ಏಣಗಿ ಬಾಳಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಣಗಿ ಬಾಳಪ್ಪ

ಕನ್ನಡ ವೃತ್ತಿರಂಗಭೂಮಿ ಕಂಡ ಅವಿಸ್ಮರಣೀಯ ಕಲಾವಿದ.

ಜನನ, ಬಾಲ್ಯ ಮತ್ತು ವೃತ್ತಿಜೀವನ[ಬದಲಾಯಿಸಿ]

ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ ೧೯೧೪ರಲ್ಲಿ ಜನಿಸಿದ ಬಾಳಪ್ಪನವರ ಬಾಲ್ಯ ಅಷ್ಟೇನೂ ಸುಖಕರವಾಗಿರಲಿಲ್ಲ. ಲೋಕುರ ಮನೆತನದ ಬಾಳಮ್ಮ ಹಾಗು ಕರಿಬಸಪ್ಪನವರ ಮಗನಾಗಿ ಜನಿಸಿದರು. ತಂದೆಯವರನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಹಣದ ಕೊರತೆಯಿಂದ ಮುಂದೆ ಶಾಲೆಗೆ ಸೇರಲು ಸಾಧ್ಯವಾಗಲಿಲ್ಲ. ಅವರ ಪಾಲಿಗೆ ಬೇಸಾಯ ಹಾಗೂ ಪಶುಪಾಲನೆ ಅವರ ಆದ್ಯತೆಯಾಯಿತು. ಹಳ್ಳಿಯ ಬಯಲಾಟ, ದೊಡ್ಡಾಟದ ಬಗ್ಗೆ ಒಲವು ಬೆಳೆಯಿತು. ಲವ-ಕುಶ ನಾಟಕ ನೋಡಿದ ಮೇಲೆ ಅವರ ಮನಸ್ಸೆಲ್ಲಾ ನಾಟಕದ ಪಾತ್ರಗಳಲ್ಲೇ ಸುತ್ತುತ್ತಿತ್ತು. ಆ ಆಟವನ್ನು ಆಯೋಜಿಲ್ಸಿದ ಗುರುಗಳನ್ನು ಬಾಳಪ್ಪನವರ ಮೈಕಟ್ಟು ಬಹಳ ಆಕರ್ಷಣೀಯವಾಗಿತ್ತು. ಸುಮಧುರ ಕಂಠದ ಸೇರುವಿಕೆಯಿಂದ ಅವರ ಪಾತ್ರಗಳಲ್ಲಿ ಪ್ರಭುದ್ಧತೆ ಕಾಣತೊಡಗಿತು. ತಮ್ಮ ೧೦ ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ರಂಗಮಂಚದ ಸವಿಕಂಡರು. ಅವರ ಮೈಮಾಟ ಸ್ತ್ರೀಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು. ಚಿಕ್ಕೋಡಿ ಸಿದ್ಧಲಿಂಗಸ್ವಾಮಿಗಳ ಕಂಪೆನಿಯ ’ಮಹಾನಂಜನಾಟಕದಲ್ಲಿ ಬಾಲನಟನಾಗಿ ಪ್ರಹ್ಲಾದನಾಗಿ, ಬಹಳ ಅದ್ಬುತ ಅಭಿನಯವನ್ನು ಕೊಟ್ಟರು. ಕೌಸಲ್ಯೆಯ ಪಾತ್ರದಲ್ಲಿ ಅವರು ಬಹಳ ಯಶಸ್ಸನ್ನು ಕಂಡರು. ಕಂಪೆನಿ ಮುಚ್ಚಿದಮೇಲೆ 'ಅಬ್ಬಿಗೇರಿ ಕಂಪೆನಿ'ಗೆ ಸೇರಿ ಅಲ್ಲಿ ಬಾಲನಟನಾಗಿ ಕೆಲಸಮಾದಿದರು. ಅಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದ 'ಕಿತ್ತೂರು ರಾಣಿ ಚೆನ್ನಮ್ಮ ನಾಟಕ' ಬ್ರಿಟಿಷ್ ಸರಕಾರದ ವಿರೋಧದಿಂದ ಲೈಸೆನ್ಸ್ ಕಳೆದುಕೊಂಡು ಕಂಪೆನಿ ನಿಂತಿತು. ಊರಿಗೆ ಹೋಗಿ ನೆಲೆಸಲು ಮನಸ್ಸುಬರಲಿಲ್ಲ. ಸಿದ್ಧಲಿಂಗಸ್ವಾಮಿಗಳೇ ನಡೆಸುತ್ತಿದ್ದ ಮತ್ತೊಂದು 'ಮಾರಿಕಾಂಬಾ ನಾಟಕ ಮಂಡಲಿ'ಗೆ ಅವರು ಸೇರಿದರು. ಚಿಕ್ಕವರಿದ್ದಾಗ ಊರಿನ ಭಜನಾ ಮಂಡಳಿಯಲ್ಲಿ ಸೇರಿಕೊಂಡು ಹಾಡುತ್ತಿದ್ದರು. ಗುರುಸಿದ್ದಯ್ಯ ಎಂಬುವವರು ಮೊತ್ತಮೊದಲಿಗೆ ಇವರನ್ನು ಸ್ಟೇಜ್ ಹತ್ತಿಸಿದರು. ಊರಲ್ಲೆ ನಡೆದ 'ಲವ-ಕುಶ' ಎಂಬ ನಾಟಕದಲ್ಲಿ ಲವನ ಪಾತ್ರ ಮಾಡುವ ಮೂಲಕ ರಂಗ ಪ್ರವೇಶವಾಯ್ತು. ಊರಿನ ಕಲಾವಿದರನ್ನೇ ಸೇರಿಸಿಕೊಂಡು ಆಡಿದ 'ಪಾದುಕಾಪಟ್ಟಾಭಿಷೇಕ' ನಾಟಕ ತುಂಬ ಯಶಸ್ವಿ ಆಯಿತು. ನಾಟಕ ಮಾಸ್ತರರಾಗಿದ್ದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಬಾಳಪ್ಪನವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಉದ್ಧರಿಸಿದರು. ಸ್ತ್ರೀ ಪಾತ್ರದ ಮೂಲಕವೇ ಪ್ರಸಿದ್ಧರಾದ ಇವರ ಮೊಟ್ಟಮೊದಲ ಸ್ರೀಪಾತ್ರ 'ಕಿತ್ತೂರು ರುದ್ರಮ್ಮ' ನಾಟಕದಲ್ಲಿ ರುದ್ರಮ್ಮನ ಪಾತ್ರ.

ಮರಣ: ಏಣಗಿ ಬಾಳಪ್ಪನವರು ಬೆಳಗಾವಿ ಜಿಲ್ಲೆಯ ಸವದತ್ತಿಯ ಏಣಗಿಯ ತಮ್ಮ ಸ್ವಗ್ರಹದಲ್ಲಿ ೧೮ ಆಗಸ್ಟ್ ೨೦೧೭ರಂದು ಮರಣ ಹೊಂದಿದರು.

ಸ್ತ್ರೀಪಾತ್ರದಲ್ಲಿ ರಂಜಿಸಿದರು[ಬದಲಾಯಿಸಿ]

ಉತ್ತರ ಕನ್ನಡದ ಸಿರಸಿಯಲ್ಲಿ ’ವೀರರಾಣಿ ರುದ್ರಮ್ಮ’ ಪ್ರದರ್ಶನವಾಯಿತು. ಅದರ ನಾಯಕಿಯ ಪಾತ್ರ ಅಪಾರಮನ್ನಣೆಗೆ ಪಾತ್ರವಾಯಿತು. ಒಂದು ದಿನ ನಾಯಕಿಯ ಪಾತ್ರಧಾರಿಣಿ ಮುನಿಸಿಕೊಂಡು ನಾಟಕದಲ್ಲಿ ಭಾಗವಹಿಸಲು ನಿರಾಕರಿಸಿದಳು. ಸ್ವಾಮಿಗಳು ಹರಸಾಹಸಮಾಡಿ ಒಪ್ಪಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಬಾಳಪ್ಪನವರಿಗೆ ರಾಣಿಯ ವೇಶ ಹಾಕಿ ರಂಗಮಂಚದಮೇಲೆ ಕಳಿಸಲಾಯಿತು. ಮಹಿಳಾ ವೇಶದಲ್ಲಿ ಖಡ್ಗಹಿಡಿದು ರಂಗವನ್ನು ಪ್ರವೇಶಿಸಿದ ಬಾಳಪ್ಪನವರ ಅಭಿನಯ ಅತ್ಯಂತ ಸಮರ್ಪಕವಾಗಿತ್ತು. ಸಭಿಕರೆಲ್ಲಾ ಅವರ ಅಭಿನಯದಿಂದ ಹರ್ಷಿತರಾದರು. ಈನಾಟಕ ಸಂಸ್ಥೆಯೂ ಸ್ವಲ್ಪದಿನಗಳ ಬಳಿಕ ಬಂದಾದರೂ ರಾಣಿಯ ಪಾತ್ರದಿಂದ ಬಾಳಪ್ಪನವರು ಅತಿ ಜನಪ್ರಿಯರಾದರು. ಪದೇ ಪದೇ ಬಂದಾಗುತ್ತಿದ್ದ ವೃತ್ತಿ ರಂಗಮಂದಿರಗಳ ವಹಿವಾಟು ಬಾಳಪ್ಪನವರಿಗೆ ಸರಿಬೀಳಲಿಲ್ಲ. 'ಹುಚ್ಚಪ್ಪ ಸೂಡಿ'ಯವರ ಜೊತೆಗೂಡಿ ಅವರೊಂದು ಹೊಸ 'ನಾಟಕ ಮಂಡಾಳಿಯನ್ನು ರಚಿಸಿದರು. ಅದೇ 'ಗುರುಸೇವಾ ಸಂಗೀತ ನಾಟಕ ಮಂಡಳಿ'. ’ಹೇಮರೆಡ್ಡಿ ಮಲ್ಲಮ್ಮ ಎಂಬ ನಾಟಕ ಕರ್ನಾಟಕದ ಮನೆಮಾತಾಯಿತು. 'ಗುರುಸೇವಾ ಸಂಸ್ಥೆ'ಯ ವತಿಯಿಂದ ಪುರಾಣ, ಐತಿಹಾಸಿಕ ಕಥೆಗಳ ಆಧಾರದಮೇಲೆ, ಸಂಸ್ಥ್ಯೆ ಹಲವಾರು ನಾಟಕಗಳು ಪ್ರದರ್ಶಿತಗೊಂಡವು.

ವೃತ್ತಿಜೀವನದ ಹಲವು ಮಜಲುಗಳು[ಬದಲಾಯಿಸಿ]

ಚಿಕ್ಕಂದಿನಲ್ಲೇ ತಂದೆಯವರ ವಿಯೋಗ. ರಂಗಭೂಮಿಯ ತಮ್ಮ ಉತ್ತರಾಧಿಕಾರಿಯೆಂದೇ ಗುರುತಿಸಿಕೊಂಡ ಅನುಭವಿ ರಂಗಕರ್ಮಿ, ನಟ, ನಿರ್ದೇಶಕ ಪುತ್ರ, 'ಏಣಗಿ ನಟರಾಜ್' ರನ್ನು ಕಳೆದುಕೊಂಡರು. ನಾಲ್ಕಾರು ಕಂಪೆನಿಗಳಲ್ಲಿ ಕೆಲಸಮಾಡಿದರೂ ಸ್ಥಿರತೆ ಅವರಿಗೆ ದೊರೆಯದೆ ಮನಸ್ಸಿಗೆ ಬೇಸರವಾಗಿತ್ತು. ಪುರುಷ ಪಾತ್ರಗಳಲ್ಲೂ ಅತ್ಯುತ್ತಮ ಅಭಿನಯ ನೀಡಿ ಎಲ್ಲರ ಗಮನ ಸೆಳೆದರು.ಆಳುವ ವರ್ಗದಿಂದ ವಿರೋಧ ಎದುರಿಸಿ ಗುರುವರ್ಗದಿಂದ ಬಹಿಷ್ಕಾರವನ್ನೂ ಅನುಭವಿಸಿದ್ದರು. ಸನ್.೧೯೪೬ ರಲ್ಲಿ ತಮ್ಮದೇ ಆದ ಕಲಾವೈಭವವೆಂಬ ನಾಟಕ ಸಂಸ್ಥೆ ರಚಿಸಿದದರು. ಅಲ್ಲಿ ಅವರು ತಮ್ಮದೇ ಆದ ರೀತಿಯಲ್ಲಿ ಹೊಸ ಹೊಸ ಕಲಾ ಪ್ರಕಾರವನ್ನು ಹುಟ್ಟುಹಾಕಿ ಪ್ರಯೋಗ ನಡೆಸಿ ಜಯಶೀಲರಾದರು. ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಮಧ್ಯೆ ಇದ್ದ ಗೆರೆಯನ್ನು ತೊಳೆಯಲು ದುಡಿದರು. ಪೌರಾಣಿಕ, ಐತಿಹಾಸಿಕ ನಾಟಕಗಳ ಜೊತೆ ಜೊತೆಗೆ ಸಾಮಾಜಿಕ ನಾಟಕಗಳ ಪ್ರಯೋಗವನ್ನು ಯಶಸ್ವಿಯಾಗಿ ನಿಭಾಯಿಸಿದರು. 'ಪಾದುಕ ಪಟ್ಟಾಭಿಷೇಕ ನಾಟಕ'ದಲ್ಲಿ ಭರತನ ಪಾತ್ರವನ್ನು ಸೊಗಸಾಗಿ ಅಭಿನಯಿಸಿ, ಗರುಡ ಸದಾಶಿವರಾಯರ ಪ್ರೀತಿ ಭರವಸೆಗಳಿಗೆ ಪಾತ್ರರಾದರು. ಅವರ ಕೆಲವು ಪ್ರೀತಿಯ ನಾಟಕಗಳು :

  • ಪಠಾನಪಾಶ,
  • ಕುರುಕ್ಷೇತ್ರ,
  • ಮಾವ ಬಂದಾನಪೋ ಮಾವ
  • ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ್,
  • ಸಿಂಧೂರ ಲಕ್ಷ್ಮಣ,

ಮೊದಲಾದ ವಿಡಂಬನಾ ನಾಟಕಗಳಲ್ಲಿ ಅಭಿನಯಿಸಿದ್ದರು. 'ಜಗಜ್ಯೋತಿ ಬಸವೇಶ್ವರ' ನಾಟಕದ ಬಸವೇಶ್ವರನ ಪಾತ್ರದಲ್ಲಿ ಅವರು ಭಾವಪರವಶರಾಗಿ ಸುಶ್ರಾವ್ಯವಾಗಿ ಹಾಡಿ, ರಸಿಕರ ಮನಮುಟ್ಟುವಂತೆ ಮಾತಾಡಿ, ಸಮಾಜದ ಅಂಧಕಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಾಡುವ ಕಾಯಕವನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗಮಂಚದ ತೆರೆಯಮೇಲೆ ತರಲು ಅನುವುಮಾಡಿಕೊಟ್ಟ ಪಾತ್ರ. ಬಹಳವಾಗಿ ಮುದಕೊಟ್ಟ ಪಾತ್ರ. ಬೆಳ್ಳಿತೆರೆಯಮೇಲೆಯೂ ಕಾಣಿಸಿಕೊಂಡರು. ಈ ಅಭಿನಯ ಚತುರರಿಗೆ ಸಂದ ಗೌರವ ಸನ್ಮಾನಗಳು ಹಲವಾರು. ಈಗ ನೂರರ ಹೊಸಿಲಿನಲ್ಲಿರುವ ಈ ಪ್ರತಿಭಾನ್ವಿತ ಉತ್ಸಾಹಿ ನಟ, ಈಗಲೂ 'ಮೀಡಿಯ' ಜೊತೆಗೆ, ಸ್ಪಂದಿಸುವ ಸಾಮರ್ಥ್ಯ ಹೊಂದಿದ್ದಾರೆ.

ಉಲ್ಲೇಖ[ಬದಲಾಯಿಸಿ]