ಐತಿಹಾಸಿಕ ಕಾವ್ಯ

ವಿಕಿಪೀಡಿಯ ಇಂದ
Jump to navigation Jump to search

ಐತಿಹಾಸಿಕ ಕಾವ್ಯ: ಐತಿಹಾಸಿಕ ಕಾವ್ಯವೆಂಬುದು ಕಥನಕಾವ್ಯದ (ನ್ಯಾರೆಟಿವ್ ಪೊಯಟ್ರಿ) ಒಂದು ಪ್ರಭೇದ (ಹಿಸ್ಟಾರಿಕಲ್ ಪೊಯಟ್ರಿ). ಒಂದು ಪ್ರಭೇದ (ಹಿಸ್ಟಾರಿಕಲ್ ಪೊಯಟ್ರಿ) ವಿವರದಲ್ಲೊ ಪರಿಣಾಮದಲ್ಲೊ ದಿಟವಾಗಿ ಚಾರಿತ್ರಿಕವೆಂದು ಶ್ಲಾಘಿಸಬಲ್ಲ ಹಲವು ಘಟನಾವಳಿಗಳ ಪ್ರಕರಣವನ್ನು ಅದು ಪದ್ಯರೂಪದಲ್ಲಿ ಕಥೆಯಾಗಿ ಹೇಳುತ್ತದೆ. ಕಾರ್ಯ ಮತ್ತು ಕಾರ್ಯಾವಳಿಯ ಕಡೆಗೇ ಕವಿಯ ಮುಖ್ಯ ಗಮನ, ಹೆಚ್ಚು ಆಸಕ್ತಿ. ದೇಶ ಕಾಲ ಪರಿಸ್ಥಿತಿಯ ವರ್ಣನೆ ಅಲ್ಲಲ್ಲಿ ಎಷ್ಟು ಬೇಕೊ ಅಷ್ಟು ಸಂಕ್ಷಿಪ್ತವಾಗಿ ಬರುತ್ತದೆ. ಕ್ರಿಯಾಶೀಲ ವ್ಯಕ್ತಿಗಳೇ ನಾಯಕ ಪ್ರತಿನಾಯಕಾದಿ ಪಾತ್ರಗಳು. ಅವರ ಸ್ವಭಾವ ಚಿತ್ರಣವೂ ಸಂಕಲ್ಪನಿರೂಪಣೆಯೂ ಅವರ ಕೆಲವೇ ಮಾತುಗಳಿಂದಲೂ ನಾನಾ ಓಡಾಟ ಮಾಡಾಟದಿಂದಲೂ ಆಗಬೇಕು, ಆಗುತ್ತದೆ. ದೀರ್ಘ ಭಾಷಣಕ್ಕಾಗಲಿ, ಅಪ್ರಾಸಂಗಿಕ ಭಾವನಾಪುಂಜಕ್ಕಾಗಲಿ ಅದರಲ್ಲಿ ಆಸ್ಪದವಿಲ್ಲ. ಈ ಬಗೆಯ ಕೃತಿಗಳಲ್ಲಿ ಯಾವ ಬಗೆಯ ವಿಳಂಬವೂ ಕ್ಲುಪ್ತ ಮಿತಿಯನ್ನು ಮೀರಿದ ವೈಶಾಲ್ಯವೂ ಕೂಡದು.[೧]

ಕಾವ್ಯಜಾತಿ ಎಪಿಕ್[ಬದಲಾಯಿಸಿ]

