ಎಡ್ಗರ್ ಡಗಾ
ಡಗಾ, (ಈಲೇರ್ ಜೆರ್ಮಾನ್) ಎಡ್ಗರ್ 1834-1917. ಫ್ರಾನ್ಸಿನ ಪ್ರಸಿದ್ಧ ವರ್ಣಚಿತ್ರಗಾರ; ಪರಿಣಾಮ ವಿಧಾನದ (ಇಂಪ್ರೆಷನಿಷ್ಟ್ ಸ್ಕೂಲ್) ಕಲಾವಿದನೆಂದು ಖ್ಯಾತಿ ಹೊಂದಿದವ.
ಬದುಕು ಮತ್ತು ಕಲೆ
[ಬದಲಾಯಿಸಿ]ಹುಟ್ಟಿದ್ದು ಪ್ಯಾರಿಸ್ಸಿನ ಪುರಾತನ ಸಾಂಪ್ರದಾಯಿಕ ಕುಟುಂಬದಲ್ಲಿ. ತಂದೆ ಆಗಸ್ಟ್ ಡಗಾ ಶ್ರೀಮಂತ ಬ್ಯಾಂಕರ್; ಆತನಿಗೆ ಮಗನೂ ತನ್ನಂತೆ ಆಗಬೇಕೆಂಬ ಹಂಬಲವಿತ್ತು. ಆದರೆ ಮಗ ಚಿಕ್ಕಂದಿನಿಂದಲೂ ರೇಖಾಚಿತ್ರ ಬರೆಯುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದುದನ್ನು ಗಮನಿಸಿ ಅವನ ಕಲಾವ್ಯಾಸಂಗಕ್ಕೆ ಪ್ರೋತ್ಸಾಹ ನೀಡತೊಡಗಿದ. ಹೀಗಾಗಿ ಡಗಾ ಬೊ ಆಟ್ರ್ಸ್ ಶಾಲೆಯಲ್ಲಿ ತನ್ನ ಕಲಾವ್ಯಾಸಂಗವನ್ನು ಆರಂಭಿಸಿದ (1855). ಅಲ್ಲಿ ಆ್ಯಂಗ್ರ್ ಎಂಬ ಕಲಾವಿದನಿಂದ ಆಕರ್ಷಿತವಾಗಿ ವ್ಯಕ್ತಿಚಿತ್ರಗಳನ್ನು ರಚಿಸುವಾಗ ಆತನನ್ನೇ ಅನುಕರಣೆ ಮಾಡತೊಡಗಿದ. 1859ರಲ್ಲಿ ರೋಮ್ ಮತ್ತು ಇಟಲಿಗಳಿಗೆ ಹೋಗಿ ಅಲ್ಲಿಯ ಕಲಾಪ್ರಭುಗಳ ಚಿತ್ರಗಳನ್ನೆಲ್ಲ ಪ್ರತಿಮಾಡಿ ಕೊಳ್ಳುವುದರ ಮೂಲಕ ಶಾಸ್ತ್ರೀಯ ಶೈಲಿಯನ್ನು ಅರಿತುಕೊಂಡ. ದಿ ಯಂಗ್ ಸ್ಪಾರ್ಟನ್ಸ್ (1862) ಎಂಬ ಕೃತಿಯಲ್ಲಿ ಇದನ್ನು ಕಾಣಬಹುದು.
ಡಗಾ ತನ್ನ ಸಮಕಾಲೀನ ವಾಸ್ತವವಾದಿ ಕಲಾವಿದರಿಂದಲೂ ಪ್ರಭಾವಿತನಾಗಿದ್ದ. ಎಡ್ವರ್ಡ್ ಮಾನೆ ಮೊದಲಾದ ಪರಿಣಾಮ ವಿಧಾನದ ಕಲಾವಿದರ ಸಂಪರ್ಕ ಬೆಳೆಯಿತು (1862). ಅದೇ ಸುಮಾರಿಗೆ ಜಪಾನೀ ಪ್ರಿಂಟುಗಳು ಇವನನ್ನು ಆಕರ್ಷಿಸಿದವು. ಇವೆರಡೂ ಈತನ ಕಲಾಜೀವನದಲ್ಲಿ ಹೊಸತಿರುವನ್ನು ನೀಡಿದವು. ಬಯಲು ಪ್ರದೇಶಗಳಲ್ಲಿ ಕುಳಿತು ಪ್ರಕಾಶಮಾನವಾದ ವರ್ಣಗಳಲ್ಲಿ ನಿಸರ್ಗ ಮತ್ತು ಜೀವನ ಚಿತ್ರಗಳನ್ನು ಬರೆಯುತ್ತಿದ್ದ ಪರಿಣಾಮ ವಿಧಾನದ ಕಲಾವಿದರಿಂದ ಕೇವಲ ವರ್ಣ ವೈಖರಿಯನ್ನು ಮಾತ್ರ ಈತ ಸ್ವೀಕರಿಸಿದ; ಈತ ನಿಸರ್ಗದ ನಡುವೆ ಕೂಡದೆ ತನ್ನ ಸ್ಟುಡಿಯೋದಲ್ಲೆ ಕುಳಿತು ಕಾಲ್ಪನಿಕ ಚಿತ್ರಗಳನ್ನು ರಚಿಸುತ್ತಿದ್ದ. ಕುದುರೆ ಪಂದ್ಯಗಳೇ ಮೊದಲಾದ ನೈಸರ್ಗಿಕ ಚಿತ್ರಗಳನ್ನು ಆತ ಹೀಗೆ ಯಶಸ್ವಿಯಾಗಿ ಅತ್ಯಂತ ನೈಜವಾಗಿ ಚಿತ್ರಿಸಿದ್ದುಂಟು. ಇವುಗಳಲ್ಲಿ ಕಂಡುಬರುವ ಜೀವಂತಿಕೆ ಮತ್ತು ಚಲನಶಕ್ತಿ ಆಶ್ಚರ್ಯವನ್ನುಂಟುಮಾಡುವಂಥದು. ಬ್ಯಾಲೆ, ನಾಟಕ, ಸರ್ಕಸ್, ಕೆಫೆ, ಲಾಂಡ್ರಿ ಮುಂತಾದವುಗಳ ವಾಸ್ತವಚಿತ್ರಗಳನ್ನು ಈತ ಸಮರ್ಥವಾಗಿ ರಚಿಸಿದ್ದಾನೆ. ಇವುಗಳಲ್ಲೆಲ್ಲ ಮ್ಯಾತೆ, ಎಡ್ಮಂಡ್ ಡ್ಯುರಾಂಟ್ ಮೊದಲಾದ ಪ್ರಸಿದ್ಧ ಕಲಾವಿದರಿಂದ ಪ್ರಭಾವಿತನಾಗಿರುವುದು ಕಂಡುಬರುತ್ತದೆ.
ಡಗಾನ ಚಿತ್ರಕೃತಿಗಳು ಏಳುಪ್ರದರ್ಶನಗಳಲ್ಲಿ ಜನತೆಯನ್ನು ಆಕರ್ಷಿಸಿದುವು, ಇದರಿಂದಾಗಿ ಈತ ಪರಿಣಾಮ ವಿಧಾನದ ಪ್ರಮುಖ ಕಲಾವಿದನಾಗಿ ಖ್ಯಾತಿಗೆ ಬಂದ. ಸಾಂಪ್ರಾದಾಯಿಕ ಚಿತ್ರಶೈಲಿಯ ಸೂಕ್ಷ್ಮಕುಸುರಿ ಕೆಲಸದಲ್ಲಿ ಪಾರಂಗತನಾಗಿದ್ದ ಈತನಿಗೆ ಇಟಲಿಯ ಪುನರುಜ್ಜೀವನ ಕಾಲದ ಕಲೆಯ ಪರಿಚಯವೂ ಇತ್ತು. ಮೊದಮೊದಲು ಪೌರಾಣಿಕ ಹಾಗೂ ಐತಿಹಾಸಿಕ ದೃಶ್ಯಗಳನ್ನೇ ಚಿತ್ರಿಸುತ್ತಿದ್ದು ಕ್ರಮೇಣ ಬದಲಾಗುತ್ತಿರುವ ಫ್ರೆಂಚ್ ಜನಜೀವನದ ಬಗೆಗಿನ ನೈಜಚಿತ್ರಗಳನ್ನೂ ಬರೆಯತೊಡಗಿದ. ಅಗಸಗಿತ್ತಿಯರು, ನರ್ತಕಿಯರು, ನಟನಟಿಯರು ತಮ್ಮ ತಮ್ಮ ಕಾರ್ಯದಲ್ಲಿ ನಿರತರಾಗಿರುವಂತೆಯೇ ಸಹಜಸುಂದರವಾಗಿ ಈತ ಚಿತ್ರಿಸಿದ್ದುಂಟು. ಅಲ್ಲದೆ ಸ್ನಾನಮಗ್ನರಾದ ಸ್ತ್ರೀಯರ ಅಸಂಖ್ಯ ಚಿತ್ರಗಳನ್ನು ಈತ ರಚಿಸಿದ. ಇವನ ಚಿತ್ರಗಳಲ್ಲಿ ಮಾನವ ವ್ಯಕ್ತಿಗಳು ಸುಂದರವಾಗಿರುವುದು ಅಪೂರ್ವವೆಂದೇ ಹೇಳಬೇಕು. ಆದರೆ ಅವುಗಳಲ್ಲೆಲ್ಲ ಭಾವ ಮತ್ತು ಚಲನೆ ಪ್ರಧಾನವಾಗಿ ಕಂಡುಬಾರದಿರದು. ನರ್ತಕಿಯರು ಪ್ರೇಕ್ಷಕರ ಎದುರು ನಿಂತು ನರ್ತನಮಾಡುತ್ತಿರುವಾಗ ಅವರ ಭಾವಭಂಗಿಗಳನ್ನು ಈತ ನಕಲು ಮಾಡಿಕೊಳ್ಳುತ್ತಿರಲಿಲ್ಲ. ಅದರ ಬದಲು ಅವರು ತಾಲೀಮು ಮಾಡುವ ಸ್ಥಳಕ್ಕೇ ಹೋಗಿ ಅವರ ಭಾವಭಂಗಿಗಳನ್ನು ಅಚ್ಚೊತ್ತಿಕೊಳ್ಳುವಂತೆ ಅಭ್ಯಾಸಮಾಡಿ ಅನಂತರ ತನ್ನ ಸ್ಟುಡಿಯೋಕ್ಕೆ ಬಂದು ಯಥಾವತ್ತಾಗಿ ತನ್ನ ಭಾವಗಳನ್ನು ಚಿತ್ರಿಸುತ್ತಿದ್ದ; ನರ್ತಕಿಯರ ಬಳಲಿಕೆ, ಬೇಸರ ಮುಂತಾದ ಅನಿಸಿಕೆಗಳನ್ನೆಲ್ಲ ತನ್ನ ಪಳಗಿದ ಕುಂಚದಿಂದ ಸೆರೆಹಿಡಿಯುತ್ತಿದ್ದ; ಜನರ ಅಸಡ್ಡಾಳ ಭಾವಭಂಗಿಗಳನ್ನೂ ಸೆರೆಹಿಡಿಯುವುದು ಈತನ ಹವ್ಯಾಸವಾಗಿತ್ತು. ಆದರೆ ಅವೆಲ್ಲವೂ ಸ್ವಯಂಸ್ಫೂರ್ತಿಯಿಂದ ಮೂಡಿಬಂದುವಲ್ಲ-ಎಲ್ಲವನ್ನೂ ಆಳವಾಗಿ ಯೋಚಿಸಿ, ವಿಚಾರಿಸಿ ಶ್ರಮಪಟ್ಟು ಸಂಯೋಜಿಸಿ ರಚಿಸಿದ ಕಲಾಕೃತಿಗಳವು.
1880ರಲ್ಲಿ ಸುಮಾರಿಗೆ ಡಗಾನ ದೃಷ್ಟಿ ಮಂದವಾಯಿತು. ಕೊನೆಕೊನೆಗೆ ತೈಲ ವರ್ಣದ ಬದಲು ಬಣ್ಣದ ಬಳಪಗಳನ್ನು (ಪ್ಯಾಸ್ಟೆಲ್) ಬಳಸುವ ತಂತ್ರವನ್ನೂ ಕಲಿತುಕೊಂಡ. 1886ರ ಪ್ರದರ್ಶನದಲ್ಲಿ ಪ್ರಚುರಗೊಂಡ ಅಂಥ ಕೃತಿಗಳಲ್ಲಿ ನಗ್ನ ಸುಂದರಿಯರ ವಿವಿಧ ಭಾವಭಂಗಿಗಳನ್ನು ಕಾಣಬಹುದು. 1880ರ ಅನಂತರ ಡಗಾ ಮೇಣದ ಅಚ್ಚುಗಳನ್ನೂ ಶಿಲ್ಪಗಳನ್ನೂ ರಚಿಸಿದ್ದುಂಟು. 1881ರಲ್ಲಿ ನಡೆದ ಆರನೆಯ ಪರಿಣಾಮವಿಧಾನ ಕಲಾಪ್ರದರ್ಶನದಲ್ಲಿ ಕಂಚಿನ ಮೇರುಕೃತಿಗಳೂ ಪ್ರದರ್ಶಿತವಾದವು. ಇವುಗಳಲ್ಲಿ ನಾಗಾಲೋಟದ ಅಶ್ವಗಳ ಮೂರ್ತಿಗಳು ಅದ್ಭುತವಾಗಿವೆ. 1890ರ ಸುಮಾರಿಗೆ ದೃಷ್ಟಿಮಾಂದ್ಯ ಹೆಚ್ಚಾಯಿತಾಗಿ ಸೂಕ್ಷ್ಮ ವರ್ಣಚಿತ್ರಗಳನ್ನು ರಚಿಸುವುದನ್ನು ಬಿಟ್ಟು ಸ್ಥೂಲ ನಮೂನೆಗಳನ್ನು (ಮಾಡೆಲ್) ಮಾಡತೊಡಗಿದ. ಈ ದಿಸೆಯಲ್ಲಿ ಈತ ರಚಿಸಿದ ನಗ್ನಸ್ತ್ರೀಯರ ಗೊಂಬೆಗಳಲ್ಲೂ ಈತನದೇ ಆದ ವೈಶಿಷ್ಟ್ಯಪೂರ್ಣವಾದ ಕಥನಶಕ್ತಿ, ನಿರೂಪಣಾ ವೈಖರಿ ಎದ್ದು ಕಾಣುತ್ತದೆ. ಪರಿಣಾಮವಿಧಾನದ ಪ್ರಸಿದ್ಧ ಕಲಾವಿದ ರೆನ್ವಾರ್ ಎಂಬಾತ ಡಗಾನನ್ನು ರೋಡ್ಯಾನನಿಗಿಂತ ಶ್ರೇಷ್ಠ ಕಲಾವಿದ ಎಂದು ಕರೆದಿದ್ದಾನೆ. ಅನೇಕ ಕಲಾವಿದರು ಕೂಡ ಈತನಿಂದ ಪ್ರಭಾವಿತರಾದ್ದುಂಟು.
