ವಿಷಯಕ್ಕೆ ಹೋಗು

ಐಬೀರಿಯನ್ ಸಂಸ್ಕೃತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐಬೀರಿಯನ್ ಸಂಸ್ಕೃತಿ: ಪ್ರಾಚೀನ ಗ್ರೀಕ್ ಚರಿತ್ರಕಾರರು ವಿಶಾಲವಾದ ಅರ್ಥದಲ್ಲಿ ನೈಋತ್ಯ ಯುರೋಪ್ ನ ಪ್ರಾಚೀನ ಜನಗಳನ್ನು ಐಬೀರಿಯನರೆಂದು ಕರೆದರು. ಆದರೆ ಸಾಮಾನ್ಯವಾಗಿ ಪುರ್ವ ಸ್ಪೇನಿನಲ್ಲಿ, ಅದರಲ್ಲೂ ಐಬರಸ್ ನದಿಯ (ಈಗಿನ ಏಬ್ರೋ) ಕೊಳ್ಳದಲ್ಲಿ ವಾಸಿಸುತ್ತಿದ್ದ ಜನಾಂಗದವರನ್ನು ಐಬೀರಿಯನರೆಂದು ಕರೆಯಬಹುದು. ಇವರು ಉತ್ತರ ಆಫ್ರಿಕದಿಂದ ದಕ್ಷಿಣ ಯುರೋಪಿಗೆ ನೂತನಶಿಲಾಯುಗದ ಕಾಲದಲ್ಲಿ ಅಂದರೆ ಪ್ರ.ಶ.ಪು. ಸು. 3,000ದಲ್ಲಿ ಬಂದು ನೆಲೆಸಿದರು. ಇವರು ಹ್ಯಾಮಿಟಿಕ್ ಬುಡಕಟ್ಟಿನವರು. ಒಂದು ಸಿದ್ಧಾಂತದ ಪ್ರಕಾರ ಇತಿಹಾಸ ಪುರ್ವಕಾಲದಲ್ಲಿ ಐಬೀರಿಯನರು ಯುರೋಪಿನ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿದ್ದರೆಂದೂ ಕಾಲಕ್ರಮದಲ್ಲಿ ಅವರ ಬುಡಕಟ್ಟು ನಾಶವಾಯಿತೆಂದೂ ಇಂದಿನ ಬಾಸ್ಕ್‌ ಬುಡಕಟ್ಟಿನ ಜನ ಐಬೀರಿಯನರಿಂದಲೇ ಹುಟ್ಟಿದವರೆಂದೂ ತಿಳಿದುಬರುತ್ತದೆ. ಇತಿಹಾಸಪುರ್ವಕಾಲದ ಫ್ರಾನ್ಸ್‌, ಗ್ರೇಟ್ ಬ್ರಿಟನ್, ಐರ್ಲೆಂಡ್ಗಳಲ್ಲಿ ಐಬೀರಿಯನ್ ಸಂಸ್ಕೃತಿಗೆ ಸೇರಿದ ಅವಶೇಷಗಳು ದೊರಕಿವೆ. ರೋಮನ್ ಚರಿತ್ರಕಾರರ ಅಭಿಪ್ರಾಯದಂತೆ ಐಬೀರಿಯನರು ಕುಳ್ಳರು, ಕಪ್ಪು ವರ್ಣದವರು, ಸಣ್ಣ ಮುಖ ಮತ್ತು ದಪ್ಪ ಕೆಳತುಟಿ ಉಳ್ಳವರು. ಐಬೀರಿಯನ್ ಜನಾಂಗದಲ್ಲಿ ಅನೇಕ ಪ್ರಭೇದಗಳಿವೆ. ಆಲ್ಮೇರಿಯಾದಲ್ಲಿ ವಾಸಿಸುತ್ತಿದ್ದ ಬಸ್ತೆತನಿಗಳೂ ಪಶ್ಚಿಮದಲ್ಲಿದ್ದ ಟರ್ಟೆಸ್ಸಿಯನರೂ ಇವರಲ್ಲಿ ಮುಖ್ಯರಾದವರು.

ಇತಿಹಾಸ

[ಬದಲಾಯಿಸಿ]
Iberia during the Second Punic War, showing the short-lived Carthaginian (yellow) and Roman (red) territories and allies

ಪ್ರ.ಶ.ಪು. 6 ಮತ್ತು 7ನೆಯ ಶತಮಾನಗಳಲ್ಲಿ ಕೆಲ್ಟಿಕ್ ದಂಡಯಾತ್ರೆಗಳಿಗೆ ಐಬೀರಿಯನರು ಒಳಗಾದರು. ಅನಂತರ ಗ್ರೀಕರು ಇವರ ಮೇಲೆ ದಾಳಿ ನಡೆಸಿದರು. ಪ್ರ.ಶ.ಪು. 4ನೆಯ ಶತಮಾನದ ಹೊತ್ತಿಗೆ ಕಾರ್ಥೇಜಿಯನರ ಪ್ರಭಾವ ಹೆಚ್ಚಾಯಿತು. ಅನಂತರ ರೋಮನ್ ದಾಳಿಗಳಿಗೆ ಒಳಗಾಗಿ ಐಬೀರಿಯನ್ ಸಂಸ್ಕೃತಿ ನಾಶವಾಯಿತು.ಎತ್ತರವಾದ ಗೋಡೆಗಳಿಂದ ಆವೃತವಾದ ನಗರಗಳಲ್ಲಿ ಐಬೀರಿಯನರ ವಾಸ. ಟ್ಯಾರಗೋನ, ಟಾರ್ಟೇಸಸ್, ಮಸ್ಸಿಯ ಮುಂತಾದ ಕಡೆಗಳಲ್ಲಿ ಕಾಣಬರುವ ಮಹತ್ತರವಾದ ಗೋಡೆಗಳು ಐಬೀರಿಯನರ ರಾಜಕೀಯ ಭದ್ರತೆಯನ್ನೂ ಮಹತ್ತ್ವವನ್ನೂ ಸೂಚಿಸುತ್ತವೆ. ಈ ಕೋಟೆಗಳು ಕಾರ್ಥೇಜಿಯನರಿಂದ ನಾಶವಾದುವು. ವ್ಯವಸಾಯ, ಗಣಿಗಾರಿಕೆ, ಲೋಹವಿದ್ಯೆ ಮುಂತಾದವುಗಳಲ್ಲಿ ಇವರು ನಿಷ್ಣಾತರಾಗಿದ್ದರು. ಐಬೀರಿಯನರ ನಾಣ್ಯಗಳು ವಿಶೇಷವಾಗಿ ದೊರಕಿವೆ. ಪ್ರ.ಶ.ಪು. 5ನೆಯ ಶತಮಾನದ ಗ್ರೀಕ್ ನಾಣ್ಯಗಳ ಪ್ರಭಾವಗಳನ್ನು ಎತ್ತಿತೋರಿಸುವ ಇವರ ನಾಣ್ಯಗಳು ವೈವಿಧ್ಯಮಯ. ರೋಮನರ ದಂಡಯಾತ್ರೆಗಳ ಅನಂತರ ರೋಮನ್ ನಾಣ್ಯಗಳ ಪ್ರಭಾವಗಳು ವಿಶೇಷವಾದುವು. ಈ ನಾಣ್ಯಗಳ ಮುಂಬದಿಯಲ್ಲಿ ಐಬೀರಿಯನರ ಮುಖ್ಯ ನಗರಗಳ ಹೆಸರುಗಳೂ ಅಶ್ವಾರೋಹಿ ಯೋಧನ ಚಿತ್ರವೂ ಹಿಂಬದಿಯಲ್ಲಿ ರಾಜನ ತಲೆಯ ಚಿತ್ರವೂ ಇವೆ. ಇವುಗಳಲ್ಲಿರುವ ಬರೆವಣಿಗೆಯನ್ನು ಇನ್ನೂ ಪುರ್ಣವಾಗಿ ಓದಲಾಗಿಲ್ಲವೆಂದೇ ಹೇಳಬೇಕು. ಈ ಲಿಪಿ ಪಶ್ಚಿಮ ಗ್ರೀಕ್ ಮತ್ತು ಪ್ಯುನಿಕ್ ಲಿಪಿಗಳನ್ನು ವಿಶೇಷವಾಗಿ ಹೋಲುತ್ತದೆ. ಇವರ ಪ್ರಾಚೀನ ಗ್ರಂಥಗಳು ನಮಗೆ ಉಪಲಬ್ಧವಾಗಿಲ್ಲದಿದ್ದರೂ ಐಬೀರಿಯನರು ಉತ್ತಮ ಸಾಹಿತ್ಯ ಹೊಂದಿದ್ದರೆಂದು ಹೇಳಲು ಆಧಾರಗಳಿವೆ.[]

ಐಬೀರಿಯನ್ ಕಲೆಯ ಪರಿಪುರ್ಣತೆ

[ಬದಲಾಯಿಸಿ]

