ಎಂ. ಪ್ರಭಾಕರ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಂ. ಪ್ರಭಾಕರ್ | |
---|---|
ಜನನ | ಏಪ್ರಿಲ್ ೧೫, ೧೯೨೨ ಭಟ್ಕಳ |
ವೃತ್ತಿ | ಸುಗಮ ಸಂಗೀತ ಗಾಯಕರು |
ಎಂ. ಪ್ರಭಾಕರ್ ಅವರು (ಏಪ್ರಿಲ್ ೧೫, ೧೯೨೨) ಸುಗಮ ಸಂಗೀತ ಕಲಾವಿದರಾಗಿ ಮತ್ತು ಆಕಾಶವಾಣಿಯ ಗಾಯನ ಕಲಾವಿದರಾಗಿ ಕನ್ನಡನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ.
ಜೀವನ
[ಬದಲಾಯಿಸಿ]ಸುಗಮ ಸಂಗೀತ ಕ್ಷೇತ್ರದ ಮಹಾನ್ ಗಾಯಕರೆನಿಸಿರುವ ಎಂ. ಪ್ರಭಾಕರ್ ಅವರು ಕನ್ನಡ ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಕಲಾವಿದರ ಕುಟುಂಬದಲ್ಲಿ ಏಪ್ರಿಲ್ ೧೫, ೧೯೨೨ರ ವರ್ಷದಲ್ಲಿ ಜನಿಸಿದರು. ಇವರ ಒಡಹುಟ್ಟಿದವರೆಲ್ಲಾ ಒಬ್ಬರಿಗಿಂತ ಒಬ್ಬರು ಕಲೆಯಲ್ಲಿ ಪ್ರಚಂಡರು. ಪ್ರಭಾಕರ್ ಅವರ ತಂದೆ ಎಂ. ರಂಗರಾವ್ ಅವರು ಸಂಗೀತ, ಸಾಹಿತ್ಯ, ಅಭಿನಯ ಹಾಗೂ ಚಿತ್ರಕಲೆಯಲ್ಲಿ ಅಭಿರುಚಿ ಉಳ್ಳವರು. ಹೀಗಿದ್ದೂ ರಂಗರಾಯರಿಗೆ ಜೀವನವೆಂಬ ರಂಗದಲ್ಲಿ ಒಂದು ಭದ್ರನೆಲೆ ಇರಲಿಲ್ಲ. ಕುಟುಂಬವೋ ಹತ್ತು ಮಕ್ಕಳಿಂದ ತುಂಬಿ ತುಳುಕಿತ್ತು. ಈ ದೊಡ್ಡ ಸಂಸಾರದ ಹೊರೆ ಶಾಲಾ ಶಿಕ್ಷಕಿಯಾಗಿದ್ದ ತಾಯಿ ಕಾವೇರಿಬಾಯಿಯವರ ಮೇಲೆ ಇದ್ದಿತ್ತು. ಹೀಗೆ ಈ ಕುಟುಂಬದ ಬದುಕಿನ ದೋಣಿ ಕಷ್ಟಕೋಟಲೆಗಳ ನಡುವೆ ತೇಲುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ 4ನೆಯ ತರಗತಿಯ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿದ ಪ್ರಭಾಕರ್ ಅವರು ತಮ್ಮ ತಂದೆ ರಂಗರಾವ್ ಮತ್ತು ಅಣ್ಣ ವಿಮಲಾನಂದದಾಸ್ ಅವರ ಜೊತೆ ಊರಿಗೆ ಬಂದನಾಟಕ ಮಂಡಲಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಒಡಹುಟ್ಟಿದ ಪ್ರತಿಭಾವಂತರು
[ಬದಲಾಯಿಸಿ]ಎಂ. ಪ್ರಭಾಕರ್ ಅವರಿಗೆ ಚಿಕ್ಕಂದಿನಿಂದಲೇ ಹಾಡುವ ಗೀಳು ಅಂಟಿಕೊಂಡಿತ್ತು. ಸಂಗೀತದ ಆಸಕ್ತಿ ಅವರಿಗೆ ಹುಟ್ಟಿನಿಂದಲೇ ಬಂದಿತ್ತು. ನಾಟಕಗಳಲ್ಲಿ ಅಣ್ಣನಿಗೆ ಹಾರ್ಮೋನಿಯಂ ನುಡಿಸುವುದು, ಹಾಡಾವುದು ಅವರ ಪರಿಪಾಠವಾಯಿತು. ಪ್ರಭಾಕರ್ ಅವರ ಹಿರಿಯ ಅಣ್ಣ ವಿಮಲಾನಂದದಾಸರು ಪ್ರಖ್ಯಾತ ಕೀರ್ತನಕಾರರು. ಮತ್ತೊಬ್ಬ ಅಣ್ಣ ಜಗನ್ನಾಥರಾವ್ ಅವರು ಹಾರ್ಮೋನಿಯಂ ತಯಾರಕರು. ಈಗಲೂ ಪ್ರಭಾಕರ್ ಅವರ ಹತ್ತಿರ ಎಂಭತ್ತು ವರ್ಷಕ್ಕೂ ಹಿಂದಿನ ಹಳೆಯ ಹಾರ್ಮೋನಿಯಂ ಇದೆ. ಇಬ್ಬರು ಸಹೋದರಿಯರಾದ ಪಂಡರಿಬಾಯಿ ಮತ್ತು ಮೈನಾವತಿಯವರು ಚಿತ್ರಲೋಕದಲ್ಲಿ ಮಿನುಗಿದ ತಾರೆಯರು. ಹೀಗೆ ಕಲೆಯಲ್ಲಿ ಬಹಳ ಶ್ರೀಮಂತವಾದ ಕುಟುಂಬ ಇವರದು.
ಸಂಗೀತ ಶಿಕ್ಷಣ
[ಬದಲಾಯಿಸಿ]ಅಂದಿಂದ ದಿನಗಳಲ್ಲಿ ಸುಗಮ ಸಂಗೀತದ ಮಹಾನ್ ಗಾಯಕರಾದ ಶ್ರೀಮಾನ್ ಕಾಳಿಂಗರಾಯರು ನಾಟಕ ಕಂಪೆನಿಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಹಾಡುಗಳನ್ನು ಹಾಡುತ್ತಿದ್ದರು. ಪ್ರಭಾಕರ್ ಅವರಿಗೆ ಕಾಳಿಂಗರಾಯರ ಜೊತೆಗೆ ಬೆಳೆದು ಬಂದ ಸ್ನೇಹ ಮುಂದೆ ಸುಗಮಸಂಗೀತ ಕ್ಷೇತ್ರದಲ್ಲಿ ಉಪಯೋಗಕ್ಕೆ ಬಂತು. ಪ್ರಭಾಕರ್ ಅವರು ನಾಟಕ ಮಂಡಲಿಯ ಜೊತೆ ರಾಜ್ಯದೆಲ್ಲೆಡೆ ಪ್ರಯಾಣ ಮಾಡಿ ರಂಗಗೀತೆಗಳು, ದೇವರನಾಮಗಳು ಹಾಗೂ ಕೀರ್ತನೆಗಳನ್ನು ಹಾಡಿ ಜನಮೆಚ್ಚುಗೆ ಪಡೆದರು. ಹೀಗೇ ತಿರುಗೀ ತಿರುಗೀ ಬೇಸರ ಬಂದಿತ್ತು. ಹಾಗೆಯೇ ಸಂಗೀತವನ್ನು ಗುರುವಿನ ಮಾರ್ಗದರ್ಶನದಲ್ಲಿ ಕಲಿಯಬೇಕೆಂಬ ಹಂಬಲವೂ ಜೊತೆಗೂಡಿ ಶಿವಮೊಗ್ಗೆಗೆ ಬಂದರು. ಸಂಗೀತ ವಿದ್ವಾನ್ ಬಿ.ಎಸ್. ರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಪ್ರಭಾಕರ್ ಮುಂದೆ ಬೆಂಗಳೂರಿನ ವಿದ್ವಾನ್ ಎಲ್.ಎಸ್. ನಾರಾಯಣ ಸ್ವಾಮಿ ಭಾಗವತರಲ್ಲಿ ಪ್ರೌಢ ಶಿಕ್ಷಣ ಪಡೆದರು. ಪ್ರಭಾಕರ್ ಅವರ ಆಸ್ತಿ ಅವರ ಸಿರಿಕಂಠ ಮತ್ತು ಭಾವಪೂರ್ಣ ಹಾಡುಗಾರಿಕೆ. ತಾವು ಭಾವಪರವಶರಾಗಿ ಹಾಡುತ್ತಿದ್ದಾಗ ಕಣ್ಣೀರಿಡುತ್ತಿದ್ದ ಸಭಿಕರು, ಪಿಟೀಲನ್ನು ಕೆಳಗಿಟ್ಟು ಕಣ್ಣೊರೆಸಿಕೊಳ್ಳುತ್ತಿದ್ದ ಪಕ್ಕವಾದ್ಯದವರನ್ನು ಅಭಿಮಾನದಿಂದ ನೆನೆಯುತ್ತಾರೆ.
ಸಂಗೀತ ಪಾಠದ ಮೇಷ್ಟ್ರು
[ಬದಲಾಯಿಸಿ]ಕಲಿತಿದ್ದ ಸಂಗೀತವನ್ನು ಜೀವನಾಧಾರವಾಗಿಸಿಕೊಂಡ ಪ್ರಭಾಕರ್ ಅವರು, ಶಿಷ್ಯರಿಗೆ ಧಾರೆಯೆರೆಯಲು ಪ್ರಾರಂಭಿಸಿದರು. ಹಿಂದುಸ್ತಾನಿ ಶೈಲಿಯಲ್ಲಿ ಆಸಕ್ತಿ ಮೂಡಿ ಬೊಂಬಾಯಿಗೆ ಪ್ರಯಾಣ ಬೆಳೆಸಿದರು. ಸಂಗೀತ ಪಾಠಗಳನ್ನು ಮಾಡಿ ಜೀವನ ಸಾಗಿಸಿದರು. ಒಬ್ಬ ಪ್ರಸಿದ್ಧ ಗವಾಯಿಗಳ ಬಳಿ ಕಲಿಯಲು ವಿಚಾರಿಸಿದಾಗ ಪಾಠಕ್ಕೆ ೩೦ ರೂಪಾಯಿಗಳು ಎಂದಾಗ ಜೀವನವೇ ಕಷ್ಟಕರವಾಗಿದ್ದಾಗ ಅದು ಬಹಳ ದುಬಾರಿ ಎನಿಸಿ ಆ ಕನಸನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿದರು. ನಂತರ ತಾವೇ ಪುಸ್ತಕಗಳನ್ನು ಕೊಂಡು ಕೀರ್ತನೆಗಳನ್ನು, ವರ್ಣಗಳನ್ನು ಕಲಿತರು. ಸಂಗೀತ ಪಾಠವನ್ನು ವೃತ್ತಿಯನ್ನಾಗಿ ಸ್ವೀಕರಿಸಿದರು. ಕಲಿಯುವಿಕೆಗಿಂತ ಯಾವುದೋ ಸಂಸ್ಕಾರ ನನ್ನನ್ನು ಹಾಡಲು ಪ್ರೇರೇಪಿಸಿದೆ ಎನ್ನುತ್ತಿದ್ದರು.
