ವಿಷಯಕ್ಕೆ ಹೋಗು

ಎಂ. ವಿ. ಗೋಪಾಲಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ

[ಬದಲಾಯಿಸಿ]

ಡಾ.ಎಂ.ವಿ.ಗೋಪಾಲಸ್ವಾಮಿ ಅವರನ್ನು ಮೈಸೂರು ಆಕಾಶವಾಣಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಅನೇಕ ಕ್ಷೇತ್ರಗಳಿಗೆ ವಿಶಿಷ್ಟವಾದ ಕೊಡುಗೆಗಗಳನ್ನು ನೀಡಿದ ಇವರು ಆಕಾಶವಾಣಿಯನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೆ ಇನ್ನಿತರ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ೧೯೩೫ ರಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಿದ ರೇಡಿಯೊ ಕೇಂದ್ರ ಇಡೀ ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರು ವರ್ಷಗಳ ಕಾಲ ಡಾ.ಎಂ.ವಿ. ಗೋಪಾಲಸ್ವಾಮಿ ಅವರು ಆಕಾಶವಾಣಿಯನ್ನು ತಮ್ಮ ಸ್ವಂತ ಖರ್ಚಿನಿಂದ ನಿಭಾಯಿಸಿದರು. ಅನಂತರದಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಾಗಿ ಆಕಾಶವಾಣಿಯನ್ನು ನಿರ್ವಹಿಸುವುದು ಕಷ್ಟವಾಯಿತು. ಆದರೆ, ಅವರಿಗೆ ತಾವು ಆರಂಭಿಸಿದ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ವಿಶ್ವಾಸವಿದ್ದ ಕಾರಣ ಅದರ ಆಡಳಿತವನ್ನು ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಆಕಾಶವಾಣಿ ಮುಂದುವರೆಯುವಂತೆ ನೋಡಿಕೊಂಡರು. ನಂತರ ೧೯೪೨ರ ಜನವರಿ ೧ ನೇ ತಾರೀಖಿನಿಂದ ಮಹಾರಾಜರ ಪ್ರಾಂತೀಯ ಸರ್ಕಾರವು ಆಕಾಶವಾಣಿ ಸಂಸ್ಥೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ವಹಿಸಿಕೊಂಡಿತು. ೧೯೪೨ ರಿಂದ ೧೯೪೩ನೇ ಇಸವಿಯ ಆಗಸ್ಟ್ ೨ ನೇ ತಾರೀಖಿನವರೆಗೆ ಡಾ.ಎಂ.ವಿ.ಗೋಪಾಲಸ್ವಾಮಿ ಅವರನ್ನು ನಿರ್ದೇಶಕರನ್ನಾಗಿ ಸಂಸ್ಥೆಯೊಟ್ಟಿಗೆ ಇರಿಸಿಕೊಳ್ಳಲಾಯಿತು. ಗೋಪಾಲಸ್ವಾಮಿಯವರ ನಂತರ ಅವರ ಸಹೋದ್ಯೋಗಿ ಪ್ರೊಫೆಸರ್ ಎನ್. ಕಸ್ತೂರಿ ಅವರನ್ನು 'ಸಹಾಯಕ ನಿಲ್ದಾಣ ಅಧೀಕ್ಷಕರು' ಎಂಬ ಹುದ್ದೆಯೊಂದಿಗೆ ಪೂರ್ಣ ಸಮಯದ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ವಿಭಿನ್ನತೆಯನ್ನು ಮೈಗೂಡಿಸಿಕೊಂಡಿದ್ದ ಹಾಗೂ ಸದಾ ಕ್ರಿಯಾಶೀಲರಾಗಿರುತ್ತಿದ್ದ ಕಸ್ತೂರಿಯವರ ಮಾರ್ಗದರ್ಶನದಲ್ಲಿ ರೇಡಿಯೋ ಕೇಂದ್ರವು ಮುಂದುವರೆಯಿತು. ಕಸ್ತೂರಿಯವರ ಅವಧಿಯಲ್ಲಿಯೇ ಅಖಿಲ ಭಾರತ ರೇಡಿಯೊವನ್ನು ಆಕಾಶವಾಣಿ ಎಂದು ಮರುನಾಮಕರಣ ಮಾಡಲಾಯಿತು. ಆಕಾಶವಾಣಿ ಎಂಬ ಹೆಸರು ರೇಡಿಯೋ ಸಂಸ್ಥೆಗೆ ಸಿಕ್ಕ ಅತ್ಯಂತ ಸೂಕ್ತವಾದ ಹೆಸರಾಗಿರುವುದಲ್ಲದೇ, ಕಡಿಮೆ ಅವಧಿಯಲ್ಲಿ ಜನರನ್ನು ತಲುಪಿ ಎಲ್ಲರ ಮನಗೆದ್ದಿತು. ಅಖಿಲ ಭಾರತ ರೇಡಿಯೋ ಸಂಸ್ಥೆಯು ಭಾರತ ಸರ್ಕಾರದ ಆಡಳಿತಾತ್ಮಕ ವ್ಯಾಪ್ತಿಗೆ ಬಂದ ನಂತರ ಎಲ್ಲಾ ರೇಡಿಯೊ ಕೇಂದ್ರಗಳು 'ಆಕಾಶವಾಣಿ’ ಎಂಬ ಹೆಸರನ್ನು ಅಧಿಕೃತವಾಗಿ ಬಳಸುತ್ತಿವೆ ಹಾಗೂ ಈ ಸುಂದರ ಹೆಸರನ್ನು ದೇಶದ ಎಲ್ಲಾ ರೇಡಿಯೊ ಕೇಂದ್ರಗಳಿಗೆ ಸಾಲ ನೀಡಿದ ಶ್ರೇಯಸ್ಸು ಮೈಸೂರು ಆಕಾಶವಾಣಿಗೆ ಸೇರಿದೆ. ಆಕಾಶವಾಣಿಯ ಹುಟ್ಟು, ಬೆಳವಣಿಗೆ ಹಾಗೂ ಪ್ರಭಾವವನ್ನು ನೋಡಿದಾಗ ಗೋಪಾಲಸ್ವಾಮಿಯವರ ಆಸಕ್ತಿ, ಉತ್ಸಾಹ, ಕಠಿಣ ಪರಿಶ್ರಮ ಹಾಗೂ ಸಮಾಜಕ್ಕೆ ಹೊಸತನದ ಸಾಧ್ಯತೆಗಳನ್ನು ತೆರೆದಿಡುವ ದೂರದೃಷ್ಟಿತ್ವ ಹೊಂದಿದ ವ್ಯಕ್ತಿತ್ವದ ಅನಾವರಣ ಆಗುತ್ತದೆ.[]

ಪರಿಚಯ

[ಬದಲಾಯಿಸಿ]

ಮನೋವಿಜ್ಞಾನದ ಪ್ರಾಧ್ಯಾಪಕರಾಗಿ, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಗೋಪಾಲಸ್ವಾಮಿಯವರು ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಛಾಪು ಮೂಡಿಸಿದ ವ್ಯಕ್ತಿ. ಡಾ.ಎಂ.ವಿ.ಗೋಪಾಲಸ್ವಾಮಿಯವರು ತಮ್ಮ ಮೊದಲ ಶಿಕ್ಷಣವನ್ನು ಮದ್ರಾಸಿನಲ್ಲಿ ಮುಗಿಸಿ, ಲಂಡನ್ನಿನಲ್ಲಿ ಪ್ರಖ್ಯಾತ ಮನಶಾಸ್ತ್ರಜ್ಞ ಡಾ. ಸ್ಪಿಯರ್‌ಮನ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದರು. ದೇಶಪ್ರೇಮ ಮತ್ತು ಮಾತೃಭೂಮಿಯೆಡೆಗಿನ ಆಕರ್ಷಣೆ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದ ಪ್ರೊಫೆಸರ್ ಹುದ್ದೆಗೆ ಬರುವಂತೆ ಮಾಡಿತು. ಅನಂತರ ಅವರು ಪ್ರಾಯೋಗಿಕ ಮನಶಾಸ್ತ್ರ ವಿಭಾಗನ್ನು ಆರಂಭಿಸಿ, ಇದು ದೇಶಾದ್ಯಂತ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಅದರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರ ಕ್ರಿಯಾಶೀಲತೆಯು ವಿಶ್ವವಿದ್ಯಾನಿಲಯ ಪರಿಸರದ ಹೊರಗೂ ವಿವಿಧ ಕ್ಷೇತ್ರಗಳಲ್ಲಿ ಅಭಿವ್ಯಕ್ತಿ ಪಡೆಯಿತು. ಡಾ.ಎಂ.ವಿ.ಗೊಪಾಲಸ್ವಾಮಿಯವರ ಆದರ್ಶಗಳು ಮಹೋನ್ನತವಾಗಿದ್ದವು. ಶಿಶುಗಳಾಗಿರುವಾಗಲೇ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿಸಬಹುದೆಂಬ ತಮ್ಮ ಕನಸನ್ನು ನನಸಾಗಿಸಲು ಶಿಶುವಿಹಾರವನ್ನು ಪ್ರಾರಂಭಿಸಿದರು. ಶಿಶುವಿಹಾರದಲ್ಲಿ ಡಾ. ಎಂ.ವಿ.ಗೋಪಾಲಸ್ವಾಮಿಯವರು ಹಚ್ಚಿದ ಜ್ಞಾನದೀಪ ಇನ್ನೂ ಬೆಳಗುತ್ತಿದೆ. ಡಾ.ಎಂ.ವಿ.ಗೋಪಾಲಸ್ವಾಮಿಯವರ ಎಂಬತ್ತನೆಯ ವರ್ಷದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಸ್ವಾತಂತ್ರ‍್ಯ ಪೂರ್ವದ ದಶಕಗಳಲ್ಲಿ ಶಿಕ್ಷಣ ಹಾಗೂ ಜನಸೇವೆಯಲ್ಲಿ ಹೆಸರಾದ ಡಾ.ಎಂ.ವಿ. ಗೋಪಾಲಸ್ವಾಮಿಯವರಿಗೆ ಸ್ಮಾರಕಪ್ರಾಯವಾಗಿ ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.

ಸಾಧನೆ

[ಬದಲಾಯಿಸಿ]
  1. ಆಕಾಶವಾಣಿ: ತಮ್ಮ ಮನೆಯಲ್ಲಿ ೧೯೫೨ರಲ್ಲಿ ಆಕಾಶವಾಣಿಯನ್ನು ಪ್ರಾರಂಭಿಸಿದರು.
  2. ಶಿಶುವಿಹಾರ : ೧೯೨೮ರಲ್ಲಿ ಹೊಸ ಮಾದರಿಯ ಶಿಕ್ಷಣ ನೀಡುವ ಉದ್ದೇಶದೊಂದಿಗೆ ನೂತನ ಪರಿಕಲ್ಪನೆಯೊಂದಿಗೆ ಶಿಶುವಿಹಾರವನ್ನು ಆರಂಭಿಸಿದರು.
  3. ಬಹು ಆಯ್ಕೆಯ ಪ್ರಶ್ನೆಗಳು : ಪರೀಕ್ಷಾ ವ್ಯವಸ್ಥೆಯಲ್ಲಿ ನವೀನ ಮಾದರಿ ಪ್ರಶ್ನೆಗಳನ್ನು ಸೇರಿಸುವ ಸಲುವಾಗಿ ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಿದರು.
  4. ನಿಮ್ಹಾನ್ಸ್ : ಮೈಸೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಬಳಿಕ ಬೆಂಗಳೂರು ಹುಚ್ಚಾಸ್ಪತ್ರೆಯಲ್ಲಿ ಮನಶಾಸ್ತ್ರ, ಸಂಶೋಧನಾ ವಿಭಾಗ ಆರಂಭಿಸಿ ಅದು ಸುಪ್ರಸಿದ್ದ ಚಿಕಿತ್ಸಾ ಸಂಶೋಧನಾ ಸಂಸ್ಥೆಯಾಗಿ ಹೆಸರು ಮಾಡುವಂತೆ ಬೆಳೆಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. "Music In The AIR". starofmysore.com. Retrieved 26 April 2020.


  1. http://airmysuru.com/dr-m-v-gopalaswamy-
  2. http://uni-mysore.ac.in/english-version/psychology
  3. https://churumuri.blog/2010/11/15/who-really-named-all-india-radio-as-akashvani/
  4. http://gsipuc.com/ Archived 2019-07-20 ವೇಬ್ಯಾಕ್ ಮೆಷಿನ್ ನಲ್ಲಿ.