ಪುರಾತನ ಕಾಲದಲ್ಲಿ ಮೊದಲು ಹುಟ್ಟಿಬಂದ ಕಾವ್ಯಜಾತಿ ಎಪಿಕ್ ಎಂಬ ಅಂಕಿತದ ಭವ್ಯಕಾವ್ಯ. ಅದರಲ್ಲಿ ಅನೇಕ ಕಥನಾವಳಿಯ ಕಥನವಿದ್ದರೂ ಅದು ಕಥನಕಾವ್ಯಕ್ಕಿಂತ ಬಹಳ ಮಿಗಿಲಾದದ್ದು. ಜನಾಂಗದ ಹೋರಾಟ, ಬೆಳೆವಣಿಗೆ, ಭಾವ, ಭಾವನಾಸಮೂಹ, ಸಂಸ್ಕೃತಿ-ಎಲ್ಲವೂ ಅದರಲ್ಲಿ ಪ್ರತಿಬಿಂಬಿತವಾಗಿರುತ್ತದೆ. ಹಿಂದಣವರಿಗೆ ಭವ್ಯಕಾವ್ಯವೇ ಚರಿತ್ರೆಯಾಗಿತ್ತು. ಭಾರತೀಯ ಸಾಹಿತ್ಯದಲ್ಲಿ ಮಹಾಭಾರತಕ್ಕೆ ಇತಿಹಾಸವೆಂಬ ನಾಮಧೇಯವಿಲ್ಲವೇ? ಪುರಾಣ ಕಥಾವಳಿಯ ಅಕಿಲೀಸನಿಗೂ ಚಾರಿತ್ರಿಕ ಅಲೆಕ್ಸಾಂಡರನಿಗೂ ಭೇದ ಕಾಣಿಸಲಿಲ್ಲ, ಅವರಿಗೆ. ಜೂಲಿಯಸ್ ಸೀಸರನಂತೆ ಇನಿಯಾಸನೂ ಅವರ ದೃಷ್ಟಿಗೆ ವಾಸ್ತವಿಕ ಮಹಾಪುರುಷ. ಅಂಥ ಅಭಿಪ್ರಾಯಕ್ಕೆ ಈಗ ಮನ್ನಣೆಯಿಲ್ಲ.[೨]

ಇತಿಹಾಸ[ಬದಲಾಯಿಸಿ]

ಹೊಸ ಹುಟ್ಟಿನ ಅವಧಿಯಲ್ಲಿ ಸ್ವಂತ ನಾಡು ಮತ್ತು ನುಡಿಯ ಪ್ರೇಮ ವೆಗ್ಗಳವಾಯ್ತು. ಗತಕಾಲದ ರಾಜರು ಮತ್ತು ಇತರ ಶೂರರ ವಿಚಾರವಾಗಿ ಕುತೂಹಲ ಕೆರಳಿತು. ಕೆಲವು ಲೇಖಕರು ಹಳೆಯ ದಾಖಲೆ, ಅವಶೇಷ, ದಂತಕಥೆ ಮುಂತಾದ ಆಧಾರವನ್ನು ಬಳಸಿಕೊಂಡು ಐತಿಹಾಸಿಕ ವೃತ್ತಾಂತವೆಂಬ (ಉದಂತ; ಕ್ರಾನಿಕಲ್) ಪ್ರಬಂಧಗಳನ್ನು ಗದ್ಯದಲ್ಲಿ ಬರೆದರು. ಅವುಗಳಿಂದ ದೊರೆತ ಕಥಾ ಸಾಮಗ್ರಿ ನಾಟಕಕಾರರಿಗೂ ಕವಿಗಳಿಗೂ ತುಂಬ ಉಪಯುಕ್ತವಾಯ್ತು. ಹಲವು ಪದ್ಯವೃತ್ತಾಂತಗಳೂ ಹೊರಬಂದುವು. ಕ್ರಮೇಣ ಅದೊಂದು ಕಾವ್ಯಪ್ರಕಾರವೇ ಆಯ್ತು. ಬರುಬರುತ್ತ ಅದರ ಪ್ರಶಸ್ತಿ ಕುಂದಿಹೋದರೂ ಅದು ಪುರ್ತಿ ಕಣ್ಮರೆಯಾಗಿಲ್ಲ. ಈ ಶತಮಾನದ ಆರಂಭದಲ್ಲಿ ಸರ್ ಫ್ರಾನ್ಸಿಸ್ ಡ್ರೇಕನ ಸಾಹಸಗಳನ್ನು ಹೊಗಳುವ ಒಂದು ಸುದೀರ್ಘ ಪದ್ಯಕಾವ್ಯ ಪ್ರಕಟವಾಯಿತು. ಅದೊ ಇದೊ ಚಾರಿತ್ರಿಕ ಘಟನೆಯನ್ನೊ ಘಟನಾವಳಿಯನ್ನೊ ನಿರೂಪಿಸುವ ಕಿರುಕಾವ್ಯ. ನೀಳ ಕಾವ್ಯ ರಚಿತವಾಗುತ್ತಲೇ ಬಂದಿವೆ. ಅವುಗಳಲ್ಲಿ ಚಾರಿತ್ರಿಕ ಸತ್ತ್ವವೂ ವಿಭಾವನಾ ಸತ್ಯವೂ ಅಚ್ಚುಕಟ್ಟಾಗಿ ಕೂಡಿಕೊಂಡಿದ್ದರೆ ಅವನ್ನು ನಾವು ಮೆಚ್ಚಲೇಬೇಕು. ಆದರೆ ಅನೇಕ ಪದ್ಯವೃತ್ತಾಂತಗಳು ಬೇಸರ ತರುವಷ್ಟು ನೀರಸ, ಸಪ್ಪೆ ಗದ್ಯಕ್ಕೆ ಛಂದೋಬದ್ಧ ಶೈಲಿಯ ಕವುದಿಯನ್ನು ಹೊದಿಸಿದಂತೆ!

ಅರ್ಧ ಚಾರಿತ್ರಿಕ ಮಹಾಕಾವ್ಯ[ಬದಲಾಯಿಸಿ]

ಹೊಸ ಹುಟ್ಟಿನ ಕಾಲದಲ್ಲೇ ಇನ್ನೊಂದು ಬಗೆಯ ಅರ್ಧ ಚಾರಿತ್ರಿಕ ಮಹಾಕಾವ್ಯವೂ ಎದ್ದುಬಂತು. ವೀರಕಾವ್ಯ (ಹೀರೋಯಿಕ್ ಪೊಯಮ್) ಎಂದು ಅದರ ನಾಮಧೇಯ. ಸುಮ್ಮನೆ ರೊಮಾನ್ಸ್‌ ಎಂದು ಅದನ್ನು ಕರೆಯುವ ವಾಡಿಕೆಯೂ ಇತ್ತು. ಸ್ಪೆನ್ಸರ್, ಆರಿಯೋಸ್ಟೊ ಮೊದಲಾದ ಶ್ರೇಷ್ಠ ಕವಿಗಳಿಂದ ಆ ಕಾವ್ಯ ಪ್ರಕಾರಕ್ಕೆ ಮನ್ನಣೆಯೂ ಯಶಸ್ಸೂ ಯಥೇಚ್ಛವಾಗಿ ದಕ್ಕಿತು. ಅವರ ಉದ್ದೇಶ ಬೆರಗಾಗಿಸುವ ಮಹೋದ್ದೇಶ. ಆದಿಕವಿಯೆಂದು ಪ್ರಶಂಸೆಗೊಂಡ ಪ್ರಾಚೀನ ಗ್ರೀಸಿನ ಹೋಮರ್, ಅವನನ್ನು ಅನುಸರಿಸಿ, ಅವನಂತೆಯೇ ಹೆಸರಾಂತ ಪ್ರಾಚೀನ ರೋಮಿನ ವರ್ಜಿಲ್-ಇವರು ಇಡೀ ಪಾಶ್ಚಾತ್ಯ ಲೋಕಕ್ಕೆ ಕವಿಕುಲಗುರುದ್ವಯರು. ಹೊಸ ಹುಟ್ಟಿನ ಅತ್ಯುತ್ಸಾಹದಲ್ಲಿ, ಪ್ರಾಚೀನರೊಡನೆ ಸ್ಪರ್ಧೆ ನಿಂತು ಅರ್ವಾಚೀನರೂ ಮಹೋನ್ನತ ಕಾವ್ಯಗಳನ್ನು ಕಟ್ಟಲಾರರೇ ಎಂಬ ಭಾವನೆ ಹುಟ್ಟಿ ಬೆಳೆದು ವೀರಕಾವ್ಯ ವಿರಚನೆಗೆ ಪ್ರೇರಣೆಯಾಯ್ತು. ಹಿಂದಣವರ ಭವ್ಯಕಾವ್ಯಕ್ಕೂ ಈಚಿನವರ ವೀರಕಾವ್ಯಕ್ಕೂ ದೊಡ್ಡ ವ್ಯತ್ಯಾಸವೊಂದಿದೆ. ಎರಡರಲ್ಲೂ ಅಸಾಧಾರಣ ವ್ಯವಹಾರಗಳೂ, ಅತಿಮಾನುಷದ ವ್ಯಕ್ತಿಗಳೂ ಉಂಟು. ಆದರೆ ಭವ್ಯಕಾವ್ಯದುದ್ದಕ್ಕೂ ಸ್ಫುಟ ಮಾನವೀಯತೆಯ ಪ್ರಕಾಶ ತಾನೇ ತಾನು; ವೀರಕಾವ್ಯದಲ್ಲಾದರೂ ಅಮಾನುಷತ್ವ ಕೆಂಬೆಳಕು ಹೆಚ್ಚು. ಅದರಲ್ಲಿ ಬರುವವರು ಬಲು ಎತ್ತರದ ಆದರ್ಶ ಮಾನವರಾದರೂ ನಮ್ಮ ಪ್ರಪಂಚಕ್ಕೆ ಸೇರಿದವರೆ; ಇದರಲ್ಲಿ ಬರುವವರು ಯಾವುದೋ ವಿಚಿತ್ರ ಕಲ್ಪನಾಲೋಕಕ್ಕೆ ಸೇರಿದವರು. ಅದರಲ್ಲಿ ನೇರ ಕಥನಕ್ಕೂ ನಿಲ್ಲದ ಹಾಗೂ ತ್ವರೆಗೊಳ್ಳದ ಮಧ್ಯಮ ಗತಿಯ ನಡಿಗೆಗೂ ಪುರಸ್ಕಾರ; ಇದರಲ್ಲಿ ವಿಳಂಬಕ್ಕೂ ವರ್ಣನಾಚಾಪಲ್ಯಕ್ಕೂ ಮರ್ಯಾದೆ.

ಕನ್ನಡದ ಚಂಪು ಕವಿಗಳು[ಬದಲಾಯಿಸಿ]

ಕನ್ನಡದ ಚಂಪು ಕವಿಗಳು ಅನುಸರಿಸುತ್ತಿದ್ದ ಒಂದು ಕ್ರಮವನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ತಮ್ಮ ಮತ್ತು ತಮ್ಮ ಆಶ್ರಯದಾತರ ವಂಶಾವಳಿಯನ್ನು ಘೋಷಿಸಿ ಪ್ರಶಂಸಾಪದ್ಯಗಳನ್ನು ಪೀಠಿಕೆಯಲ್ಲೂ ಕೆಲವೊಮ್ಮೆ ಸಮಾಪ್ತಿಯಲ್ಲೂ ಅವರು ಇಡುತ್ತಿದ್ದರು. ಕಾವ್ಯದ ನಾಯಕನಿಗೂ ತಮ್ಮ ರಾಜನಿಗೂ ಹೋಲಿಕೆ ಕಾಣುತ್ತಿದ್ದರು. ಚಾರಿತ್ರಿಕವಾದರೂ ಅವು ಕಾವ್ಯದ ವಿಷಯದಿಂದ ತೀರ ಪ್ರತ್ಯೇಕ. ಕೆಲವು ಕವಿಗಳು ಅರಸರ ಇತಿಹಾಸಭಾಗಗಳನ್ನು ಕಥನಗೈದರು. ಕೆಳದಿನೃಪವಿಜಯ, ಚಿಕ್ಕದೇವರಾಜವಿಜಯ ಮುಂತಾದವು ಒಂದು ಬಗೆಯ ಐತಿಹಾಸಿಕ ಕಾವ್ಯ. ಅವುಗಳಲ್ಲಿ ಹಲಕೆಲವು ನಡೆದ ಸಂಗತಿಗಳ ಉಲ್ಲೇಖವಿದ್ದರೂ ವಿವರದಲ್ಲೂ, ಪಾತ್ರಚಿತ್ರಣದಲ್ಲೂ, ಉದ್ದೇಶದಲ್ಲೂ, ರೀತಿಯಲ್ಲೂ, ಆದರ್ಶ, ಉತ್ಪ್ರೇಕ್ಷೆ, ಸಾಂಪ್ರದಾಯಿಕತೆಗಳ ನರ್ತನವೇ ಹೆಚ್ಚು. ಅಲಂಕಾರಶಾಸ್ತ್ರವನ್ನು ಬರೆಯುತ್ತ ಉದಾಹರಣೆಯೆಲ್ಲಕ್ಕೂ ರಾಜನ ಗುಣಶೀಲ, ಸಾಹಸಕಾರ್ಯವನ್ನೇ ವಸ್ತುವನ್ನಾಗಿಸಿಕೊಳ್ಳುವ ಚಮತ್ಕಾರವನ್ನೂ ಮೆರೆದ ಕವಿಗಳುಂಟು.ಐತಿಹಾಸಿಕ ಘಟನಾವಳಿ ಸೂಕ್ತವಾಗಿ ಕಾವ್ಯಕ್ಕೆ ಹೊಂದಿಕೊಳ್ಳುವುದು ದಿಟವಾಗಿ ಅಪರೂಪ. ಆದ್ದರಿಂದಲೇ ಐತಿಹಾಸಿಕ ಕಾವ್ಯವೆಂಬುದೂ ವಿರಳ.

ಉಲ್ಲೇಖಗಳು[ಬದಲಾಯಿಸಿ]