ಎರಟಾಸ್ಥೆನೀಸ್
Eratosthenes | |
---|---|
ಜನನ | 276 BC |
ಮರಣ | 194 BC |
ವೃತ್ತಿs |
|
ಗಮನಾರ್ಹ ಕೆಲಸಗಳು | Sieve of Eratosthenes |
ಎರಟಾಸ್ಥೆನೀಸ್ ಕ್ರಿ. ಪೂ. ಸು. 276-196. ಗ್ರೀಕ್ ಖಗೋಳಶಾಸ್ತ್ರಜ್ಞ[೧]. ಇವನ ಆಸಕ್ತಿಯ ಕ್ಷೇತ್ರದ ವ್ಯಾಪ್ತಿ ಅರಿಸ್ಟಾಟಲ್‍ನದರಷ್ಟೇ ಇತ್ತು. ಚರಿತ್ರೆ, ಕ್ರೀಡೆ, ಭೂಗೋಳ, ನಾಟಕ, ಗಣಿತ-ಒಂದೊಂದರಲ್ಲೂ ಇವನ ಕುತೂಹಲ ಹರಿದಿರುವುದನ್ನು ಕಾಣುತ್ತೇವೆ. ಇವನಿಗೆ ಬೀಟ (β-ಗ್ರೀಕ್ ಅಕ್ಷರ ಮಾಲೆಯಲ್ಲಿ ಎರಡನೆಯ ಅಕ್ಷರ) ಎನ್ನುವ ಅಡ್ಡ ಹೆಸರು ಇತ್ತು. β ಎಂದರೆ ಎರಡನೆಯವನು ಎಂದರ್ಥ. ಆಲ್ಫ (α), ಎಂದರೆ ಮೊದಲನೆಯವನು ಎರಟಾಸ್ಥೆನೀಸóನ ಸಮಕಾಲೀನ ಮತ್ತು ಮಿತ್ರ ಆರ್ಕಿಮಿಡೀಸ್ ಕ್ರಿ. ಪೂ. ಸು. 287-212). ಅಲೆಗ್ಸಾಂಡ್ರಿಯದ ಪುಸ್ತಕಭಂಡಾರದ ಮುಖ್ಯಸ್ಥನಾಗಿರಲು ಎರಟಾಸ್ಥೆನೀಸನನ್ನು ಮೂರನೆಯ ಟಾಲೆಮಿ ಕೇಳಿಕೊಂಡಾಗ ಇವನು ಅದನ್ನು ಒಪ್ಪಿದ. ಇವನ ಹಿರಿಮೆಗೆ ಈ ಮರ್ಯಾದೆ ಒಂದು ಸಾಕ್ಷಿ. ಈತನ ಕೊಡುಗೆಗಳ ಸ್ಥೂಲವಿವರವಿಷ್ಟು; ಟ್ರೋಜನ್ ಯುದ್ಧದ ವರ್ಷವನ್ನು ಗ್ರೀಕ್ ಜಾನಪದಗಳಿಂದ, ಐತಿಹ್ಯಗಳಿಂದ ಮತ್ತು ದೊರೆತ ದಾಖಲೆಗಳ ಆಧಾರದಿಂದ ಇವನು ನಿರ್ಣಯಿಸಿದ (ಕ್ರಿ. ಪೂ. ಸು. 1140); ಅಲ್ಲಿಂದ ಈಚೆಗೆ ಸಂಭವಿಸಿದ ಎಲ್ಲ ಐತಿಹಾಸಿಕ ಘಟನೆಗಳ ನಿಷ್ಕøಷ್ಟ ಕಾಲಸೂಚಿಯ ತಯಾರಿಕೆಯನ್ನು ಮೊದಲು ಮಾಡಿದವ ಇವನೇ: ಸಾಹಿತ್ಯ ವಿಮರ್ಶೆಯಲ್ಲಿ ಸಾಕಷ್ಟು ಕೈಯಾಡಿಸಿದ; ಹರ್ಷಾಂತ ನಾಟಕಗಳನ್ನು ಕುರಿತು ಶಾಸ್ತ್ರಗ್ರಂಥ ರಚಿಸಿದ; ಗಣಿತಶಾಸ್ತ್ರದಲ್ಲಿ ಮೂಲ ಸಂಖ್ಯೆಗಳನ್ನು (ಪ್ರೈಮ್ ನಂಬರ್ಸ್) ನಿರ್ಣಯಿಸಲು ಒಂದು ಕ್ರಮ ನಿರೂಪಿಸಿದುದರಿಂದ "ಎರಟಾಸ್ಥೆನೀಸನ ಒಂದರಿ" ಎಂದೇ ಅದು ಇಂದಿಗೂ ಪ್ರಸಿದ್ಧವಾಗಿದೆ; ಅಂದು ತಿಳಿದಿದ್ದ ಪ್ರಪಂಚ ಬ್ರಿಟಿಷ್ ದ್ವೀಪಗಳಿಂದ ಸಿಂಹಳದವರೆಗೂ ಕ್ಯಾಸ್ಟಿಯನ್ ಸಮುದ್ರದಿಂದ ಇಥಿಯೋಪಿಯದವರೆಗೂ ವ್ಯಾಪಿಸಿತ್ತು. ಈತ ಇದನ್ನು ಚಿತ್ರಿಸುವ ಒಂದು ಭೂಪಟ ತಯಾರಿಸಿದ; ಭೂಮಿಯನ್ನು ಸೂರ್ಯ ಪರಿಭ್ರಮಿಸುವ ತೋರ್ಕೆಯ ಸಮತಲ ಮತ್ತು ಭೂಮ್ಯಕ್ಷ-ಇವುಗಳ ನಡುವೆ ಇರುವ ಕೋನವನ್ನು (ಕ್ರಾಂತಿವೃತ್ತದ ಬಾಗು) ನಿಷ್ಕøಷ್ಟವಾಗಿ ನಿರ್ಣಯಿಸಿದ[೨].
ಭೂಮಿಯ ಗಾತ್ರ ನಿರ್ಣಯದಲ್ಲಿ ಇವನ ಸಂಶೋಧನೆ ಅತ್ಯಾಧುನಿಕವೂ ಸರಳವೂ ಆಗಿದೆ. ಈ ಬೌದ್ಧಿಕ ವಿಜಯದ ಹಿರಿಮೆ ಇಂದಿನ ಕಾಲದವರೆಗೆ ಜನರಿಗೆ ತಿಳಿದಿರಲಿಲ್ಲ. ಕರ್ಕಾಟಕ ಸಂಕ್ರಾಂತಿ ದಿವಸದಂದು ಸೂರ್ಯ ದಕ್ಷಿಣ ಈಜಿಪ್ಟಿನ ಸಯೀನ್ಸಿನ (ಆಧುನಿಕ ಆಸ್ವಾನ್) ನೆತ್ತಿಯ ಮೇಲೆ ಬರುವುದೆಂದೂ ಅದೇ ಗಳಿಗೆಯಲ್ಲಿ ಅಲೆಗ್ಸಾಂಡ್ರಿಯಾದಲ್ಲಿ ಸೂರ್ಯನ ಖ ಮಧ್ಯದೂರ (eóÉನಿತ್ ಡಿಸ್ಟೆನ್ಸ್) 7ಲಿ ಎಂದೂ ಗೊತ್ತಿತ್ತು. ಈ ವ್ಯತ್ಯಾಸ ಭೂಮಿಯ ಹೊರಮೈ ವಕ್ರತೆಯಿಂದ ಮಾತ್ರ ಸಾಧ್ಯ; ಆದ್ದರಿಂದ ಇವೆರಡು ಸ್ಥಳಗಳ ನಡುವಿನ ದೂರ ತಿಳಿದಿದ್ದರೆ ಮತ್ತು ಭೂಮಿ ಒಂದು ದೊಡ್ಡ ಗೋಲ ಎಂದು ಭಾವಿಸಿದರೆ, ಭೂಮಿಯ ತ್ರಿಜ್ಯವನ್ನು ಗಣಿಸಬಹುದು. ಈ ಸೂತ್ರದ ಪ್ರಕಾರ ಎರಟಾಸ್ಥೆನೀಸ್ (ಅಂದಿನ ಗ್ರೀಕ್ ಮಾನದಲ್ಲಿ) ಭೂಮಿಯ ಪರಿಧಿ 25,000 ಮೈಲಿಗಳಿಗಿಂತ ಸ್ವಲ್ಪ ಹೆಚ್ಚು ಇದೆ ಎಂದು ತೀರ್ಮಾನಿಸಿದ. ಇಂದಿನ ನಿಷ್ಕøಷ್ಟ ಬೆಲೆಯೊಂದಿಗೆ ಇದನ್ನು ಹೋಲಿಸುವಾಗ ಆತನ ತರ್ಕಶುದ್ಧತೆ ನಮ್ಮನ್ನು ದಂಗುಬಡಿಸುವಂತಿದೆ. ಆದರೆ ಎಲ್ಲ ಮಹಾ ಭಾವನೆಗಳಂತೆ ಇದೂ ಸಮಕಾಲೀನ ಮೌಲ್ಯಗಳ ಬುಡ ಕಲಕಿತು. ಅಧಿಕಾರವರ್ಗ ತಿಳಿದಿದ್ದ ನೆಲ ಎಷ್ಟು ಕಿರಿಯದು ಎಂದು ಈ ಗಣನೆ ತೋರಿಸಿತು. ಇದನ್ನು ಅಧಿಕಾರಿಗಳು ಒಪ್ಪಲಿಲ್ಲ; ಭೂಮಿ ಅಷ್ಟು ವಿಶಾಲವಾಗಿರುವುದು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಪೊಸೈಡೋನಿಯಸ್ ಕೊಟ್ಟಿದ್ದ ಬೆಲೆ (ಸು.18,000 ಮೈಲುಗಳು) ಸರಿಯಾದದ್ದು ಎಂದು ಒಪ್ಪಿಕೊಂಡರು[೩].
ಆಕಾಶದ ದೀರ್ಘ ವೀಕ್ಷಣೆಯಿಂದ 675 ಸ್ಥಿರನಕ್ಷತ್ರಗಳ ಒಂದು ಯಾದಿ ತಯಾರಿಸಿದ್ದನೆಂದು ತಿಳಿದಿದೆ.
ತನ್ನ 80ನೆಯ ಪ್ರಾಯದಲ್ಲಿ ನಿರ್ಬಲಿ ಮತ್ತು ದೃಷ್ಟಿಹೀನ ಎರಟಾಸ್ಥೆನೀಸ್ ಸ್ವಪ್ರೇರಣೆಯಿಂದ ನಿರಶನ ಶಿಕ್ಷೆ ವಿಧಿಸಿಕೊಂಡು ಅಸುನೀಗಿದ.