ವಿಷಯಕ್ಕೆ ಹೋಗು

ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ: ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ, ಬೆಲ್ಜಿಯಂ, ನೆದರ್ಲೆಂಡ್ಸ್ ಮತ್ತು ಲಕ್ಸೆಂಬರ್ಗ್ಗಳ ಕಲ್ಲಿದ್ದಲು ಮತ್ತು ಉಕ್ಕಿನ ಮೂಲಸಾಧನಗಳನ್ನು ಒಗ್ಗೂಡಿಸಿಕೊಳ್ಳಲು 1952ರಲ್ಲಿ ಆ ರಾಷ್ಟ್ರಗಳ ಸರ್ಕಾರಗಳಿಂದ ಸ್ಥಾಪಿತವಾದ ಸಂಸ್ಥೆ (ಯುರೋಪಿಯನ್ ಕೋಲ್ ಅಂಡ್ ಸ್ಟೀಲ್ ಕಮ್ಯೂನಿಟಿ). ಎರಡನೆಯ ಮಹಾಯುದ್ಧವಾದ ಮೇಲೆ ಯುರೋಪಿನಲ್ಲಿ ಒಂದು ಹೊಸ ವಾತಾವರಣ ಉದ್ಭವಿಸಿತು. ಮಹಾಯುದ್ಧದ ಪರಿಣಾಮದಿಂದ ಅನೇಕ ಐರೋಪ್ಯ ರಾಷ್ಟ್ರಗಳು ತಲ್ಲಣಗೊಂಡವು. ಆರ್ಥಿಕವಾಗಿ ಅನೇಕ ರಾಷ್ಟ್ರಗಳು ಅಗಾಧ ನಷ್ಟಕ್ಕೆ ಒಳಗಾದವು. ಇನ್ನು ಮುಂದೆಯಾದರೂ ಇಂಥ ಅನಾಹುತವನ್ನು ತಪ್ಪಿಸಬೇಕೆಂದು ಇವು ನಿರ್ಧರಿಸಿ ಇದಕ್ಕಾಗಿ ಒಕ್ಕೂಟಗಳನ್ನೂ ಸಂಘಗಳನ್ನೂ ರಚಿಸಿಕೊಳ್ಳಲಾರಂಭಿಸಿದವು. ರಾಜಕೀಯವಾಗಿ ಶಕ್ತರಾಗಬೇಕೆಂಬ ಆಸೆ ವ್ಯಕ್ತವಾಯಿತು. ಆದರೆ ಅನೇಕ ಆರ್ಥಿಕ ಅಡಚಣೆಗಳ ಪರಿಣಾಮ ವಾಗಿ ಯುರೋಪಿನ ರಾಜಕೀಯ ಐಕ್ಯ ಸಾಧಿಸಲಿಲ್ಲ. ಆರ್ಥಿಕ ವಿಷಯಗಳಲ್ಲಾದರೂ ಪರಸ್ಪರ ಸಹಕಾರ ಏರ್ಪಡಿಸಿಕೊಳ್ಳಬೇಕೆಂಬ ಆಶಯದಿಂದ ಪಶ್ಚಿಮ ಯುರೋಪಿನ ರಾಷ್ಟ್ರಗಳು ವಿವಿಧ ರೀತಿಯ ಆರ್ಥಿಕ ಒಕ್ಕೂಟಗಳನ್ನು ರಚಿಸಿಕೊಂಡವು. ಅಂಥವುಗಳ ಪೈಕಿ ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಒಂದು.

ಕಲ್ಲಿದ್ದಲಿನ ಉತ್ಪಾದನೆ ಮತ್ತು ವ್ಯಾಪಾರ

[ಬದಲಾಯಿಸಿ]

ಅನೇಕ ವರ್ಷಗಳಿಂದಲೂ ಫ್ರಾನ್ಸ್ ಮತ್ತು ಜರ್ಮನಿಗಳು ಉಕ್ಕು ಮತ್ತು ಕಲ್ಲಿದ್ದಲಿನ ಉತ್ಪಾದನೆ ಮತ್ತು ವ್ಯಾಪಾರದ ವಿಷಯದಲ್ಲಿ ಪೈಪೋಟಿ ನಡೆಸುತ್ತಿದ್ದುವು. ಉಕ್ಕು ಮತ್ತು ಕಲ್ಲಿದ್ದಲಿನ ಉತ್ಪಾದನೆಯ ಮೇಲೆ ತಮ್ಮ ಹತೋಟಿ ಹೆಚ್ಚಿಸಿಕೊಳ್ಳಲು ಯತ್ನಿಸಿದಾಗ ಈ ಎರಡು ರಾಷ್ಟ್ರಗಳ ಮಧ್ಯೆ ಕೆಲವು ಬಾರಿ ಘರ್ಷಣೆಗಳು ಉದ್ಭವಿಸಿದ್ದವು. ಆದ್ದರಿಂದ ಇನ್ನು ಮುಂದೆ ಇಂಥ ಪೈಪೋಟಿಯ ಪರಿಸ್ಥಿತಿ ತಪ್ಪಿಸಿ ಮಧುರ ಬಾಂಧವ್ಯ ಏರ್ಪಡಿಸಲು ಫ್ರಾನ್ಸ್ ಎರಡನೆಯ ಮಹಾಯುದ್ಧವಾದ ಮೇಲೆ ಕಾರ್ಯಕ್ರಮ ಕೈಗೊಂಡಿತು. ಜರ್ಮನಿ ಮತ್ತು ಫ್ರಾನ್ಸ್ಗಳ ಮಧ್ಯೆ ಇದ್ದ ದ್ವೇಷವನ್ನು ಕಡಿಮೆ ಮಾಡಿ ಅವೆರಡು ರಾಷ್ಟ್ರಗಳ ಮಧ್ಯೆ ಸಹಕಾರ ಏರ್ಪಡಿಸಿದರೆ ಮಾತ್ರ ಪಶ್ಚಿಮ ಯುರೋಪಿಯನ್ ರಾಷ್ಟ್ರಗಳ ಸರ್ವತೋಮುಖ ಪ್ರಗತಿ ಸಾಧ್ಯವೆಂಬುದನ್ನು ಫ್ರಾನ್ಸಿನ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಅರ್ಥಶಾಸ್ತ್ರಜ್ಞ ಜೀನ್ ಮಾನೆ ಗ್ರಹಿಸಿದ್ದ. ಜರ್ಮನಿ ಮತ್ತು ಫ್ರಾನ್ಸ್ಗಳ ಆರ್ಥಿಕ ತಳಹದಿ ಎನಿಸಿರುವ ಉಕ್ಕು ಮತ್ತು ಕಲ್ಲಿದ್ದಲಿನ ಉತ್ಪಾದನೆ ಮತ್ತು ವಿತರಣೆಯ ವಿಷಯದಲ್ಲಿ ಈ ಎರಡು ರಾಷ್ಟ್ರಗಳ ಮಧ್ಯೆ ಮೊದಲು ಸಹಕಾರ ಏರ್ಪಡಿಸಿದರೆ ಮುಂದೆ ಉಳಿದ ವಿಷಯಗಳಲ್ಲೂ ಈ ಎರಡು ರಾಷ್ಟ್ರಗಳ ಮಧ್ಯೆ ಸಹಕಾರ ತಾನಾಗಿಯೇ ಉದ್ಭವಿಸುತ್ತದೆ ಎಂಬುದು ಇವನ ಅಭಿಪ್ರಾಯ. ತನ್ನ ಅಭಿಪ್ರಾಯವನ್ನು ಕಾರ್ಯಗತಮಾಡಲು ಒಂದು ಯೋಜನೆಯನ್ನು ತಯಾರಿಸಿ ಫ್ರಾನ್ಸಿನ ವಿದೇಶಾಂಗ ಮಂತ್ರಿ ರಾಬರ್ಟ್ ಷೂಮನನ ಮುಂದೆ 1950ರಲ್ಲಿ ಇಟ್ಟರು. ಷೂಮನ್ ಈ ಯೋಜನೆಯನ್ನು ಮೆಚ್ಚಿ ಕಾರ್ಯಗತಗೊಳಿಸಲು ಮನಸ್ಸು ಮಾಡಿದ.[]

ಜರ್ಮನಿ ಮತ್ತು ಫ್ರಾನ್ಸ್ಗಳ ನಡುವೆ ಒಡಂಬಡಿಕೆ

[ಬದಲಾಯಿಸಿ]

[File:European Coal and Steel Community.svg|alt=Map of the 15 ECSC members in 2002|thumb|The 15 ECSC (EU) members in 2002]] ಕೇವಲ ಜರ್ಮನಿ ಮತ್ತು ಫ್ರಾನ್ಸ್ಗಳ ನಡುವೆ ಒಡಂಬಡಿಕೆ ಏರ್ಪಡಿಸಿಕೊಳ್ಳುವುದರ ಬದಲು, ಪಶ್ಚಿಮ ಯುರೋಪಿನಲ್ಲಿರುವ ಇನ್ನೂ ಕೆಲವು ರಾಷ್ಟ್ರಗಳೊಡನೆಯೂ ಒಡಂಬಡಿಕೆ ಏರ್ಪಡಿಸಿಕೊಳ್ಳುವುದು ಒಳ್ಳೆಯದು ಎಂಬುದನ್ನು ಮನಗಂಡು ಷೂಮನ್ ಇತರ ರಾಷ್ಟ್ರಗಳೊಡನೆ ಮಾತುಕತೆ ಪ್ರಾರಂಭಿಸಿದ. ಅದರ ಪರಿಣಾಮವಾಗಿ ಒಟ್ಟು ಆರು ಪಶ್ಚಿಮ ಐರೋಪ್ಯ ರಾಷ್ಟ್ರಗಳು ಷೂಮನ್ ಸಲಹೆಗಳಿಗೆ ಬೆಂಬಲವಿತ್ತವು. 1951ರ ಏಪ್ರಿಲ್ ತಿಂಗಳಲ್ಲಿ ಷೂಮನನ ಸಲಹೆಯ ಪ್ರಕಾರ ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ ಸ್ಥಾಪಿಸಲು ಬೆಲ್ಜಿಯಂ, ಪಶ್ಚಿಮ ಜರ್ಮನಿ, ಫ್ರಾನ್ಸ್, ಇಟಲಿ, ಲಕ್ಸೆಂಬರ್ಗ್ ಮತ್ತು ನೆದರ್ಲೆಂಡ್ಸ್ ದೇಶಗಳು ಒಂದು ಒಪ್ಪಂದಕ್ಕೆ ಸಹಿಹಾಕಿದವು. ಈ ಒಪ್ಪಂದದ ಪ್ರಕಾರ 1952ರ ಜುಲೈಯಲ್ಲಿ ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಅಸ್ತಿತ್ವಕ್ಕೆ ಬಂತು. ಮೇಲ್ಕಂಡ ಏರ್ಪಾಡು ರಾಬರ್ಟ್ ಷೂಮನನ ಯತ್ನದ ಫಲವಾಗಿ ಕಾರ್ಯಗತವಾದ್ದರಿಂದ ಇದನ್ನು ಷೂಮನ್ ಯೋಜನೆಯೆಂದು ಕರೆಯಲಾಗಿದೆ.[]

ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಸ್ಥಾಪನೆ

[ಬದಲಾಯಿಸಿ]

ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಸ್ಥಾಪಿತವಾದ ಮೇಲೆ ಇದಕ್ಕೆ ಸೇರಿದ ದೇಶಗಳಿಗೆಲ್ಲ ಅನ್ವಯಿಸುವಂತೆ ಒಂದು ಸಾಮಾನ್ಯ ಮಾರುಕಟ್ಟೆ ಪದ್ಧತಿಯನ್ನು 1953ರಲ್ಲಿ ಜಾರಿಗೆ ತರಲಾಯಿತು. ಇದರ ಮುಖ್ಯ ಲಕ್ಷಣಗಳು ಹೀಗಿವೆ: 1. ಈ ಮಾರುಕಟ್ಟೆಗೆ ಸೇರಿದ ಆರು ದೇಶಗಳಲ್ಲಿ ಎಲ್ಲಿಯಾದರೂ ಕಲ್ಲಿದ್ದಲು ಮತ್ತು ಉಕ್ಕು ಮಾರಬಹುದು. 2. ಯಾವ ದೇಶವೂ ಮತ್ತೊಂದು ದೇಶದಿಂದ ಬರುವ ಕಲ್ಲಿದ್ದಲು ಮತ್ತು ಉಕ್ಕಿನ ಮೇಲೆ ಆಮದು ಸುಂಕ ವಿಧಿಸುವಂತಿಲ್ಲ. 3. ಅದೇ ರೀತಿ ದೇಶಗಳು ರಫ್ತು ಸುಂಕ ಹಾಕುವಂತಿಲ್ಲ. 4. ತಮ್ಮ ದೇಶಕ್ಕೆ ಆಮದಾಗುವ ಅಥವಾ ತಮ್ಮಿಂದ ರಫ್ತಾಗುವ ಒಟ್ಟು ಉಕ್ಕು ಮತ್ತು ಕಲ್ಲಿದ್ದಲಿನ ಮೇಲೆ ಯಾವ ರೀತಿಯ ಪ್ರತಿಬಂಧಕವನ್ನೂ ವಿಧಿಸುವ ಹಾಗಿಲ್ಲ. 5 ಯಾವ ಪ್ರಮಾಣದಲ್ಲಿ ಬೇಕಾದರೂ ಪ್ರತಿಯೊಂದು ದೇಶವೂ ಉಕ್ಕು ಮತ್ತು ಕಲ್ಲಿದ್ದಲಿನ ಉತ್ಪಾದನೆ ಮತ್ತು ವಿತರಣೆ ಕೈಗೊಳ್ಳಬಹುದು.ಹೀಗೆ ಸು. 17 ಕೋಟಿ ಪ್ರಜಾಸಂಖ್ಯೆ ಇರುವ ಪಶ್ಚಿಮ ಯುರೋಪಿನ ರಾಷ್ಟ್ರಗಳ ಮಧ್ಯೆ ನಿರ್ಬಂಧರಹಿತ ಮಾರುಕಟ್ಟೆ ಜಾರಿಗೆ ಬಂತು.

ಕಲ್ಲಿದ್ದಲು ಮತ್ತು ಉಕ್ಕು ಸಮುದಾಯದ ಆಡಳಿತವ್ಯವಸ್ಥೆ

[ಬದಲಾಯಿಸಿ]

ಕಲ್ಲಿದ್ದಲು ಮತ್ತು ಉಕ್ಕು ಸಮುದಾಯದ ಆಡಳಿತವ್ಯವಸ್ಥೆಯನ್ನು ನೋಡಿಕೊಳ್ಳಲು ಒಬ್ಬರು ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಏಳು ಜನ ಸದಸ್ಯರುಗಳುಳ್ಳ ಒಂದು ಉನ್ನತ ಮಂಡಲಿ ಇದೆ. ಈ ಉನ್ನತಮಂಡಲಿ, 142 ಪ್ರತಿನಿಧಿಗಳನ್ನುಳ್ಳ ಪ್ರತಿನಿಧಿಸಭೆಯ ಹತೋಟಿಗೆ ಒಳಪಟ್ಟಿರುತ್ತದೆ. ಆರು ದೇಶಗಳ ಪಾರ್ಲಿಮೆಂಟುಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಪ್ರತಿನಿಧಿಗಳನ್ನು ಚುನಾಯಿಸಿ ಪ್ರತಿನಿಧಿಸಭೆಗೆ ಕಳುಹಿಸುತ್ತವೆ. ಮೂರನೆಯ ಎರಡು ಬಹುಮತ ಪಡೆಯುವ ಆಧಾರದ ಮೇಲೆ ಪ್ರತಿನಿಧಿಸಭೆ ಯಾವ ಸಂದರ್ಭದಲ್ಲಿ ಬೇಕಾದರೂ ಉನ್ನತ ಮಂಡಲಿಯ ಸದಸ್ಯರನ್ನು ಅಧಿಕಾರದಿಂದ ಕಿತ್ತೊಗೆಯಬಹುದು. ಇದಲ್ಲದೆ ಪ್ರತಿಯೊಂದು ರಾಷ್ಟ್ರವೂ ತನ್ನ ಒಬ್ಬ ಪ್ರತಿನಿಧಿಯನ್ನು ಸಮಾಲೋಚನಾ ಮಂಡಲಿಗೆ ಕಳುಹಿಸುತ್ತದೆ. ಈ ಮಂಡಲಿ, ಪ್ರತಿ ದೇಶದ ಆರ್ಥಿಕ ನೀತಿಗಳ ವಿಷಯದಲ್ಲಿ ಉನ್ನತಮಂಡಲಿ ಯಾವ ರೀತಿ ವರ್ತಿಸಬೇಕು ಎಂಬುದರ ವಿಷಯದಲ್ಲಿ ಸಲಹೆ ನೀಡುತ್ತದೆ.ಕಲ್ಲಿದ್ದಲು ಮತ್ತು ಉಕ್ಕು ಸಮುದಾಯದ ಆಡಳಿತದ ಖರ್ಚಿಗೆ ಹಣ ಒದಗಿಸಲು ಉನ್ನತ ಮಂಡಲಿ ಸಾಮಾನ್ಯ ಮಾರುಕಟ್ಟೆಯ ಪ್ರದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಕಲ್ಲಿದ್ದಲು ಮತ್ತು ಉಕ್ಕಿನ ಮೇಲೆ ಒಂದು ತೆರಿಗೆ ವಿಧಿಸುತ್ತದೆ. ಈ ಪ್ರದೇಶದಲ್ಲಿ ಉಕ್ಕು ಮತ್ತು ಕಲ್ಲಿದ್ದಲು ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಬಂಡವಾಳ ಒದಗಿಸುವುದರಲ್ಲೂ ಉನ್ನತ ಮಂಡಲಿ ಸಹಾಯ ಮಾಡುತ್ತದೆ. ಆಗಿಂದಾಗ್ಗೆ ಉನ್ನತ ಮಂಡಲಿ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಡಿಬೆಂಚರುಗಳನ್ನು ಮಾರಿ ನಿಧಿ ಕೂಡಿಸುತ್ತದೆ. ಹೀಗೆ ಪಡೆದ ನಿಧಿಯಿಂದ ಕಲ್ಲಿದ್ದಲು ಮತ್ತು ಉಕ್ಕಿನ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಸಾಲ ಒದಗಿಸಿ ಅವುಗಳ ಅಭಿವೃದ್ಧಿ ಕಾರ್ಯಕ್ಕೆ ನೆರವು ನೀಡುತ್ತದೆ.

ಮಾರುಕಟ್ಟೆಯ ಪ್ರದೇಶ

[ಬದಲಾಯಿಸಿ]

ಈ ರಾಷ್ಟ್ರಗಳು ಸಾಮಾನ್ಯ ಮಾರುಕಟ್ಟೆಯ ಪ್ರದೇಶದಲ್ಲಿ ಕಲ್ಲಿದ್ದಲು ಮತ್ತು ಉಕ್ಕಿನ ಉತ್ಪಾದನೆ ಮತ್ತು ವಿತರಣೆ ಯಾವ ನಿರ್ಬಂಧವೂ ಇಲ್ಲದೆ ನಡೆದುಕೊಂಡು ಹೋಗುವಂತೆ ಉನ್ನತ ಮಂಡಲಿ ನೋಡಿಕೊಳ್ಳುತ್ತದೆ. ಈ ಕರ್ತವ್ಯ ನಿರ್ವಹಣೆಯಲ್ಲಿ ಉನ್ನತಮಂಡಲಿ ಯಾವ ರಾಷ್ಟ್ರದ ಸರ್ಕಾರಕ್ಕೂ ಅಧೀನವಾಗಿಲ್ಲ. ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಸ್ಥಾಪಿತವಾದಾಗ ರೂಪಿಸಲಾದ ನಿಯಮಗಳ ಪ್ರಕಾರ ತನ್ನ ಕಾರ್ಯವನ್ನು ಉನ್ನತ ಮಂಡಲಿ ನಿರ್ವಹಿಸುತ್ತದೆ.ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಸ್ಥಾಪಿತವಾದ ಮೇಲೆ ಐರೋಪ್ಯ ರಾಷ್ಟ್ರಗಳಲ್ಲಿ ಕಲ್ಲಿದ್ದಲು ಮತ್ತು ಉಕ್ಕಿನ ವ್ಯಾಪಾರ ಹೆಚ್ಚಿದುದಲ್ಲದೆ ಹೊರದೇಶಗಳೊಡನೆಯೂ ನಡೆಯುತ್ತಿದ್ದ ವ್ಯಾಪಾರ ಅಧಿಕಗೊಂಡಿತು. ಸಾಮಾನ್ಯ ಮಾರುಕಟ್ಟೆ ಪ್ರದೇಶದಲ್ಲಿ ಉಕ್ಕಿನ ಮತ್ತು ಕಲ್ಲಿದ್ದಲಿನ ಉತ್ಪಾದನೆ ಗಮನಾರ್ಹವಾಗಿ ಬೆಳೆದಿದೆ. ಇದರಿಂದ ಈ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯ ಮೇಲೆ ಒಳ್ಳೆಯ ಪರಿಣಾಮವಾಗಿದೆ. ಈ ರಾಷ್ಟ್ರಗಳು ತಮ್ಮಲ್ಲಿರುವ ಸಂಪನ್ಮೂಲಗಳನ್ನು ವಿವಿಧ ಯೋಜನೆಗಳ ಮೂಲಕ ಉಪಯೋಗಿಸಿಕೊಂಡು ಅದ್ಭುತ ಪ್ರಗತಿ ಸಾಧಿಸಲು ಸಹಾಯವಾಯಿತು. ಜೊತೆಗೆ ಉಳಿದ ಆರ್ಥಿಕ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರದ ಮೂಲಕ ಪ್ರಗತಿ ಸಾಧಿಸಬೇಕೆಂಬ ಮನೋಭಾವ ಈ ರಾಷ್ಟ್ರಗಳಲ್ಲಿ ಮೂಡಿತು.ತಮ್ಮ ಗುರಿಯನ್ನು ಮತ್ತಷ್ಟು ಶೀಘ್ರವಾಗಿ ಮುಟ್ಟಲು 1957ರಲ್ಲಿ ರೋಮಿನಲ್ಲಿ ಮತ್ತೊಂದು ಒಪ್ಪಂದಕ್ಕೆ ಆರು ರಾಷ್ಟ್ರಗಳು ಸಹಿ ಹಾಕಿದವು. ಅದರ ಪ್ರಕಾರ ಐರೋಪ್ಯ ಆರ್ಥಿಕ ಸಮುದಾಯ ಸ್ಥಾಪಿತವಾಯಿತು. ಇದೇ ರೀತಿ ಐರೋಪ್ಯ ಪರಮಾಣುಶಕ್ತಿ ಸಮುದಾಯವೂ ಆರು ರಾಷ್ಟ್ರಗಳ ಸಹಕಾರದ ಫಲವಾಗಿ ಅಸ್ತಿತ್ವಕ್ಕೆ ಬಂತು.ಹೀಗೆ ಪಶ್ಚಿಮ ಯುರೋಪಿನಲ್ಲಿ ಆರ್ಥಿಕ ಸಹಕಾರದ ಮಹತ್ತ್ವವನ್ನು ಅರಿತುಕೊಂಡು, ರಾಷ್ಟ್ರಗಳು ಒಗ್ಗಟ್ಟಿನಿಂದ ವರ್ತಿಸುವಂತೆ ಮಾಡಲು ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯ ಅಡಿಪಾಯ ಒದಗಿಸಿತೆಂದು ಹೇಳಬಹುದು. ==ಪ್ರಸಕ್ತ

ಉಲ್ಲೇಖಗಳು

[ಬದಲಾಯಿಸಿ]