ಐಗಂಡಪುರ
ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರುಘಟ್ಟ ಕೆರೆಯ ದಕ್ಷಿಣ ದಂಡೆಯಲ್ಲಿರುವ ಗ್ರಾಮ.
ಹೆಸರು
[ಬದಲಾಯಿಸಿ]ಇದರ ಪ್ರಾಚೀನ ಹೆಸರು ಐವರ್ಕಂಡಪುರವೆಂದೂ ಐದು ಜನ- ಪಂಚಪಾಂಡವರು- ಕಂಡು ನೆಲೆಸಿದ ಗ್ರಾಮವಾದ್ದರಿಂದ ಇದಕ್ಕೆ ಈ ಹೆಸರು ಬಂದಿತೆಂದೂ ಹೇಳಲಾಗಿದೆ.
ಧರ್ಮೇಶ್ವರ ದೇವಾಲಯ
[ಬದಲಾಯಿಸಿ]ಇಲ್ಲಿ ಧರ್ಮೇಶ್ವರ ಎಂಬ ದೊಡ್ಡ ದೇವಾಲಯವಿದ್ದು ಅದರೊಳಗೆ ಭೀಮ, ನಕುಲ, ಸಹದೇವ ಮತ್ತು ಕುಂತಿಯರ ಹೆಸರಿನಲ್ಲಿ ಲಿಂಗಗಳನ್ನೊಳಗೊಂಡ ಸಣ್ಣ ಗುಡಿಗಳಿವೆ. ಧರ್ಮೇಶ್ವರಾಲಯ ದಕ್ಷಿಣಾಭಿಮುಖವಾಗಿದ್ದರೂ ಗರ್ಭಗುಡಿಯ ಲಿಂಗ ಪುರ್ವಾಭಿಮುಖವಾಗಿದೆ. ಗರ್ಭಗೃಹ ಸುಕನಾಸಿ ಮತ್ತು ನವರಂಗಗಳನ್ನೊಳಗೊಂಡಿದೆ. ಗರ್ಭಗೃಹದ ಮೇಲೆ ಪಲ್ಲವ ಶೈಲಿಯ ಮೆಟ್ಟಲು ಮೆಟ್ಟಲಿನ ವಿಮಾನವಿದೆ. ಒಳಗೆ ಲಿಂಗೋದ್ಭವ ಮೂರ್ತಿಯ ವಿಗ್ರಹವೊಂದಿದೆ. ಲಿಂಗಪೀಠದ ಮೇಲಿರುವ ಸು.11ನೆಯ ಶತಮಾನದ ಪದ್ಯಶಾಸನಗಳಿಂದ ಈ ಪೀಠವನ್ನು ವಾಮನನ ಅಧೀನನಾದ ಮಾದನಾಯಕ ಮಾಡಿಸಿದುದಾಗಿ ತಿಳಿದುಬರುತ್ತದೆ.[೧]
ಇತಿಹಾಸ
[ಬದಲಾಯಿಸಿ]ಇಲ್ಲಿನ ತಮಿಳು ಶಾಸನಗಳಿಂದ ಈ ಗ್ರಾಮದ ಮತ್ತು ಆಲಯ ಕುರಿತಾದ ಹೆಚ್ಚಿನ ವಿವರಗಳು ಲಭಿಸಿವೆ. ಚೋಳ ಮನೆತನದ 1ನೆಯ ರಾಜೇಂದ್ರ ಮತ್ತು 1ನೆಯ ಕುಲೋತ್ತುಂಗರು ಕ್ರಮವಾಗಿ 1033-34 ಮತ್ತು 1113-14ನೆಯ ವರ್ಷದ ಮತ್ತು ಹೊಯ್ಸಳ ರಾಮನಾಥನ ಆಳ್ವಿಕೆಯ 38ನೆಯ ವರ್ಷದ ಹಾಗೂ ಮುಮ್ಮಡಿ ಬಲ್ಲಾಳ 1302ರಲ್ಲಿ ಹೊರಡಿಸಿದ ತಮಿಳು ಶಾಸನಗಳು ಇಲ್ಲಿವೆ. ಚೋಳರ ಶಾಸನಗಳಿಂದ ಈ ಗ್ರಾಮ ವಿಕ್ರಮಚೋಳಮಂಡಲದ ಕುಕ್ಕನೂರು ನಾಡಿಗೆ ಸೇರಿದುದಾಗಿ ತಿಳಿದಿದೆ. ರಾಜೇಂದ್ರನ ಶಾಸನದಲ್ಲಿ ಈ ಗ್ರಾಮವನ್ನು ಕೊಳಿಸಂಪ್ರಚ್ಫೈ ಎಂದೂ ಕುಲೋತ್ತುಂಗನ ಶಾಸನದಲ್ಲಿ ಪೆರಿಯಮತ್ತಕ್ಕೂರು ಎಂದೂ ಕರೆದಿದೆ. ಹೊಯ್ಸಳ ರಾಮನಾಥನ ಶಾಸನದಲ್ಲಿ ಇಲೈಪಾಕನಾಡಿಗೆ ಸೇರಿದ ತೀಗೈಕೋಟ್ಟೆಪಯರ್ ಕಟ್ಟಂ ಎಂದಿದೆ. ಎಲ್ಲ ಶಾಸನಗಳಲ್ಲಿಯೂ ದೇವರನ್ನು ಐವರ್ಗಂಡ ಮಹಾದೇವ, ಐವರ್ಕಂಠೀಶ್ವರಮುಡೈಯ ಮಹಾದೇವ ಮತ್ತು ಐವರ್ಕಂಠೀಶ್ವರ ನಾಯನಾರ್ ಎಂದು ಕರೆದಿದೆ. ರಾಜೇಂದ್ರನ ಶಾಸನದಲ್ಲಿ ಈ ದೇವರನ್ನು ಸಿದ್ಧೇಶ್ವರನೆಂದು ಸಂಬೋಧಿಸಿದೆ. ಇದನ್ನು ಕಟ್ಟಿಸಿದಾತ ಯುದ್ಧಮಲ್ಲ. ದಂಡನಾಯಕ ಅಪ್ಪಯನ್ ವಾಮನಯ್ಯನ್ ಎಂದು ಹೇಳಿದೆ. ಲಿಂಗಪೀಠದಲ್ಲಿ ದೊರೆತ ಶಾಸನದಲ್ಲಿ ಉಕ್ತನಾದ ವಾಮನ ಈತನೇ ಆಗಿರಬೇಕು. ಈ ದೇವಾಲಯ 11ನೆಯ ಶತಮಾನದ ಕಟ್ಟಡವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕುಂತಿಲಿಂಗದ ಗುಡಿಯ ಬಳಿ ದೊರೆತ ಹೊಯ್ಸಳ ನರಸಿಂಹನ ಕನ್ನಡ ಶಾಸನದಲ್ಲಿ ಈ ದೇವರನ್ನು ಅಯ್ವರಗಂಡ ದೇವನೆಂದೇ ಕರೆದಿದೆ.