್ದಿದೆ. ಇದು ಪುರ್ಣವಾಗಿ ನಿರ್ಮಾಣ ವಾಗುವುದಕ್ಕೆ ಮೊದಲೇ ಇದರ ಅಸ್ತಿಭಾರ ಬಿರುಕುಬಿಟ್ಟಿತೆಂದೂ ಅದರಿಂದ ಇದರ ಮೇಲ್ಭಾ ಗಗಳು ನಿರ್ಮಾಣವಾಗ ಲಿಲ್ಲವೆಂದೂ ಕೆಲವರ ಅಭಿಪ್ರಾಯ, ದೇವಾಲಯ ಏಳು ಕುದುರೆಗಳನ್ನು ಹೂಡಿದ ರಥದಂತೆ ನಿರ್ಮಾಣವಾಗಿದೆ. ಎತ್ತರದ ಜಗಲಿಯ ಎರಡು ಕಡೆಗಳಲ್ಲಿಯೂ 10 ಅಡಿ ಎತ್ತರದ ಹನ್ನೆರಡು ಚಕ್ರಗಳಿವೆ. ನಾಟ್ಯಮಂದಿರ ಮತ್ತು ಜಗಮೋಹನಗಳೆರಡೂ ಇವೆ. ಅಕ್ಕಪಕ್ಕದಲ್ಲಿ ಸಣ್ಣಸಣ್ಣ ಇತರ ದೇವಾಲಯಗಳಿವೆ. ಇವೆಲ್ಲವೂ 875 ಅಡಿ ಉದ್ದ ಮತ್ತು 540 ಅಡಿ ಅಗಲದ ಅಂಗಳದಲ್ಲಿ ನಿರ್ಮಿತವಾಗಿವೆ. ಅಲ್ಲಲ್ಲಿ ಶಿಲ್ಪಗಳೂ ಶಿಲ್ಪಫಲಕಗಳೂ ಬಿದ್ದಿವೆ. ಇವೆಲ್ಲವನ್ನೂ ದೇವಾಲಯ ಪುರ್ಣವಾದ ಮೇಲೆ ಉಪಯೋಗಿಸಲು ಮಾಡಿರಬೇಕೆಂದು ಕೆಲವರ ಅಭಿಪ್ರಾಯ. ‘ಇದು ಅಸಾಧಾರಣ ಪ್ರತಿಭೆಯ ಕುರುಹು, ಈ ಘನ ಕಾರ್ಯ ಕಾರ್ಯಗತವಾಗದೇ ಇದ್ದುದರಿಂದ ಇದೊಂದು ದೊಡ್ಡ ಅಪಜಯ’ ಎಂದು ಘನವಿದ್ವಾಂಸ ಪರ್ಸಿ ಬ್ರೌನ್ ಹೇಳಿದ್ದಾನಲ್ಲದೆ ಇದು ಭಾರತೀಯ ಶಿಲ್ಪಿಯ ಅತ್ಯಂತ ಸಾಹಸಮಯ ಕೆಲಸವೆಂದು ಹೊಗಳಿದ್ದಾನೆ. ಮತ್ತೆ ಒರಿಸ್ಸದ ವಾಸ್ತುಶಿಲ್ಪ ಈ ಸ್ಥಿತಿಯನ್ನು ಮುಟ್ಟಲೇ ಇಲ್ಲ.

ಇದನ್ನೂ ನೋಡಿ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: