ಒರಟು ಜಮಖಾನೆ
ಒರಟು ಜಮಖಾನೆ: ಹತ್ತಿ, ರೇಷ್ಮೆ, ನಾರು, ಸೆಣಬು ಇವುಗಳಲ್ಲಿ ಯಾವುದಾದರೊಂದನ್ನು ಉಣ್ಣೆಯೊಡನೆ ಮಿಶ್ರಿಸಿ ತಯಾರಿಸಿರುವ ಒರಟು ಉಣ್ಣೆಯ ಬಟ್ಟೆ (ಡ್ರಗೆಟ್). ಫೆಲ್ಟ್ ಜಮಖಾನೆಗೆ ಬದಲಾಗಿ ಇದನ್ನು ಉಪಯೋಗಿಸುತ್ತಾರೆ. ಹಾಸುಗಂಬಳಿ ಎಂದೂ ಕರೆಯುವುದಿದೆ. ಉಣ್ಣೆಯನ್ನು ಹದ ಮಾಡಿದಾಗ ಉಳಿಯುವ ಅನುಪಯುಕ್ತ ಅಂಶವನ್ನು ಹಾಸುಗಂಬಳಿಯಾಗಿ ತಯಾರಿಸುವ ಕೈಗಾರಿಕೆ ಈಗ 90 ವರ್ಷಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಪ್ರಚಾರಕ್ಕೆ ಬಂದಿತು. ಬಡವರ ರತ್ನಗಂಬಳಿ ಅಥವಾ ಜಮಖಾನೆ ಎಂದು ಈ ಬಟ್ಟೆ ವಿದೇಶೀ ಮಾರುಕಟ್ಟೆಗಳಲ್ಲಿ ವಿಖ್ಯಾತವಾಯಿತು. ಅಲ್ಲಿ ಇವುಗಳಿಗೆ ಇಂಡಿಯ ಡ್ರಗೆಟ್ ಎಂದೇ ಹೆಸರು.
ಒರಟು ಜಮಖಾನೆಯನ್ನು ಒರಟಾದ ಉಣ್ಣೆಯಿಂದ ತಯಾರಿಸುತ್ತಾರೆ. ನೇಯ್ಗೆಯಲ್ಲಿ ಹತ್ತಿಯ ಹಾಸನ್ನೂ ಉಣ್ಣೆಯ ಹೊಕ್ಕನ್ನೂ ಉಪಯೋಗಿಸಿ ವೈವಿಧ್ಯ ಪುರ್ಣವಾಗಿ ನೇಯುತ್ತಾರೆ. ಬಣ್ಣದ ದೃಷ್ಟಿಯಿಂದ ಇವನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಅತ್ಯುತ್ತಮ ತರಗತಿಯವುಗಳ ಬಣ್ಣ ಕೆನೆಬಿಳಿ (ಕ್ರೀಂ ವೈಟ್). ಉತ್ತಮ ತರಗತಿಯವುಗಳ ಬಣ್ಣ ಕಂದುಬಿಳುಪು. ಮಧ್ಯಮ ತರಗತಿಯವುಗಳಿಗೆ ಬೂದು ಸಾರಂಗವರ್ಣ ಇದೆ.
ಈ ಬಗೆಯ ಜಮಖಾನೆಗಳನ್ನು ತಯಾರಿಸುವಾಗ ಹಾಳವಾದ ಬಣ್ಣ ಮಿಶ್ರಣಕ್ಕೂ ಅಂತಿಮವಾಗಿ ಅದು ತೋರಬೇಕಾದ ನೆರಳು ಬೆಳಕಿನ ಛಾಯಾ ವಿನ್ಯಾಸಕ್ಕೂ ಆದ್ಯಗಮನ ಕೊಡುತ್ತಾರೆ. ಈ ಕೈಗಾರಿಕೆ ನಿಯತಕಾಲಿಕವಾದದ್ದು. ಪ್ರಾರಂಭ ಪ್ರತಿವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ; ಅಂತ್ಯ ಜನವರಿಯಲ್ಲಿ, ಇದೊಂದು ಗುಡಿಕೈಗಾರಿಕೆ. ಇದನ್ನು ಪ್ರತಿ ನೇಕಾರನೂ ಇಬ್ಬರು ಅಥವಾ ಮೂವರು ಬಾಲಕರ ಸಹಾಯದಿಂದ ಕೈಮಗ್ಗದಲ್ಲಿ ನೇಯುತ್ತಾನೆ. ಈ ಬಾಲಕರೇ ಮುಂದೆ ನೇಕಾರರಾಗುತ್ತಾರೆ. ಒರಟು ಜಮಖಾನೆಯ ಕೈಗಾರಿಕೆ ಮೈಸೂರು ಮತ್ತು ತಮಿಳುನಾಡಿನ ಕೆಲವು ವಿಭಾಗಗಳಿಗೆ ವಿಶೇಷವಾಗಿ ಸೀಮಿತಗೊಂಡಿದೆ.