ಎಮಾನ್ಯುಯೆಲ್ ಗೈಬೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Emanuel Geibel

ಎಮಾನ್ಯುಯೆಲ್ ಗೈಬೆಲ್ (17 ಒಕ್ಟೋಬರ್ 1815–6 ಎಪ್ರಿಲ್ 1884)ಜರ್ಮನ್ ಕವಿ. ಲೂಬೆಕ್‍ನಲ್ಲಿ ಹುಟ್ಟಿದ. ಬಾನ್ ವಿಶ್ವವಿದ್ಯಾಲಯದಲ್ಲಿ ವೇದಾಂತವನ್ನು ಓದಿದ. ಅನಂತರ ಗ್ರೀಸ್ ದೇಶವನ್ನು ಸುತ್ತಿಬಂದು ಪರ್ಷಿಯದ ದೊರೆ ಫ್ರೀಡ್ರಿಕ್ ವಿಲಿಯಂನಿಂದ ಗೌರವವೇತನ ಪಡೆದ. ಲೂಯಿಸ್ ದೊರೆಯ ಕರೆಯ ಮೇರೆಗೆ ಮ್ಯೂನಿಕ್‍ನಲ್ಲಿ ಜರ್ಮನ್ ಸಾಹಿತ್ಯದ ಪ್ರಾಧ್ಯಾಪಕನಾದ (1852). ಮೊದಲಿಗೆ ಕ್ರಾಂತಿಕಾರಕ ಕವಿಗಳಲ್ಲಿ ಒಬ್ಬನೆನಿಸಿದ್ದ ಈತ ಅನಂತರ ಸಂಪ್ರದಾಯಬದ್ಧ ಕವಿಯಾದ. 1848-1870 ರವರೆಗೆ ಈತ ಜರ್ಮನ್ ಕವಿಗಳನ್ನು ಪ್ರತಿನಿಧಿಸಿದ. ಈತನ ಭಾವಗೀತೆಗಳು ಭಾವಾತಿರೇಕವುಳ್ಳವಾಗಿದ್ದರೂ ರಚನೆ ಮತ್ತು ಶೈಲಿಯ ದೃಷ್ಟಿಯಿಂದ ಶಕ್ತಿಯುತ ಕವನಗಳೆನಿಸಿವೆ. ಪೊಯೆಮ್ಸ್‌ (1840), ನ್ಯೂ ಪೊಯೆಮ್ಸ್‌ (1857)-ಇವು ಈತನ ಕವನ ಸಂಕಲನಗಳು. ಈ ಎರಡರಲ್ಲಿನ ಆಯ್ದ ಕವನಗಳ ಇಂಗ್ಲಿಷ್ ಭಾಷಾಂತರ 1864ರಲ್ಲಿ ಅಚ್ಚಾಗಿದೆ. ಬ್ರೂನ್ಹಿಲ್ಟ್‌ (1854-ಇಂಗ್ಲಿಷ್ ಭಾಷಾಂತರ 1879) ಮತ್ತು ಸಫೊನಿಸ್ಬ (1869)-ಇವು ಈತನ ನಾಟಕಗಳು. ಎರಡನೆಯದು ಷಿಲರ್ ಬಹುಮಾನ ಪಡೆಯಿತು.