ಐಸೋಮರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರಡು ಅಥವಾ ಅನೇಕ ರಾಸಾಯನಿಕ ಸಂಯುಕ್ತಗಳ ಅಣುಸೂತ್ರ (Chemical formula) ಒಂದೇ ಇದ್ದು ಅವುಗಳ ಗುಣಲಕ್ಷಣಗಳಲ್ಲಿ ವ್ಯತ್ಯಾಸವಿರುವಿಕೆ. ಇಂಥ ಸಂಯುಕ್ತಗಳಿಗೆ ಐಸೊಮರ್‍ ಅಥವಾ ಸಮಾಂಗಿಗಳು ಎಂದು ಹೆಸರು.

ಇತಿಹಾಸ[ಬದಲಾಯಿಸಿ]

ಒಂದು ಸಂಯುಕ್ತದಲ್ಲಿರುವ ರಾಸಾಯನಿಕ ಧಾತುಗಳು ಮತ್ತು ಅವುಗಳ ಪ್ರಮಾಣ-ಅಂದರೆ ಸಂಯುಕ್ತದ ಸಂಯೋಜನೆ (ಕಾಂಪೊಸಿಷನ್) ಅದರ ಗುಣಲಕ್ಷಣಗಳನ್ನು ನಿರ್ಧರಿಸುವುದೆಂದು ಒಂದು ಕಾಲದಲ್ಲಿ ನಂಬಲಾಗಿತ್ತು. ಸಂಯುಕ್ತಗಳ ಸಂಯೋಜನೆ ಒಂದೇ ಆಗಿದ್ದು ಅವುಗಳ ಅಣು ತೂಕಗಳಲ್ಲಿ ವ್ಯತ್ಯಾಸವಿರುವುದು ಸಾಧ್ಯವೆಂಬುದನ್ನು ರಸಾಯನಶಾಸ್ತ್ರದ ವಿಜ್ಞಾನಿಗಳು ಅಧ್ಯಯನದ ಮೂಲಕ ಕಂಡುಕೊಂಡರು. ಅಸಿಟೆಲೀನ್ ಮತ್ತು ಬೆಂಜೀನ್ ಎರಡರಲ್ಲೂ ಅದೇ ಧಾತುಗಳು (ಕಾರ್ಬನ್ ಮತ್ತು ಹೈಡ್ರೋಜನ್) ಅದೇ ಪ್ರಮಾಣದಲ್ಲಿ (ಕಾರ್ಬನ್ನಿನ ಒಂದು ಪರಮಾಣು ಹೈಡ್ರೋಜನ್ನಿನ ಒಂದು ಪರಮಾಣು) ಇದೆ. ಎರಡಕ್ಕೂ ಮೂಲಸೂತ್ರ (ಎಂಪಿರಿಕಲ್ ಫಾರ್ಮುಲ) ಒಂದೇ, CH. ಈ ಸೂತ್ರದಂತೆ ಯಾವುದೇ ಸಂಯುಕ್ತದ ಅಣುವಿನಲ್ಲಿ ಒಂದು ಕಾರ್ಬನ್ ಪರಮಾಣು ಮತ್ತು ಒಂದು ಹೈಡ್ರೋಜನ್ ಪರಮಾಣು ಇದ್ದುದೇ ಆದರೆ ಅಣುತೂಕ ೧೩ ಆಗಿರಬೇಕಿತ್ತು. ಆದರೆ ಅಸಿಟಿಲೀನ್ ಅಣುತೂಕ 26; ಆದ್ದರಿಂದ ಅದರ ಅಣುಸೂತ್ರ C2H2. ಬೆಂಜೀನ್ ಅಣುತೂಕ 78; ಆದ್ದರಿಂದ ಅದರ ಅಣುಸೂತ್ರ C6H6. ಅಣುವಿನಲ್ಲಿರುವ ವಿವಿಧ ಬಗೆಯ ಪರಮಾಣುಗಳ ಸಂಖ್ಯೆಯನ್ನೂ ಸೂಚಿಸುವ ಈ ಅಣುಸೂತ್ರವೇ ಸಂಯುಕ್ತದ ಗುಣಲಕ್ಷಣಗಳನ್ನು ನಿರ್ಧರಿಸುವುದೆಂಬ ಭಾವನೆ ಬಹುಕಾಲ ರೂಢಿಯಲ್ಲಿತ್ತು. ಆರ್ಗಾನಿಕ್ ರಸಾಯನ ವಿಜ್ಞಾನ ಜನ್ಮತಾಳಿದ ಪ್ರಾರಂಭದಲ್ಲಿಯೇ ಈ ಭಾವನೆಯನ್ನೂ ಕೈಬಿಡಬೇಕಾಗಿ ಬಂತು. ಸಂಯುಕ್ತಗಳ ಅಣುಸೂತ್ರಗಳು ಒಂದೇ ಇದ್ದರೂ ಅಣುಗಳಲ್ಲಿರುವ ಪರಮಾಣುಗಳ ಜೋಡಣೆಯಲ್ಲಿ ವ್ಯತ್ಯಾಸವಿರಬಹುದಾದ್ದರಿಂದ ಒಂದೇ ಅಣುಸೂತ್ರವಿರುವ ಎರಡು ಅಥವಾ ಅನೇಕ ಸಂಯುಕ್ತಗಳಿರುವುದು ಸಾಧ್ಯ. ಆರ್ಗಾನಕ್ ರಸಾಯನವಿಜ್ಞಾನ ಬೆಳೆದಂತೆಲ್ಲ ಐಸೊಮೆರಿಸಂ ನಿದರ್ಶನಗಳು ಹೇರಳವಾಗಿ ದೊರೆತು ಅದರ ಆಧ್ಯಯನಕ್ಕೆ ಈ ವಿಜ್ಞಾನ ವಿಭಾಗದಲ್ಲಿ ವಿಶೇಷ ಪ್ರಾಮುಖ್ಯ ಬಂದಿದೆ. ಐಸೋಮರ್‍ಗಳ ಅಣುಗಳಲ್ಲಿರುವ ಬೇರೆ ಬೇರೆ ಬಗೆಯ ಪರಮಾಣುಗಳ ಸಂಖ್ಯೆ ಒಂದೇ ಆಗಿದ್ದು ಅವುಗಳ ಜೋಡಣೆಯಲ್ಲಿ ಮಾತ್ರ ವ್ಯತ್ಯಾಸವಿರುವುದಷ್ಟೆ. ಈ ವ್ಯತ್ಯಾಸ ಎದ್ದುಕಾಣಬಹುದು, ಇಲ್ಲವೆ ಬಲು ಸೂಕ್ಷ್ಮವಾಗಿರಬಹುದು. ಇವನ್ನು ಅನುಸರಿಸಿ ಬಗೆಬಗೆಯ ಐಸೊಮೆರಿಸಂಗಳನ್ನು ಗುರುತಿಸಿ ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ. ವಿವಿಧ ಬಗೆಯ ಐಸೊಮೆರಿಸಂಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು: 1. ರಚನೀಯ ಐಸೊಮೆರಿಸಂ (ಸ್ಟ್ರಕ್ಚರಲ್ ಐಸೊಮೆರಿಸಂ)[೧], 2. ಸ್ಟೀರಿಯೊ ಐಸೊಮೆರಿಸಂ[೨]. ಐಸೊಮರ್‍ಗಳ ರಚನೆಯಲ್ಲಿಯೇ ವ್ಯತ್ಯಾಸವಿದ್ದರೆ ಅದನ್ನು ರಚನೀಯ ಐಸೊಮೆರಿಸಂ ಎನ್ನುತ್ತಾರೆ. ಇಲ್ಲಿ ರಚನೆ ಎಂಬ ಶಬ್ದವನ್ನು ಒಂದು ವಿಶಿಷ್ಟ ಪಾರಿಭಾಷಿಕ ಅರ್ಥದಲ್ಲಿ ಬಳಸಲಾಗಿದೆ. ಅಣುವಿನಲ್ಲಿರುವ ವಿವಿಧ ಪರಮಾಣುಗಳು, ಪರಮಾಣುಪುಂಜಗಳು ಮತ್ತು ವಿವಿಧ ಬಗೆಯ ಬಂಧಗಳು ಇವುಗಳ ಅನುಕ್ರಮಕ್ಕೆ ರಚನೆ ಎಂದು ಅರ್ಥ. ಉದಾಹರಣೆಗೆ, ಈಥೈಲ್ ಆಲ್ಕೊಹಾಲ್ ಮತ್ತು ಡೈಮೀಥೈಲ್ ಈಥರ್‍ಗಳ ರಚನೆಯಲ್ಲಿ ವ್ಯತ್ಯಾಸವಿದೆ.

ಉಲ್ಲೇಖ[ಬದಲಾಯಿಸಿ]

  1. http://www.chemguide.co.uk/basicorg/isomerism/structural.html
  2. http://goldbook.iupac.org/S05983.html
"https://kn.wikipedia.org/w/index.php?title=ಐಸೋಮರ್&oldid=758695" ಇಂದ ಪಡೆಯಲ್ಪಟ್ಟಿದೆ