ವಿಷಯಕ್ಕೆ ಹೋಗು

ಒಟ್ಟು ವ್ಯಾಪಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಟ್ಟು ವ್ಯಾಪಾರಿ: ಸರಕು ತಯಾರಕನಿಗೂ ಚಿಲ್ಲರೆ ವ್ಯಾಪಾರಿಗೂ ನಡುವಣ ಮಧ್ಯಸ್ಥಗಾರ (ಹೋಲ್ಸೇಲರ್). ಠೋಕುವ್ಯಾಪಾರಿ, ಸಟ್ಟಾವ್ಯಾಪಾರಿ-ಎಂಬುವು ಪರ್ಯಾಯ ಶಬ್ದಗಳು. ಕೊಂಡ ಸರಕಿನ ಅಂತಿಮ ಅನುಭೋಗಕ್ಕೆ ಎಡೆಕೊಡದೆ ಅದನ್ನು ಮತ್ತೆ ಮಾರಾಟ ಮಾಡುವ ಅಥವಾ ತನ್ನ ಉದ್ಯಮದಲ್ಲಿ ಬಳಸುವ ಮತ್ತು ತತ್ಸಂಬಂಧವಾದ ಎಲ್ಲ ಕ್ರಿಯೆಗಳನ್ನೂ ಸ್ಥೂಲವಾಗಿ ಒಟ್ಟು ವ್ಯಾಪಾರವೆನ್ನಬಹುದು. ಉತ್ಪಾದಕರಿಂದ ಬೃಹದ್ಗಾತ್ರದಲ್ಲಿ ಪದಾರ್ಥಗಳನ್ನು ಕೊಂಡು, ಅವನ್ನು ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ಮೊತ್ತಗಳಲ್ಲಿ ಮಾರಾಟ ಮಾಡುವ, ಹೀಗೆ ಉತ್ಪಾದಕ ಮತ್ತು ಅನುಭೋಗಿಗಳ ನಡುವೆ ಕೊಂಡಿಯಾಗಿ ವರ್ತಿಸುವ, ವರ್ತಕನನ್ನು ಮಾತ್ರವೇ ಒಟ್ಟುವ್ಯಾಪಾರಿಯೆಂದು ವ್ಯಾಖ್ಯಾನಿಸಲಾಗಿದೆ. ಮುತಾಲಿಕ, ಮಧ್ಯವರ್ತಿಗಳನ್ನು (ಏಜೆಂಟ್, ಮಿಡ್ಲ್‌ಮೆನ್) ಈ ವ್ಯಾಖ್ಯೆಯ ಪ್ರಕಾರ ಒಟ್ಟು ವ್ಯಾಪಾರಿಗಳೆನ್ನಲಾಗುವುದಿಲ್ಲ.

ಕಾರ್ಯಭಾಗ

[ಬದಲಾಯಿಸಿ]

ಠೋಕುವ್ಯಾಪಾರಿಯ ಮುಖ್ಯ ಕಾರ್ಯಭಾಗಗಳು ಇವು:

  • ಗಾತ್ರವಿಭಜನೆ: ಉತ್ಪಾದಕರಿಂದ ಈತ ಹೆಚ್ಚು ಮೊತ್ತಗಳಲ್ಲಿ ಪದಾರ್ಥಗಳನ್ನು ಕೊಂಡು ಅಥವಾ ಸಂಗ್ರಹಿಸಿ ಅವನ್ನು ಕಡಿಮೆ ಗಾತ್ರಗಳಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಾನೆ.
  • ಸರಕು ದಾಸ್ತಾನು: ಬೇಡಿಕೆಯಲ್ಲಿ ಸಂಭವಿಸುವ ಏರಿಳಿತಗಳಿಗೆ ಅಣುಗುಣವಾಗಿ ಸರಕಿನ ಪ್ರವಾಹವನ್ನು ನಿಯಂತ್ರಿಸಲು ಇದರಿಂದ ಸಾಧ್ಯವಾಗುತ್ತದೆ.
  • ಸರಕು ವಿತರಣೆಗೆ (ಡಿಸ್ಟ್ರಿಬ್ಯೂಷನ್) ಧನ ಪೋಷಣೆ (ಫಿನಾನ್ಸಿಂಗ್): ಚಿಲ್ಲರೆ ವ್ಯಾಪಾರಿಗಳಿಗೆ ಈತ ಉದ್ಧರಿ ನೀಡುತ್ತಾನೆ ; ಆದರೆ ಅವರಿಂದ ಹಣ ವಸೂಲಾಗುವವರೆಗೂ ಉತ್ಪಾದಕರಿಗೆ ತಾನು ಕೊಡಬೇಕಾದ ಹಣವನ್ನು ಕೊಡದೆ ನಿಲ್ಲಿಸಿಕೊಳ್ಳುವುದಿಲ್ಲ.
  • ಅಗತ್ಯವಾದಾಗಲೆಲ್ಲ ಈತ ಪದಾರ್ಥಗಳ ವರ್ಗೀಕರಣ (ಗ್ರೇಡಿಂಗ್), ಸಂವೇಷ್ಟನ (ಪ್ಯಾಕಿಂಗ್) ಮತ್ತು ಅಂಕನ (ಬ್ಯ್ರಾಂಡಿಂಗ್) ಕಾರ್ಯವನ್ನೂ ನಿರ್ವಹಿಸುತ್ತಾನೆ.

ಅನುಕೂಲ

[ಬದಲಾಯಿಸಿ]

ಒಟ್ಟು ವ್ಯಾಪಾರಿಯ ಈ ಕಾರ್ಯ ಭಾರಗಳಿಂದಾಗಿ ಪದಾರ್ಥಗಳ ಉತ್ಪಾದಕರಿಗೂ ಚಿಲ್ಲರೆ ವ್ಯಾಪಾರಿಗಳಿಗೂ ಅನುಭೋಗಿಗಳಿಗೂ ಆಗುವ ಅನುಕೂಲಗಳು ಅನೇಕ. ಒಟ್ಟುವ್ಯಾಪಾರಿ ಪದಾರ್ಥಗಳನ್ನು ಹೆಚ್ಚಿನ ಮೊತ್ತಗಳಲ್ಲಿ ಕೊಳ್ಳುವುದರಿಂದ, ಅವಕ್ಕಾಗಿ ಆದೇಶ ನೀಡುವುದರಿಂದ, ಬೃಹದ್ಗಾತ್ರದ ಉತ್ಪಾದನೆ ಸಾಧ್ಯವಾಗುತ್ತದೆ. ಯಾರು ಯಾರು ಎಷ್ಟೆಷ್ಟು ಪದಾರ್ಥ ಕೊಳ್ಳುವರೆಂಬ ಬಗ್ಗೆ ಉತ್ಪಾದಕ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಕೊಳ್ಳುವವರಿಂದ ಬೇಡಿಕೆ ಬರುವುದನ್ನೇ ನಿರೀಕ್ಷಿಸಿ ಆತ ಸರಕು ದಾಸ್ತಾನು ಮಾಡಿ ಇಟ್ಟುಕೊಂಡಿರಬೇಕಾದ ಚಿಂತೆಯಿಲ್ಲ. ಅವನು ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿ ಅದರಲ್ಲೇ ವಿಶಿಷ್ಟ ಪ್ರಾವೀಣ್ಯ ಗಳಿಸಿಕೊಳ್ಳುವಂತೆ ಒಟ್ಟುವ್ಯಾಪಾರಿ ನೆರೆವಾಗುತ್ತಾನೆ. ಅನುಭೋಗಿಗಳ ರುಚಿಗಳನ್ನು ತಿದ್ದುವುದೂ ಅವನ್ನು ಅರಿತು ಉತ್ಪಾದಕನಿಗೆ ನಿವೇದಿಸುವುದೂ ಮಾರುಕಟ್ಟೆಯ ಪ್ರವೃತ್ತಿಗಳನ್ನು ಅಭ್ಯಸಿಸಿ ಮುನ್ನೆಚ್ಚರಿಸುವುದೂ ಸರಕುಗಳನ್ನು ದಾಸ್ತಾನು ಮಾಡಿ ಬೆಲೆಗಳಲ್ಲಿ ಸ್ಥಿರತೆಯನ್ನು ಕಾಪಾಡುವುದೂ ಒಟ್ಟುವ್ಯಾಪಾರಿಯ ಕೆಲಸ. ಒಟ್ಟು ವ್ಯಾಪಾರಿಯಲ್ಲಿ ವಿವಿಧ ಸರಕುಗಳ ದಾಸ್ತಾನುಗಳಿರುವುದರಿಂದ ಚಿಲ್ಲರೆ ವ್ಯಾಪಾರಿಗೆ ಆಯ್ಕೆಯ ಸೌಲಭ್ಯವಿರುತ್ತದೆ. ಅವನಿಗೆ ಬೇಕಾದ ಸರಕು ಒಟ್ಟುವ್ಯಾಪಾರಿಯಲ್ಲಿ ಸರ್ವದಾಸಿದ್ದ. ಈ ಸೌಲಭ್ಯದ ಜೊತೆಗೆ ಚಿಲ್ಲರೆ ವ್ಯಾಪಾರಿಗೆ ಉದ್ಧರಿಯ ಸೌಲಭ್ಯವೂ ಉಂಟು. ಯಾವ ಸರಕಿನ ಗುಣವೇನು, ಯಾವುದನ್ನು ಸುಲಭವಾಗಿ ಮಾರಾಟ ಮಾಡಬಹುದು-ಎಂಬ ವಿಚಾರವಾಗಿ ಮುಫತ್ತಾದ ಸಲಹೆಯನ್ನೂ ಚಿಲ್ಲರೆ ವ್ಯಾಪಾರಿಗೆ ಈತ ನೀಡುತ್ತಾನೆ.