ಕಲ್ಲಚ್ಚನ್ನು ತಯಾರಿಸುವಲ್ಲಿ ಕೂಡ ಡಗಾ ಶ್ರಮಿಸಿದ್ದುಂಟು. ಈ ವಿಧಾನದಲ್ಲಿ ರಚಿಸಿದ ಔ ಕೆಫೆ ಎಂಬ ಕೃತಿ (1893) ಲಂಡನ್ನಿನಲ್ಲಿ ತೀವ್ರವಾದ ಟೀಕೆಗೊಳಗಾಯಿತು. ಆದರೆ ಭವ್ಯವಾಗಿ ರಚಿಸಿದ ಬ್ಯಾಲೆ ದೃಶ್ಯಗಳು ಮಾತ್ರ ಅನೇಕರಿಂದ ಮೆಚ್ಚುಗೆ ಗಳಿಸಿದವು. ಡನ್ಸೊಸ್ ಅಲ ಬರೆ ಎಂಬ ಅದ್ಭುತವಾದ ಕೃತಿ 4,50,000 ಫ್ರಾಂಕುಗಳಿಗೆ ಹರಾಜಾಯಿತು (ಈ ಕೃತಿ ಈಗ ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯದಲ್ಲಿದೆ). ಇಷ್ಟಾದರೂ ಡಗಾನ ಕೃತಿಗಳಿಗೆ ಆತನ ಜೀವಿತ ಕಾಲದಲ್ಲಿ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ. 1917ರಲ್ಲಿ ಈತ ಪ್ಯಾರಿಸಿನಲ್ಲಿ ತೀರಿಕೊಂಡ ಅನಂತರ, ಈತನ ಕೃತಿಗಳು ಹರಾಜಾದಾಗ, ಅವುಗಳ ನಿಜವಾದ ಮೌಲ್ಯ ಲೋಕಕ್ಕೆ ತಿಳಿಯಿತು.
ಒಟ್ಟಿನಲ್ಲಿ ಡಗಾ 19ನೆಯ ಶತಮಾನದ ಅತ್ಯಂತ ಶ್ರೇಷ್ಠ ಮೌಲಿಕಕಲಾವಿದನೆಂಬುದರಲ್ಲಿ ಸಂಶಯವಿಲ್ಲ. ಪ್ರಾಚೀನ, ನವೀನ, ಜಪಾನೀ-ಇತ್ಯಾದಿ ವಿವಿಧ ಶೈಗಳಿಂದ ಪ್ರಭಾವಿತನಾದರೂ ಅವೆಲ್ಲವುಗಳಿಂದ ಈತ ಕಲಿತನೇ ಹೊರತು ಅವುಗಳ ಪ್ರಭಾವದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಲಿಲ್ಲ. ಕಲೆಯೆಂಬುದು ನಿಸರ್ಗದ ಪ್ರತಿಕೃತಿಯಲ್ಲ; ಅದು ಪ್ರಧಾನವಾಗಿ ಸೃಷ್ಟಿಕಾರಕ ಕಲ್ಪನಾವಿಲಾಸದ ಕೂಸು ಎಂಬುದು ಈತನ ಜೀವನಾನುಭವವಾಗಿದ್ದರೂ ಕಲಾಕೃತಿಗಳ ರಚನೆಯಲ್ಲಿ ಸ್ಫೂರ್ತಿಯನ್ನು ನಂಬದ ಕಲಾವಿದ ಈತ. ಕಲಾವಿದರ ಜಾತಿಯಲ್ಲಿ ಹೀಗೆ ಸ್ಫೂರ್ತಿಯನ್ನು ನಿರಾಕರಿಸುವುದು ವಿರಳವೆಂದೇ ಹೇಳಬಹುದು. ಕಲೆಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಡಗಾ ತನ್ನ ವೈಯಕ್ತಿಕ ಜೀವನದಲ್ಲಿ ಸಿಡುಕನೂ ಆತ್ಮರತನೂ ಕಟುವಾದಿಯೂ ಆಗಿದ್ದ. ಮುಪ್ಪಿನಲ್ಲಿ ಕಣ್ಣುಗಳನ್ನು ಕಳೆದುಕೊಂಡ ಈತನನ್ನು ತರುಣ ಕಲಾವಿದರು ಅಲಕ್ಷ್ಯ ಮಾಡಿದ್ದುಂಟು. ಇಷ್ಟಾದರೂ ಡಗಾ ಕಲಾಕ್ಷೇತ್ರದಲ್ಲಿ ಶಾಶ್ವತವಾದ ಹೆಸರನ್ನು ಗಳಿಸಿ ಅಮರನಾದ.