ಎಮ್ ಎನ್ ಜೋಶಿ'
'''ಎಮ್. ಎನ್. ಜೋಶಿ''' ಯೆಂದು ಗೆಳೆಯರ ಮಧ್ಯೆ ಸುಪ್ರಸಿದ್ಧರಾಗಿರುವ, ಡಾ. ಮಹಾದೇವ ನಾರಾಯಣ ಜೋಶಿ ಒಬ್ಬ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು.
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]೧೯೫೬ರಲ್ಲಿ ಜಮಖಂಡಿಯಲ್ಲಿ ಜನಿಸಿದ ಶ್ರೀಯುತರು ತಮ್ಮ ಪದವಿಯವರೆಗಿನ ವಿದ್ಯಾಭ್ಯಾಸವನ್ನು ಜಮಖಂಡಿಯಲ್ಲೇ ಪೂರೈಸಿ ಸಂಸ್ಕೃತ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿ ವಿಶ್ವವಿದ್ಯಾಲಯಕ್ಕೇ ದ್ವಿತೀಯ ಸ್ಥಾನದೊಂದಿಗೆ ಎಮ್. ಎ. ಪದವಿ ಪೂರೈಸಿದರು. ವಿಶ್ವವಿದ್ಯಾಲಯ ಅನುದಾನ ಆಯೋಗದ ಜ್ಯೂನಿಯರ್ ರಿಸರ್ಚ್ ಫೆಲೋ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿ ಡಾ. ಬಿ ಆರ್ ಮೋಡಕ್ ರ ಮಾರ್ಗದರ್ಶನದಲ್ಲಿ "ದ ಸೆಕ್ಯುಲರ್ ಆರ್ಟ್ಸ ಎಂಡ್ ಸೈನ್ಸ್ ಇನ್ ಸೋಮೇಶ್ವರಾಸ್ ಮಾನಸೋಲ್ಲಾಸ" ಎಂಬ ಮಹಾಪ್ರಬಂಧವನ್ನು ರಚಿಸಿ ೧೯೮೫ ರಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು.
ಸಂಸ್ಕೃತ ಪ್ರಾಧ್ಯಾಪಕರಾಗಿ
[ಬದಲಾಯಿಸಿ]ಅದೇ ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಉಪನ್ಯಾಸಕರಾಗಿ ತಮ್ಮ ಸೇವಾಜೀವನವನ್ನು ಆರಂಭಿಸಿದ ಮ ನಾ ಜೋಶಿಯವರು ಇಂದು ವಿಭಾಗದ ಅತ್ಯಂತ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಎರಡೆರಡು ವರ್ಷಗಳಂತೆ ಮೂರು ಸಲ ವಿಭಾಗ ಮುಖ್ಯಸ್ಥರಾಗಿ ವಿಭಾಗದ ಘನತೆ ಗೌರವಗಳನ್ನು ಹೆಚ್ಚಿಸಿದ್ದಾರೆ. ೨೦೦೪-೨೦೧೦ರ ವರೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ ಡಿಎಸ್ಎ/ಎಸ್ಎಪಿ ದ್ವಿತೀಯ ಮತ್ತು ತೃತೀಯ ಹಂತಗಳ ಪ್ರೋಗ್ರಾಮ್ ಕೋಆರ್ಡಿನೇಟರ್ ಆಗಿ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶ್ರೇಯಸ್ಸು ಮಾನ್ಯ ಎಂ. ಎನ್. ಜೋಶಿಯವರದು. ಅನೇಕ ಅಂತಾರಾಷ್ಟ್ರೀಯ - ರಾಷ್ಟ್ರೀಯ ವಿಚಾರಸಂಕಿರಣ, ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾಪ್ರಬಂಧಗಳನ್ನು ಮಂಡಿಸಿ ವಿದ್ವತ್ಪ್ರಪಂಚಕ್ಕೆ ಚಿರಪಚಿತರೂ ಜನಪ್ರಿಯರೂ ಆಗಿದ್ದಾರಲ್ಲದೇ ಸ್ವತಃ ಅನೇಕ ರಾಷ್ಟ್ರೀಯ ವಿಚಾರ ಸಂಗೋಷ್ಠಿಗಳನ್ನು ತಮ್ಮ ವಿಭಾಗದಿಂದಲೂ ಆಯೋಜಿಸಿದ್ದಾರೆ. ಶ್ರೀ ಜೋಶಿಯವರದು ಬಹುಮುಖ ಪ್ರತಿಭೆ. ಉತ್ತಮ ಶಿಕ್ಷಕರಾದ ಇವರು ಒಳ್ಳೇಯ ವಾಗ್ಮಿಗಳು; ಚತುರ ಸಂಘಟಕರು; ಜನಪ್ರಿಯ ಲೇಖಕರು. ಸ್ವತಃ ಉತ್ತಮ ಸಂಶೋಧಕರಾದ ಇವರು ತಮ್ಮ ವಿದ್ಯಾರ್ಥಿಗಳಲ್ಲೂ ಸಂಶೋಧನಾ ಪ್ರವೃತ್ತಿಯನ್ನು ಜಾಗ್ರತಗೊಳಿಸಿ, ಒಟ್ಟು ೧೪ ಪಿ. ಎಚ್ ಡಿ ಮತ್ತು ೩ ಎಂ. ಫಿಲ್ ವಿದ್ಯಾರ್ಥಿಗಳನ್ನು ತಮ್ಮಂತೆಯೇ ಉತ್ತಮ ಸಂಸೋಧಕರಾಗಿ ಮಾರ್ಪಡಿಸಿದ್ದಾರೆ.
ಒಳ್ಳೆಯ ಸಂಶೋಧಕರು
[ಬದಲಾಯಿಸಿ]ಒಟ್ಟು ೩೬ ಪುಸ್ತಕಗಳನ್ನು ಸ್ವತಃ ರಚಿಸಿರುವ ಶ್ರೀಯುತರ ಪ್ರಧಾನಸಂಪಾದಕತ್ವದಲ್ಲಿ ೬ ರಾಷ್ಟ್ರೀಯ ವಿಚಾರಸಂಕಿರಣಗಳ ಸಂಶೋಧನಾಲೇಖನಸಂಪುಟಗಳು ಪ್ರಕಟವಾಗಿವೆ. ಇವರ ಈ ವಿವಿಧ ಕ್ಷೇತ್ರಗಳಲ್ಲಿನ ಸಮಾಜಮುಖೀ ಕಾರ್ಯಗಳಿಂದ ಅನೇಕ ದೇಶ-ವಿದೇಶಗಳ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ೨೦೦೦ ರಲ್ಲಿ ಕೆನಡಾದ ಸರಸ್ವತಿ ವಿಕಾಸ ಸಂಸ್ಥೆಯವರು ನೀಡಿದ "ರಾಮಕೃಷ್ಣ ಸಂಸ್ಕೃತ ಪುರಸ್ಕಾರ",
- ೨೦೦೧ರಲ್ಲಿ ಮಹಾರಾಷ್ಟ್ರದ ಶ್ರೀ ಕ್ಷೇತ್ರ ಔದುಂಬರದಲ್ಲಿ ನೀಡಿದ "ಸಾಹಿತ್ಯ ವಿಶಾರದ" ಪುರಸ್ಕಾರ,
- ಪೂರ್ವಪ್ರಧಾನಿ ಎಚ್.ಡಿ. ದೇವೇಗೌಡ ಜ್ಯಾತ್ಯಾತೀತ ಪ್ರತಿಷ್ಠಾನದಿಂದ ೨೦೦೪ರಲ್ಲಿ ಕೊಡಮಾಡಿದ "ಜಾತ್ಯಾತೀತ ಸಾಹಿತ್ಯರತ್ನ ಪ್ರಶಸ್ತಿ,
- ಹುಲಕೋಟಿಯ ವೇಮನ ವಿಚಾರವೇದಿಕೆಯವರು ೨೦೦೬ರಲ್ಲಿ ನೀಡಿದ "ವೇಮನ ಸಾಹಿತ್ಯ ಪುರಸ್ಕಾರ" ಮುಂತಾದವುಗಳು ಅವುಗಳಲ್ಲಿ ಕೆಲವು.
ಉಲ್ಲೇಖಗಳು
[ಬದಲಾಯಿಸಿ]