ವಿಷಯಕ್ಕೆ ಹೋಗು

ಒಕಾಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Okapi
Male okapi at Beauval Zoo
Conservation status
Scientific classification e
Unrecognized taxon (fix): Okapia
ಪ್ರಜಾತಿ:
O. johnstoni
Binomial name
Okapia johnstoni
(P.L. Sclater, 1901)
Range of the okapi

ಒಕಾಪಿ: ಆಫ್ರಿಕದ ಉಷ್ಣವಲಯದ ಕಾಡುಗಳಲ್ಲಿ ಜೀವಿಸುವ ಜಿರಾಫೆಗಳ ಕುಲಕ್ಕೆ ಸೇರಿದ ಒಂದು ಅಪೂರ್ವವಾದ ಪ್ರಾಣಿ. ಕಾಂಗೋವಿನ ಸೆಮ್ಲಿಕಿ ಅರಣ್ಯದಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಒಕಾಪಿಯ ಜಾನ್ಸ್ಟೋನಿ ಎಂಬುದು ಇದರ ವೈಜ್ಞಾನಿಕ ಹೆಸರು. ಇದರ ಗಾತ್ರ ದೊಡ್ಡದು; ಮೈಮೇಲೆ ದೊಡ್ಡದಾಗಿ ಎದ್ದು ಕಾಣುವ ಗೆರೆಗಳಿವೆ. ಆದರೂ ಇಂಥ ಪ್ರಾಣಿ ಒಂದಿದೆಯೆಂಬ ತಿಳಿವಳಿಕೆ ವಿಜ್ಞಾನ ಪ್ರಪಂಚಕ್ಕೆ 1900ರ ವರೆಗೂ ಇರಲಿಲ್ಲ. ಇದನ್ನು ಲೋಕಕ್ಕೆ ತಿಳಿಯ ಹೇಳಿದಾತ ಹ್ಯಾರಿ ಎಚ್. ಜಾನ್ಸನ್. ಪ್ರಾಯಶಃ ಕೆಲವು ಧೀರ ಪರಿಶೋಧಕರನ್ನು ಬಿಟ್ಟರೆ ಇಟೂರಿ ಕಾಡಿನ ಗುಜ್ಜಾರಿಗಳೇ ಇವನ್ನು ನಿಜವಾಗಿ ಕಂಡರಿತಿದ್ದವರು. ಇವರು ಈ ಪ್ರಾಣಿಗಳ ಜಾಡುಗಳನ್ನು ಪತ್ತೆಹಚ್ಚುವುದರಲ್ಲಿ ತುಂಬ ಗಟ್ಟಿಗರು.

ವಿವರಣೆ

[ಬದಲಾಯಿಸಿ]

ಇದು ಜಿರಾಫೆಗಿಂತ ಸಣ್ಣದು. ಎರಡಕ್ಕೂ ಕೂದಲು ಮತ್ತು ಚರ್ಮ ಮುಚ್ಚಿರುವ ಕೊಂಬುಗಳಿವೆ. ಎರಡಕ್ಕೂ ಉದ್ದವೂ ಹಿಡಿತವುಳ್ಳವೂ ಆದ ನಾಲಗೆಗಳೂ ಸೀಳು ಗೊರಸುಗಳೂ ಉಂಟು. ಸದ್ದು ಮಾಡದಿರುವುದೇ ಇವಕ್ಕೆ ರೂಢಿ. ಒಕಾಪಿಯ ಮೈ ಸಣ್ಣದು; ಎತ್ತರ 5ದಿ-5.5ದಿ ವರೆಗೆ. ತಲೆ ಜಿರಾಫೆಯದಂತೆಯೇ ಇದೆ. ತೆಳುವಾದ ಚಿಪ್ಪಿನಂಥ ದೊಡ್ಡ ಕಿವಿಗಳಿವೆ. ಮೈಬಣ್ಣ ಚಾಕೋಲೇಟ್ ಅಥವಾ ನೀಲಿಗೆಂಪು. ಹಿಂಭಾಗದಲ್ಲಿ ಬಿಳಿಗೀರುಗಳೂ ಮುಖ ಕಾಲುಗಳ ಮೇಲೆ ಬಿಳಿ ಪಟ್ಟೆಗಳೂ ಇವೆ. ಹೆಣ್ಣುಗಳಿಗೆ ಕೊಂಬಿಲ್ಲ; ಆದರೆ ಗಾತ್ರ ದೊಡ್ಡದು; ಗೊರಸಿನ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಹೀಗಿರುವುದಿಲ್ಲ.

ಮರದೆಲೆಗಳನ್ನು ಚಿವುಟಿಕೊಳ್ಳಲು ತನ್ನ ತುಂಬ ಉದ್ದವಾದ ತಿರುಚಿ ನಾಲಗೆಯನ್ನು ಇದು ಜಿರಾಫೆಯಂತೆಯೇ ಉಪಯೋಗಿಸುತ್ತದೆ. ಹಗಲಿನಲ್ಲಿ ಈ ಪ್ರಾಣಿ ಕಾಡಿನ ನೀರಿರುವ ಗಹ್ವರಗಳಲ್ಲಿರುತ್ತದೆ. ಮೇಯುವಾಗ ಶತ್ರುಗಳು ಹಠಾತ್ತನೆ ಮೇಲೆರಗದಂತೆ ಸದ್ದಿನ ಸುಳಿವು ಸಿಗುವ ದೊಡ್ಡ ಒಂಟಿಮರಗಳನ್ನಿದು ಆಶ್ರಯಿಸುತ್ತದೆ. ಇದಕ್ಕೆ ಜಿರಾಫೆಯಷ್ಟು ತೀಕ್ಷ್ಣ ದೃಷ್ಟಿಯಿಲ್ಲ; ಆದರೆ ಶಬ್ದಗ್ರಹಣಶಕ್ತಿ ಚುರುಕಾಗಿದೆ; ತುತ್ತೂರಿ ಆಕಾರದ ಕಿವಿಗಳೇ ಇದನ್ನು ಸೂಚಿಸುತ್ತವೆ. ಹೀಗೆ ತನ್ನ ಶ್ರವಣಬಲದಿಂದ ವೈರಿಯಿಂದ ಪಾರಾಗುತ್ತದೆ. ಇದರ ಆಹಾರ ಮರದ ಕೆಳಗಣ ಎಳೆಬಳ್ಳಿಗಳ ಎಲೆಗಳು. ಇದು ಹುಲ್ಲನ್ನು ಮುಟ್ಟುವುದಿಲ್ಲ.

ಒಕಾಪಿಗಳು ಒಂಟಿಯಾಗಿಯೋ, ಜೋಡಿಯಾಗಿಯೋ ಇರುತ್ತವೆ. ಪುಕ್ಕಲು ಮತ್ತು ಸಾಧುಸ್ವಭಾವದ ಈ ಪ್ರಾಣಿಗಳ ಸಂಚಾರ ರಾತ್ರಿಯಲ್ಲಿ. ಇವು ಏಕಾಂತವನ್ನು ಪ್ರೀತಿಸುತ್ತವೆ. ಕಾಂಗೋ ಕಾಡಿನ ದುರ್ಗಮವೂ ದುರ್ಭೇದ್ಯವೂ ಆದ ಪ್ರದೇಶಗಳಲ್ಲಿ ಇವು ವಾಸಮಾಡುತ್ತವೆ. ಕಾಡಿನ ಅಂಚಿನಲ್ಲಿ ನೆಲೆಸಿರುವ ಗುಜ್ಜಾರಿಗಳೂ ಕೆಲವು ಬಾಂಟು ಕುಲದವರೂ ಇವುಗಳ ನೆಲೆಯನ್ನು ಪತ್ತೆಹಚ್ಚಿ, ಬೇಟೆಯಾಡಿ, ಇವುಗಳ ಮಾಂಸ ತುಂಬ ರುಚಿ ಎಂದು ಕಂಡುಕೊಂಡಿದ್ದರು. ಬಹು ಹಿಂದೆಯೇ ಬೆಲ್ಜಿಯಂ ಸರ್ಕಾರ ಈ ಅಪುರ್ವ ಪ್ರಾಣಿ ನಾಶವಾಗದಂತೆ ಕಾಪಾಡುವುದಕ್ಕಾಗಿ ಕಾನೂನುಗಳನ್ನು ಮಾಡಿತ್ತು. ಇಟೂರಿ ಕಾಡಿನ ಮಧ್ಯದಲ್ಲಿ ಎಪುಲು ಎಂಬೆಡೆಯಲ್ಲಿರುವ ಒಕಾಪಿ ಕ್ಷೇತ್ರದಲ್ಲಿ ಬೇಟೆಯ ಇಲಾಖೆಯವರು ಇವುಗಳ ವಿಷಯದಲ್ಲಿ ವಿಸ್ತಾರವಾದ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಪ್ರಪಂಚದ ಅನೇಕ ಪ್ರಾಣಿಸಂಗ್ರಹಾಲಯಗಳಲ್ಲಿ ಇವನ್ನು ಯಶಸ್ವಿಯಾಗಿ ಸಾಕುತ್ತಿದ್ದಾರೆ. ಅಲ್ಲಿ ಇವು ಮರಿಗಳನ್ನೂ ಹಾಕುತ್ತಿವೆ. ಹೆಣ್ಣು ಒಕಾಪಿ ಪ್ರತಿ 40 ದಿವಸಗಳಿಗೊಮ್ಮೆ ಬೆದೆಗೆ ಬರುತ್ತದೆ. 425 ದಿನಗಳ ಗರ್ಭವಾಸದ ಅನಂತರ ಮರಿ ಹುಟ್ಟುತ್ತದೆ. ತಾಯಿ ಅದನ್ನು 3-4 ತಿಂಗಳ ತನಕ ಹಾಲೂಡಿ ಸಾಕುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Mallon, D.; Kümpel, N.; Quinn, A.; Shurter, S.; Lukas, J.; Hart, J.A.; Mapilanga, J.; Beyers, R.; Maisels, F. (2015). "Okapia johnstoni". IUCN Red List of Threatened Species. 2015: e.T15188A51140517. doi:10.2305/IUCN.UK.2015-4.RLTS.T15188A51140517.en. Retrieved 19 November 2021.
"https://kn.wikipedia.org/w/index.php?title=ಒಕಾಪಿ&oldid=1230975" ಇಂದ ಪಡೆಯಲ್ಪಟ್ಟಿದೆ