ವಿಧಗಳು

[ಬದಲಾಯಿಸಿ]

ಒಳವ್ಯಾಪಾರದಲ್ಲಿ ನಿರತರಾದ ಒಟ್ಟುವ್ಯಾಪಾರಿಗಳಲ್ಲಿ ನಾಲ್ಕು ಬಗೆಯುಂಟು:

  • ಪದಾರ್ಥವನ್ನು ಕೊಂಡು ದಾಸ್ತಾನು ಮಾಡಿಟ್ಟದ್ದು, ಅವನ್ನು ಅದೇ ರೂಪದಲ್ಲಿ ಮಾರುವವರು;
  • ಪದಾರ್ಥವನ್ನು ಕೊಂಡು ದಾಸ್ತಾನು ಮಾಡುವುದೇ ಅಲ್ಲದೆ ಅದನ್ನು ಮಾರಾಟಕ್ಕಾಗಿ ಪರಿಷ್ಕರಿಸುವವರು;
  • ಒಂದು ಪದಾರ್ಥದ ಹಂಚಿಕೆಯ ವ್ಯವಸ್ಥೆ ಮಾಡಿದರೂ ವಾಸ್ತವವಾಗಿ ಅದನ್ನು ನೇರವಾಗಿ ಕೊಂಡು ಮಾರದವರು; ಉದಾ: ಮೋಟಾರ್ ಕಾರು ವ್ಯವಹಾರಸ್ಥರು;
  • ಇತರ ಒಟ್ಟು ವ್ಯಾಪಾರಿಗಳ ಪರವಾಗಿ ಸರಕುಗಳನ್ನು ಕೊಳ್ಳುವ ಮಾರುವ ಕಾರ್ಯನಿರ್ವಹಿಸುವ ಮುತಾಲಿಕರು (ಏಜೆಂಟ್ಸ್‌), ದಳ್ಳಾಳಿಗಳು (ಬ್ರೋಕರ್ಸ್‌) ಮುಂತಾದ ಮಧ್ಯವರ್ತಿಗಳನ್ನೂ ಸ್ಥೂಲವಾಗಿ ಒಟ್ಟುವ್ಯಾಪಾರಿಗಳೆನ್ನಬಹುದು.

ಹೊಲದಲ್ಲಿ ಬೆಳೆದ ಫಸಲೋ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಸರಕೋ ಅಂತಿಮವಾಗಿ ಅನುಭೋಗಿಯ ಕೈಸೇರುವಾಗ ನಡುವೆ ಬರುವವರಲ್ಲಿ ಒಬ್ಬನಾದ ಒಟ್ಟುವ್ಯಾಪಾರಿಯನ್ನು ಸಂಪುರ್ಣವಾಗಿ ನಿವಾರಿಸುವುದು ಸಾಧ್ಯವೆ ಎಂಬ ವಿಚಾರವಾಗಿ ವಿಪುಲವಾಗಿ ಜಿಜ್ಞಾಸೆ ಬೆಳೆದಿದೆ. ಸರಕಿನ ಹಂಚಿಕೆಯಲ್ಲಿ ಒಟ್ಟುವ್ಯಾಪಾರ ಒಂದು ಅವಶ್ಯ ಅಂಗ. ಒಟ್ಟುವ್ಯಾಪಾರಿಯನ್ನು ನಿವಾರಿಸಿಕೊಂಡರೂ ಆತನ ಕಾರ್ಯಭಾರವನ್ನು ಬೇರೆ ಯಾರಾದರೂ-ಎಂದರೆ ತಯಾರಕನೋ ಚಿಲ್ಲರೆ ವ್ಯಾಪಾರಿಯೋ-ವಹಿಸಿಕೊಳ್ಳುವುದು ಅವಶ್ಯವಾಗುತ್ತದೆ. ಚಿಲ್ಲರೆ ವ್ಯಾಪಾರಿಗಳೇ ಬೃಹದ್ಗಾತ್ರದಲ್ಲಿ ಉತ್ಪಾದಕರಿಂದ ಸರಕು ಕೊಳ್ಳಬಹುದು. ಕೊಂಡ ಸರಕಿನ ದಾಸ್ತಾನು, ತಮ್ಮ ಶಾಖೆಗಳಲ್ಲಿ ಹಂಚಿಕೆ ಮುಂತಾದ ಎಲ್ಲ ಕಾರ್ಯಗಳನ್ನೂ ನಿರ್ವಹಿಸುವ ಸಂಸ್ಥೆಗಳುಂಟು. ಅಂಕಿತ (ಬ್ರಾಂಡೆಡ್) ಸರಕುಗಳನ್ನು ತಯಾರಿಸುವ ಅನೇಕ ಉತ್ಪಾದಕರು ತಮ್ಮ ಪದಾರ್ಥಗಳು ಎಲ್ಲೆಡೆಗಳಲ್ಲೂ ಪ್ರಸಾರವಾಗಬೇಕೆಂಬ ಉದ್ದೇಶದಿಂದ ತಾವೇ ಅವನ್ನುಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಹಂಚುವ ವ್ಯವಸ್ಥೆ ಇಟ್ಟುಕೊಂಡಿರುತ್ತಾರೆ. ಉತ್ಪಾದಕನಿಗೂ ಚಿಲ್ಲರೆ ವ್ಯಾಪಾರಿಗೂ ನಡುವೆ ಒಬ್ಬನಿಗಿಂತ ಹೆಚ್ಚು ಒಟ್ಟುವ್ಯಾಪಾರಿಗಳಿರುವ ಸಂದರ್ಭಗಳೂ ಉಂಟು; ವಿತರಣ ವ್ಯವಸ್ಥೆ ಸಂಕೀರ್ಣವಾಗಿದ್ದಾಗ ಇವರ ಅಸ್ತಿತ್ವ ಅಗತ್ಯವಾಗಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: