ವಿಷಯಕ್ಕೆ ಹೋಗು

ಐನೇ ಅಕ್ಬರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


The Court of Akbar, an illustration from a manuscript of the Akbarnama

ಐನೇ ಅಕ್ಬರಿ: ಅಕ್ಬರನ ಆಸ್ಥಾನದಲ್ಲಿದ್ದ ಅಬುಲ್ ಫಜಲ್ ಪರ್ಷಿಯನ್ ಭಾಷೆಯಲ್ಲಿ ಬರೆದ ಅಕ್ಬರ್ನಾಮಾ ಎಂಬ ಬೃಹದ್ಗ್ರಂಥದ ಐದು ಭಾಗಗಳಲ್ಲಿ ಮೂರನೆಯದು-ಅತ್ಯಂತ ಪ್ರಸಿದ್ಧವಾದದ್ದು. ಸ್ವತಂತ್ರ ಕೃತಿ ಎಂದೂ ಹೇಳಬಹುದು. ಅಕ್ಬರನ ಪ್ರೇರಣೆ, ಪ್ರೋತ್ಸಾಹ ಮತ್ತು ಆಜ್ಞೆಗನುಗುಣವಾಗಿ ಐದು ಬಾರಿ ಪರಿಷ್ಕಾರಗೊಂಡು ಈ ಕೃತಿ ಹೊರಬಂತು. ಅಬುಲ್ ಫಜ಼ಲ್ ಇತರ ಗ್ರಂಥಗಳನ್ನು ಬರೆದಿರುವನಾದರೂ ಆತನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿದ್ದು ಈ ಗ್ರಂಥವೇ. ಅಬುಲ್ ಫಜ಼ಲನೇ ಉಲ್ಲೇಖಿಸಿರುವಂತೆ ಆತ ಪುಸ್ತಕ ಬರೆಯಲು ಕಾರಣವೆಂದರೆ ಮಹಾನ್ ಸಾಮ್ರಾಟನೊಬ್ಬನ ಸ್ಮೃತಿಯನ್ನು ರಕ್ಷಿಸಿಡುವುದು ಮತ್ತು ಜಿಜ್ಞಾಸುಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದು. ಮೊಗಲರ ಕಾಲದ ಇಸ್ಲಾಮೀ ಪ್ರಪಂಚದಲ್ಲಿ ಇದಕ್ಕೆ ಸಾಕಷ್ಟು ಮರ್ಯಾದೆ ದೊರಕಿತ್ತು. ಆದರೆ ವಾರೆನ್ ಹೇಸ್ಟಿಂಗ್ಸನ ಕಾಲದಲ್ಲಿ ಗ್ಲೈಡ್ವಿನ್ ಇದರ ಭಾಗವೊಂದನ್ನು ಇಂಗ್ಲಿಷಿಗೆ ಅನುವಾದಿಸುವವರೆಗೆ ಐರೋಪ್ಯ ವಿದ್ವಾಂಸರ ಹಾಗೂ ಭಾರತೀಯರ ಗಮನ ಇದರತ್ತ ಹರಿದಿರಲೇ ಇಲ್ಲ. ಅನಂತರ ಬ್ಲ್ಯಾಕ್ಮನ್ (1873) ಮತ್ತು ಜ್ಯಾರಟ್ (1891; 1894) ಇದನ್ನು ಸಂಪುರ್ಣವಾಗಿ ಭಾಷಾಂತರಿಸಿದರು.

ಇದನ್ನು ಮುಗಿಸಲು ಅಬುಲ್ ಫಜ಼ಲನಿಗೆ ಏಳು ವರ್ಷಗಳು ಬೇಕಾದುವು. ಕೃತಿ ಸಂಪುರ್ಣಗೊಂಡಿದ್ದು 1598ರಲ್ಲಿ. ಮೊದಲನೆಯ ಭಾಗದಲ್ಲಿ ಸಾಮ್ರಾಟನ ಪ್ರಶಸ್ತಿ, ಅರಮನೆಗಳು ಮತ್ತು ದರಬಾರುಗಳ ವಿವರಣೆ ಇದೆ. ಎರಡನೆಯ ಭಾಗದಲ್ಲಿ ರಾಜ್ಯ ನೌಕರರು ಮತ್ತು ಸೈನಿಕರೇ ಅಲ್ಲದೆ ವಿವಾಹ ಮತ್ತು ಶೈಕ್ಷಣಿಕ ನಿಯಮಗಳು, ವಿವಿಧ ಮನೋರಂಜನೆಯ ಸಾಧನಗಳು ಮತ್ತು ರಾಜದರ್ಬಾರಿನ ಪ್ರಮುಖ ಆಶ್ರಿತರಾದ ಸಾಹಿತ್ಯಕಾರರು, ಸಂಗೀತಜ್ಞರುಗಳು ಮುಂತಾದ ವಿವರಣೆ ಇದೆ. ಮೂರನೆಯ ಭಾಗದಲ್ಲಿ ನ್ಯಾಯ ಮತ್ತು ನಿರ್ವಾಹಕ ವಿಭಾಗಗಳ ಕಾನೂನುಗಳು, ಕೃಷಿಶಾಸನದ ವಿವರಗಳು ಮತ್ತು ಹನ್ನೆರಡು ಸುಬಾಗಳ ವಿವರಗಳುಂಟು. ಹಿಂದೂಗಳ ಸಾಮಾಜಿಕ ಸ್ಥಿತಿಯ ಮತ್ತು ಅವರ ಧರ್ಮ ದರ್ಶನ ಸಂಸ್ಕೃತಿಗಳ, ವಿದೇಶೀ ಆಕ್ರಮಣಕಾರರ, ಪ್ರಮುಖ ವಿದೇಶೀ ಯಾತ್ರಿಕರ ಮತ್ತು ಮುಸಲ್ಮಾನ್ ಸಂತರ ವರ್ಣನೆಗಳನ್ನು ನಾಲ್ಕನೆಯ ಭಾಗ ಒಳಗೊಂಡಿದೆ. ಅಕ್ಬರನ ಸುಭಾಷಿತಗಳಿಗೆ ಐದನೆಯ ಭಾಗ ಮೀಸಲು. ಈ ರೀತಿಯಾಗಿ ಸಾಮ್ರಾಟ, ಸಾಮ್ರಾಜ್ಯ ಮತ್ತು ಪ್ರಜೆಗಳ ಬಗ್ಗೆ ಅನೇಕ ವಿವರಗಳನ್ನು ಒಳಗೊಂಡಿರುವ ಈ ಗ್ರಂಥದಲ್ಲಿ ಯುದ್ಧ, ರಾಜಕೀಯ ಮುಂತಾದವು ತುಂಬಿದ್ದರೂ ಪ್ರಜೆಗಳಿಗೂ ಸಾಕಷ್ಟು ಪ್ರಾಧಾನ್ಯವುಂಟು. ಹೀಗಾಗಿ ಇದನ್ನು ಆಧುನಿಕ ಭಾರತದ ಮೊದಲನೆಯ ಗೆಜೆಟಿಯರ್ ಎಂದು ಹೇಳಬಹುದು. ಅಂದಿನ ಧಾರ್ಮಿಕ ಒತ್ತಡ ಮತ್ತು ಮತಾಂಧತೆಗಳನ್ನು ಮೀರಿ ನಿಂತು, ಹಿಂದೂ ಸಮಾಜ, ಧರ್ಮ ಮತ್ತು ದರ್ಶನಗಳನ್ನು ಪ್ರಗತಿಶೀಲವೂ ಉದಾರವೂ ಆದ ದೃಷ್ಟಿಯಲ್ಲಿ ವಿವರಿಸಿರುವುದರಿಂದ ಪುಸ್ತಕದ ಮೌಲ್ಯ ಹೆಚ್ಚಿದೆ.

ಗ್ರಂಥದಲ್ಲಿ ಬರುವ ಸಾಮ್ರಾಟನ ಪ್ರಶಸ್ತಿಗಳಲ್ಲಿ ಅತಿಶಯೋಕ್ತಿ ಇದೆಯೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಈ ಗ್ರಂಥವನ್ನು ಅಕ್ಬರನ ಕಾಲದ ರಾಜಕೀಯ ಆರ್ಥಿಕ ಹಾಗೂ ಸಾಮಾಜಿಕ ಜೀವನಗಳ ಕೋಶವೆನ್ನಬಹುದು. ಇತಿಹಾಸದಲ್ಲಿ ಅಕ್ಬರನ ಸ್ಥಾನವನ್ನು ನಿರ್ದೇಶಿಸುವಲ್ಲಿ ಇದರ ಪಾತ್ರ ಬಲು ಮುಖ್ಯ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: