ಒಪ್ಪಿಗೆ (ಕಾನೂನು ಪದ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೀರ್ಮಾನಿಸಬೇಕಾಗಿರುವ ಅಥವಾ ವಿಚಾರಣೆಗೆ ಸಂಬಂಧಿಸಿದ, ಸಂಗತಿಯ ಬಗ್ಗೆ ಒಂದು ಅನುಮಾನ (ಇನ್ಫರೆನ್ಸ್‌) ಸೂಚಿಸುವಂತೆ ಬಾಯಿಮಾತಿನಿಂದಾಗಲಿ ಬರೆಹದ ಮೂಲಕವಾಗಲಿ ಒಬ್ಬಾತ ಮಾಡುವ ಹೇಳಿಕೆ (ಅಡ್ಮಿಷನ್). ಇದು ಭಾರತೀಯ ಸಾಕ್ಷ್ಯ ಕಾಯಿದೆಯ (ಇಂಡಿಯನ್ ಎವಿಡೆನ್ಸ್‌ ಆಕ್ಟ್‌) 17ನೆಯ ಕಲಮಿನಲ್ಲಿ ಒಪ್ಪಿಗೆ ಶಬ್ದಕ್ಕೆ ಕೊಟ್ಟಿರುವ ವ್ಯಾಖ್ಯೆ.

ಇತಿಹಾಸ[ಬದಲಾಯಿಸಿ]

ಯಿಂದ ತನಗೆ 500 ರೂ. ಸಾಲ ಬರಬೇಕೆಂದು ಆತನ ಮೇಲೆ ಂ ಹೂಡಿದ ಒಂದು ದಾವೆಯಲ್ಲಿ, ತಾನು ಆ ಸಾಲ ತೆಗೆದುಕೊಂಡಿಲ್ಲವೆಂದು ಃ ವಾದ ಹೂಡಬಹುದು. ಃ ಗೆ ಂ ಸಾಲ ಕೊಟ್ಟಿದ್ದನೆ ಎಂಬುದು ಈ ದಾವೆಯಲ್ಲಿ ತೀರ್ಮಾನವಾಗಬೇಕಾದ ಅಂಶ. ಇಲ್ಲಿ ತೀರ್ಮಾನಿಸಬೇಕಾದ ಅಂಶವನ್ನು ರುಜುವಾತು ಮಾಡುವ ಹೊಣೆ, ಂಯ ಮೇಲಿದೆ. ಈ ಅಂಶವನ್ನು ರುಜುವಾತು ಮಾಡಲು ಂ ಸಾಕ್ಷ್ಯ ಒದಗಿಸಬೇಕು. ಃ ಯಾವಾಗಲಾದರೂ ಬಾಯಿಮಾತಿನ ಮೂಲಕ ಅಥವಾ ಬರೆವಣಿಗೆಯ ಮೂಲಕ ಸಾಲ ಪಡೆದಿದ್ದುದಾಗಿ ಒಪ್ಪಿಕೊಂಡಿದ್ದರೆ, ಅಂಥ ಹೇಳಿಕೆ ಒಪ್ಪಿಗೆಯೆನಿಸಿಕೊಳ್ಳುತ್ತದೆ. ಈ ದಾವೆಯಲ್ಲಿ ಃ ತಾನು ಸಾಲ ಪಡೆದೇ ಇಲ್ಲ ಎಂದು ತಕರಾರು ಹೂಡಿದ ಪಕ್ಷದಲ್ಲಿ, ಃಯಿಂದ ತನಗೇನೂ ಸಾಲ ಬರಬೇಕಾಗಿಲ್ಲವೆಂದು ಂ ಎಂದಾದರೂ ಹೇಳಿದ್ದರೆ, ಆ ಹೇಳಿಕೆಯನ್ನು ಂಯ ವಿರುದ್ದವಾದ ರುಜುವಾತಾಗಿ ಉಪಯೋಗಿಸಬಹುದು. ಅದು ಂಯ ಒಪ್ಪಿಗೆ ಎನಿಸುತ್ತದೆ. ಆದರೆ, ತನಗೆ ಃ ಐದು ನೂರು ರೂಪಾಯಿ ಸಾಲ ಕೊಡಬೇಕು ಎಂದು ಂ ಹೇಳಿದ್ದರೆ ಅಥವಾ ಂಗೆ ತಾನೇನೂ ಸಾಲ ಕೊಡಬೇಕಾಗಿಲ್ಲ ಎಂದು ಃ ಹೇಳಿದ್ದರೆ ಅದು ಒಪ್ಪಿಗೆಯೆನಿಸುವುದಿಲ್ಲ. ಅಂಥ ಹೇಳಿಕೆಯಿಂದ ಯಾವ ಪ್ರಯೋಜನವೂ ಇಲ್ಲ. ಯಾರು ಹೇಳಿಕೆ ನೀಡಿದ್ದಾನೋ ಅವನ ವಾದಕ್ಕೆ ಅವನ ಹೇಳಿಕೆಯೇ ವಿರುದ್ದವಾಗಿದ್ದರೆ ಅದು ಒಪ್ಪಿಗೆಯಾಗುತ್ತದೆ. ಈ ಬಗೆಯ ಹೇಳಿಕೆಗಳು ಸಿವಿಲ್ ಮೊಕದ್ದಮೆಯಲ್ಲಿ ಒಪ್ಪಿಗೆ (ಅಡ್ಮಿಷನ್) ಎನಿಸಿಕೊಳ್ಳುತ್ತವೆ. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿಯಾದವನು ನ್ಯಾಯಾಲಯದಲ್ಲೇ ಆಗಲಿ, ಹೊರಗೇ ಆಗಲಿ (ಪೋಲಿಸರ ಸಮ್ಮುಖದಲ್ಲಿ ಮಾಡಿದ ಹೇಳಿಕೆಗಳ ಹೊರತಾಗಿ), ಬರೆವಣಿಗೆಯಲ್ಲಿ ಅಥವಾ ಬಾಯಿಮಾತಿನಲ್ಲಿ ಆರೋಪಿಸಿದ ಕೃತ್ಯ ತನ್ನಿಂದ ಆಯಿತೆಂಬ ಅನುಮಾನವನ್ನು ಸೂಚಿಸುವಂಥ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪೊಪ್ಪಿಗೆ (ಕನ್ಫೆಷನ್) ಎನಿಸುತ್ತದೆ.

ಒಪ್ಪಿಗೆ ಬಗೆ[ಬದಲಾಯಿಸಿ]

ಒಪ್ಪಿಗೆ ಎರಡು ಬಗೆ. ಒಂದು, ಸಂದರ್ಭಕ್ಕೆ ಅನುಗುಣವಾಗಿ ಮಾಡಿದ ವಿಧ್ಯುಕ್ತ (ಫಾರ್ಮಲ್) ಒಪ್ಪಿಗೆ. ಇನ್ನೊಂದು, ಅವಿಧೀಯ ಅಥವಾ ಅನಿರ್ಬಂಧ (ಇನ್ಫಾರ್ಮಲ್) ಒಪ್ಪಿಗೆ. ಮೊದಲನೆಯದನ್ನು ಸಾಧಾರಣವಾಗಿ ನ್ಯಾಯಾಲಯದಲ್ಲಿ ಮಾಡಲಾಗುತ್ತದೆ. ತನಗೆ ಜೀವನಾಂಶ ಕೊಡಬೇಕೆಂದು ಃಯ ಮೇಲೆ ಂ ದಾವ ಹೂಡಿದರೆ, ಂ ತನ್ನ ಹೆಂಡತಿ ಎಂಬುದಾಗಿ ಃ ಒಪ್ಪಿಕೊಂಡರೆ, ಅದು ಆ ಸಂದರ್ಭಕ್ಕಾಗಿ ಒಪ್ಪಿಕೊಂಡ ಸಂಗತಿ. ಂ ತನ್ನ ಹೆಂಡತಿಯೇ ಅಲ್ಲವೆಂದೂ ತಾನು ಜೀವನಾಂಶ ಕೊಡಲು ಬಾಧ್ಯನಲ್ಲವೆಂದೂ ಒಂದು ವೇಳೆ ಃ ತಕರಾರು ಹೂಡಿದರೆ, ಆಕೆ ಃಯ ಹೆಂಡತಿಯೆ-ಎಂಬುದು ತೀರ್ಮಾನಿಸಬೇಕಾದ ಅಂಶವಾಗುತ್ತದೆ. ಃ ಯಾವಾಗಲೋ ಂಗೆ ಪತ್ರ ಬರೆದು ಆಕೆಯನ್ನು ಪತ್ನಿಯೆಂದು ಕರೆದಿದ್ದರೆ ಅಥವಾ ಆಕೆಯ ಪ್ರೀತಿಯ ಪತಿಯೆಂದು ತನ್ನ ಬಗ್ಗೆ ಬರೆದುಕೊಂಡಿದ್ದರೆ ಂಗೆ ಃ ಬರೆದ ಈ ಪತ್ರವನ್ನು ಃಯ ಒಪ್ಪಿಗೆ ಎಂದು ಕೋರ್ಟಿನಲ್ಲಿ ಹಾಜರುಪಡಿಸಬಹುದು. ಈ ಪತ್ರ ಬರೆದಾಗ ಂ ಮತ್ತು ಃಗಳ ಮಧ್ಯೆ ಯಾವ ವಿವಾದವೂ ಉಂಟಾಗಿರಲಿಲ್ಲ. ಅದು ಅನ್ಯ ಸಂದರ್ಭದಲ್ಲಿ ಮಾಡಿದ ಹೇಳಿಕೆ. ನ್ಯಾಯಾಧೀಶರ ಸಮ್ಮುಖದಲ್ಲಿ ಮಾಡಿದ ತಪ್ಪೊಪ್ಪಿಗೆ ಹೇಳಿಕೆಗಳು ನ್ಯಾಯಾಲಯದ ಹೊರಗೆ ಮಾಡಿದ ಹೇಳಿಕೆಗಳಿಗಿಂತ ಹೆಚ್ಚು ನಂಬಲರ್ಹವಾದವು.

ಯಾವುದೇ ಹೇಳಿಕೆಯನ್ನು ಇನ್ನೊಬ್ಬರ ವಿರುದ್ದವಾಗಿ ಉಪಯೋಗಿಸಿಕೊಂಡು ಅದನ್ನು ಸಾಕ್ಷ್ಯವೆಂದು ಅಂಗೀಕರಿಸಬೇಕಾದರೆ ಅಂಥ ಹೇಳಿಕೆಯನ್ನು ಯಾರ ವಿರುದ್ದ ಉಪಯೋಗಿಸಬೇಕಾಗಿದೆಯೋ ಅವರ ಸಮ್ಮುಖದಲ್ಲೇ ನ್ಯಾಯಾಲಯದಲ್ಲಿ ಮಾಡಿರಬೇಕು; ಹಾಗೂ ಆ ಹೇಳಿಕೆಯ ಸತ್ಯಾಸತ್ಯತೆಗಳನ್ನು ಪಾಟಿ ಸವಾಲಿನ (ಕ್ರಾಸ್ ಎಕ್ಸಾಮಿನೇಷನ್) ಒರೆಗಲ್ಲಿಗೆ ಹಚ್ಚಿನೋಡಿಯೇ ತೀರಬೇಕು-ಎಂಬುದು ಸಾಕ್ಷ್ಯದ ಮೂಲಭೂತ ಸೂತ್ರ. ಬೆನ್ನ ಹಿಂದೆ, ನ್ಯಾಯಾಲಯದ ಹೊರಗೆ ಮಾಡಿದ, ಪಾಟಿ ಸವಾಲು ಮಾಡಿ ಪರೀಕ್ಷೆಗೆ ಗುರಿಪಡಿಸಿದ, ಹೇಳಿಕೆಗಳನ್ನು ಸಾಕ್ಷ್ಯದಲ್ಲಿ ಅಂಗೀಕರಿಸಕೂಡದು. ಆದರೆ ಒಪ್ಪಿಗೆಗಳನ್ನು, ಯಾವಾಗಲೋ ಯಾವುದೋ ಅನ್ಯ ಸಂದರ್ಭದಲ್ಲಿ ಮಾಡಿದ ಹೇಳಿಕೆಯನ್ನು ಪಾಟಿ ಸವಾಲು ಇಲ್ಲದೆಯೇ ಸಾಕ್ಷ್ಯದಲ್ಲಿ ಅಂಗೀಕರಿಸಬಹುದೆಂದು ನ್ಯಾಯಶಾಸ್ತ್ರ ಒಪ್ಪಿಕೊಂಡಿದೆ. ಒಪ್ಪಿಕೊಂಡ ಮಾತಿಗೆ ರುಜುವಾತು ಬೇಕಾಗುವುದಿಲ್ಲ. ತಾನು 500 ರೂ. ಕೊಡಬೇಕಾದುದುಂಟೆಂದು ಃ ಒಪ್ಪಿಕೊಂಡರೆ ಂಗೆ ಸಾಲ ಸಲ್ಲಬೇಕೇ ಸಲ್ಲಬಾರದೇ ಎಂಬ ಮುಂದಿನ ಮಾತೇ ಏಳಲಾರದು. ಹಾಗೆಯೇ ಃ ತನಗೆ ಏನೂ ಕೊಡಬೇಕಾದುದಿಲ್ಲವೆಂದು ಂ ಹೇಳಿದರೆ ಮುಂದಿನ ಮಾತೇ ಉಳಿಯುವುದಿಲ್ಲ. ಇಂಥ ಹೇಳಿಕೆಗಳನ್ನು ಪಾಟಿ ಸವಾಲು ಮಾಡಿ ಪರೀಕ್ಷಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ನಿಜವಲ್ಲದ ಮಾತನ್ನು ಂ ಆಗಲಿ ಃ ಆಗಲಿ ಹೇಳುವುದಿಲ್ಲ. ಅಲ್ಲದೆ, ತನ್ನ ಹಿತಕ್ಕೆ ವಿರುದ್ದವಾದ ಮಾತನ್ನು ಒಬ್ಬಾತ ಹೇಳಲಾರ. ಮನುಷ್ಯನ ಸ್ವಭಾವ ತನ್ನ ಸ್ವಾರ್ಥಕ್ಕೆ ಧಕ್ಕೆ ತಂದುಕೊಳ್ಳುವುದಲ್ಲ. ಹಾಗೆ ಧಕ್ಕೆ ಬರುವಂಥ ಮಾತನ್ನು ಆಡಿದರೆ ಅಂಥ ಕೃತಿ ಮಾಡಿದರೆ, ನಡತೆಯಲ್ಲಿ ತೋರಿಸಿಕೊಂಡರೆ, ಅದರಿಂದ ಆ ಮಾತು ಅಥವಾ ಕೃತಿ ನಿಜವಿರಬೇಕೆಂದೇ ಸ್ವಾಭಾವಿಕವಾಗಿ ತೀರ್ಮಾನಿಸಬೇಕಾಗುತ್ತದೆ. ಆ ಹೇಳಿಕೆಯನ್ನು ಪಾಟಿ ಸವಾಲು ಮಾಡುವವರೂ ಇರುವುದಿಲ್ಲ. ಪಾಟಿ ಸವಾಲಿನ ಹಕ್ಕು ವಿರುದ್ದ ಪಕ್ಷದವರಿಗೆ ಸೇರಿದ್ದು. ತನ್ನ ಮಾತನ್ನು ತಾನೇ ಪಾಟಿ ಸವಾಲು ಮಾಡುವುದರ ಅಗತ್ಯವೇನೂ ಇಲ್ಲ. ಒಪ್ಪಿಗೆಗಳು ಬಾಯಿಮಾತಿನಲ್ಲಿ ಇರಬಹುದು, ಬರೆವಣಿಗೆಯಲ್ಲಿರಬಹುದು. ಇವೆರಡೂ ಅಲ್ಲದೆ ಸಂಜ್ಞೆಗಳ ರೂಪದಲ್ಲಿಯೂ ಇರಬಹುದು. ಬರೆವಣಿಗೆಯ ಮೂಲಕ ವ್ಯಕ್ತಪಡಿಸಿದ ಹೇಳಿಕೆಗಳು ಅತ್ಯಂತ ಉತ್ತಮ ಒಪ್ಪಿಗೆಗಳು. ಬಾಯಿಮಾತಿನ ಮೂಲಕ ಮಾಡಿದ ಹೇಳಿಕೆಗಳನ್ನು ತುಂಬ ಪರೀಕ್ಷೆ ಮಾಡಿ, ಜಾಗರೂಕತೆಯಿಂದ ಅಂಗೀಕರಿಸಬೇಕಾಗುತ್ತದೆ. ಏಕೆಂದರೆ ಬಾಯಿಮಾತು ಒಬ್ಬರಿಂದ ಇನ್ನೊಬ್ಬರಿಗೆ ಮುಟ್ಟುವ ಹೊತ್ತಿಗೆ ಏನೇನು ರೂಪಾಂತರ ಹೊಂದುತ್ತದೆಯೋ ಹೇಳಲಿಕ್ಕೆ ಬಾರದು. ಮೂಕರು ಮಾಡಿದ ಸಂಜ್ಞೆಗಳು ಸರಿಯಾಗಿ ಅರ್ಥವಾಗುವಂತಿದ್ದರೆ ಒಪ್ಪಿಗೆಗಳಾಗಬಹುದು. ಮೌನವೂ ಒಪ್ಪಿಗೆಯಾಗಬಹುದು. ನ್ಯಾಯಾಲಯದಲ್ಲಿ ಕೇಳಿದ ಪ್ರಶ್ನೆಗೆ ಆರೋಪಿ ಅಥವಾ ಕಕ್ಷಿ ಉತ್ತರ ಕೊಡದೆ ಸುಮ್ಮನಿದ್ದರೆ ಸೂಚಿಸಿದ ಸಂಗತಿ ಸತ್ಯವಾದ್ದೆಂದು ಅನುಮಾನಿಸಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಸಾಕ್ಷಿಯ ಅಥವಾ ಕಕ್ಷಿಯ ಅಥವಾ ಆರೋಪಿಯ ಮುಖಚರ್ಯೆ, ಇಲ್ಲವೆ ಅಂಗಭಂಗಿಯೂ ಒಪ್ಪಿಗೆಯನ್ನು ಸೂಚಿಸಬಹುದು. ಒಮ್ಮೊಮ್ಮೆ ಮಾತಿನಿಂದಲೂ ವ್ಯಕ್ತಪಡಿಸಲಾರದ ಸಂಗತಿಯನ್ನು ಒಬ್ಬನ ಮುಖ ಚರ್ಯೆ, ಅಂಗಭಂಗಿ ವ್ಯಕ್ತಪಡಿಸಬಹುದು. ಘೋರ ಅಪರಾಧ ಮಾಡಿದವನ ಮುಂದೆ ಯಾವುದೋ ಒಂದು ಮಾತನಾಡಿದರೆ, ಅವನ ಮನಸ್ಸಿಗೆ ಅದು ಚುಚ್ಚಿ ಅವನ ಮುಖಚರ್ಯೆಯಲ್ಲಿ ಅವನ ಮನಸ್ಸಿನ ಭಾವ ಸ್ಫುಟವಾಗಿ ವ್ಯಕ್ತವಾಗಬಹುದು. ಆಗ ಮಾತಿಗಿಂತ ಅವನ ಮುಖಚರ್ಯೆಯೇ ಬಹು ಪರಿಣಾಮಕಾರಿಯಾದ ಸಾಕ್ಷ್ಯವಾಗಬಹುದು. ಅದು ಒಂದು ಅರ್ಥದಲ್ಲಿ ಅವನ ಒಪ್ಪಿಗೆಯನ್ನು ಸೂಚಿಸುತ್ತದೆ. ಆದರೆ ಒಪ್ಪಿಗೆಗಳು ಗುಂಪಿಗೆ ಅವನ ನಡತೆಯನ್ನು ಸೇರಿಸಲಾಗದು. ಒಪ್ಪಿಗೆಗಳು ಹೇಳಿಕೆಗಳಾಗಿರಬೇಕು. ಆದರೆ ಬಾಯಿ ಬಿಡದೆ ಸಮ್ಮತಿ ಸೂಚಿಸುವುದೂ ಒಂದು ಬಗೆಯ ಹೇಳಿಕೆ; ಅಥವಾ ತಲೆ ಆಡಿಸಿ ಸಮ್ಮತಿ ಸೂಚಿಸಬಹುದು. ಈ ಅರ್ಥದಲ್ಲಿ ಮೌನವೂ ಸಂಜ್ಞೆಯೂ ಒಪ್ಪಿಗೆಗಳಾಗಬಹುದು.

ಒಪ್ಪಿಗೆಗಳನ್ನು ಇಡಿಯಾಗಿ ನೋಡಬೇಕು. ಒಪ್ಪಿಕೊಂಡ ಮಾತಿಗೆ ರುಜುವಾತೇಕೆ-ಎಂಬ ಸೂತ್ರ ಇರುವುದರಿಂದ, ಒಂದು ಮಾತು. ಕೃತಿ, ನಡತೆ ಒಪ್ಪಿಗೆಯೋ ಅಲ್ಲವೋ ಎಂಬುದನ್ನು ಕೂಲಂಕಷವಾಗಿ ವಿಮರ್ಶಿಸಬೇಕಾಗುತ್ತದೆ. ಮೇಲೆ ಮೇಲೆ ನೋಡಿದರೆ ಒಪ್ಪಿಗೆ ಎಂಬಂತೆ ಕಾಣುವ ಎಷ್ಟೋ ಮಾತುಗಳು ಒಪ್ಪಿಗೆಯಾಗಿಲ್ಲದಿರಬಹುದು. ಒಂದು ಹೇಳಿಕೆಯನ್ನು ಒಪ್ಪಿಗೆ ಎಂದು ಅಂಗೀಕರಿಸುವುದರಿಂದ ಕಟು ಪರಿಣಾಮಗಳಿಗೆ ಎಡೆಕೊಡುವುದರಿಂದ ಆ ಒಪ್ಪಿಗೆಗಳನ್ನು ಇಡಿಯಾಗಿ ಪರಿಶೀಲನೆ ಮಾಡಿ ಅದರ ಅರ್ಥವನ್ನು, ಅದರಿಂದ ತೇಲುವ ಅಂಶವನ್ನು, ಸಮಗ್ರದೃಷ್ಟಿಯಿಂದ ನೋಡಬೇಕು. ಇಲ್ಲದೆ ಹೋದರೆ ಆ ಹೇಳಿಕೆ ನೀಡಿದವನ ಅಭಿಪ್ರಾಯವೇನು ಎಂಬುದು ಸರಿಯಾಗಿ ವ್ಯಕ್ತವಾಗಲಾರದು. ಒಬ್ಬ ಆರೋಪಿಯ ಮೇಲೆ ಖೂನಿ ಕೇಸಿನ ಆರೋಪಣೆ ಮಾಡಲಾಗಿದ್ದಾಗ, ಆತ ವಿಚಾರಕ ದಂಡಾಧಿಕಾರಿಯ (ಕಮಿಟಲ್ ಮ್ಯಾಜಿಸ್ಟ್ರೇಟ್) ಮುಂದೆ ಈ ಕೆಳಗಿನ ಹೇಳಿಕೆಯನ್ನು ಕೊಟ್ಟಿರಬಹುದು: ನಾನು ಹೊಲದಿಂದ ಮನೆಗೆ ಬಂದೆ. ಮನೆಯ ಬಾಗಿಲು ಮುಚ್ಚಿತ್ತು. ಬಾಗಿಲು ತಟ್ಟಿದೆ. ಕೂಡಲೇ ಬಾಗಿಲು ತೆರೆಯಲಿಲ್ಲ. ಒಂದೆರಡು ಬಾರಿ ಕೂಗಿದೆ. ಆಗಲೂ ತೆರೆಯಲಿಲ್ಲ. ಬಲವಾಗಿ ಬಾಗಿಲನ್ನು ಒದ್ದೆ. ಒಳಗಿನ ಅಗಳಿ ಮುರಿದು ಬಾಗಿಲು ತೆರೆಯಿತು. ಒಳಗೆ ಹೋದೆ. ನನ್ನ ಹೆಂಡತಿ ತನ್ನ ಸೀರೆಕುಪ್ಪುಸ ಸರಿಪಡಿಸಿಕೊಳ್ಳುತ್ತಿದ್ದಳು. ಒಬ್ಬ ಗಂಡಸು ಒಂದು ಮೂಲೆಯಲ್ಲಿ ಪಂಚೆ ಉಟ್ಟುಕೊಳ್ಳುತ್ತ ನಿಂತಿದ್ದ. ಹಾಸಿಗೆ ಅಸ್ತವ್ಯಸ್ತವಾಗಿತ್ತು. ಸಂಶಯ ಬಂತು. ಅಲ್ಲಿಯೇ ನಾಗಂದಿಗೆಯ ಮೇಲೆ ಇಟ್ಟಿದ್ದ ಕುಡುಗೋಲು ತೆಗೆದುಕೊಂಡು ಒಮ್ಮೆ ಬೀಸಿದೆ. ಮೂಲೆಯಲ್ಲಿ ನಿಂತಿದ್ದವನ ಕುತ್ತಿಗೆ ಕತ್ತರಿಸಿಹೋಯಿತು. ಈ ಹೇಳಿಕೆಯ ಕೊನೆಯ ಎರಡು ವಾಕ್ಯಗಳನ್ನೇ ಬಿಡಿಯಾಗಿ ತೆಗೆದುಕೊಂಡರೆ ಆ ಆರೋಪಿ ಖೂನಿ ಮಾಡಿದನೆಂದೇ ಅನುಮಾನ ಮಾಡಬೇಕಾಗುತ್ತದೆ. ಆದರೆ, ಆ ಹೇಳಿಕೆಯನ್ನು ಇಡಿಯಾಗಿ ತೆಗೆದುಕೊಂಡರೆ ಅದು ಖೂನಿ ಆಗುವುದಿಲ್ಲ ಎಂದು ಗೊತ್ತಾಗುತ್ತದೆ. ಆದ ಕಾರಣ ಒಪ್ಪಿಗೆಗಳನ್ನು ಇಡಿಯಾಗಿ ಪರಿಶೀಲಿಸಿದ ಮೇಲೆಯೇ ಬಳಸಿಕೊಳ್ಳಬೇಕು. ಅವುಗಳನ್ನು ಅಂಶತಃ ಹೆಕ್ಕಿ ತೆಗೆದು ಬಳಸಿಕೊಳ್ಳಬಾರದು.

ಒಪ್ಪಿಗೆಗಳನ್ನು ಇಡಿಯಾಗಿ ಪರಶೀಲಿಸಬೇಕಾಗಿರುವಂತೆಯೇ ಅವನ್ನು ಅತ್ಯಂತ ಸೂಕ್ಷವಾಗಿ, ಜಾಗರೂಕತೆಯಿಂದ ಪರಿಶೀಲಿಸಬೇಕು. ಅದರಲ್ಲೂ ಬಾಯಿಮಾತಿನ ಒಪ್ಪಿಗೆಯಾದರೆ, ನ್ಯಾಯಾಲಯದ ಹೊರಗೆ ಮಾಡಿದಂಥ ಹೇಳಿಕೆಗಳಾದರೆ, ಇನ್ನೂ ಎಚ್ಚರಿಕೆಯಿಂದ ಪರಾಂಬರಿಸಬೇಕಾಗುತ್ತದೆ. ಒಬ್ಬ ಹೇಳಿದ ಮಾತನ್ನು ಇನ್ನೊಬ್ಬ ಇದ್ದಕ್ಕಿದ್ದಹಾಗೆ, ಒಂದಕ್ಷರವೂ ಬಿಡದೆ ಕೇಳಿ ನೆನಪಿಟ್ಟುಕೊಂಡರೂ ಆಡಿದ ಮಾತಿನ ಸಂದರ್ಭ, ಸನ್ನಿವೇಶ, ಉದ್ದೇಶ, ಭಾವ-ಇವನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಆಡಿದವನ ಮಾತಿನ ಧ್ವನಿಯೂ ಆಡಿದ ಮಾತಿನ ಮೂಲಾರ್ಥವನ್ನು ಭಾವವನ್ನು ಗ್ರಹಿಸದೆ ಹೋಗಬಹುದು. ಆಡಿದವನ ಧ್ವನಿಯು ಆಡಿದ ಮಾತಿನ ಅರ್ಥ ಮತ್ತು ಉದ್ದೇಶಗಳನ್ನು ವ್ಯಕ್ತಪಡಿಸುತ್ತದೆ. ಹೀಗಿರುವಾಗ ಬಾಯಿಮಾತಿನ ಒಪ್ಪಿಗೆಗಳನ್ನು ನಂಬಿ, ಅದರಿಂದ ತೇಲುವ ಅನುಮಾನವನ್ನು ನಿರ್ಧರಿಸುವುದು ಕಷ್ಟದ ಕೆಲಸ. ತೃಪ್ತಿಕರವಾಗಿ ನಿಸ್ಸಂಶಯವಾಗಿ ರುಜುವಾತು ಆದ ಒಪ್ಪಿಗೆಗಳಿಗೆ ಸಾಕ್ಷ್ಯದಲ್ಲಿ ದೊಡ್ಡ ಸ್ಥಾನವಿದೆ. ಅವುಗಳ ತೂಕ ಹೆಚ್ಚು. ಅವು ಬಹಳ ಮಟ್ಟಿಗೆ ಸತ್ಯವೇ ಎಂದು ನಿರ್ಧರಿಸಲಾಗುತ್ತದೆ. ಒಪ್ಪಿಕೊಂಡವನು ಅದರಿಂದ ಉದ್ಭವಿಸುವ ಎಲ್ಲ ಪರಿಣಾಮಗಳಿಗೂ ಬದ್ಧನಾಗುತ್ತಾನೆ. ಹೇಗೆಂದರೆ ಒಪ್ಪಿಕೊಂಡವನು ತನ್ನ ಒಪ್ಪಿಗೆಯಿಂದ ತಪ್ಪಿಸಿಕೊಳ್ಳಲಾರನೇ ಎಂಬ ಪ್ರಶ್ನೆ ಏಳುತ್ತದೆ. ಒಪ್ಪಿಕೊಂಡವನು ತೃಪ್ತಿಕರವಾಗಿ ತನ್ನ ಒಪ್ಪಿಗೆಯನ್ನು ವಿವರಿಸಿ, ಅದರಿಂದ ತಾನು ಬದ್ಧನಲ್ಲ ಎಂದು ತೋರಿಸಿಕೊಟ್ಟರೆ ಆಗ ಮಾತ್ರ ಆತ ಬದ್ಧನಲ್ಲ. ಒತ್ತಾಯ, ವಂಚನೆ, ಮೋಸ, ಆಸೆ, ವಸೂಲಿ ಮುಂತಾದವುಗಳಿಗೆ ಒಳಗಾಗಿ ಮಾಡಿದ ಒಪ್ಪಿಗೆಗಳಿಂದ ಒಪ್ಪಿಕೊಂಡವನು ಬದ್ಧನಾಗಲಾರ. ಆದರೆ, ಹಾಗೆ ಅನುಚಿತ ಒತ್ತಾಯ, ವಂಚನೆ, ಮೋಸ, ಆಸೆ, ವಸೂಲಿಗಳಿಗೆ ಒಳಗಾದ ಸಂಗತಿಯನ್ನು ರುಜುವಾತು ಮಾಡುವ ಭಾರ, ಒಪ್ಪಿಕೊಂಡವನ ಮೇಲಿರುತ್ತದೆ. ಒಂದು ವೇಳೆ ಒಪ್ಪಿಗೆ ಈ ಎಲ್ಲ ಕಟುಪರೀಕ್ಷೆಗಳಿಗೂ ಗುರಿಯಾಗಿ ಪಾರಾದರೂ ಅದನ್ನೊಂದೇ ನಂಬಿ ಸತ್ಯಾಸತ್ಯ, ನ್ಯಾಯಾನ್ಯಾಯಗಳನ್ನು ಖಂಡಿತವಾಗಿ ನಿರ್ಧರಿಸಲು ಬಾರದಿರಬಹುದು. ಒಪ್ಪಿಗೆಯೂ ಒಂದು ಸಾಕ್ಷ್ಯ ಎನಿಸಬಹುದು. ದತ್ತಕ ತೆಗೆದುಕೊಂಡಿದ್ದು ನಿಜವೇ ಅಲ್ಲವೆ ಎಂಬುದು ತೀರ್ಮಾನಿಸಬೇಕಾದ ಅಂಶವಾಗಿದ್ದಾಗ ದತ್ತು ತಂದೆ ಅಥವಾ ತಾಯಿ ದತ್ತು ಸ್ವೀಕಾರ ಸಮಾರಂಭದ ಅಚ್ಚಾದ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದುದಾಗಿ ಒಪ್ಪಿಕೊಳ್ಳಬಹುದು. ಆದರೆ ಅದೊಂದೇ ಒಪ್ಪಿಗೆಯಿಂದ ದತ್ತುಸ್ವೀಕಾರ ನಿಜ ಎಂದು ತೀರ್ಪುಹೇಳಲು ಬರುವುದಿಲ್ಲ. ವಾಸ್ತವವಾಗಿ ಹಡೆದ ತಂದೆ ಅಥವಾ (ತಂದೆ ಇಲ್ಲದಿದ್ದರೆ) ತಾಯಿ, ಮಗುವನ್ನು ದತ್ತು ತಂದೆ ಅಥವಾ ತಾಯಿಗೆ ವಾಸ್ತವವಾಗಿ ಕೊಟ್ಟುದನ್ನು ರುಜುವಾತು ಮಾಡಲೇಬೇಕು. ಅಚ್ಚಾದ ಆಹ್ವಾನ ಕೊಟ್ಟದ್ದು ನಿಜವೆಂದು ಹೇಳಿದ ಮಾತು ಒಂದು ಪ್ರಬಲವಾದ ಸಾಕ್ಷ್ಯವಾಗುತ್ತದೆ ಮಾತ್ರ .

ಒಂದು ವ್ಯಾಜಕ್ಕೆ ಕಕ್ಷಿಗಳಾದವರು ಅಥವಾ ಅವರ ಅಧಿಕೃತ ಪ್ರತಿನಿಧಿಗಳು ಕೊಟ್ಟ ಹೇಳಿಕೆಗಳು ಒಪ್ಪಿಗೆಗಳು ಎನಿಸಿಕೊಳ್ಳುತ್ತವೆ. ಪ್ರಾತಿನಿಧಿಕವಾಗಿ ದಾವೆಯನ್ನು ಹೂಡಿದವರಾಗಲಿ, ಪ್ರಾತಿನಿಧಿಕವಾಗಿ ಪ್ರತಿಕಕ್ಷಿಯಾಗಿ ಆ ದಾವೆಯನ್ನು ಎದುರಿಸಿದವರಾಗಲಿ ಹೇಳಿಕೆ ಕೊಡುವಾಗ ಆಯಾ ಪ್ರಾತಿನಿಧಿಕ ಸ್ಥಾನ ಅವಲಂಬಿಸಿರಬೇಕು. ಅಲ್ಲದಿದ್ದರೆ ಅವು ಒಪ್ಪಿಗೆಗಳಾಗಲಾರವು. ಹಾಗೂ ವ್ಯಾಜಕ್ಕೆ ಸಂಬಂಧಿಸಿದ ಸ್ವತ್ತಿನಲ್ಲಿ ಸ್ವಾಮ್ಯದ (ಪ್ರೊಪ್ರೈಟರಿ) ಅಥವಾ ಧನ ಸಂಬಂಧವಾದ (ಪೆಕ್ಯೂನಿಯರಿ) ಆಸಕ್ತಿ ಇರುವವರು ಕೊಟ್ಟ ಹೇಳಿಕೆಗಳು ಒಪ್ಪಿಗೆಗಳಾಗುತ್ತವೆ; ಅಥವಾ ವ್ಯಾಜ್ಯಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಯಾರಿಗೆ ಸ್ವಾಮ್ಯ ಅಥವಾ ಧನಸಂಬಂಧಿ ಆಸಕ್ತಿ ಹಿಂದೆ ಇತ್ತೋ ಅಂಥವರು ಮಾಡಿದ ಒಪ್ಪಿಗೆಗೆ ಅದರಿಂದ ಆ ಸ್ವಾಮ್ಯದ ಅಥವಾ ಧನ ಸಂಬಂಧಿ ಆಸಕ್ತಿ ಪಡೆದವರು ಬದ್ಧರಾಗುತ್ತಾರೆ. (ಭಾರತೀಯ ಸಾಕ್ಷ್ಯಕಾಯಿದೆ: ಕಲಂ 18). ಭಾರತೀಯ ಸಾಕ್ಷ್ಯ ಕಾಯಿದೆಯ ಪ್ರಕಾರ ಯಾವುದು ಒಪ್ಪಿಗೆಯೆನಿಸಿಕೊಳ್ಳುತ್ತದೆ, ಯಾವುದು ಎನಿಸಿಕೊಳ್ಳುವುದಿಲ್ಲ, ಒಪ್ಪಿಗೆಯೆಂದು ಪರಿಗಣಿಸಬೇಕಾದ ಹೇಳಿಕೆಯಲ್ಲಿ ಎಷ್ಟು ಗ್ರಾಹ್ಯ-ಎಂಬ ವಿಚಾರಗಳನ್ನು ಸ್ಪಷ್ಟ ಪಡಿಸಲು ಕೆಲವು ಉದಾಹರಣೆಗಳನ್ನು ಮುಂದೆ ಕೊಟ್ಟಿದೆ.[೧]

ಒಂದು ಮನೆಯ ವಿಚಾರವಾಗಿ ಂ ಮತ್ತು ಃಗಳ ನಡುವೆ ವ್ಯಾಜ್ಯ ನಡೆಯುತ್ತದೆ. ಂ ಮತ್ತು ಃ ಇಬ್ಬರೂ ಕ್ರಮವಾಗಿ ಅ ಮತ್ತು ಆ ಎಂಬ ಇಬ್ಬರು ವಕೀಲರನ್ನು ಗೊತ್ತುಮಾಡಿ ಅವರ ಮೂಲಕ ಒಪ್ಪಿಗೆಗಳನ್ನು ಮಾಡಬಹುದು ಅಥವಾ ಅವರು ತಮ್ಮ ಮಕ್ಕಳಿಗೊ ಗುಮಾಸ್ತರಿಗೊ ಒಪ್ಪಿಗೆ ಕೊಡಲೆಂದೇ ಅಧಿಕಾರ ಕೊಡಬಹುದು. ಆ ಅಧಿಕಾರ ವ್ಯಕ್ತವಾಗಿರಬಹುದು ಅಥವಾ ಸೂಚ್ಯವಿರಬಹುದು. ಒಂದು ಮಠದ ಮಠಾಧಿಕಾರಿಯಾಗಿ ಬಂದ ಒಬ್ಬ ಸ್ವಾಮಿ ಆ ಪೀಠಕ್ಕೆ ಕ್ರಮಬದ್ದವಾಗಿ ಬಂದಿಲ್ಲವೆನಿಸಿದಾಗ ಆ ಮಠದ ಅಸಂಖ್ಯಾತ ಭಕ್ತರೂ ಶಿಷ್ಯರೂ ವಾದಿಗಳಾಗಿ ದಾವಾ ಹೂಡುವುದು ಸಾಧ್ಯವಿಲ್ಲ. ಮಠದ ಶಿಷ್ಯರಲ್ಲಿ ಯಾರಾದರೂ ಐವರು ಪ್ರಾತಿನಿಧಿಕವಾಗಿ ದಾವಾ ಹೂಡಬಹುದು. ಹಾಗೆ ದಾವಾ ಹೂಡಿದ ಅವರಿಗೆ ನ್ಯಾಯಾಲಯ ಅಪ್ಪಣೆ ಕೊಡಬೇಕು. ವಿಚಾರಣೆಯ ಕಾಲದಲ್ಲಿ ಅವರು ಕೊಟ್ಟ ಹೇಳಿಕೆಗಳು ಒಪ್ಪಿಗೆಗಳೆನಿಸಿಕೊಳ್ಳುತ್ತವೆ.

ಂ ಒಂದು ಮನೆಯನ್ನು ಅದರ ಮಾಲೀಕನಾದ ಔ ಯಿಂದ ಕೊಳ್ಳುತ್ತಾನೆ. ತರುವಾಯ ಃ ತನ್ನ ಮನೆಯ ಮಾಳಿಗೆಯ ನೀರನ್ನು ಔಯ ಮನೆಯ ಆವರಣದೊಳಗೆ ಹರಿಸಕೂಡದು ಎಂದು ದಾವಾ ಹೂಡುತ್ತಾನೆ. ಆಗ ಔ ತನಗೆ ಬರೆದುಕೊಟ್ಟ ಕರಾರನ್ನು ತೋರಿಸಿ, ನೀರು ಹರಿಸುವ ಹಕ್ಕು ತನಗಿದೆಯೆಂದು ಃ ಸಾಧಿಸಬಹುದು. ಆಗ ಃಯೊಂದಿಗೆ ಔ ಮಾಡಿಕೊಂಡ ಒಪ್ಪಿಗೆ ಔಯ ಮೇಲೆ ಬದ್ದವಾಗುತ್ತದೆ. ಒಂದುವೇಳೆ ಔ ತನ್ನ ಮನೆಯನ್ನು ಂಗೆ ಮಾರಿದ ಮೇಲೆ ಃಗೆ ಒಪ್ಪಿಗೆ ಬರೆದುಕೊಟ್ಟರೆ ಅದು ಂಯನ್ನು ಬದ್ಧಗೊಳಿಸಲಾರದು. ವ್ಯಾಜ್ಯಕ್ಕೆ ಕಕ್ಷಿಗಳಾದವರು, ವ್ಯಾಜ್ಯದ ಸ್ವತ್ತಿನಲ್ಲಿ ಒಡೆತನದ ಆಸಕ್ತಿಯಿದ್ದವರು ಅಥವಾ ಅವರ ಪ್ರತಿನಿಧಿಗಳು ಕೊಟ್ಟ ಹೇಳಿಕೆಗಳು ಒಪ್ಪಿಗೆಗಳಾಗುವುದು ಸಹಜ. ಆದರೆ ಸದ್ಯದಲ್ಲಿ ಸ್ವತ್ತಿನಲ್ಲಿ ಆಸಕ್ತಿ ಇಲ್ಲದವರೂ ವ್ಯಾಜ್ಯಕ್ಕೆ ಕಕ್ಷಿಗಳಾಗಿಲ್ಲದವರೂ ಕೊಟ್ಟ ಹೇಳಿಕೆಗಳೂ ಕೆಲವು ಸಂದರ್ಭಗಳಲ್ಲಿ ಒಪ್ಪಿಗೆಗಳಾಗುತ್ತವೆ. ಉದಾಹರಣೆ: ಃಯ ಮಗ ಂ .ಅ ಒಬ್ಬ ಸಾಹುಕಾರ. ಂ ಯಿಂದ 1,000 ರೂ. ಬರಬೇಕೆಂದು ಅ ದಾವಾ ಹೂಡುತ್ತಾನೆ. ಂ ಸಾಲ ಪಡೆದೂ ಇಲ್ಲ, ಪತ್ರ ಬರೆದುಕೊಟ್ಟೂ ಇಲ್ಲ. ಂಯ ತಂದೆ (ಃ) ವಚನಪತ್ರ (ಪ್ರೋನೋಟು) ಬರೆದುಕೊಟ್ಟಿರುವುದರಿಂದ ಅ ದಾವಾ ಹೂಡುತ್ತಾನೆ. ಆಗ ಬರೆದುಕೊಟ್ಟ ವಚನಪತ್ರ ಂಗೆ ವಿರುದ್ಧವಾಗಿ ಒಪ್ಪಿಗೆಯಾಗುತ್ತದೆ. ಇದು ಸ್ವೀಕಾರಾರ್ಹ ಒಪ್ಪಿಗೆ (ಕಲಂ 19).

ಕ್ರಿಮಿನಲ್ ಮೊಕದ್ದಮೆಗಳಲ್ಲಿ ತಪ್ಪೊಪ್ಪಿಗೆಗಳ ಪ್ರಸ್ತಾಪ ಬರುತ್ತದೆ. ನ್ಯಾಯಾಲಯದ ಹೊರಗೆ ಜುಲುಮೆ, ಒತ್ತಾಯ, ಹೆದರಿಕೆ, ಅಕ್ರಮ ವಸೂಲಿ, ಆಸೆ ಅಥವಾ ಆಮಿಷಕ್ಕೆ ಒಳಗಾಗಿ ಮಾಡಿದ ಯಾವ ತಪ್ಪೊಪ್ಪಿಗೆಯೂ ಸ್ವೀಕಾರಾರ್ಹವಲ್ಲ. ಅಧಿಕಾರ ಸ್ಥಾನದಲ್ಲಿರುವವರು ಕೊಡುವ ಬೆದರಿಕೆ, ಒತ್ತಾಯ, ಜುಲುಮೆ, ತೋರಿಸುವ ಆಸೆ-ಇಂಥವುಗಳಿಗೆ ಒಳಪಟ್ಟು ಮಾಡಿದ ಯಾವ ಹೇಳಿಕೆಯೂ ಒಪ್ಪಿಗೆ ಎನಿಸುವುದಿಲ್ಲ. ಯಾವನೇ ಆರೋಪಿ ಯಾವುದೋ ಪ್ರಾಪಂಚಿಕ ಪೀಡೆಯನ್ನು ತಪ್ಪಿಸಿಕೊಳ್ಳುವ, ಇಲ್ಲವೇ ಪ್ರಯೋಜನ ಪಡೆಯುವ ನಿರೀಕ್ಷೆಯಿಂದ ಮಾಡಿದ ತಪ್ಪೊಪ್ಪಿಗೆಗಳೂ ಸ್ವೀಕಾರಾರ್ಹವಲ್ಲ (ಕಲಂ 24).

ಪೋಲಿಸರ ಸಮ್ಮುಖದಲ್ಲಿ ಆರೋಪಿ ಮಾಡಿದ ಯಾವ ಹೇಳಿಕೆಯೂ ಸ್ವೀಕಾರಾರ್ಹವಲ್ಲ. ಹಾಗೆಯೇ ಪೋಲೀಸ್ ಅಧಿಕಾರಿಯ ಸ್ವಾಧೀನದಲ್ಲಿದ್ದಾಗ ಆರೋಪಿ ಮಾಡುವ ಹೇಳಿಕೆಯೂ ಆ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಮಾಡಿದ ಹೇಳಿಕೆಯ ಹೊರತು ಯಾವ ಹೇಳಿಕೆಯೂ ಸ್ವೀಕಾರಾರ್ಹವಲ್ಲ. (ಕಲಂ 25 ಮತ್ತು 26). ಆದರೆ ಈ ನಿಯಮಕ್ಕೆ ಒಂದು ವಿನಾಯತಿ ಇದೆ. ಪೋಲೀಸ್ ಅಧಿಕಾರಿಯ ಸ್ವಾಧೀನದಲ್ಲಿದ್ದಾಗ ಕೊಟ್ಟ ವರ್ತಮಾನದ ಆಧಾರದ ಮೇಲೆ ಏನಾದರೂ ನಿರ್ದಿಷ್ಟ ವಸ್ತು ಅಥವಾ ಸಂಗತಿ ಪತ್ತೆಯಾದರೆ ಆ ಪತ್ತೆಗೆ ಕಾರಣವಾದ ವರ್ತಮಾನವಷ್ಟೇ ಕೋರ್ಟಿನಲ್ಲಿ ಸ್ವೀಕಾರಾರ್ಹವಾಗುತ್ತದೆ. ಉದಾಹರಣೆಗೆ: ಒಂದು ಖೂನಿ ಮೊಕದ್ದಮೆಯಲ್ಲಿ ಪೋಲೀಸರ ಕೈಗೆ ಸಿಕ್ಕಿ ಬಿದ್ದವನು ಹೇಳಿಕೆ ಕೊಟ್ಟು, ತಾನು ಅಡವಿಯಲ್ಲಿ ಒಬ್ಬನೇ ಹೋಗುತ್ತಿದ್ದಾಗ ಅಲ್ಲಿ ಒಬ್ಬ ಹುಡುಗಿ ದನ ಕಾಯುತ್ತ ಕುಳಿತಿದ್ದಳೆಂದೂ ಆಕೆಯ ಕಿವಿಯಲ್ಲಿ ಒಂದು ಜೊತೆ ಬೆಂಡೋಲೆ ಇದ್ದುವೆಂದೂ ತಾನು ಆಕೆಯ ಕತ್ತು ಹಿಸುಕಿ ಅವಳನ್ನು ಕೊಂದು ಕಿವಿಯಲ್ಲಿದ್ದ ಬೆಂಡೋಲೆ ಕಿತ್ತುಕೊಂಡು, ಆಕೆಯ ಹೆಣವನ್ನು ಹಳ್ಳದಲ್ಲಿ ಹೂತು ಮರಳು ಮುಚ್ಚಿ, ತರುವಾಯ ಬೆಂಡೋಲೆಯನ್ನು ತನ್ನೂರ ಅಕ್ಕಸಾಲಿಗನಲ್ಲಿ ಒತ್ತೆಯಿಟ್ಟುದಾಗಿಯೂ ತನ್ನನ್ನು ಕರೆದುಕೊಂಡು ಹೋದರೆ ಹೆಣವನ್ನೂ ಒತ್ತೆಯಿಟ್ಟುಕೊಂಡ ಅಕ್ಕಸಾಲಿಗನನ್ನೂ ತೋರಿಸುವುದಾಗಿಯೂ ತಿಳಿಸುತ್ತಾನೆ. ಈ ಹೇಳಿಕೆಯಲ್ಲಿ ಕೊನೆಯ ಎರಡು ವಾಕ್ಯಗಳ ಹೊರತು ಮತ್ತೇನನ್ನೂ ನ್ಯಾಯಾಲಯ ಸ್ವೀಕರಿಸುವುದಿಲ್ಲ. ಆರೋಪಿಯ ಈ ಹೇಳಿಕೆಯ ಆಧಾರದಿಂದ ಹಳ್ಳದಲ್ಲಿ ಹೆಣ ಇದ್ದದ್ದೇ ಆದರೆ, ಅಕ್ಕಸಾಲಿಗನಲ್ಲಿ ಬೆಂಡೋಲೆ ಇದ್ದುದ್ದೇ ಆದರೆ, ಆಗ ಅಷ್ಟು ವರ್ತಮಾನ ಮಾತ್ರ ಸ್ವೀಕಾರಾರ್ಹವಾಗುತ್ತದೆ. ಇನ್ನುಳಿದ ಹೇಳಿಕೆಯನ್ನು ಸ್ವೀಕರಿಸುವುದಿಲ್ಲ. ಏಕೆಂದರೆ ಹಳ್ಳದಲ್ಲಿ ದೊರೆತ ಹೆಣ ಅಕ್ಕಸಾಲಿಗನಲ್ಲಿ ಸಿಕ್ಕ ಬೆಂಡೋಲೆ ಅಲ್ಲಿವೆ ಎಂಬುದು ಅವನಿಗೆ ಗೊತ್ತಿತ್ತು-ಎಂಬುದಷ್ಟೇ ಅವು ಸಿಕ್ಕದ್ದರಿಂದ ರುಜುವಾತಾಯಿತು. ಅವನೇ ಖೂನಿ ಮಾಡಿದನೋ ಅಥವಾ ಇನ್ನು ಯಾರಾದರೂ ಖೂನಿ ಮಾಡಿದ ಸಂಗತಿ ಅವನಿಗೆ ಗೊತ್ತಿದ್ದೂ ಆ ರೀತಿ ವರ್ತಮಾನ ಕೊಟ್ಟನೋ ಹೇಳಲು ಬಾರದು. ಆದ ಕಾರಣ ಅವನ ಮಾತನ್ನು ಪುರ್ಣ ನಂಬಿ ಅವನನ್ನು ತಪಿತಸ್ಥ ಎಂದು ಹೇಳಲುಬಾರದು (ಕಲಂ 27).

ಇಬ್ಬರು ಕೂಡಿ ಮಾಡಿದ ಅಪರಾಧದಲ್ಲಿ ಒಬ್ಬ ತನ್ನ ಸಹಾಪರಾಧಿಯ ವಿರುದ್ದವಾಗಿ ಕೊಟ್ಟ ಹೇಳಿಕೆಯನ್ನು ಹೇಳಿಕೆ ಕೊಡದ ಅಪರಾಧಿಯ ವಿರುದ್ಧವಾಗಿಯೂ ಉಪಯೋಗಿಸಬಹುದು (ಕಲಂ 30).

ಆದರೆ ಯಾವ ಒಪ್ಪಿಗೆಯೂ ಸಂಪುರ್ಣವೂ ನಿರ್ಣಾಯಕವೂ ನಿಸ್ಸಂಶಯವೂ ಆದ ಪುರಾವೆಯಲ್ಲ (ಕಲಂ-31). (ಕೆ.ಸಿ.)


ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-10-04. Retrieved 2016-10-26.