ಇವರ ಕುಂಭನಿರ್ಮಾಣದಲ್ಲಿ ಐಬೀರಿಯನ್ ಕಲೆಯ ಪರಿಪುರ್ಣತೆಯನ್ನು ಕಾಣಬಹುದು. ಇದು ಪ್ರ.ಶ.ಪು. 3ನೆಯ ಶತಮಾನದಲ್ಲಿ ಉಚ್ಛ್ರಾಯ ಸ್ಥಿತಿ ಮುಟ್ಟಿತ್ತು. ಮಡಕೆಗಳ ಮೇಲಿನ ಪ್ರಾಣಿಗಳು, ಗಿಡಮರಗಳು, ಪಕ್ಷಿಗಳು, ಮನುಷ್ಯರು ಮತ್ತು ಜ್ಯಾಮಿತಿಯ ವಿವಿಧ ಚಿಹ್ನೆಗಳ ಕೌಶಲಭರಿತ ವರ್ಣಚಿತ್ರಗಳಿವೆ. ಹೂಜಿಗಳ ಮೇಲಿನ ವರ್ಣಚಿತ್ರಗಳಂತೂ ಉತ್ತಮಮಟ್ಟದವು. ಯುದ್ಧ, ನಾಟ್ಯ, ಬೇಟೆ, ಸಂಸಾರ ಮುಂತಾದವುಗಳ ವರ್ಣಚಿತ್ರಗಳನ್ನು ಹೂಜಿಗಳ ಮೇಲೆ ಬಿಡಿಸಲಾಗಿದೆ. ಈ ಹೂಜಿಗಳ ಮೇಲೆ ಐಬೀರಿಯನ್ ಲಿಪಿಯ ಶಾಸನಗಳೂ ಇರುವುದರಿಂದ, ಇವುಗಳ ಪ್ರಾಮುಖ್ಯ ಹೆಚ್ಚು. ಕಂಚಿನ ಯುಗಕ್ಕೆ ಸೇರಿದ ಅನೇಕ ಕಂಚಿನ ಪಾತ್ರೆಗಳು ದೊರಕಿವೆ. ಅವುಗಳಲ್ಲಿ ವೈಶಿಷ್ಟ್ಯವೇನೂ ಕಾಣುವುದಿಲ್ಲ.[]

ಗ್ರೀಕ್ ಶಿಲ್ಪದ ಪ್ರಭಾವ

[ಬದಲಾಯಿಸಿ]
Ancient silver vessel from the Tivissa Treasure, c. 500 BC. Archaeology Museum of Catalonia
Iberian relief, Mausoleum of Pozo Moro, 6th century BC, showing Hittite influence

ಐಬೀರಿಯನ್ ಶಿಲ್ಪ ಗ್ರೀಕ್ ಶಿಲ್ಪದಿಂದ ಪ್ರಭಾವಿತವಾಗಿತ್ತು. ಮರ್ಸಿಯ, ಅಲ್ಬಸೆಟ್ ಮುಂತಾದ ಕಡೆಗಳಲ್ಲಿ ದೊರಕಿರುವ ಐಬೀರಿಯನರ ಶಿಲ್ಪಗಳು ಮನಮೋಹಕವಾಗಿವೆ. ಕಂಚಿನ ವಿಗ್ರಹಗಳಲ್ಲೂ ಗ್ರೀಕರ ಪ್ರಭಾವ ಎದ್ದು ಕಾಣುತ್ತದೆ. ಸ್ಪೇನಿನಲ್ಲಿ ರೋಮನರು ಪ್ರಮುಖರಾಗುವುದಕ್ಕೆ ಮುಂಚೆ ಐಬೀರಿಯನರು ಇಡೀ ಪ್ರದೇಶವನ್ನು ಆಕ್ರಮಿಸಿಕೊಂಡರು. ಅನಂತರ ಒಂದು ಶತಮಾನಕ್ಕೂ ಹೆಚ್ಚಿನ ಕಾಲ ಐಬೀರಿಯನ್ ಮತ್ತು ರೋಮನ್ ಸಂಸ್ಕೃತಿಗಳು ಒಟ್ಟಿಗೇ ಸಹಬಾಳ್ವೆ ನಡೆಸಿದುವು. ಪುರಾತನ ನೆಲೆಗಳಲ್ಲಿ ನಡೆದ ಅಗೆತಗಳಲ್ಲಿ ರೋಮನ್ ಮತ್ತು ಐಬೀರಿಯನ್ ಶೈಲಿಯ ಮಡಕೆಗಳು, ಶಿಲ್ಪಗಳು ಒಟ್ಟಿಗೆ ದೊರಕಿರುವುದು ಇದನ್ನು ಸಮರ್ಥಿಸುತ್ತದೆ. ಕಾಲಕ್ರಮದಲ್ಲಿ ಕ್ರಿಸ್ತನ ಕಾಲದ ಸುಮಾರಿಗೆ ಐಬೀರಿಯನ್ ಸಂಸ್ಕೃತಿ ನಾಶವಾಗಿ ರೋಮನ್ ಸಂಸ್ಕೃತಿಯೊಡನೆ ಮಿಳಿತವಾಗಿ ಹೋಯಿತು. 3000 ವರ್ಷ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ಈ ಸಂಸ್ಕೃತಿ ಯುರೋಪಿನಲ್ಲಿ ಒಂದು ಹೊಸ ಸಂಸ್ಕೃತಿಗೆ ಕಾರಣವಾಯಿತು.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: