ಎಚೆವೆರೀಯ

ವಿಕಿಪೀಡಿಯ ಇಂದ
Jump to navigation Jump to search

ಎಚೆವೆರೀಯ ಮೆಕ್ಸಿಕೊ ದೇಶದ ಅಲಂಕಾರ ಸಸ್ಯ. ನಕಾಸೆಗಾರ ಅಟನಾಸಿಯೊ ಎಚೆವೆರೀಯ ಎಂಬವನ ಸ್ಮರಣೆಗಾಗಿ ಗಿಡಕ್ಕೆ ಈ ಹೆಸರು. ಇವು ರಸವುಳ್ಳ (ಸಕ್ಯೂಲೆಂಟ್) ದೀರ್ಘಾವಧಿ ಸಸ್ಯಗಳು. ಎಲೆ ಅಗಲ, ದಪ್ಪ, ಚಪ್ಪಟೆ, ಮೆತು. ಗುಲಾಬಿ ಹೂವಿನಂತೆ ಜೋಡಣೆಯಾಗಿರುವ ಹೂಗಳನ್ನುಳ್ಳ ಇದರ ಪುಷ್ಪಮಂಜರಿ ಮಧ್ಯದ ತುದಿಯಲ್ಲಿ ಅಂತ್ಯಾರಂಭಿ, ಸ್ಪೈಕ್ ಅಥವಾ ಅಂಬೆಲ್ ಮಾದರಿಯದು. ಪುಷ್ಪಪುತ್ರ 5 ; ಉದ್ದವಾಗಿ ಅಸಮವಾಗಿರುತ್ತದೆ ; ಅಗಲ ಕಡಿಮೆ, ದಳಗಳು 5 ; ಬುಡದಲ್ಲಿ ಕೂಡಿಕೊಂಡಿರುತ್ತವೆ. ಕೇಸರಗಳು 10 ; ಇವುಗಳ ಪೈಕಿ ಐದು ಹೂದಳದ ಮಧ್ಯದವರೆಗೆ ಅಂಟಿಕೊಂಡಿರುತ್ತವೆ ; ಉಳಿದ ಐದು ಬಿಡಿಯಾಗಿರುತ್ತವೆ ಅಥವಾ ತಳಭಾಗಕ್ಕೆ ಅಂಟಿಕೊಂಡಿರುತ್ತವೆ. ಎಚೆವೇರಿಯ ಅಗವಾಯ್‍ಡೆಸ್ ಪ್ರಭೇದ ಕತ್ತಾಳೆ ಆಕಾರದಲ್ಲಿದೆ. ದಪ್ಪವಾದ ಅಗಲವಾದ, ಮೆದುವಾದ ಎಲೆಗಳು ಗುಲಾಬಿ ಹೂವಿನಂತೆ ಜೋಡಣೆಗೊಂಡಿವೆ. ಇವು 3" ಉದ್ದವಾಗಿ ತಿಳಿಹಸಿರು ಬಣ್ಣವಾಗಿವೆ. ಭಾರವಾದ ಹೂಗೊಂಚಲು ಸಸ್ಯದ ಮೇಲಿನ ಮಧ್ಯಭಾಗದಿಂದ ಇಳಿಬಿದ್ದಿರುತ್ತದೆ. ಗೊಂಚಲಿನ ತೊಟ್ಟು ಸುಮಾರು 1 1/2 ಎತ್ತರ ; ಹೂಗಳು ಹಳದಿ ಮಿಶ್ರಿತ ಕೆಂಪುಬಣ್ಣದವು. ಸಾಮಾನ್ಯವಾಗಿ ಚಳಿಗಾಲದಲ್ಲಿ ಅರಳುತ್ತವೆ. ಈ ಪ್ರಭೇದ ನಿಧಾನವಾಗಿ ಬೆಳೆಯುವ ಗುಣವುಳ್ಳದ್ದು. ಬೀಜಗಳಿಂದ ಸುಲಭವಾಗಿ ವೃದ್ಧಿಮಾಡಬಹುದು. ಎಚೆವೆರೀಯ ಡೆರೆನ್‍ಬರ್‍ಜಿ ಪ್ರಭೇದ ಮಧ್ಯಮ ಗಾತ್ರದ, ರಸವುಳ್ಳ ಸಸ್ಯ. ಇದು ಅರಳುವುದಕ್ಕೆ ಪ್ರಾರಂಭಿಸಿದ ಡೇಲಿಯ ಮೊಗ್ಗಿನ ಆಕಾರದಲ್ಲಿದೆ. ಎಲೆಗಳದ್ದು ಚಮಚದಾಕಾರ ; ತುದಿ ಸ್ವಲ್ಪ ಮೊನಚು ; ಬಣ್ಣ ನಸು ಹಸಿರು ; ಅಂಚುಗಳು ಕೆಂಪು ಬಣ್ಣ. ಇಡೀ ಎಲೆ ತಿಳಿ ಬೂದಿಬಣ್ಣದ ಮೇಣದಂತಿರುವ ಪೊರೆಯಿಂದ ಆವೃತವಾಗಿದೆ. ತುದಿಯಲ್ಲಿ ತುಂಡಾದ ಹೂಗೊಂಚಲಿದೆ. ಅದರ ಹೂಗಳ ಬಣ್ಣ ಹಳದಿ ಮಿಶ್ರಿತ ಕೆಂಪು. ಎಚೆವೆರೀಯ ಎಲೆಗ್ಯಾನ್ಸ್ ಪ್ರಭೇದ ಬಹಳ ಸುಂದರವಾಗಿದೆ. ಇದು ಆಕಾರದಲ್ಲಿ ಎ. ಡೆರೆನ್‍ಬರ್‍ಜಿ ಪ್ರಭೇದವನ್ನು ಹೋಲುತ್ತದೆಯಾದರೂ ಗಾತ್ರದಲ್ಲಿ ದೊಡ್ಡದು. ಎಲೆಗಳು ವಿರುದ್ಧ ರಚನೆಯವು ಆಕಾರ ಕರನೆಯಂತೆ. ಅಂಚುಗಳ ಬಣ್ಣ ಕೆಂಪು. ಕೆಲವು ವೇಳೆ ಎಲೆ ಅರ್ಧ ಪಾರದರ್ಶಕ ; ಸುಲಭವಾಗಿ, ಅಧಿಕ ಸಂಖ್ಯೆಯಲ್ಲಿ ಹೊಮ್ಮುವ ಕೊಂಬೆಗಳಿಂದ ಸಸ್ಯವನ್ನು ವೃದ್ಧಿಮಾಡಬಹುದು. ಎಚೆವೆರೀಯ ಗಿಬ್ಬಿಪ್ಲೋರ ಪ್ರಭೇದ ದೊಡ್ಡ ಚಮಚದಾಕಾರದ ಸಸ್ಯವಾಗಿದ್ದು ತಳಭಾಗದಲ್ಲಿ ಉಬ್ಬಿರುತ್ತದೆ. ಹೂಗೊಂಚಲ ಗಣೆ ಸುಮಾರು 30 ಎತ್ತರವಾಗಿ ಬೆಳೆದು, ತುದಿಯಲ್ಲಿ ಹಳದಿ ಮಿಶ್ರಿತ ಕೆಂಪು ಬಣ್ಣದ ಹೂಗಳನ್ನು ಬಿಡುತ್ತದೆ. ಎಚೆವೆರೀಯ ಸೆಟೊಸ ಪ್ರಭೇದ ಗುಲಾಬಿ ಹೂವಿನಾಕಾರದಲ್ಲಿರುವ ಸುಂದರ ಸಸ್ಯ. ಎಲೆಗಳ ಮೇಲೆ ದೃಢವಾಗಿ ನವಿರಾಗಿರುವ ಮುಳ್ಳುಗಳು ಸಸ್ಯದ ಅಂದವನ್ನು ದ್ವಿಗುಣಗೊಳಿಸಿವೆ. ಎಲೆಗಳಿಗೆ ತೊಟ್ಟುಗಳಿಲ್ಲ. ಬಣ್ಣ ಹಸಿರು. ಒಂದೇ ಸಸ್ಯದಲ್ಲಿ ಹಲವು ಗೊಂಚಲುಗಳಿವೆ. ಇವುಗಳ ಮೇಲೂ ನವಿರಾದ ಮುಳ್ಳುಗಳಿವೆ. ಹೂಗಳ ಬಣ್ಣ ಕೆಂಪು. ಸಸ್ಯಗಳನ್ನು ಬೀಜಗಳಿಂದ ವೃದ್ಧಿ ಮಾಡಬಹುದು. ಎಚೆವೇರಿಯ ಪಲ್ವಿನೇಟ ಪ್ರಭೇದದ ಎಲೆಗಳ ತೊಟ್ಟುಗಳು ಉಬ್ಬಿರುವುದರಿಂದ ಈ ಹೆಸರು ಬಂದಿದೆ. ಎಲೆ ಬುಡದಲ್ಲಿ ಕಿರಿದು. ತುದಿಯಲ್ಲಿ ಅಗಲ, ಚಪ್ಪಟೆ. ಮೇಲುಭಾಗದಲ್ಲಿ ನವಿರಾದ ರೋಮಗಳಿವೆ. ತಳಭಾಗದ ಹಳೆಯ ಎಲೆಗಳು ಕಂದು ಬಣ್ಣಕ್ಕೆ ತಿರುಗುವುದು ಈ ಪ್ರಭೇದದ ಸಾಮಾನ್ಯಗುಣ. ಎಲೆಯಂತಿರುವ ಕಾಂಡದ ತುದಿಯಲ್ಲಿ ಅಂತ್ಯಾರಂಭಿ ಹೂಗೊಂಚಲಿದೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: