ಎಡ್ವರ್ಡ್ ಬರ್ನೆಟ್ ಟೇಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಡ್ವರ್ಡ್ ಬರ್ನೆಟ್ ಟೇಲರ್, (1832-1917). ಪ್ರಸಿದ್ಧ ಮಾನವಶಾಸ್ತ್ರಜ್ಞ.

ಸಾಯುವ ಮುಂಚೆ ಎಡ್ವರ್ಡ್ ಬರ್ನೆಟ್ ಟೇಲರ್


ಬದುಕು[ಬದಲಾಯಿಸಿ]

ಹುಟ್ಟಿದ್ದು ಬ್ರಿಟನ್ನಿನಲ್ಲಿ. ಕ್ವೇಕರ್ ಪಂಗಡಕ್ಕೆ ಸೇರಿದ ತಂದೆ ಹಿತ್ತಾಳೆ ಎರಕದ ವೃತ್ತಿಯವನು. ವಿದ್ಯೆಯ ಗಂಧವಿಲ್ಲದ ಕುಟುಂಬದಲ್ಲಿ ಜನಿಸಿದ ಟೇಲರ್ ಪ್ರಾರಂಭದಲ್ಲಿ ತಂದೆಯ ಎರಕದ ಕೆಲಸಕಾರ್ಯಗಳಲ್ಲಿ ನೆರವಾಗುತ್ತಿದ್ದ. ಆ ವೇಳೆಗಾಗಲೇ ಮಾನವಕುಲಶಾಸ್ತ್ರ ಪ್ರವರ್ಧಮಾನಕ್ಕೆ ಬರುತ್ತಿತ್ತು. ಅದರತ್ತ ತನ್ನ ಒಲವನ್ನು ಬೆಳೆಸಿಕೊಂಡ ಟೇಲರ್ ಆ ಶಾಸ್ತ್ರದ ಅಧ್ಯಯನದಲ್ಲಿ ತೊಡಗಿದ. ಈತ ಶಾಲಾಕಾಲೇಜುಗಳ ಮೆಟ್ಟಿಲು ತುಳಿಯದೆ ಪ್ರಪಂಚದ ಪ್ರಮುಖ ಮಾನವಶಾಸ್ತ್ರಜ್ಞರ ಮುಂಚೂಣಿಯಲ್ಲಿ ನಿಂತುದು ಗಮನಾರ್ಹವಾಗಿದೆ.

ಮಾನವಶಾಸ್ತ್ರಕ್ಕೆ ಈತನ ಕೊಡುಗೆ[ಬದಲಾಯಿಸಿ]

ಈತ ತನ್ನ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಆರೋಗ್ಯ ಸುಧಾರಣೆಗೆಂದು ವಿದೇಶ ಪ್ರವಾಸ ಕೈಗೊಂಡ. ಪ್ರವಾಸ ಸಮಯದಲ್ಲಿ ಪ್ರಖ್ಯಾತ ಪ್ರಾಕ್ತನ ಶಾಸ್ತ್ರಜ್ಞ ಹೆನ್ರಿ ಕ್ರಿಸ್ಟಿಯನ್ನು ಕ್ಯೂಬದ ಹವಾನದಲ್ಲಿ ಭೇಟಿಯಾಗಿ ಆತನ ಅಧ್ಯಯನ ಕ್ರಮದಲ್ಲಿಂದ ವಿಶೇಷ ಪ್ರಭಾವಿತನಾದ. ಪ್ರವಾಸದ ಅನಂತರ ತನ್ನ ಮೊದಲ ಬರೆವಣಿಗೆಯಾದ ಅನಾಹುಆಕ್ ಅಥವಾ ಮೆಕ್ಸಿಕೊ ಹಾಗೂ ಪ್ರಾಚೀನ ಮತ್ತು ಆಧುನಿಕ ಮೆಕ್ಸಿಕನ್ನರು (1861) ಎಂಬ ಏಕವಿಷಯ ಪ್ರಬಂಧವನ್ನು ರಚಿಸಿದ. ಈ ಅಧ್ಯಯನದಲ್ಲಿ ಈತ ಬಳಸಿರುವ ಕ್ಷೇತ್ರಕಾರ್ಯವಿಧಾನ ಮುಂದಿನ ಪೀಳಿಗೆಯ ಮಾನವಶಾಸ್ತ್ರರಿಗೆ ಹಾಗೂ ಸಮಾಜಶಾಸ್ತ್ರಜ್ಞರಿಗೆ ದಾರಿದೀಪವಾಯಿತು.

1889ರಲ್ಲಿ ಪ್ರಕಟವಾದ ಮಾನವಶಾಸ್ತ್ರ ಅಧ್ಯಯನ ಕೇಂದ್ರದ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವಿವಾಹ ಹಾಗೂ ಸಂತತಿನಿಯಮಗಳಿಗೆ ಅನ್ವಯವಾಗುವ ಸಾಂಸ್ಥಿಕ ಪ್ರಗತಿಯ ಒಂದು ಪರೀಕ್ಷಾ ವಿಧಾನ ಎಂಬ ಲೇಖನದಲ್ಲಿ ಸಮಾಜ ಶಾಸ್ತ್ರದಲ್ಲಿ ಹೇಗೆ ಸಂಖ್ಯಾಗ್ರಹಣ ವಿಧಾನವನ್ನು ಬಳಸಬಹುದೆಂಬುದುದನ್ನು ಟೇಲರ್ ತೋರಿಸಿಕೊಟ್ಟಿದ್ದಾನೆ. ವಿವಾಹ ಹಾಗೂ ಸಂತತಿಗಳ ನಡವಳಿಕೆಗಳ ಮೇಲೆ ಹೇಗೆ ವಿಭಿನ್ನ ಪದ್ಧತಿಗಳು ಪರಿಣಾಮ ಬೀರುವುದು ಎಂಬುದನ್ನು ಸಂಖ್ಯಾಸಂಗ್ರಹ ವಿಧಾನದ ಮೂಲಕ ನಿರೂಪಿಸಿದ್ದಾನೆ. ಜಗತ್ತಿನ ಎಲ್ಲೆಡೆಗಳಿಂದ ವಿಷಯ ಸಂಗ್ರಹಿಸಿ ವಿವಾಹ ಹಾಗೂ ಸಂತತಿ ನಿಯಮಗಳನ್ನು ತಃಖ್ತೆಗಳಲ್ಲಿ ವ್ಯವಸ್ಥೆಗೊಳಿಸಿದ್ದಾನೆ. ಮ್ಯಾಲಿನೋಫ್‍ಸ್ಕಿ, ರೇಮಂಡ್ ಫರ್ತ್, ಎವನ್ ಪ್ರಿಚರ್ಡ್ ಮೊದಲಾದವರು ಟೇಲರನ ಕ್ಷೇತ್ರಕಾರ್ಯ ವಿಧಾನಗಳನ್ನು ಬಳಸಿಕೊಂಡಿದ್ದಾರೆ. ಆದಿವಾಸಿ ಸಮಾಜಗಳ ಸಾಮಾಜಿಕ ವ್ಯವಸ್ಥೆ ಮತ್ತು ಕಾನೂನಿನ ಅಧ್ಯಯನ ಕ್ಷೇತ್ರಕ್ಕೆ ಟೇಲರ್‍ನ ಕೊಡುಗೆ ಅತ್ಯಂತ ಗಮನಾರ್ಹ. ಆದಿವಾಸಿ ಜನರ ಧರ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಇವನ ಅಪೂರ್ವವಾದ ಕೊಡುಗೆ, “ಮಾನವಕುಲದ ಪ್ರಾರಂಭಿಕ ಇತಿಹಾಸ ಮತ್ತು ನಾಗರಿಕತೆಯ ಮುನ್ನಡೆಯ ಬಗೆಗೆ ಸಂಶೋಧನೆ” (1865), “ಆದಿಮ ಸಂಸ್ಕೃತಿ” (1871)-ಇವು ಟೇಲರ್‍ನ ಎರಡು ಪ್ರಮುಖ ಕೃತಿಗಳಾಗಿವೆ. ನಾಗರಿಕತೆಯ ಬಗೆಗೆ ವ್ಯಾಖ್ಯಾನ ಮಾಡುತ್ತ “ ವ್ಯಕ್ತಿ ಹಾಗೂ ಸಮಾಜವನ್ನು ಒಳಗೊಂಡ ಘನತರ ವ್ಯವಸ್ಥೆಯ ಮೂಲಕ, ಒಮ್ಮೆಲೇ ಮಾನವನ ಒಳ್ಳೆಯತನ, ಶಕ್ತಿ ಹಾಗೂ ಸಂತೋಷಗಳನ್ನು ಸಾಧಿಸುವ ಮಾನವಕುಲದ ಸರ್ವಸಾಮಾನ್ಯ ಪ್ರಗತಿಯಲ್ಲಿ ನಾಗರಿಕತೆ ಆಸಕ್ತವಾದುದು” ಎಂದಿದ್ದಾನೆ, ಟೇಲರ್. ನಾಗರಿಕತೆಯ ಈ ವ್ಯವಸ್ಥೆ ಬೌದ್ಧಿಕ ಮತ್ತು ಪ್ರಾಪಂಚಿಕ ಸಂಸ್ಕೃತಿಗಳಿಗೆ ಅನ್ವಯಿಸುವುದೆಂಬುದರ ಬಗೆಗೆ ಟೇಲರ್ ಸ್ಪಷ್ಟ ಅಭಿಪ್ರಾಯ ಹೊಂದಿದ್ದ. ಆದರೆ ನಾಗರಿಕತೆಯ ಈ ವ್ಯವಸ್ಥೆಯ ಉಳಿದ ಮಗ್ಗಲುಗಳನ್ನು ಕುರಿತಂತೆ ಅವನ ನಿಲುವಿನಲ್ಲಿ ಸ್ಪಷ್ಟತೆಯಿರಲಿಲ್ಲ. ಆದರೂ ಸಂಸ್ಕೃತಿಗೆ ಅಭಿಮುಖವಾಗಿ ಸಾಗುತ್ತಿದ್ದ ವಿಜ್ಞಾನ ಹಾಗೂ ಕಲೆಯ ಪ್ರಗತಿಯ ಬಗೆಗೆ ಅವನಿಗೆ ಖಚಿತ ಅಭಿಪ್ರಾಯವಿತ್ತು. ಆದಿಕಾಲದ ಸಂಸ್ಕೃತಿ ಇಂದಿಗೂ ಸಮಾಜಶಾಸ್ತ್ರದ ಅಧ್ಯಯನಕ್ಕೆ ಪ್ರಮುಖ ಸಹಾಯಕ ಗ್ರಂಥವಾಗಿದೆ. ಸಂಸ್ಕೃತಿ ಅಥವಾ ನಾಗರಿಕತೆ-ಇವುಗಳನ್ನು ಮಾನವಕುಲಶಾಸ್ತ್ರದ ದೃಷ್ಟಿಕೋನದಿಂದ ಪರಿಭಾವಿಸಿದಾಗ, ಅದು ಸಂಕೀರ್ಣವೆನಿಸಿದ್ದು, ಮಾನವ ಸಮಾಜದಿಂದ ಪಡೆದುಕೊಂಡ ಜ್ಞಾನ, ಕಲೆ, ನಂಬಿಕೆ, ಕಲೆ, ನೀತಿ, ಕಾನೂನು, ಸಂಪ್ರದಾಯಗಳು ಹಾಗೂ ಅಭ್ಯಾಸ ಮುಂತಾದುವನ್ನು ಸಂಸ್ಕೃತಿ ಒಳಗೊಳ್ಳುತ್ತದೆ.-ಎಂದು ಈತ ಹೇಳುತ್ತಾನೆ. ಈತನು ಸಂಸ್ಕೃತಿಯ ವಿವಿಧ ಶ್ರೇಣಿಗಳನ್ನು ಮಾನವನ ವಿಕಾಸದ ಹಂತಗಳೆಂದು ಕರೆದಿರುವನಲ್ಲದೆ, ಸಂಸ್ಕೃತಿಯ ಪ್ರತಿಯೊಂದು ಶ್ರೇಣಿ ಹಿಂದಿನ ಇತಿಹಾಸದ ಪರಿಣಾಮವಾಗಿದ್ದು, ಭವಿಷ್ಯತ್ತಿನ ಇತಿಹಾಸ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸುವುದು ಎಂದು ವಾದಿಸಿದ್ದಾನೆ. ಆದಿಮ ಸಂಸ್ಕೃತಿ ಹಾಗೂ ಮಾನವಶಾಸ್ತ್ರಗಳನ್ನು (1881) ಬಿಟ್ಟರೆ ಟೇಲರ್ ಇತರ ಯಾವ ಗ್ರಂಥವನ್ನೂ ರಚಿಸಲಿಲ್ಲ.

ಟೇಲರ್ 1883ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದ. ಅನಂತರ ಪಿಟ್-ರಿವರ್ಸ್ ವಸ್ತುಸಂಗ್ರಹಶಾಲೆಯಲ್ಲಿ ಉಪನ್ಯಾಸಗಳನ್ನು ನೀಡಿದ. 1874 ಹಾಗೂ 1892ರ ಆವೃತ್ತಿಗಳಲ್ಲಿ ಹೊರಬಂದ ನೋಟ್ಸ್ ಅಂಡ್ ಕ್ವೆರೀಸ್ ಆನ್ ಅಂತ್ರೊಪಾಲಜಿ ಎಂಬ ಸಂಪಾದಿತ ಕೃತಿಗಳಲ್ಲಿ ಟೇಲರ್ ಹದಿನೆಂಟು ವಿಭಾಗಗಳನ್ನು ಸಂಪಾದಿಸಿದ್ದಾನೆ.