ಏಷ್ಯದ ಭೂ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಷ್ಯಖಂಡದ ಬೆಳೆವಣಿಗೆಯಲ್ಲಿ ಪರ್ವತಜನ್ಯ ಶಕ್ತಿಗಳು ಪ್ರಮುಖಪಾತ್ರ ವಹಿಸಿವೆ ಎಂದು ಭಾವಿಸಲಾಗಿದೆ. ಮೊದಲಿಗೆ ಅಲ್ಲಲ್ಲೇ ಶಾಶ್ವತಭೂಖಂಡಭಾಗಗಳು (ಷೀಲ್ಡ್‌) ಇದ್ದವು. ಭೂಇತಿಹಾಸದ ನಾನಾ ಯುಗಗಳಲ್ಲಿ ತಲೆದೋರಿದ ಪರ್ವತಜನ್ಯ ಶಕ್ತಿಗಳ ಪ್ರಭಾವದಿಂದ ವಿಸ್ತೀರ್ಣ ಅಭಿನತಿಗಳಲ್ಲಿ (ಜಿಯೊಸಿಂಕ್ಲೈನ್ಸ್‌) ಸಂಗ್ರಹವಾಗಿದ್ದ ನಿಕ್ಷೇಪಗಳು ಮೇಲಕ್ಕೆ ಎತ್ತಲ್ಪಟ್ಟು ವಿವಿಧ ತೆರನಾಗಿ ಮಡಿಕೆ ಬಿದ್ದು ಹೊಸ ಭೂಭಾಗಗಳಾಗಿ ಮಾರ್ಪಟ್ಟುವು. ಅಲ್ಲದೆ ಕ್ರಮೇಣ ಈ ಹೊಸ ಭೂಭಾಗಗಳು ಶಾಶ್ವತ ಭೂಖಂಡ ಕೇಂದ್ರಗಳೊಡನೆ ಮಿಲನಗೊಂಡು ಭೂಖಂಡದ ವಿಸ್ತೀರ್ಣ ಬೆಳೆಯುತ್ತ ಈಗಿನ ಖಂಡಭಾಗ ರೂಪುಗೊಂಡಿತೆಂದು ಊಹಿಸಲಾಗಿದೆ.

ಈ ಬೃಹತ್ ಖಂಡದ ಭೂ ಇತಿಹಾಸವನ್ನು ತಿಳಿಯಲು ಅದನ್ನು ಎಂಟು ಭಾಗಗಳಾಗಿ ವಿಭಜಿಸಲಾಗಿದ[ಬದಲಾಯಿಸಿ]

  • 1 ಅರೇಬಿಯ ಪರ್ಯಾಯದ್ವೀಪ ಮತ್ತು ಇರಾಕ್ ಬಂiÀÄಲು,
  • 2 ಭಾರತ ಪರ್ಯಾಯದ್ವೀಪ ಮತ್ತು ಸಿಂಧೂ-ಗಂಗಾಬಂiÀÄಲು,
  • 3 ತುರ್ಕಿಕಕೇಸಿಯ, ಇರಾನ್ ಮತ್ತು ಆಫ್ಘಾನಿಸ್ತಾನ್ ಪರ್ವತಶ್ರೇಣಿ,
  • 4 ಬಲೂಚಿಸ್ತಾನದಿಂದ ಬರ್ಮದವರೆಗೆ ಹಬ್ಬಿರುವ ಹಿಮಾಲಯ ಪರ್ವತಶ್ರೇಣಿ,
  • 5 ಮಧ್ಯ ಏಷ್ಯ,
  • 6 ಏಷ್ಯಾಟಿಕ್ ರಷ್ಯದ ತಗ್ಗುಪ್ರದೇಶಗಳು,
  • 7 ಪೆಸಿಫಿಕ್ ತೀರಪ್ರದೇಶಗಳು,
  • 8 ದ್ವೀಪಸ್ತೋಮಗಳು.

ಅರೇಬಿಯ ಪರ್ಯಾಯದ್ವೀಪ ಮತ್ತು ಇರಾಕ್ ಬಂiÀÄಲು ಪ್ರದೇಶ[ಬದಲಾಯಿಸಿ]

ಪುರ್ವಕೇಂಬ್ರಿಯನ್ ಶಿಲೆಗಳು ಕೆಂಪು ಸಮುದ್ರದ ತೀರದುದ್ದಕ್ಕೂ ಕೇಂದ್ರ ಅರೇಬಿಯದಲ್ಲೂ ವಿಸ್ತಾರವಾಗಿ ಹರಡಿವೆ. ಅಲ್ಲದೆ ಕೇಂಬ್ರಿಯನ್ ಕಾಲದಿಂದೀಚಿನ ಇತರ ಭೂಯುಗಗಳ ಜಲಜಶಿಲೆಗಳೂ ನಿಕ್ಷೇಪಗೊಂಡಿವೆ. ಇವುಗಳಲ್ಲಿ ಮಿಸೊóಜೋಯಿಕ್ ಮತ್ತು ಟರ್ಷಿಯರಿ ಯುಗದ ನಿಕ್ಷೇಪಗಳು ಅತ್ಯಂತ ಉತ್ತಮರೀತಿಯಲ್ಲಿ ಕಂಡುಬರುತ್ತವೆ. ಇವು ಜೋರ್ಡನ್, ತುರ್ಕಿ ಮತ್ತು ಇರಾನ್ಗಳಲ್ಲಿ ಕಮಾನಿನಂತೆ ಮೇಲಕ್ಕೆ ಎತ್ತಲ್ಪಟ್ಟಿವೆ. ಶಿಲಾಪ್ರಸ್ತರಗಳು ತಮ್ಮ ಜಾಡಿನಲ್ಲಿ ಹಲವೆಡೆ ಭಂಗಗೊಂಡಿರುವುದೂ ಉಂಟು. ಮಧ್ಯ ಏಷ್ಯದ ಪ್ರಸಿದ್ಧ ತೈಲಪ್ರದೇಶಗಳು ಹರಡಿರುವುದು ಈ ಭಾಗದಲ್ಲೇ. ಈ ಪ್ರದೇಶದ ಬಹುಮುಖ್ಯ ರಚನಾ ವೈವಿಧ್ಯವೆಂದರೆ ಟರ್ಷಿಯರಿ ಯುಗದ ಕಮರಿಗಳ ಶ್ರೇಣಿ. ಕೆಂಪು ಸಮುದ್ರ, ಮೃತ್ಯುಸಮುದ್ರ, ಮತ್ತು ಜೋರ್ಡನ್ ಕಣಿವೆಗಳು ಈ ಶ್ರೇಣಿಯವು. ಇವುಗಳಿಗೆ ಸಂಬಂಧಿಸಿದಂತೆ ತೀವ್ರ ರೀತಿಯಲ್ಲಿ ಜ್ವಾಲಾಮುಖಿಗಳ ಕಾರ್ಯಾಚರಣೆಯೂ ಉಂಟಾಯಿತು. ಹೀಗಾಗಿ ಯೆಮೆನ್ನಲ್ಲಿ 3742ಮೀ ಉತ್ತರ ಹೆಜಾಸಿನಲ್ಲಿ 2851ಮೀ ಮತ್ತು ದಕ್ಷಿಣ ಸಿರಿಯದಲ್ಲಿ 660ಮೀ ಮಂದದ ಲಾವಾಪ್ರಸ್ತರಗಳ ಶ್ರೇಣಿಗಳಿವೆ. ಅನೇಕ ಕಡೆ ಈ ಶ್ರೇಣಿಗಳು ಸ್ತರಭಂಗಗಳಿಗೆ ಒಳಗಾಗಿವೆ.[೧]

ಭಾರತ ಪರ್ಯಾಯದ್ವೀಪ ಮತ್ತು ಸಿಂಧೂ-ಗಂಗಾ ಬಂiÀÄಲು[ಬದಲಾಯಿಸಿ]

ಪೂರ್ವ ಕೇಂಬ್ರಿಯನ್ ಕಾಲದಿಂದಲೂ ಪರ್ಯಾಯದ್ವೀಪಭಾಗ ಭೂಖಂಡವೆನಿಸಿದೆ. ಮುಂದೆ ತೀವ್ರಸ್ತರಭಂಗ ಮತ್ತು ಭೂಹೊರಚಿಪ್ಪಿನ ರಚನೆಯಲ್ಲಾದ ಬದಲಾವಣೆಗಳು ಈ ಭೂಭಾಗದ ಶಿಲಾವಿನ್ಯಾಸವನ್ನು ಸಾಕಷ್ಟು ಕ್ಲಿಷ್ಟಗೊಳಿಸಿವೆ. ಪರ್ಯಾಯದ್ವೀಪದ ಬಹುಭಾಗ ಗೀರುಶಿಲೆ (ನೈಸ್) ಮತ್ತು ಕಣಶಿಲೆ (ಗ್ರಾನೈಟ್) ಗಳಿಂದ ಆವೃತವಾಗಿದೆ. ಮಧ್ಯ ಭಾರತದ ಹಲವಾರು ಕಡೆ ಕಾರ್ಬಾನಿಫೆರಸ್ ಯುಗದ ಅಂತ್ಯದಿಂದ ಹಿಡಿದು ಕ್ರಿಟೇಷಿಯಸ್ ಯುಗದ ಮೊದಲ ಹಂತದವರೆಗಿನ ಗೊಂಡ್ವಾನ ಕಾಲದಲ್ಲಿ ಉಂಟಾದ ಭೂಚಟುವಟಿಕೆಗಳ ನಿಮಿತ್ತ ಶಿಲಾಪ್ರಸ್ತರಗಳು ಅಲ್ಲಲ್ಲೇ ಕುಸಿದು ಬೃಹದಾಕಾರದ ಇಳುಕಲುಗಳುಂಟಾದವು. ನದಿಗಳು ಕೊಚ್ಚಿ ತಂದ ಮರಳು, ಮಣ್ಣು ಮತ್ತು ಮೆಕ್ಕಲಿನೊಡನೆ ಸಸ್ಯವರ್ಗಗಳ ಭಾಗಗಳೂ ಈ ಭೂತೊಟ್ಟಿಗಳಲ್ಲಿ ನಿಕ್ಷೇಪಹೊಂದಿ ಕಾಲಕ್ರಮೇಣ ಕಲ್ಲಿದ್ದಲಿನ ನಿಕ್ಷೇಪಗಳಾಗಿ ರೂಪಾಂತರಗೊಂಡುವು. ಇವುಗಳಲ್ಲಿ ಬಹು ಪ್ರಸಿದ್ಧವಾದುದು ದಾಮೋದರ್ ಕಣಿವೆಯ ಪ್ರದೇಶ. ಇದೇ ಕಾಲದಲ್ಲಿ ಪುರ್ವ ಮತ್ತು ಪಶ್ಚಿಮ ತೀರಪ್ರದೇಶಗಳನ್ನು ಸಮುದ್ರ ಪದೇ ಪದೇ ಆವರಿಸಿಕೊಂಡಿತ್ತು. ಮುಂದೆ ಈಗಿನ ಪುಣೆ-ಮುಂಬಯಿ ಪ್ರದೇಶದಲ್ಲಿ ಅಸಂಖ್ಯಾತ ಬಿರುಕುಗಳ ಮೂಲಕ ಬೆಸಾಲ್ಟ್‌ ಲಾವಾಪ್ರವಾಹಗಳು ಹೊರಹೊಮ್ಮಿ ಸುಮಾರು 3,22,000ಚಕಿಮೀ ವಿಸ್ತಾರವಾದ ಪ್ರದೇಶವನ್ನು ಆವರಿಸಿದುವು. ಇಂದಿಗೂ ಈ ಪ್ರಾಂತ್ಯದಲ್ಲಿ ಕರಿಯ ಶಿಲೆಯ, ಮೆಟ್ಟಿಲುಮೆಟ್ಟಿಲಾಗಿರುವ, ಬೆಟ್ಟಸಾಲುಗಳನ್ನು ನೋಡಬಹುದು.ಪರ್ಯಾಯದ್ವೀಪದ ಪಶ್ಚಿಮ ಮತ್ತು ಪುರ್ವತೀರಗಳುದ್ದಕ್ಕೂ ಬೆಟ್ಟಸಾಲುಗಳಿವೆ. ಇವೇ ಪಶ್ಚಿಮಘಟ್ಟಗಳು ಮತ್ತು ಪುರ್ವಘಟ್ಟಗಳು. ಇವು ಕಬ್ಬಿಣ, ಬೆಣಚು, ಪ್ರಸ್ತರೀಶಿಲೆ, ಗ್ರಾನೈಟ್, ಚಾರ್ನಕೈಟ್ ಇತ್ಯಾದಿ ಶಿಲೆಗಳನ್ನು ಹೊಂದಿವೆ. ಸಾಮಾನ್ಯವಾಗಿ ಸಮುದ್ರಮಟ್ಟ ದಿಂದ 910ಮೀ-1517ಮೀ ಎತ್ತರ ಮುಟ್ಟಿವೆ. ಇವಲ್ಲದೆ ಛೋಟಾನಾಗಪುರ ಮತ್ತು ಷಿಲ್ಲಾಂಗ್ ಪ್ರಸ್ಥಭೂಮಿಗಳನ್ನೂ ಹೆಸರಿಸಬೇಕು. ಇವು ಸುಮಾರು 607ಮೀ-910ಮೀ ಎತ್ತರವಿವೆ.ಆರಾವಳಿ ಮತ್ತು ವಿಂಧ್ಯಪರ್ವತಗಳಿರುವುದೂ ಈ ಭಾಗದಲ್ಲೇ ಇವುಗಳ ಉತ್ತರಕ್ಕೆ ಬಹು ವಿಸ್ತಾರವಾದ ಸಿಂಧೂ-ಗಂಗಾ ಬಂiÀÄಲು ಪ್ರದೇಶವಿದೆ. ಇದು ಉತ್ತಮ ಬಗೆಯ ನದೀ ಮೆಕ್ಕಲಿನಿಂದ ಕೂಡಿದೆ.[೨]

ತುರ್ಕಿ, ಇರಾನ್ ಮತ್ತು ಆಫ್ಘಾನಿಸ್ತಾನ್[ಬದಲಾಯಿಸಿ]

ಈ ಭೂಭಾಗ ಮಡಿಕೆಬಿದ್ದು ಅಸ್ತವ್ಯಸ್ತವಾಗಿರುವ ಅಸಂಖ್ಯಾತ ಶಿಲಾಶ್ರೇಣಿಗಳಿಂದ ಕೂಡಿದೆ. ಅಲ್ಲಲ್ಲೆ ಸ್ತರಭಂಗ ಗಳಿಂದುಂಟಾದ ಚಚ್ಚೌಕಾಕೃತಿಯ ಪರ್ವತಗಳನ್ನೂ (ಬ್ಲಾಕ್ ಮೌಂಟನ್ಸ್‌) ವಿಶಾಲವಾದ ಇಳುಕಲುಗಳನ್ನೂ ನೋಡಬಹುದು, ಉತ್ತರ ಇರಾನಿನ ಎಲ್ಬು¸óರ್ï ಮತ್ತು ಕೋಪೆಡಾಗ್ ಪರ್ವತಶ್ರೇಣಿಗಳು ಪುರ್ವದಿಕ್ಕಿನತ್ತ ಆಫ್ಘಾನಿಸ್ತಾನದ ಹಿಂದೂಕುಷ್ ಪರ್ವತದ ಕಡೆಗೆ ತಮ್ಮ ಜಾಡನ್ನು ಹರಿಸಿವೆ. ದಕ್ಷಿಣದಲ್ಲಿ ಬಹು ವಿಶಾಲವಾದ ಜಾಗ್ರೋಸ್ ಶ್ರೇಣಿ ಇದೆ. ಇದರಲ್ಲಿ 1556ಮೀ ಗಳಿಗೂ ಮೀರಿದ ಎತ್ತರದ ಹಲವಾರು ಶಿಖರಗಳಿವೆ. ಇದರ ಜಾಡು ವಾಯವ್ಯ- ಆಗ್ನೇಯವಾಗಿದ್ದು ಇರಾನ್, ಮಯನ್ಮಾರ್ ಮತ್ತು ಬಲೂಚಿಸ್ತಾನಗಳಲ್ಲೆಲ್ಲ ಪ್ರಸರಿಸಿದೆ. ಮಧ್ಯ ಏಷ್ಯದ ಪ್ರಮುಖ ತೈಲಕ್ಷೇತ್ರಗಳಿಗೂ ಜಾಗ್ರೋಸ್ ಶ್ರೇಣಿಗೂ ನಿಕಟಸಂಬಂಧ. ಅದರಲ್ಲೂ ಅರೇಬಿಯನ್ ಪ್ರಸ್ಥಭೂಮಿಗೆ ಒತ್ತಿನಿಂತಿರುವ ಈ ಶ್ರೇಣಿಯ ಅಲೆಯಾಕೃತಿಯ ಮಡಿಕೆಗಳು ಈ ದೃಷ್ಟಿಯಲ್ಲಿ ಬಹು ಪ್ರಮುಖಸ್ಥಾನವನ್ನಾಕ್ರಮಿಸಿವೆ. ಅಲ್ಲದೆ ಈ ಶ್ರೇಣಿಗಳಲ್ಲಿ ಹಲವಾರು ಲವಣ ಇಳುಕಲುಗಳೂ ಜ್ವಾಲಾಮುಖಿಗಳೂ ಇವೆ. ತುರ್ಕಿಯ ಭೂವಿನ್ಯಾಸ ಕ್ಲಿಷ್ಟವಾದುದು. ಇದರಲ್ಲಿ ಪ್ಲಿಯೊಸೀನ್ ಕಾಲದ 5140ಮೀ ಎತ್ತರದ ಮೌಂಟ್ ಅರಾರಟ್ ಜ್ವಾಲಾಮುಖಿ ಶಿಖರವೇ ಸರಳವಾದ ರಚನೆಯುಳ್ಳದ್ದೆಂದು ಭೂವಿಜ್ಞಾನಿಗಳ ಅಭಿಪ್ರಾಯ. ಈ ಕೇಂದ್ರದಿಂದ ಉಗಮವಾಗುವ ಆಂಟಿ-ಟಾರಸ್ ಮತ್ತು ಟಾರಸ್ ಪರ್ವತಗಳು ಮೆಡಿಟರೇನಿಯನ್ ತೀರದುದ್ದಕ್ಕೂ ಪಾಂಟಕ್ ಪರ್ವತ ಕಪ್ಪು ಸಮುದ್ರದುದ್ದಕ್ಕೂ ಹಬ್ಬಿವೆ. ಈ ಶ್ರೇಣಿಯ ಅನಟೋಲಿಯನ್ ಪ್ರಸ್ಥಭೂಮಿಯಲ್ಲಿ ಅಸಂಖ್ಯಾತ ತಗ್ಗುಗಳಿವೆ. ಇವುಗಳಲ್ಲಿ ಟುeóï ಮತ್ತು ವಾನ್ ಎಂಬ ಕ್ಷಾರಸರೋವರಗಳನ್ನು ಹೆಸರಿಸಬಹುದು. ಕಪ್ಪು ಸಮುದ್ರದ ಜೋಂಗುಲ್ ಡಾಕ್ ಎಂಬಲ್ಲಿ ಬಹುಪ್ರಸಿದ್ಧವಾದ ಕಾರ್ಬಾನಿಫೆರಸ್ ಯುಗದ ಕಲ್ಲಿದ್ದಲ ನಿಕ್ಷೇಪಗಳಿವೆ. ಇತರೆಡೆಗಳಲ್ಲಿ ಕ್ರೋಮ್ ಮತ್ತು ಮ್ಯಾಂಗನೀಸ್ ಅದಿರುಗಳ ವಿಶಾಲ ನಿಕ್ಷೇಪಗಳಿವೆ. ಈ ಭೂಭಾಗದಲ್ಲಿ ಆಗಾಗ್ಗೆ ಆಗುತ್ತಿದ್ದ ಭೂಕಂಪನಗಳು ಪ್ರದೇಶದ ಅಸ್ಥಿರತೆಯನ್ನು ಸೂಚಿಸುತ್ತವೆ.

ಹಿಮಾಲಯ ಶ್ರೇಣಿ[ಬದಲಾಯಿಸಿ]

ಪೂರ್ವ-ಪಶ್ಚಿಮದುದ್ದಕ್ಕೂ ಹಿಮಾಲಯ ಸುಮಾರು 2415ಕಿಮೀ ಹಬ್ಬಿದೆ. ಈ ಜಾಡಿನುದ್ದಕ್ಕೂ ಇದನ್ನು ಐದು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಉತ್ತರದಲ್ಲಿನ ಟಿಬೆಟ್ ಪ್ರಸ್ಥಭೂಮಿಗೂ ಈ ಶ್ರೇಣಿಗೂ ನಡುವೆ ಮೇಲಿನ ಸಿಂಧೂ ಮತ್ತು ಬ್ರಹ್ಮಪುತ್ರ ಕಣಿವೆಗಳಿವೆ. ಇದರ ದಕ್ಷಿಣಕ್ಕೆ ಬೃಹದ್ ಹಿಮಾಲಯ ಶ್ರೇಣಿ ಪ್ರಾರಂಭವಾಗುತ್ತದೆ. ಶ್ರೇಣಿಯಲ್ಲಿ 7280ಮೀ ಗಳಿಗೂ ಮೀರಿದ ಎತ್ತರದ 60 ಶಿಖರಗಳಿವೆ. ಇವುಗಳಲ್ಲಿ ಬಹುಮುಖ್ಯವಾದುವು : ಎವರೆಸ್ಟ್‌ ಅಥವಾ ಗೌರೀಶಂಕರ (8805ಮೀ), ನಂಗಾಪರ್ವತ (8087ಮೀ) ಮತ್ತು ನಾಮ್ಚೆಬರ್ವ (7719ಮೀ). ಇವುಗಳ ದಕ್ಷಿಣದತ್ತ ಹಲವಾರು ಮೊನಚಾದ ಬೆಟ್ಟದ ಚಾಚುಗಳೂ ಆಳವಾದ ಕಣಿವೆಗಳೂ ಇವೆ. ಇಲ್ಲಿನ ಮುಖ್ಯ ಶಿಖರಗಳ ಎತ್ತರ 4550ಮೀ. ಮತ್ತೂ ದಕ್ಷಿಣಕ್ಕೆ ಕೆಳ ಹಿಮಾಲಯ ಶ್ರೇಣಿ ಇದೆ. ಇಲ್ಲಿ ಕೆಲವು ಶಿಖರಗಳು 3640ಮೀ ಎತ್ತರವನ್ನು ಮುಟ್ಟಿವೆ. ಹಲವಾರು ತಗ್ಗು ಪ್ರದೇಶಗಳೂ ಇವೆ. ಇವುಗಳಲ್ಲಿ ಮುಖ್ಯವಾದುದು ಕಾಶ್ಮೀರ ಕಣಿವೆ. ಇದರ ದಕ್ಷಿಣದ ಪರ್ವತಶ್ರೇಣಿಯ ಎತ್ತರ ಬಹುಮಟ್ಟಿಗೆ ಕುಗ್ಗಿ ಕೇವಲ 1925ಮೀ ಎತ್ತರದ ಶಿವಾಲಿಕ್ ಬೆಟ್ಟಗಳ ಸಾಲಾಗಿದೆ. ಇದು ಬಹುತೇಕ ಮಧ್ಯ ಪ್ಲೀಸ್ಟೊಸೀನ್ ಯುಗದಲ್ಲಿ ಮೇಲುಮೇಲಕ್ಕೆ ಏರುತ್ತಿದ್ದ ಹಿಮಾಲಯ ಪರ್ವತಶ್ರೇಣಿಗಳ ಸವೆತದಿಂದ ದೊರೆತ ಶಿಲಾಚೂರುಗಳಿಂದ ಕೂಡಿದೆ.

ಮಧ್ಯ ಏಷ್ಯ[ಬದಲಾಯಿಸಿ]

ಇದರಲ್ಲಿ ಮುಖ್ಯವಾದ ಟಿಬೆಟ್ ಪ್ರಸ್ಥಭೂಮಿ 4853ಮೀ ಎತ್ತರವನ್ನು ಮುಟ್ಟಿದೆ. ಇಲ್ಲಿಯ ಕಾರಕೋರಂ ಪರ್ವತಶ್ರೇಣಿಯ ಗಾಡ್ವಿನ್-ಆಸ್ಟಿನ್ (ಏ-2)s ಶಿಖರ 8569ಮೀ ಎತ್ತರವಿದೆ. ಪಾಮಿರ್ ಮತ್ತು ಟಿಯನ್-ಷಾನ್ ಶ್ರೇಣಿಗಳಲ್ಲಿ 6067ಮೀ ಗಳಿಗೂ ಮೀರಿದ ಶಿಖರಗಳುಂಟು. ಅಲ್ಲದೆ 2730ಮೀ ಆಳದ ತಗ್ಗು ಪ್ರದೇಶಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಚೀನದ ಸಿಂಘಾಯ್ ಪ್ರಾಂತ್ಯದ ಸೈಡಂ ತಗ್ಗು. ಪ್ರಸಿದ್ಧವಾದ ಟುರ್ಫಾನ್ ಓಯಸಿಸ್ ಸಮುದ್ರಮಟ್ಟಕ್ಕೆ 297ಮೀ ತಗ್ಗಿನಲ್ಲಿದೆ. ವಾಯವ್ಯದ ಭಾಗದಲ್ಲಿ ಗೋಬಿ ಮರುಭೂಮಿ ಇದೆ.[೩]

ಏಷ್ಯಾಟಿಕ್ ರಷ್ಯದ ತಗ್ಗು ಪ್ರದೇಶಗಳು[ಬದಲಾಯಿಸಿ]

ಈ ವಿಭಾಗದ ಕೇಂದ್ರ ಸೈಬೀರಿಯನ್ ಪ್ರಸ್ಥಭೂಮಿ ಲೇನಾ ಮತ್ತು ಏನಿಸೈ ಕಣಿವೆಗಳ ಮಧ್ಯೆ 910ಮೀ ಗಳಿಗೂ ಕಡಿಮೆ ಎತ್ತರವಾಗಿದೆ. ಏನಿಸೈನ ಪಶ್ಚಿಮಕ್ಕಿರುವ ಪಶ್ಚಿಮ ಸೈಬೀರಿಯನ್ ಬಂiÀÄಲಿನಲ್ಲಿ ಮಡಿಕೆ ಬೀಳದೆ ಮೀಸೋಜೋ಼ಯಿಕ್ ಮತ್ತು ಟರ್ಷಿಯರಿ ನಿಕ್ಷೇಪಗಳಿವೆ. ಇವು ಯೂರೆಲ್ ಶ್ರೇಣಿಯ ತನಕ ಹಬ್ಬಿವೆ. ಈ ಭೂಭಾಗ ಸಾಮಾನ್ಯವಾಗಿ ಜೌಗುಪ್ರದೇಶ. ಇದರಲ್ಲಿ ಬಹು ಪ್ರಸಿದ್ಧವಾದುದು ವಾಸ್ಯು ಜೇನ್ ಜೌಗುಪ್ರದೇಶ. ಆಗ್ನೇಯ ಭಾಗದ ಕುಸ್ನೆಸ್ಕ್‌ ಮತ್ತು ಮಿನುಸಿನ್ಸ್ಕ್‌ ತಗ್ಗುಗಳಲ್ಲಿ ಪೇಲಿಯೊ ಜೋ಼ಯಿಕ್ ಯುಗದ ಕಲ್ಲಿದ್ದಲ ನಿಕ್ಷೇಪಗಳಿವೆ. ಇವು ಆಲ್ಬಾಯ್ ಮತ್ತು ಸಾಯನ್ ಪರ್ವತಶ್ರೇಣಿಗಳ ತಪ್ಪಲು. ದಕ್ಷಿಣದಲ್ಲಿ ಕಷಾóಕ್ ದಿಬ್ಬ ಪ್ರದೇಶವಿದೆ. ಇದರ ಸಾಮಾನ್ಯ ಎತ್ತರ 303ಮೀ ಕ್ಯಾಸ್ಪಿಯನ್ ಸಮುದ್ರದ ಉತ್ತರ ತೀರ ಪ್ರದೇಶದಲ್ಲಿ ತೈಲಕೇಂದ್ರಗಳಿವೆ.

ಪೆಸಿಫಿಕ್ ತೀರಪ್ರದೇಶಗಳು[ಬದಲಾಯಿಸಿ]

ಪೂರ್ವ ಸೈಬೀರಿಯದಿಂದ ಪ್ರಾರಂಭವಾಗಿ ಚೀನದ ಮೂಲಕ ಹಾದು ಮಲೇಷಿಯವನ್ನು ಮುಟ್ಟುವ ಈ ಭೂಭಾಗದಲ್ಲಿ ವಿವಿಧ ವಿನ್ಯಾಸದ ಪ್ರದೇಶಗಳಿವೆ. ಲೇನಾದ ಪುರ್ವಕ್ಕಿರುವ ವೆರ್ಖೊಯಾನ್ಸ್ಕ್‌ ಮತ್ತು ಚೆರ್ಸ್ಕಿ ಶ್ರೇಣಿಗಳು 2487ಮೀ ಗಳಿಗೂ ಮೀರಿ ಎತ್ತರವಾಗಿವೆ. ಕಾಮ್ಚಾಟ್ಕ ಪ್ರದೇಶದ 4550ಮೀ ಎತ್ತರದಲ್ಲಿ ಜ್ವಾಲಾಮುಖಿಗಳಿವೆ.ಚೀನದಲ್ಲಿ ಯೆನ್-ಷಾನಿಯನ್ ಪರ್ವತಜನ್ಯ ಯುಗಕ್ಕೆ ಒಳಗಾಗಿ ಭೂಭಾಗ ಪುನರುಜ್ಜೀವನಗೊಂಡು ಸ್ತರಭಂಗಗಳ ಪ್ರಭಾವದಿಂದ ಚಚ್ಚೌಕಾಕೃತಿಯ ಬೆಟ್ಟಗಳೂ ಇತ್ತೀಚೆಗೆ ತಲೆದೋರಿದ ಮೆಕ್ಕಲು ಪ್ರದೇಶಗಳೂ ಅಕ್ಕಪಕ್ಕದಲ್ಲಿವೆ. ಮಂಚೂರಿಯ ಬಂiÀÄಲಿನ ಇಕ್ಕೆಗಳಲ್ಲಿ ಖಿಂಗನ್, ಜೆಹೋಲ್, ಲಿಯೊಟುಂಗ್ ಮೊದಲಾದ ತಲೆಕೆಳಗಾದ ವಿನ್ಯಾಸವುಳ್ಳ ಚಚ್ಚೌಕಾಕೃತಿಯ ಭೂಭಾಗಗಳನ್ನು ಗುರುತಿಸಬಹುದು.ಕೊರಿಯದಲ್ಲಿ ಭೂಚಟುವಟಿಕೆಗಳಿಂದ ಛೇದಿತವಾದ ಪ್ರಸ್ಥಭೂಮಿಗಳೂ ಮೀಸೋಜೋ಼ಯಿಕ್ ಮಡಿಕೆಗಳೂ ಇವೆ. ಆಗ್ನೇಯ ಚೀನ ಸಹ ಹೆಚ್ಚಿನ ರೀತಿಯ ಸ್ತರಭಂಗಗಳಿಗೆ ಒಳಗಾಗಿದೆ. ಇಲ್ಲಿನ ಪೋ’ಯಾಂಗ್, ಟುಂಗ್ ಟಿಂಗ್ ಸರೋವರಗಳು ಮತ್ತು ಸಿಕಿಯಾಂಗ್ ಕಣಿವೆ ಜೇಡು ಮತ್ತು ಸ್ಲೇಟ್ ಶಿಲಾಪ್ರಸ್ತರಗಳಿಂದ ಆವೃತವಾದ ತಗ್ಗುಪ್ರದೇಶಗಳಲ್ಲಿವೆ. ಪಶ್ಚಿಮದತ್ತ ಸರಿದರೆ ಬಹು ಆಳವಾಗಿ ಛೇದಿತವಾದ ಕಣಿವೆಗಳನ್ನು ಹಾದುಹೋಗಬೇಕು, ಅನಂತರ 1820ಮೀ ಎತ್ತರದ ಪಶ್ಚಿಮ ಯುನಾನ್ ಪ್ರಸ್ಥಭೂಮಿ ಸಿಗುತ್ತದೆ. ಇದಕ್ಕೆ ಉತ್ತರದಲ್ಲಿ ಕಡಿದಾದ ಸಿನ್ಲಿಂಗ್ ಷಾನ್ ಪರ್ವತಶ್ರೇಣಿ ಇದೆ. ಪರ್ಮಿಯನ್ ಯುಗದಿಂದೀಚೆಗೆ ಶಾಶ್ವತ ಭೂಖಂಡವೆನಿಸಿದ ಓರ್ ಡೋಸ್ ಪ್ರಸ್ಥಭೂಮಿ. ವಾಯವ್ಯ ಚೀನದ ಕೇಂದ್ರ ಭಾಗವೇ ಇಲ್ಲಿ ಪುರಾತನ ನೆಲಭಾಗದ ನಿಕ್ಷೇಪಗಳನ್ನೂ ಎತ್ತರವಾಗಿರುವ ಮತ್ತು ಯಾವ ತೆರನಾದ ಭೂ ಚಟುವಟಿಕೆಗಳಿಗೂ ಒಳಗಾಗಿ ಅಸ್ತವ್ಯಸ್ತಗೊಂಡಿರದ ಲೋಯೆಸ್ ಎಂಬ ಒಂದು ಬಗೆಯ ಹಳದಿ ದೂಳು ಮಣ್ಣಿನ ನಿಕ್ಷೇಪಗಳಿವೆ. ಲೋಯೆಸ್ ಭಾಗದಲ್ಲಿ ಪ್ರಸಿದ್ಧವಾದ ಹಳದಿ ನದಿ, ಯಾಂಗಿಟ್ಸಿ ಬಂiÀÄಲು, ಸರೋವರಗಳು ಮತ್ತು ನೈಸರ್ಗಿಕ ಕಾಲುವೆಗಳೂ ಇವೆ.ದಕ್ಷಿಣಭಾಗದ ಯುನಾನ್ ಪ್ರಸ್ಥಭೂಮಿ ಬರ್ಮ ಮತ್ತು ಇಂಡೊ-ಚೀನಗಳಿಗೂ ವ್ಯಾಪಿಸಿದೆ. ಮಯನ್ಮಾರ್ನಲ್ಲಿ ಇದನ್ನು ಷಾನ್ ಪ್ರಸ್ಥಭೂಮಿ ಎನ್ನುತ್ತಾರೆ. ಇದರಲ್ಲಿ ಅನೇಕ ಕಡೆ ಸಲ್ವೀನ್ ಮತ್ತು ಮೆಕಾಂಗ್ ನದಿಗಳಿಂದಾದ ಆಳವಾದ ಕಣಿವೆಗಳಿವೆ.

ದ್ವೀಪಸ್ತೋಮಗಳು[ಬದಲಾಯಿಸಿ]

ಇಂಡೋನೇಷ್ಯದಿಂದ ಜಪಾನ್ ತನಕ ಹಬ್ಬಿರುವ ಈ ಭೂಭಾಗ ಬಹು ಅಸ್ಥಿರವಾದುದು. ಈ ಪ್ರದೇಶದಲ್ಲಿ ಅಸಂಖ್ಯಾತ ಜ್ವಾಲಾಮುಖಿಗಳೂ ಅವುಗಳಿಗೆ ಸಂಬಂಧಿಸಿದ ದ್ವೀಪಗಳೂ ಇವೆ. ಪರ್ವತಜನ್ಯ ಶಕ್ತಿಗಳ ಚಟುವಟಿಕೆಯೂ ಬಹು ತೀವ್ರ. ಮಲೇಷಿಯ ಮತ್ತು ಬೋರ್ನಿಯೊಗಳಲ್ಲಿ ಮೀಸೊಜೋ಼ಯಿಕ್ ಶಿಲೆಗಳೂ ಉಳಿದೆಡೆ ಟರ್ಷಿಯರಿ ನಿಕ್ಷೇಪಗಳೂ ಮಡಿಕೆಗಳೂ ಕಂಡುಬಂದಿವೆ. ಇವುಗಳಲ್ಲಿ ತೈಲಪ್ರದೇಶಗಳೂ ಇವೆ. ಇಂಡೋನೇಷ್ಯದಲ್ಲಿ ಹಲವು ಜ್ವಾಲಾಮುಖಿಗಳ ಶಿಖರಗಳು 3033ಮೀಗಳ ಎತ್ತರವನ್ನೂ ಮೀರಿವೆ. ಅಗ್ನಿ ಪರ್ವತಗಳ ತೀವ್ರಗತಿಯ ಕಾರ್ಯಾಚರಣೆ ಇದ್ದೂ ಭೂಭಾಗ ಮಡಿಕೆ ಬೀಳದೆ ಅಲ್ಲಿನ ಶಿಲಾಪ್ರಸ್ತರಗಳ ಜಾಡಿನಲ್ಲಿ ಭಂಗವಾಗದಿರುವುದು ಜಪಾನಿನ ಭೂವಿನ್ಯಾಸದ ವೈಶಿಷ್ಟ್ಯ. ಇಲ್ಲಿಯ ಅತ್ಯಂತ ದೊಡ್ಡ ಭೂ ಇಳುಕಲಿನಲ್ಲಿ 3758ಮೀ ಎತ್ತರದ ಫೂಜಿಯಾಮ ಅಗ್ನಿಪರ್ವತವಿದೆ. ಪುರ್ವಭಾಗದಲ್ಲಿ ಮಡಿಕೆ ಬಿದ್ದಿರುವ ಮತ್ತು ಸ್ತರಭಂಗಗಳಿಂದ ಛೇದಿತವಾದ ಪ್ರಾಚೀನ ಶಿಲಾಪ್ರಸ್ತರಗಳ ಮೇಲೆ ಕಡಿದಾದ ಪರ್ವತಶ್ರೇಣಿ ಇದೆ. ಪಶ್ಚಿಮದತ್ತ ಸ್ತರಭಂಗಗಳಿಗೊಳಗಾಗದ ಕಿರಿಯ ನಿಕ್ಷೇಪಗಳೂ ಅಸಂಖ್ಯಾತ ಅಗ್ನಿ ಪರ್ವತಗಳೂ ಇವೆ.

ಉಲ್ಲೇಖಗಳು[ಬದಲಾಯಿಸಿ]