ಆಕಾಶವಾಣಿಯಲ್ಲಿ
[ಬದಲಾಯಿಸಿ]ಆಕಾಶವಾಣಿ ಪ್ರಾರಂಭವಾದ ದಿನಗಳಲ್ಲಿ ಪ್ರಭಾಕರ್ ಅವರು ಕೀರ್ತನೆಗಳು ಹಾಗೂ ದೇವರನಾಮಗಳನ್ನು ಹಾಡುತ್ತಿದ್ದರು. ರಾಜ್ಯದೆಲ್ಲೆಡೆ ಹಾಗೂ ಮುಂಬಯಿ, ಚೆನ್ನೈ, ಆಂಧ್ರಪ್ರದೇಶ, ಕೇರಳ ಎಲ್ಲ ಕಡೆ ಅನೇಕ ಬಾರಿ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿದರು. ಆಗ ಗೋಟುವಾದ್ಯ ಕಲಾವಿದರಾಗಿದ್ದ ವರಾಹಸ್ವಾಮಿ ಅವರು "ನಿನ್ನ ಶಾರೀರ ಬಹಳ ಚೆನ್ನಾಗಿದೆ ಬಹಳ ಅನುಭವಿಸಿ ಹಾಡುತ್ತೀಯ ಕನ್ನಡ ಗೀತೆಗಳನ್ನು ಹಾಡು" ಎಂದು ಪ್ರೇರೇಪಿಸಿದರು. ಹೀಗೆ ಸುಗಮ ಸಂಗೀತ ಹಾಡಲು ಪ್ರಾರಂಭಿಸಿದ ಇವರು ದೊರೆಸ್ವಾಮಿ ಅಯ್ಯಂಗಾರ್, ಎಂ.ಡಿ. ಪಾರ್ಥಸಾರಥಿ, ಎ.ವಿ.ಕೃಷ್ಣಮಾಚಾರ್, ಎಚ್.ಆರ್. ಲೀಲಾವತಿ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಕನ್ನಡಗೀತೆಗಳನ್ನು ಹಾಡಿದರು. ಹಾಗೆಯೇ ಸ್ವತಃ ತಾವೂ ಕೂಡ ರಾಗಸಂಯೋಜನೆ ಮಾಡತೊಡಗಿದರು. ಕುವೆಂಪು ಅವರ ಗೀತೆಗಳು ಇವರಿಗೆ ಬಹಳ ಅಚ್ಚುಮೆಚ್ಚು. ಹೀಗೆ ಇವರ ಕಂಠಶ್ರೀಯಿಂದ ಹೊರಹೊಮ್ಮಿದ ಹಾಡುಗಳಿಗೆ ಲೆಕ್ಕವಿಲ್ಲ. ‘ನೂರು ಸಲ ಜುಮ್ಮೆನುವುದೀ ಮನ’, ‘ನೀ ಬರುವ ದಾರಿಯಲಿ’, ‘ಅಧರದಿ ನಸುನಗೆ’, ‘ಪಡುವಣ ಬಾನಿನ ನೀಲಿಯ ಹಣೆಯಲಿ’, ಶುಭನುಡಿಯೆ ಶಕುನದ ಹಕ್ಕಿ’, ‘ಹಾಡು ಹಳೆಯದಾದರೇನು ಭಾವ ನವನವೀನ’, ‘ನಗುನಗುತ ಹಗುರವಾಗು’, ‘ಕವಿದ ಕತ್ತಲೆಯಲ್ಲಿ ಕೈಹಿಡಿದು ನಡೆಸಯ್ಯ’ ಹೀಗೆ ಇವರ ಕಂಠ ಸಿರಿಯಿಂದ ಹೊಮ್ಮಿದ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೆಚ್.ಆರ್. ಲೀಲಾವತಿಯವರೊಂದಿಗೆ ಎನ್.ಕೆ. ಕುಲಕರ್ಣಿ ಅವರ ಕವನಗಳನ್ನಾಧರಿಸಿದ ‘ನವತಾರಾ ಮಂಡಲ’ ಎಂಬ ಸಂಗೀತ ರೂಪಕದಲ್ಲಿ ಮತ್ತು ಎಚ್. ಆರ್. ಲೀಲಾವತಿಯವರ ಸಂಗೀತ ನಿರ್ದೇಶನದಲ್ಲಿ ‘ವರ್ಷ ವೈಭವ’ ಎಂಬ ಸಂಗೀತ ರೂಪಕದಲ್ಲಿ ಎಚ್.ಆರ್. ಹಾಡಿ ಜನಮನ್ನಣೆಯನ್ನು ಪಡೆದರು. ಪ್ರಭಾಕರ್ ಅವರ ಕಂಠದ ವಿಶೇಷತೆಯೆಂದರೆ ಅದು ಎಷ್ಟು ಗಂಭೀರತೆಯಿಂದ ಹೊರಹೊಮ್ಮುತ್ತದೆಯೋ ಅಷ್ಟೇ ನವುರಾದ ನುಡಿಕಾರಗಳನ್ನು ಸ್ಫುರಿಸುತ್ತದೆ. ಡಿ.ಎಸ್.ಕರ್ಕಿ ಅವರ ಕವನದ ಸಾಲು "ಎಲ್ಲಿಹುದೆನಲೇಕೆ ಜೇನು? ನೀ ಪಾನಗೈಯಲು ಬಲ್ಲೆಯಾದರೆ ಜಾಣ ಎಲ್ಲೆಲ್ಲೂ ಇಹುದದು" ಅವರಿಗೆ ತುಂಬಾ ಪ್ರಿಯವಾದದ್ದು.
ರಾಗಸಂಯೋಜನೆ
[ಬದಲಾಯಿಸಿ]ಪ್ರಭಾಕರ್ ಅವರ ರಾಗಸಂಯೋಜನೆಯಲ್ಲಿ ಶಾಸ್ತ್ರೀಯ ಸಂಗೀತದ ಸೊಗಡು ಎದ್ದು ಕಾಣುತ್ತದೆ. ಸಾಮಾನ್ಯವಾಗಿ ಒಂದು ಹಾಡು ಒಂದೇ ರಾಗವನ್ನು ಅವಲಂಬಿಸಿರುತ್ತದೆ. ಹಿಂದುಸ್ತಾನಿ ರಾಗಗಳು ಕೂಡ ಅಲ್ಲೊಮ್ಮೆ, ಇಲ್ಲೊಮ್ಮೆ ಕಾಣಸಿಗುತ್ತದೆ. ಸಾಹಿತ್ಯ ಮತ್ತು ಭಾವಪೂರ್ಣ ಹಾಡುಗಾರಿಕೆಗಳು ಸುಗಮಸಂಗೀತದ ಮುಖ್ಯ ಅಂಶಗಳು. ಉನ್ನತ ಮಟ್ಟದ ಸಾಹಿತ್ಯ ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಸಾಹಿತ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡು ನಿಧಾನವಾಗಿ ಮೆಲುಕು ಹಾಕಿದಾಗ ಸಂಗೀತ ತಂತಾನೇ ಹೊರಬರುತ್ತದೆ. ಭಾವವಿಲ್ಲದ ಹಾಡು ಹಾಡಲ್ಲ ಎಂಬುದು ಪ್ರಭಾಕರ್ ಅವರ ನಿಲುವು
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಸರಳ, ಸಾತ್ವಿಕ ಜೀವಿಯಾದ ಪ್ರಭಾಕರ್ ಅವರಿಗೆ ಪ್ರಶಸ್ತಿ. ಪುರಸ್ಕಾರಗಳು ತಾವಾಗಿಯೇ ಅರಸಿಕೊಂಡು ಬಂದವು. ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡೂ ಕ್ಷೇತ್ರಗಳಲ್ಲಿ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವುಗಳಲ್ಲಿ ಪ್ರಮುಖವಾಗಿ ೧೯೮೦ರಲ್ಲಿ ಮೈಸೂರಿನಲ್ಲಿ ದಿ.ಡಾ.ಬಿ. ದೇವೇಂದ್ರಪ್ಪನವರು ಪ್ರಭಾಕರ್ ಅವರಿಗೆ ‘ಗಾಯಕ ರತ್ನ’ ಎಂಬ ಬಿರುದನ್ನು ನೀಡಿ ಆಶೀರ್ವದಿಸಿದ್ದಾರೆ. ೧೯೮೬ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು ಶಿವಮೊಗ್ಗೆಯಲ್ಲಿ ನಡೆದ ಸಂಗೀತ ವಿದ್ವಾಂಸರ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾನಿಸಿದೆ. ೧೯೮೮-೮೯ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಹಾಗೂ ೨೦೦೧ನೇ ಸಾಲಿನ ಸುಗಮಸಂಗೀತದ ಅತ್ಯುನ್ನತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್ ಪ್ರಶಸ್ತಿಗಳೇ ಅಲ್ಲದೆ, ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ಬಿರುದು ಬಾವಲಿಗಳನ್ನು ನೀಡಿ ಗೌರವಿಸಿವೆ.
ಪ್ರತಿಭಾವಂತ ಶಿಷ್ಯವರ್ಗ
[ಬದಲಾಯಿಸಿ]ದೀರ್ಘಾವಧಿಯ ಸಂಗೀತ ಶಿಕ್ಷಕ ವೃತ್ತಿಯಿಂದಾಗಿ ನೂರಾರು ಜನ ಶಿಷ್ಯರನ್ನು ತಯಾಸಿದ ಕೀರ್ತಿ ಪ್ರಭಾಕರ್ ಅವರದು. ಸುಗಮ ಸಂಗೀತದಲ್ಲಿ ಇವರ ಪ್ರಮುಖ ಶಿಷ್ಯರೆಂದರೆ ಬಿ.ಕೆ. ಸುಮಿತ್ರ, ಆರ್. ರಮಾದೇವಿ, ಕಸ್ತೂರಿ ಶಂಕರ್ ಹಾಗೂ ಶಿವಮೊಗ್ಗ ಸುಬ್ಬಣ್ಣ.. ಈ
ಪರಿಪೂರ್ಣ ಕಲಾವಿದ
[ಬದಲಾಯಿಸಿ]ಮಧುರ ಗಾನ ಪ್ರವೀಣ ಎಂಬ ಬಿರುದಿಗೆ ಪಾತ್ರರಾದ, ಗಾಯಕರಾಗಿ ರಾಗಸಂಯೋಜಕರಾಗಿ ಹಾಗೂ ಶಿಕ್ಷಕರಾಗಿ ಎಲ್ಲದಕ್ಕೂ ಮಿಗಿಲಾಗಿ ಒಬ್ಬ ಸಹೃದಯಿ ಮಾನವರಾಗಿ ಸುಗಮಸಂಗೀತ ಕ್ಷೇತ್ರದ ಅಗ್ರಗಣ್ಯ ಕಲಾವಿದರಲ್ಲಿ ಒಬ್ಬರಾದ ಪ್ರಭಾಕರ್ ರವರು ಒಬ್ಬ ಪರಿಪೂರ್ಣ ಕಲಾವಿದರೆನಿಸಿದ್ದಾರೆ.
ಮಾಹಿತಿ ಕೃಪೆ
[ಬದಲಾಯಿಸಿ]ಪುಸ್ತಕ: ಕಲಾ ಚೇತನ (ಸಂಪಾದಿತ), ಲೇಖಕರು: ರೋಹಿಣಿ ಮೋಹನ್, ಪ್ರಕಾಶಕರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