ಏಷ್ಯದ ಅಭಿವೃದ್ಧಿ ಬ್ಯಾಂಕು
ಏಷ್ಯದ ಅಭಿವೃದ್ಧಿ ಬ್ಯಾಂಕು': ವಿಶ್ವಸಂಸ್ಥೆ ಸ್ಥಾಪಿಸಿದ ಏಷ್ಯ ಮತ್ತು ದೂರದ ಪೌರ್ವಾತ್ಯ ರಾಷ್ಟ್ರಗಳಿಗೆ ಸಂಬಂಧಿತ ಆರ್ಥಿಕ ಮಂಡಳಿಯು ಜನವರಿ 31, 1966ರಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿತು. ಡಿಸೆಂಬರ್ 4, 1965 ರಲ್ಲಿ ವಿಶ್ವಸಂಸ್ಥೆಯ ಲಿಖಿತ ಸಂವಿಧಾನವು 31 ರಾಷ್ಟ್ರಗಳಿಂದ ಸಹಿ ಮಾಡಲ್ಪಟ್ಟರೂ ಇದು ಜನವರಿ1, 1967 ರಿಂದ ಕಾರ್ಯಾರಂಭ ಮಾಡತೊಡಗಿತು. ಅಧಿಕೃತ ಬಂಡವಾಳ 2985.71 ಡಾಲರ್ ಗಳಾಗಿದ್ದು ಅದರಲ್ಲಿ 1091.75 ದಶಲಕ್ಷ ಡಾಲರ್ಗಳು ವಂತಿಗೆ ಬಂಡವಾಳವಾಗಿದೆ. 1966ರ ಡಿಸೆಂಬರಿನಲ್ಲಿ ಇದು ಕಾರ್ಯಾರಂಭ ಮಾಡಿತು. ಈ ಪ್ರದೇಶಕ್ಕೆ ಸೇರಿದ 19 ಮತ್ತು ಇದರ ಹೊರಗಿನ 13 ದೇಶಗಳು ಏಷ್ಯದ ಅಭಿವೃದ್ಧಿ ಬ್ಯಾಂಕಿನ ಸದಸ್ಯತ್ವ ಪಡೆದಿವೆ. ಬ್ಯಾಂಕಿನ ಪ್ರಧಾನ ಕಚೇರಿ ಇರುವುದು ಫಿಲಿಪೀನ್ಸ್ ದೇಶದ ಮನಿಲ ನಗರದಲ್ಲಿ.
ಬ್ಯಾಂಕು ತನ್ನ ಉದ್ದೇಶ ಸಾಧನೆಗಾಗಿ ಅನುಸರಿಸುವ ಕ್ರಮಗಳು ಇವು
[ಬದಲಾಯಿಸಿ]- 1. ಅಭಿವೃದ್ಧಿಗಾಗಿ ಸರ್ಕಾರಿ ಮತ್ತು ಖಾಸಗಿ ಬಂಡವಾಳ ನಿಯೋಜನೆಯ ಪ್ರವರ್ತನೆ;
- 2. ಇಡೀ ಪ್ರದೇಶದ ಸಮಾನ ಆರ್ಥಿಕಾಭಿವೃದ್ಧಿಗೆ ಅತ್ಯಂತ ಪರಿಣಾಮಕಾರಿಯಾಗಿ ನೆರವಾಗುವಂತೆ, ಕಿರಿಯ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ಸದಸ್ಯರಾಷ್ಟ್ರಗಳ ಅಗತ್ಯಗಳಿಗೆ ವಿಶೇಷ ಗಮನ ದೊರಕುವಂತೆ, ಪ್ರಾದೇಶಿಕ, ಉಪಪ್ರಾದೇಶಿಕ ಮತ್ತು ರಾಷ್ಟ್ರೀಯ ಯೋಜನೆಗಳಿಗೂ ಕಾರ್ಯಕ್ರಮಗಳಿಗೂ ಆದ್ಯಗಮನವಿರುವಂಥ ಅಭಿವೃದ್ಧಿ ಪ್ರಯತ್ನಗಳಿಗೆ ಹಣ ಒದಗಿಸುವ ಸಲುವಾಗಿ ಲಭ್ಯವಿರುವ ಸಾಧನ ಸಂಪತ್ತಿನ ಬಳಕೆ;
- 3 ಈ ಪ್ರದೇಶದ ಸದಸ್ಯರಾಷ್ಟ್ರಗಳ ಸಾಧನ ಸಂಪತ್ತು ಉತ್ತಮವಾಗಿ ಬಳಕೆಯಾಗು ವಂತೆಯೂ ಅರ್ಥ ವ್ಯವಸ್ಥೆಗಳು ಪರಸ್ಪರ ಪುರಕವಾಗುವಂತೆಯೂ ವಿದೇಶೀವ್ಯಾಪಾರ-ಅದರಲ್ಲೂ ಅಂತರ್ಪ್ರದೇಶ ವ್ಯಾಪಾರ-ಸುವ್ಯವಸ್ಥಿತವಾಗಿ ಬೆಳೆಯುವಂತೆಯೂ ಮಾಡುವ ಉದ್ದೇಶದಿಂದ ಇವುಗಳ ಅಭಿವೃದ್ಧಿ ನೀತಿಗಳನ್ನೂ ಯೋಜನೆಗಳನ್ನೂ ಸುಸಂಘಟಿಸುವ ಕಾರ್ಯದಲ್ಲಿ ರಾಷ್ಟ್ರಗಳಿಂದ ಬರುವ ಬೇಡಿಕೆಗಳ ಈಡೇರಿಕೆ;
- 4. ನಿಶ್ಚಿತ ಕಾರ್ಯಸೂಚಿ ಗಳನ್ನು ರೂಪಿಸುವುದೂ ಸೇರಿದಂತೆ ಅಭಿವೃದ್ಧಿಕಾರ್ಯಕ್ರಮಗಳ ತಯಾರಿಕೆ, ಹಣನಿರ್ವಹಣೆ, ಕಾರ್ಯಾನ್ವಯಗಳೇ ಮುಂತಾದ ಎಲ್ಲ ವಿಚಾರಗಳಲ್ಲೂ ಸೂಕ್ತ ತಾಂತ್ರಿಕ ನೆರವಿನ ನೀಡಿಕೆ; ಅಲ್ಲದೆ ಕೃಷಿ, ಕೈಗಾರಿಕೆ, ಸಾರ್ವಜನಿಕ ಆಡಳಿತ ಮುಂತಾದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ತಾಂತ್ರಿಕ ನೆರವು ನೀಡಿಕೆ ಮತ್ತು ಹೊಸ ಸಂಸ್ಥೆಗಳ ರಚನೆ;
- 5. ಈ ಪ್ರದೇಶದಲ್ಲಿ ಅಭಿವೃದ್ಧಿಗಾಗಿ ಹಣ ನಿಯೋಜಿಸಬಹುದಾದ ವಿಶ್ವಸಂಸ್ಥೆ ಮತ್ತು ಅದರ ಉಪಾಂಗಗಳೊಂದಿಗೂ (ಸಬ್ಸಿಡಿಯರಿ) ಕಾರ್ಯಕರ್ತೃಗಳೊಂದಿಗೂ (ಏಜೆನ್ಸೀಸ್) ಇತರ
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೂ ಸಹಕಾರ ಕಲ್ಪನೆ.
ರಚನೆ
[ಬದಲಾಯಿಸಿ]ಬ್ಯಾಂಕಿನ ಅಧಿಕಾರವೆಲ್ಲ ನಿಹಿತವಾಗಿರುವುದು (ವೆಸ್ಟೆಡ್) ಶಾಸಕ ಮಂಡಲಿಯಲ್ಲಿ (ಬೋರ್ಡ್ ಆಫ್ ಗವರ್ನರ್ಸ್). ಹೊಸ ಸದಸ್ಯರ ಪ್ರವೇಶ, ಬ್ಯಾಂಕಿನ ಅಧಿಕೃತ ಬಂಡವಾಳದಲ್ಲಿ ಬದಲಾವಣೆ, ನಿರ್ದೇಶಕರ (ಡೈರೆಕ್ಟರ್ಸ್) ಮತ್ತು ಅಧ್ಯಕ್ಷರ ಚುನಾವಣೆ, ಪ್ರಣಾಳಿಕೆಯ ತಿದ್ದುಪಡಿ ಮುಂತಾದ ವಿಷಯಗಳನ್ನು ಬಿಟ್ಟು ಉಳಿದ ಅಧಿಕಾರಗಳನ್ನು ಇದು ನಿರ್ದೇಶಕ ಮಂಡಲಿಗೆ ವಹಿಸಿಕೊಡಬಹುದು. ಪ್ರತಿಯೊಂದು ಸದಸ್ಯ ರಾಷ್ಟ್ರವೂ ಒಬ್ಬ ಶಾಸಕನನ್ನೂ ಒಬ್ಬ ಪರ್ಯಾಯ (ಆಲ್ಬರ್ನೇಟ್) ಶಾಸಕನನ್ನೂ ನೇಮಿಸುತ್ತದೆ. ಶಾಸಕ ಮಂಡಲಿ ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಸೇರಬೇಕು.
ಬ್ಯಾಂಕಿನ ಕಲಾಪಗಳ ಸಾಮಾನ್ಯ ನಿರ್ದೇಶನವೇ ನಿರ್ದೇಶಕ ಮಂಡಲಿಯ ಹೊಣೆ. ಶಾಸಕ ಮಂಡಲಿ ವಹಿಸಿಕೊಡುವ ಅಧಿಕಾರಗಳನ್ನು ಇದು ಚಲಾಯಿಸುತ್ತದೆ. ನಿರ್ದೇಶಕ ಮಂಡಲಿಯ ಸದಸ್ಯರ ಸಂಖ್ಯೆ ಹತ್ತು. ಇವರನ್ನು ಶಾಸನ ಮಂಡಲಿ ಚುನಾಯಿಸುತ್ತದೆ. ಇವರ ಪೈಕಿ ಏಳು ಜನರು ಪ್ರಾದೇಶಿಕ ಸದಸ್ಯರಾಷ್ಟ್ರಗಳ ಪ್ರತಿನಿಧಿಗಳು; ಮೂವರು ಪ್ರದೇಶಾತೀತ ಸದಸ್ಯರಾಷ್ಟ್ರಗಳ ಪ್ರತಿನಿಧಿಗಳು, ಪ್ರತಿ ನಿರ್ದೇಶಕನ ಅಧಿಕಾರಾವಧಿ ಎರಡು ವರ್ಷ; ಅವಧಿ ಪುರೈಸಿದ ಮೇಲೆ ಈತ ಮತ್ತೆ ಚುನಾವಣೆಯಾಗಬಹುದು. ಬ್ಯಾಂಕಿನ ಅಧ್ಯಕ್ಷನೇ ಈ ಮಂಡಲಿಯ ಪೀಠಾಧಿಪತಿ (ಚೇರ್ಮನ್). ಇವನು ನಿರ್ದೇಶಕನೇ ಆಗಿರಬೇಕಾದುದಿಲ್ಲ. ಸದಸ್ಯರಾಷ್ಟ್ರಗಳ ಚುನಾವಣೆ ಹಕ್ಕಿಗೆ ಅವುಗಳ ಬಂಡವಾಳವೇ ಆಧಾರ. ಒಟ್ಟು ಮತಚಲಾವಣೆ ಹಕ್ಕಿನ ಶೇಕಡಾ 20ರಷ್ಟನ್ನು ಎಲ್ಲ ಸದಸ್ಯರಾಷ್ಟ್ರಗಳಲ್ಲೂ ಸಮನಾಗಿಯೂ ಉಳಿದದ್ದನ್ನು ಆಯಾ ರಾಷ್ಟ್ರಗಳ ಬಂಡವಾಳಗಳಿಗೆ ಅನುಗುಣವಾಗಿಯೂ ಹಂಚಲಾಗಿದೆ.
ಹಣಕಾಸಿನ ರಚನೆ
[ಬದಲಾಯಿಸಿ]ಬ್ಯಾಂಕಿನ ಅಧಿಕೃತ ಬಂಡವಾಳ 110 ಕೋಟಿ ಅಮೆರಿಕನ್ ಡಾಲರು, ಚಂದಾ ಎತ್ತಿದ ಬಂಡವಾಳ 97 ಕೋಟಿ ಡಾಲರು. ಪ್ರತಿ ಸದಸ್ಯರಾಷ್ಟ್ರವೂ ತನ್ನ ಅಪೇಕ್ಷಿತ (ಸಬ್ಸ್ಕ್ರೈಬ್ಡ್) ಬಂಡವಾಳದಲ್ಲಿ ಅರ್ಧಭಾಗವನ್ನೂ ಐದು ಸಮಾನ ವಾರ್ಷಿಕ ಕಂತುಗಳಲ್ಲಿ ಸಲ್ಲಿಸಬೇಕು. ಪ್ರತಿ ಕಂತಿನ ಅರ್ಧ ಭಾಗವನ್ನು ಚಿನ್ನದಲ್ಲಾಗಲಿ ಪರಿವರ್ತನೀಯ (ಕನ್ವರ್ಟಿಬಲ್) ನಾಣ್ಯದಲ್ಲಾಗಲಿ ಕೊಡತಕ್ಕದ್ದು. ಉಳಿದರ್ಧವನ್ನು ಸ್ಥಳೀಯ ನಾಣ್ಯದಲ್ಲಿ ಪಾವತಿ ಮಾಡಬಹುದು. ಅಪೇಕ್ಷಿತ ಬಂಡವಾಳದ ಉಳಿದರ್ಧಭಾಗ ಆಹ್ವಾನಿತ ಷೇರುಗಳಾಗಿ, ಬ್ಯಾಂಕಿನ ಹೊಣೆಗಳಿಗೆ ಭರವಸೆಯ ಬೆಂಬಲವಾಗಿ ಇರುತ್ತದೆ. ಅಪೇಕ್ಷಿತ ಬಂಡವಾಳವಾದ 97 ಕೋಟಿ ಡಾಲರುಗಳಲ್ಲಿ ಪ್ರಾದೇಶಿಕ ಮತ್ತು ಪ್ರದೇಶಾತೀತ ಸದಸ್ಯರಾಷ್ಟ್ರಗಳ ಪಾಲು ಅನುಕ್ರಮವಾಗಿ 61.5 ಕೋಟಿ ಮತ್ತು 35.5 ಕೋಟಿ, ವಿವರಗಳು ಈ ರೀತಿ ಇವೆ :
* ಪ್ರಾದೇಶಿಕ ಸದಸ್ಯ ರಾಷ್ಟ್ರಗಳು
[ಬದಲಾಯಿಸಿ]ದೇಶ- | ಕೋಟಿ ಡಾಲರುಗಳಲ್ಲಿ ಚಂದಾ |
---|---|
ಆಫ್ಘಾನಿಸ್ತಾನ | 0.478 |
ಆಸ್ಟ್ರೇಲಿಯ | 8.500 |
ಇಂಡೊನೇಷ್ಯ | 2.500 |
ಕಾಂಬೋಡಿಯ | 0.350 |
ಕೊರಿಯ ಗಣರಾಜ್ಯ | 3.000 |
ಜಪಾನ್ | 20.000 |
ತೈವಾನ್ | 1.600 |
ಥೈಲೆಂಡ್ | 2.000 |
ನ್ಯೂಜಿ಼ಲೆಂಡ್ | 2.256 |
ನೇಪಾಲ | 0.216 |
ಪಶ್ಚಿಮ ಸಮೋವ | 0.006 |
ಪಾಕಿಸ್ತಾನ | 3.200 |
ಫಿಲಿಪೀನ್ಸ್ | 3.500 |
ಭಾರತ | 9.300 |
ಮಲೇಷ್ಯ | 2.000 |
ಲಾವೋಸ್ | 0.042 |
ವಿಯೆಟ್ನಾಂ ಗಣರಾಜ್ಯ | 1.200 |
ಸಿಂಗಪುರ | 0.500 |
ಶ್ರೀಲಂಕಾ | 0.852 ... 61,500 |
* ಪ್ರದೇಶಾತೀತ ಸದಸ್ಯರಾಷ್ಟ್ರಗಳು
[ಬದಲಾಯಿಸಿ]ದೇಶ- | ಕೋಟಿ ಡಾಲರುಗಳಲ್ಲಿ ಚಂದಾ |
---|---|
ಅಮೆರಿಕ ಸಂಯುಕ್ತ ಸಂಸ್ಥಾನ | 20.000 |
ಇಟಲಿ | 0.500 |
ಕೆನಡ | 2.000 |
ಜರ್ಮನ್ ಒಕ್ಕೂಟ ಗಣರಾಜ್ಯ | 3.400 |
ಡೆನ್ಮಾರ್ಕ್ | 0.500 |
ನಾರ್ವೇ | 0.500 |
ನೆದರ್ಲೆಂಡ್ಸ್ | 1.100 |
ಬೆಲ್ಜಿಯಂ | 0.500 |
ಫಿನ್ಲೆಂಡ್ | 0.500 |
ಸಂಯುಕ್ತ ರಾಜ್ಯ (ಬ್ರಿಟನ್) | 3.000 |
ಸ್ವಿಟ್ಜರ್ಲೆಂಡ್ | 0.500 |
ಸ್ವೀಡನ್ | 0.500 35.500 |
* ಒಟ್ಟು 97,000
[ಬದಲಾಯಿಸಿ]ಬ್ಯಾಂಕಿನ ಕಲಾಪಗಳಿಗೆ ಅಗತ್ಯವಾದ ಹಣ ಒದಗಿರುವುದು ಮುಖ್ಯವಾಗಿ ಬಂಡವಾಳ ಮತ್ತು ಸಾಲಗಳಿಂದ. ಸರ್ಕಾರಗಳಿಗೂ ರಾಷ್ಟ್ರೀಯ ಅಭಿವೃದ್ಧಿಕಾರ್ಯಗಳಿಗೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೂ ಅಂತರರಾಷ್ಟ್ರೀಯ ಕಾರ್ಯಕರ್ತೃಗಳಿಗೂ ಕೈಗಾರಿಕೆ, ಕೃಷಿ, ವಿದ್ಯುತ್, ಸಾರಿಗೆ ಮತ್ತು ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ನಿರ್ದಿಷ್ಟ ಅಭಿವೃದ್ಧಿ ಕಾರ್ಯಕ್ರಮಗಳಿಗೂ ನೇರವಾಗಿ ಈ ಹಣದಿಂದ ಸಾಲ ನೀಡಲಾಗುತ್ತದೆ. ಬ್ಯಾಂಕಿನ ಉದ್ದೇಶಗಳಿಗೆ ಭಂಗ ಬಾರದಂಥ ಯಾವುದೇ ಕಾರ್ಯಕ್ಕಾದರೂ ವಿಶೇಷ ನಿಧಿಗಳಿಗಾಗಿ ಬ್ಯಾಂಕು ಪ್ರದಾತೃಗಳಿಂದ ಹಣದ ಕೊಡುಗೆ ಸ್ವೀಕರಿಸಬಹುದು. ಸಾಮಾನ್ಯ ನಿಧಿಯ ವ್ಯವಹಾರಗಳದಕ್ಕಿಂತ ಹೆಚ್ಚು ಧಾರಾಳವಾದ ಷರತ್ತುಗಳ ಮೇಲೆ ಸಾಲ ನೀಡಲು ವಿಶೇಷ ನಿಧಿಗಳಿಗಾಗಿ ಬ್ಯಾಂಕು ತನಗೆ ಪಾವತಿಯಾದ ಬಂಡವಾಳದಲ್ಲಿ ಶೇ. 10ರಷ್ಟನ್ನು ಎತ್ತಿಡಬಹುದು. ವಿಶೇಷ ಕೃಷಿನಿಧಿ ಈಗಾಗಲೇ ನಿರ್ಮಿತವಾಗಿದೆ.ಈ ಪ್ರದೇಶದ ಕೃಷಿ ಕ್ಷೇತ್ರದಲ್ಲಿ ಕಾರ್ಯಾಚರಣೆ ಸಾಧ್ಯವಾಗುವಂತೆ ಬ್ಯಾಂಕು ಈ ಕ್ಷೇತ್ರದ ಸರ್ವೆ ನಡೆಸಿದೆ. ಸಾರಿಗೆ ಕ್ಷೇತ್ರದಲ್ಲಿ ಉಪ-ಪ್ರಾದೇಶಿಕ ಸರ್ವೆಯನ್ನೂ ಮಾಡಲಾಗುತ್ತಿದೆ.ನಾನಾ ವಿಧವಾಗಿ ರೂಢಿಸಿಕೊಂಡ ಬಂಡವಾಳವನ್ನು ಈ ಪ್ರದೇಶದ ಸದಸ್ಯ ರಾಷ್ಟ್ರಗಳು ಕೈಗೊಳ್ಳುವ ನಿರ್ದಿಷ್ಟ ಯೋಜನೆಗಳಲ್ಲಿ ವಿನಿಯೋಗಿಸಲಾಗುವುದು. ಏಷ್ಯದ ಬಹುತೇಕ ರಾಷ್ಟ್ರಗಳಲ್ಲಿ ವ್ಯವಸಾಯ ಪ್ರಧಾನ ಕಸುಬಾಗಿರುವುದರಿಂದ, ವ್ಯವಸಾಯ ಮತ್ತು ಇತರ ಮೂಲಭೂತ ಅವಶ್ಯಕತೆಗಳಿಗೆ ಆದ್ಯತೆ ನೀಡಲಾಗುವುದು. ನಿರ್ದಿಷ್ಟ ಯೋಜನೆಗಳಿಗೆ ಸಾಲ ನೀಡುವಾಗ ಬ್ಯಾಂಕು ಕೆಲವು ಸ್ಪಷ್ಟನೀತಿಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಅವಶ್ಯಕವೆನಿಸುವುದು, ಮೊದಲನೆಯದಾಗಿ, ಸಾಲ ನೀಡಿಕೆಗೆ ಯೋಜನೆಗಳನ್ನು ಆಯ್ಕೆ ಮಾಡುವಾಗ ಪ್ರದೇಶದ ಸಾಮರಸ್ಯ ಅಭಿವೃದ್ಧಿಯನ್ನು ಮತ್ತು ತೀರಾ ಹಿಂದುಳಿದ ಸಣ್ಣ ರಾಷ್ಟ್ರಗಳ ಆವಶ್ಯಕತೆಗಳನ್ನು ಬ್ಯಾಂಕು ಗಮನದಲ್ಲಿಡುವುದು. ಎರಡನೆಯದಾಗಿ, ಸಾಲ ನೀಡಿಕೆಯ ಸಂದರ್ಭದಲ್ಲಿ ಆಯಾ ರಾಷ್ಟ್ರಗಳು ಹೊಂದಿರುವ ಇತರ ಸಾಲ ಸೌಲಭ್ಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಇದರ ಪರಿಣಾಮವಾಗಿ, ಅಸಹಾಯಕ ರಾಷ್ಟ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯಗಳು ದೊರಕುವಂತಾಗುವುದು. ಮೂರನೆಯದಾಗಿ, ಸಾಲ ನೀಡಿಕೆ ಆಯಾ ಯೋಜನೆಗಳ ಸಾಮಥರ್ಯ್‌ವನ್ನು ಸಹ ಅವಲಂಬಿಸಿರುತ್ತದೆ. ಒಟ್ಟಿನಲ್ಲಿ ಇದು ಸಾಲ ನೀಡುವಾಗ ಬ್ಯಾಂಕ್ ಉದ್ಯಮದ ಎಲ್ಲ ಸುಷ್ಠು ತತ್ತ್ವಗಳನ್ನೂ ಅನುಸರಿಸುತ್ತದೆ.[೧]ಇವಲ್ಲದೆ, ಹಿಂದುಳಿದ ರಾಷ್ಟ್ರಗಳ ಶಾಸಕರು, ಸೂಚಿಸಿರತಕ್ಕ ಮತ್ತೊಂದು ನಿಯಮವೂ ಗಮನಾರ್ಹ. ಇದರ ಪ್ರಕಾರ ಬ್ಯಾಂಕುಸಾಲಗಳು ಯಾವುದೇ ರಾಷ್ಟ್ರದಲ್ಲೂ ಕೇಂದ್ರೀಕೃತವಾಗದಂತೆ ಬ್ಯಾಂಕು ತನ್ನ ಕಾರ್ಯವನ್ನು ನಿರ್ವಹಿಸಬೇಕಾಗುವುದು. ಅಂದರೆ, ಬ್ಯಾಂಕಿನ ಸಾಲಗಳು ಪ್ರದೇಶದ ಇಲ್ಲ ರಾಷ್ಟ್ರಗಳಲ್ಲಿ ಆದಷ್ಟು ಸೂಕ್ತ ಪ್ರಮಾಣದಲ್ಲಿ ವಿನಿಯೋಗವಾಗಬೇಕೆಂಬುದು ಇದರ ಹಿಂದಿನ ಉದ್ದೇಶ.
ಆರ್ಥಿಕಾಭಿವೃದ್ಧಿ
[ಬದಲಾಯಿಸಿ]ಆರ್ಥಿಕಾಭಿವೃದ್ಧಿ ಬಂಡವಾಳದಿಂದಲೇ ಸಾಧ್ಯವಿಲ್ಲವೆಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಅಭಿವೃದ್ಧಿಹೊಂದಿದ ರಾಷ್ಟ್ರಗಳ ಇತರ ಅವಶ್ಯಕತೆಗಳನ್ನು ಪುರೈಸುವುದ ಕ್ಕಾಗಿಯೂ ಬ್ಯಾಂಕು ಶ್ರಮಿಸುತ್ತದೆ. ತತ್ಪರಿಣಾಮವಾಗಿ, ಸದಸ್ಯರಾಷ್ಟ್ರಗಳಿಗೆ ತಾಂತ್ರಿಕ ಸಹಾಯ ನೀಡಲು ಬ್ಯಾಂಕಿನ 21ನೆಯ ವಿಧಿ ತಿಳಿಸುತ್ತದೆ. ಏಷ್ಯದ ರಾಷ್ಟ್ರಗಳಲ್ಲಿ ಅನುಕೂಲಕರವಾದ ಸಾಮಾಜಿಕ ಮತ್ತು ಆರ್ಥಿಕ ವಾತಾವರಣವನ್ನು ಸೃಷ್ಟಿಸುವುದರಲ್ಲೂ ಸದಸ್ಯರಾಷ್ಟ್ರಗಳ ಅಭಿವೃದ್ಧಿ ಯೋಜನೆಗಳು ಹೊಂದಿಕೊಂಡು ಹೋಗಲೂ ಏಷ್ಯದ ಅಂತರಪ್ರಾಂತೀಯ ವ್ಯಾಪಾರ ಅಭಿವೃದ್ಧಿಗೊಳ್ಳಲೂ ಬ್ಯಾಂಕು ಸಹಾಯ ಮಾಡುತ್ತದೆ. ಇದಕ್ಕೆ ಪೋಷಕವಾಗಿ ಎಂಬಂತೆ ಬ್ಯಾಂಕು ಏಷ್ಯದ ವ್ಯವಸಾಯ ಸಮೀಕ್ಷೆ, ಪ್ರಾದೇಶಿಕ ಸಾರಿಗೆ ವ್ಯವಸ್ಥೆ ಸಮೀಕ್ಷೆ ಮತ್ತು ಇತರ ಸಮೀಕ್ಷೆಗಳನ್ನು ಕೈಗೊಳ್ಳುತ್ತದೆ.
ಬ್ಯಾಂಕಿನ ಪ್ರಗತಿ
[ಬದಲಾಯಿಸಿ]ಕೆಲವು ರಾಷ್ಟ್ರಗಳಿಗೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಬ್ಯಾಂಕು ನೆರವು ನೀಡುತ್ತಿದೆ. ಈವರೆಗೆ ನೆರವು ಪಡೆದಿರುವ ದೇಶಗಳೆಂದರೆ ಇಂಡೊನೇಷ್ಯ (ಆಹಾರ ಉತ್ಪಾದನೆ ಮತ್ತು ಸರಬರಾಯಿ), ಕೊರಿಯ ಗಣರಾಜ್ಯ (ಕೃಷಿ ಮತ್ತು ಮೀನುಗಾರಿಕೆ ಅಭಿವೃದ್ಧಿ ಕಾರ್ಪೊರೇಷನ್), ಫಿಲಿಪೀನ್ಸ್ (ನೀರಾವರಿ ಮತ್ತು ಜಲ ನಿರ್ವಹಣೆ ಅಭಿವೃದ್ಧಿ; ಮನಿಲಾದಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಆಧುನಿಕ ರೇವು ನಿರ್ಮಾಣ), ವಿಯಟ್ನಾಂ ಗಣರಾಜ್ಯ (ಕೈಗಾರಿಕಾಭಿವೃದ್ಧಿ ಹಣಕಾಸು ಸಂಸ್ಥೆಗಳು), ನೇಪಾಳ (ಕೃಷಿ ಅಭಿವೃದ್ಧಿ ಬ್ಯಾಂಕು). ಬ್ಯಾಂಕು ತನ್ನ ಸಾಲ ನೀಡಿಕೆಯಲ್ಲಿ ನೀರಾವರಿ ಹಾಗೂ ಜಲನಿಯಂತ್ರಣ ಕಾರ್ಯಕ್ರಮಗಳಿಗೂ ಸಾರಿಗೆ ವ್ಯವಸ್ಥೆ ಮತ್ತು ಮೂಲ ಕೈಗಾರಿಕೆಗಳಿಗೂ ಆದ್ಯತೆ ಕೊಡುತ್ತಿದೆ.[೨]
ಪ್ರಗತಿ
[ಬದಲಾಯಿಸಿ]ಏಷ್ಯದ ಅಭಿವೃದ್ಧಿ ಬ್ಯಾಂಕು ತನ್ನ ಪ್ರಾರಂಭದ ಅತ್ಯಲ್ಪ ಕಾಲದಲ್ಲಿಯೇ ಸಾಧಿಸಿರುವ ಪ್ರಗತಿ ಆಶಾಭಾವನೆಯನ್ನು ಉಂಟುಮಾಡಿದೆ. ಹೆಚ್ಚುಹೆಚ್ಚಾಗಿ ಸ್ಥಳೀಯ ಬಂಡವಾಳದ ಉಪಯೋಗ, ಅಂತರ್ಪ್ರಾದೇಶಿಕ ವ್ಯಾಪಾರದ ಪ್ರೋತ್ಸಾಹ, ಅವಶ್ಯಕ ತಾಂತ್ರಿಕ ಜ್ಞಾನ ಒದಗಿಸುವಿಕೆ ಮುಂತಾದ ಉದ್ದೇಶಗಳನ್ನು ಸಾಧಿಸುವ ಕೆಲಸದಲ್ಲಿ ಏಷ್ಯದ ಬ್ಯಾಂಕು ಮುನ್ನಡೆದಿದೆ. ವಿದೇಶೀ ಹಣದ ಮೇಲೆ ರಾಷ್ಟ್ರದ ಅವಲಂಬನೆಯನ್ನು ಕಡಿಮೆ ಮಾಡುವುದರ ಮೂಲಕ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನು ಹಲವು ದೇಶಗಳು ಸ್ವಾಗತಿಸಿವೆ. ಈ ದಿಸೆಯಲ್ಲಿ ಬ್ಯಾಂಕಿನ ಅತಿ ಮುಖ್ಯವಾದ ಸಮಸ್ಯೆ ಅದರ ಬಂಡವಾಳದ ಗಾತ್ರ. ಏಕೆಂದರೆ, ಬ್ಯಾಂಕು ಕೈಕೊಳ್ಳಬೇಕಾದ ಕಾರ್ಯಗಳ ಮತ್ತು ಅದರ ಬಂಡವಾಳದ ಗಾತ್ರದ ನಡುವಿನ ಅಂತರ ಬಹಳವಿದೆ. ಪ್ರಪಂಚ ಬ್ಯಾಂಕಿನ ಮತ್ತು ಇತರ ಅಂತಾರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳ ಸಹಕಾರ ದೊರಕುತ್ತಿದೆ.