ಏಕೀಕರಣ, ಸಾಮಾಜಿಕ
ವಿವಿಧ ಸಾಮಾಜಿಕ ಪದ್ಧತಿಗಳ ಅಥವಾ ವಿಭಿನ್ನ ಸಾಮಾಜಿಕ ಅಂಗಗಳ ಏಕೀಕರಣದ ಪ್ರಶ್ನೆ ದೀರ್ಘಕಾಲದಿಂದ ಬೌದ್ಧಿಕ ಮತ್ತು ವೈಜ್ಞಾನಿಕ ಆಸಕ್ತಿ ಕೆರಳಿಸಿದೆ. ಕೈಗಾರಿಕಾ ಕ್ರಾಂತಿಯ ಫಲವಾಗಿ ಸಾಮಾಜಿಕ ಸಂಬಂಧಗಳಲ್ಲಿ ಸಂಭವಿಸಿರುವ ಏರುಪೇರುಗಳಿಂದ ಸಮಾಜದ ಪುನರೇಕೀಕರಣ ಸಾಧಿಸುವ ಅವಶ್ಯಕತೆ ತೀವ್ರವೂ ಜರೂರೂ ಆಗಿ ಪರಿಣಮಿಸಿದೆ. ಸಣ್ಣ ಗುಂಪುಗಳಿಂದ ಆರಂಭಿಸಿ ವಿಶಾಲ ಸಮಾಜದಂಥ ವಿವಿಧ ಹಂತಗಳಲ್ಲಿ ಈ ಏಕೀಕರಣ ನಡೆಯಬೇಕಾಗಿರುವುದರಿಂದ ಹಲವಾರು ಸಮಸ್ಯೆಗಳು ಉದ್ಭವಿಸುವುದು ಸಹಜವೇ. ಆಯಾ ಹಂತಗಳಿಗೆ ಅನುಸಾರವಾಗಿ ಏಕೀಕರಣ ನಡೆಯಬೇಕು. ವಿವಿಧ ಪಂಗಡಗಳ ಏಕೀಕರಣದಲ್ಲಿ ಉದ್ಭವಿಸುವ ಸಮಸ್ಯೆಗಳಿಗಿಂತ ಅಂಥ ಪಂಗಡಗಳನ್ನೊಳಗೊಂಡ ವಿಶಾಲಜನಾಂಗಗಳ ಏಕೀಕರಣದ ಸಮಸ್ಯೆಗಳು ಕ್ಲಿಷ್ಟತರ. ಮೊದಲಿಗೆ ವಿದ್ವಾಂಸರು ಸಾಂಸ್ಕøತಿಕ ಸಾಮಾಜಿಕ ಏಕೀಕರಣಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಿದ್ದರೂ ಕಳೆದ ಎರಡು ದಶಕಗಳಿಂದೀಚೆಗೆ ಪ್ರತ್ಯೇಕತೆ ಬೆಳೆದುಬಂದಿದೆ. ಸಾಮಾಜಿಕ ಮೌಲ್ಯ ಮತ್ತು ನಂಬಿಕೆಗಳು ಭಿನ್ನಸಮಾಜಗಳಲ್ಲಿ ಸಮಾನವಾಗಿದ್ದು, ಈ ಜನ ಫಲಪ್ರದವಾಗಿ ಸಹಕರಿಸುವದು ಯಾಂತ್ರಿಕ ಒಗ್ಗಟ್ಟೆಂದೂ ಏಕತೆ ಮತ್ತು ಪರಸ್ಪರ ಅವಲಂಬನೆಯಿಂದ ಸಂಭವಿಸುವುದು ಆಂಗಿಕ ಒಗ್ಗಟ್ಟೆಂದೂ ಕೆಲವು ವಿದ್ವಾಂಸರು ವಾದಿಸಿದರು.[೧]
ಯಾಂತ್ರಿಕ ಒಗ್ಗಟ್ಟಿ
[ಬದಲಾಯಿಸಿ]ಭಾರತ ಒಗ್ಗಟ್ಟಿನಲ್ಲಿ ಸಮಾಜ ವಿಧಿಸಿದ ನಿಯಮಗಳಿಗನುಸಾರವಾಗಿ ಎಲ್ಲರೂ ನಡೆಯಬೇಕಾದರೆ, ಆಂಗಿಕ ಒಗ್ಗಟ್ಟಿನಲ್ಲಿ ಪರಸ್ಪರ ವೈವಿಧ್ಯ ಭಿನ್ನತೆಗಳನ್ನು ಸಮತೋಲ ಮಾಡಿಕೊಳ್ಳುವುದು ಮುಖ್ಯ ಲಕ್ಷಣ. ಸುಪ್ರಸಿದ್ಧ ಸಮಾಜಶಾಸ್ತ್ರಜ್ಞ ಸೊರೊಕಿನ್ ಈ ವಾದವನ್ನು ಒಪ್ಪುವುದಿಲ್ಲ. ಆತನ ಅಭಿಪ್ರಾಯದಂತೆ ಚಲನಾತ್ಮಕ ಸಮಾಜದಲ್ಲಿ ಸಾಂಸ್ಕøತಿಕ ಅಂಶಗಳು ಪರಸ್ಪರಾವಲಂಬಿಗಳಾಗಿರುತ್ತವೆಯಾದ್ದರಿಂದ ಸಾಂಸ್ಕøತಿಕ ಮತ್ತು ವೃತ್ತಿಸಹಜ ಏಕೀಕರಣ ವಿಧಾನಗಳೆರಡೂ ಒಂದೇ ಆಗಿರುತ್ತವೆ. ತಾರ್ಕಿಕ ಅರ್ಥಪೂರ್ಣ ಏಕೀಕರಣ ಉತ್ತಮ ದರ್ಜೆಯದಾಗಿದ್ದು ಮೊದಲನೆಯ ರೀತಿಯ ಏಕೀಕರಣ ಕೀಳ್ತರದ್ದೆಂದು ತಿರಸ್ಕøತ. ಆದರೆ ತಾರ್ಕಿಕ-ಅರ್ಥಪೂರ್ಣ ಏಕೀಕರಣ ಸಾಂಸ್ಕøತಿಕವಾದ್ದರಿಂದ ಅದು ಇಲ್ಲಿ ಅಪ್ರಕೃತ. ಅನಂತರ ಕಾಲದ ಸಮಾಜಶಾಸ್ತ್ರಜ್ಞರು ಪ್ರಮಾಣಸಂಬಂಧ ಮತ್ತು ವೃತ್ತಿಸಂಬಂಧವೆಂಬ ಎರಡು ರೀತಿಯ ಏಕೀಕರಣಗಳನ್ನು ಸಾಂಸ್ಕøತಿಕ ಏಕೀಕರಣದಿಂದ ಬೇರ್ಪಡಿಸಿದರು. ಇತ್ತೀಚೆಗೆ ಸಂಪರ್ಕಮೂಲ ಏಕೀಕರಣವೆಂಬ ಹೊಸ ವಿಧಾನವೊಂದು ಮಾನ್ಯವಾಗುತ್ತಿದೆ.ಸಮಾಜದ ಸಾಮಾನ್ಯ ಮೌಲ್ಯಗಳು ಒಟ್ಟುಗೂಡಿ ಸಂಸ್ಥೀಕರಿಸಲ್ಪಟ್ಟು ಸಮಾಜ ವ್ಯವಸ್ಥೆ ಏರ್ಪಡುವುದಕ್ಕೆ ಪ್ರಮಾಣಸಂಬಂಧ ಏಕೀಕರಣವೆಂದು ಹೇಳಲಾಗಿದೆ. ವ್ಯಕ್ತಿಗಳ ನಡುವೆ, ಸಂಸ್ಥೆಗಳ ನಡುವೆ ಅಥವಾ ಸಂಸ್ಥಾಂತರ್ಗತ ಪ್ರತ್ಯೇಕ ಅಂಗಗಳ ನಡುವೆ ಈ ರೀತಿಯ ಏಕೀಕರಣ ಸಾಧ್ಯ. ಅನೇಕ ಸಂದರ್ಭಗಳಲ್ಲಿ ಈ ಬಗೆಯ ಏಕೀಕರಣ ಸಾಮಾಜಿಕ ಸಂಬದ್ಧತೆಯನ್ನು ಅವಲಂಬಿಸಿರುತ್ತದೆ. ಬಾಹ್ಯಾತಂಕಗಳು ಹೆಚ್ಚಾದಾಗ ಸಮಾಜದಲ್ಲಿ ಆಂತರಿಕ ಸಂಬದ್ಧತೆಯೇರ್ಪಡುತ್ತದೆಂದು ಜನಸಾಮಾನ್ಯರ ನಂಬಿಕೆ. ಆದರೆ ಈ ಏಕತೆಯ ಅಡಿಪಾಯವಾಗಿ ಕೆಲವು ಮೂಲಭೂತ ಸಾಮ್ಯಗಳಿದ್ದರೆ ಮಾತ್ರ ಇಂಥ ಐಕ್ಯ ಸಾಧ್ಯ. ಪ್ರಮಾಣ ಸಂಬಂಧ ಏಕೀಕರಣದ ವಿವಿಧ ಮಟ್ಟಗಳ ಪ್ರಭಾವ ಇತರ ಸಾಮಾಜಿಕ ಘಟನೆಗಳ ಮೇಲೆ ಯಾವ ರೀತಿಯದೆಂಬುದು ಮುಖ್ಯವಾದ ಅಂಶ. ಅದರ ಪ್ರಭಾವದಿಂದ ಸಾಮಾಜಿಕ ವ್ಯವಸ್ಥೆ ಸ್ಥಿರಗೊಳ್ಳುವುದೆಂದು ಕೆಲವರ ನಂಬಿಕೆ. ಮತ್ತೆ ಕೆಲವರು ಹಲವಾರು ಸಂದರ್ಭಗಳಲ್ಲಿ ನಿಯಮಿತ ವೃತ್ತಿಮಾರ್ಗ ಬಿಡುವುದರಿಂದಲೇ ಪ್ರಗತಿ ಸಾಧ್ಯವೆಂದು ವಾದಿಸುತ್ತಾರೆ.[೨]
ವೃತ್ತಿಸಂಬಂಧ ಏಕೀಕರಣ
[ಬದಲಾಯಿಸಿ]ವೃತ್ತಿಸಂಬಂಧ ಏಕೀಕರಣವಾದದ ಪ್ರಕಾರ ವೃತ್ತಿಪ್ರಾವೀಣ್ಯವೇ ಸಮಾಜದ ಪ್ರಗತಿಗೆ ಸಾಧನ. ವಿವಿಧ ಅಂಗಗಳು ಒಂದೇ ಸಮಾಜದ ಪ್ರಗತಿಗಾಗಿ ಶ್ರಮಿಸುವುದರಿಂದ ಪರಸ್ಪರ ಪೂರಕಗಳಾಗುತ್ತವೆ. ಕೆಲವು ಬಾರಿ ವಿವಿಧ ಅಂಗಗಳಲ್ಲಿ ಪೂರ್ಣ ಸಮನ್ವಯ ಇಲ್ಲದಿರುವುದರಿಂದ ಏಕೀಕರಣ ಅಪೂರ್ಣವಾಗಿರಲು ಸಾಧ್ಯ.ಚಲನಾತ್ಮಕ ಸಮತೋಲವೇ ಸಾಮಾಜಿಕ ಏಕೀಕರಣದ ಮುಖ್ಯಲಕ್ಷಣವೆಂದು ಕೆಲವರ ವಾದ. ಆದರೆ ಸಮಾಜದ ಭಿನ್ನ ಅಂಗಗಳಲ್ಲಿ ಸಾಕಷ್ಟು ಸಂಬದ್ಧತೆಯಿಲ್ಲವಾದಾಗ ಏಕೀಕರಣದ ಬದಲು ಸಮಾಜದಲ್ಲಿ ಅಸಮತೆ ಹೆಚ್ಚಾಗಿ ವಿಚ್ಛಿದ್ರಗೊಳ್ಳಬಹುದೆಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ.
ಸಂಪರ್ಕಮೂಲ ಏಕೀಕರಣ
[ಬದಲಾಯಿಸಿ]ಸಂಪರ್ಕಮೂಲ ಏಕೀಕರಣವಾದದ ಪ್ರಕಾರ ಆಧುನಿಕ ಸಮಾಜಗಳಲ್ಲಿ ರೇಡಿಯೋ, ಟೆಲಿವಿಷನ್, ಚಲನಚಿತ್ರ ಮುಂತಾದ ಸಂಪರ್ಕಮಾಧ್ಯಮಗಳ ಮೂಲಕ ಸಮಾಜದ ಏಕೀಕರಣದ ಸಾಧನೆಯಾಗುತ್ತದೆ. ಈ ಮಾಧ್ಯಮಗಳ ಮೂಲಕ ಸಮಾಜದ ಕೇಂದ್ರಸ್ಥ ಮತ್ತು ಎಲ್ಲೆಗಳಲ್ಲಿರುವ ಅಂಶಗಳಲ್ಲಿ ಪರಿಣಾಮಕಾರಿ ಸಂಪರ್ಕವೇರ್ಪಟ್ಟು ಒಂದುಗೂಡಲು ಸಾಧ್ಯವಾಗುತ್ತದೆ.ಸಾಮಾಜಿಕ ಏಕೀಕರಣ ಅನೇಕರ ಮಹದಾಶಯವಾಗಿದೆ. ಆದರೆ ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯದಿರುವುದರಿಂದಲೂ ಸಂಶೋಧಕರು ತಮ್ಮ ಮೂಲ ತತ್ತ್ವಗಳನ್ನು ಶ್ರುತಪಡಿಸದಿರುವುದರಿಂದಲೂ ಇದು ಇನ್ನೂ ಸಂಪೂರ್ಣ ಫಲಕಾರಿಯಾಗಿಲ್ಲ.
ಉಲ್ಲೇಖಗಳು
[ಬದಲಾಯಿಸಿ]