ಎಡ್ವರ್ಡ್ ಬ್ರಾಡ್ಫರ್ಡ್ ಟಿಚ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಡ್ವರ್ಡ್ ಬ್ರಾಡ್ಫರ್ಡ್ ಟಿಚ್ನರ್ (1867-1927)- ಪ್ರಸಿದ್ಧ ಮನಶ್ಯಾಸ್ತ್ರಜ್ಞರಲ್ಲಿ ಒಬ್ಬ.

ಬದುಕು ಮತ್ತು ಸಾಧನೆ[ಬದಲಾಯಿಸಿ]

ಇಂಗ್ಲೆಂಡಿನಲ್ಲಿ ಹುಟ್ಟಿದ ಇವನು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಲೈಪ್‍ಸಿûಗ್‍ನಲ್ಲಿ ವೂಂಟ್‍ನ ಬಳಿ ಎರಡು ವರ್ಷ ಶಿಷ್ಯವೃತ್ತಿಮಾಡಿ ಅನಂತರ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯವನ್ನು ಸೇರಿದ. ಅಲ್ಲಿಯೇ ಮೂವತ್ತೈದು ವರ್ಷಗಳು ಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಅಮೆರಿಕದಲ್ಲಿ ಮನಶ್ಯಾಸ್ತ್ರ ಬೇರೂರುವಂತೆ ಮಾಡಲು ಕ್ಯುಲ್ಪೆ, ವೂಂಟ್ ಮುಂತಾದವರ ಜರ್ಮನ್ ಗ್ರಂಥಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡಲಾರಂಭಿಸಿದ. ಕಾರ್ನೆಲ್‍ನಲ್ಲಿ ಮನಶ್ಯಾಸ್ತ್ರದ ಪ್ರಯೋಗಶಾಲೆಯನ್ನು ತೆರೆದು ಇಡೀ ಅಮೆರಿಕದಲ್ಲೇ ಅಂಥ ಶಾಲೆಯಿನ್ನೊಂದಿಲ್ಲವೆನ್ನುವಂತೆ ಅದನ್ನು ವ್ಯವಸ್ಥೆಗೊಳಿಸಿದ. ಅಲ್ಲಿಯವರೆಗೆ ತತ್ತ್ವಶಾಸ್ತ್ರಜ್ಞರೇ ಮನಶ್ಯಾಸ್ತ್ರವನ್ನು ಅನ್ವೇಷಣೆ ಮಾಡುತ್ತಿದ್ದರು. ಟಿಚ್ನರ್ ಇದು ಸಲ್ಲದೆಂದೂ ಮನಶ್ಯಾಸ್ತ್ರ ಪ್ರಮುಖವಾಗಿ ಪ್ರಾಯೋಗಿಕವಾದುದೆಂದೂ ಅದೂ ಒಂದು ವಿಜ್ಞಾನವೆಂದೂ ಸ್ಥಿರಪಡಿಸಿದ. 1909-1910ರಲ್ಲಿ ಈ ಹೊಸ ವೈಜ್ಞಾನಿಕ ಸಂವಿಧಾನದ ಅಗತ್ಯವನ್ನೂ ಸಾಧ್ಯತೆಯನ್ನೂ ವಿವರಿಸಿ ಮನಶ್ಯಾಸ್ತ್ರದ ಮೇಲೆ ಗ್ರಂಥವೊಂದನ್ನು ಸಿದ್ಧಪಡಿಸಿದ. ಈತ ಶುದ್ಧ ಅಂತಃಸಮೀಕ್ಷೆಯ ಸಂವಿಧಾನದ ಮೇಲೆ ಸಂಶೋಧನೆಗಳನ್ನು ನಡೆಸಿದ್ದಾನೆ. ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಇವನ ಉದ್ದೇಶ. ಪ್ರಾಯೋಗಿಕ ಮನಶ್ಯಾಸ್ತ್ರದ ಮೇಲೆ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ಗ್ರಂಥಗಳನ್ನೂ ಕೈಪಿಡಿಗಳನ್ನೂ ಈತ ಸಿದ್ಧಪಡಿಸಿದ. ಆದರೆ ವೂಂಟ್‍ನ ಸಂಪ್ರದಾಯವನ್ನೇ ಚಾಚೂ ತಪ್ಪದೆ ಅನುಸರಿಸುತ್ತಿದ್ದನಾಗಿ ಅಮೆರಿಕದ ನವ್ಯ ಸಂಶೋಧಕರು ಇವನಿಗೆ ವಿರೋಧಿಗಳಾದರು.

ಇವನ ಗ್ರಂಥಗಳಲ್ಲಿ ಮುಖ್ಯವಾದವು ಇವು: ಸೈಕಾಲಜಿ ಆಫ್ ಫೀಲಿಂಗ್ ಅಂಡ್ ಅಟೆನ್‍ಷನ್ (1908), ಎಕ್ಸ್ ಪೆರಿಮೆಂಟಲ್ ಸೈಕಾಲಜಿ ಆಫ್ ಥಾಟ್ ಪ್ರೋಸೆಸಸ್ (1909), ಎ ಬಿಗಿನರ್ಸ್ ಸೈಕಾಲಜಿ (1915).

ಮೂವತ್ತೈದು ವರ್ಷಗಳಲ್ಲಿ ಇವನ ಕೈಕೆಳಗೆ ಕೆಲಸ ಮಾಡಿದ ವಿದ್ಯಾರ್ಥಿಗಳಲ್ಲಿ ಐವತ್ತುನಾಲ್ಕು ಮಂದಿ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದರು; ಇವರ ಸಂಶೋಧನೆಗಳಲ್ಲಿ ಬಹು ಮಟ್ಟಿಗೆ ಈತನ ಕೈವಾಡವೇ ಇದ್ದಿತು. ವಾಷ್‍ಬರ್ನ್, ಬೆನ್‍ಟ್ಲಿ, ಹ್ವಿಪ್ಟಲ್, ಬೇರ್ಡ್ ಮುಂತಾದವರೆಲ್ಲ ಇವನ ಶಿಷ್ಯರೇ, ಇವನ ಗ್ರಂಥಗಳು ಜರ್ಮನ್ ಭಾಷೆಗೆ ಅನುವಾದಿತವಾಗಿವೆ.