ವಿಷಯಕ್ಕೆ ಹೋಗು

ಎಂ. ಎಸ್. ಉಮೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಎಸ್. ಉಮೇಶ್
Bornಏಪ್ರಿಲ್ ೨೨, ೧೯೪೫
ಮೈಸೂರು
Occupationರಂಗಭೂಮಿ ಮತ್ತು ಚಲನಚಿತ್ರ ನಟ
Years active೧೯೪೮ – ಪ್ರಸಕ್ತದವರೆಗೆ


ಎಂ. ಎಸ್. ಉಮೇಶ್ (ಏಪ್ರಿಲ್ ೨೨, ೧೯೪೫) ಕನ್ನಡ ವೃತ್ತಿ ರಂಗಭೂಮಿ ಮತ್ತು ಚಲನಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದರು. “ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ..... ಹೇಳ್ಕೊಳ್ಳೋಣ ಅಂದ್ರೆ ನನ್ಹೆಂಡ್ತಿ ಕೂಡಾ ಊರಲ್ಲಿಲ್ವೆ..” ಹೀಗೆ ತಮ್ಮ ಅಸಾಮಾನ್ಯ ರೀತಿಯ ಸಂಭಾಷಣೆ, ಅಭಿನಯ, ಅಭಿವ್ಯಕ್ತಿಗಳಿಂದ ಕನ್ನಡ ಚಿತ್ರರಸಿಕರ ಮನವನ್ನು ಇನ್ನಿಲ್ಲದಂತೆ ಗೆದ್ದವರು ಎಂ. ಎಸ್. ಉಮೇಶ್.

ಉಮೇಶ್‌ರವರು ಏಪ್ರಿಲ್ ೨೨, ೧೯೪೫ರ ವರ್ಷದಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಎ.ಎಲ್. ಶ್ರೀಕಂಠಯ್ಯ, ತಾಯಿ ನಂಜಮ್ಮ. ತೊಟ್ಟಿಲು ಕೂಸಾಗಿದ್ದಾಗಲೇ ರಂಗಪ್ರವೇಶಿಸಿದ್ದರಿಂದ ರಂಗಭೂಮಿಯತ್ತ ಒಲವು ಅವರಿಗೆ ಹುಟ್ಟಿನಿಂದಲೇ ಬಂತು. ಬಾಲ ಪಾತ್ರಗಳಲ್ಲಿ ತನ್ಮಯತೆಯಿಂದ ಅಭಿನಯಿಸಿದವರು ಉಮೇಶ್. ದೃಶ್ಯಕ್ಕೆ ತಕ್ಕಂತೆ ಮೂಡ್ ಬರಿಸಲು ಕಲ್ಲು ಸಕ್ಕರೆ ಆಸೆ ತೋರಿಸಿ ಬಾಲಪಾತ್ರಗಳಲ್ಲಿ ಅವರಿಗೆ ಅಭಿನಯಿಸಲು ಪ್ರಚೋದನೆ ನೀಡಲಾಗುತ್ತಿತ್ತಂತೆ.

ನಾಟಕ ರಂಗದಲ್ಲಿ

[ಬದಲಾಯಿಸಿ]

ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ಅ.ನ.ಕೃ. ರವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರ ಉಮೇಶ್ ಅವರಿಗೆ ಬುದ್ಧಿ ಬಂದ ನಂತರದ ಮೊದಲ ಅನುಭವದ ಪಾತ್ರ. ಇದಕ್ಕೆ ಮೊದಲೇ ಅವರು ಹಲವಾರು ನಾಟಕಗಳಲ್ಲಿ ಬಾಲನಟನ ಪಾತ್ರವಹಿಸಿದ್ದರು. ಗುಬ್ಬಿ ವೀರಣ್ಣನವರ ಕಂಪನಿಯಲ್ಲೂ ಅವರಿಗೆ ಬಾಲನಟನ ಪಾತ್ರಗಳು ದೊರಕಿದವು. ದಶಾವತಾರ ನಾಟಕದಲ್ಲಿ ಇವರ ಪ್ರಹ್ಲಾದನ ಪಾತ್ರದ ಅಭಿನಯವನ್ನು ಮೆಚ್ಚಿದ ಮಾಸ್ತಿಯವರು ಹತ್ತು ರೂಪಾಯಿ ಸಂಭಾವನೆ ನೀಡಿದ್ದರು. ಗುಬ್ಬಿ ವೀರಣ್ಣನವರು ಇವರು ಬಾಲ್ಯದಲ್ಲಿದ್ದಾಗ ರಂಗ ಶಿಕ್ಷಣ ಕೊಡುತ್ತ ಅಭಿನಯವನ್ನು ಕಲಿಸಿದ ಗುರುಗಳು. ಎಂ.ಸಿ.ಮಹಾದೇವ ಸ್ವಾಮಿಯವರ ಕನ್ನಡ ಥಿಯೇಟರ್ಸ್ ಕಂಪನಿಯಲ್ಲೂ ಉಮೇಶ್ ಬಾಲನಟನಾಗಿ ಪಾತ್ರವಹಿಸಿದ್ದರು.. ಉಮೇಶರಿಗೆ ನಟನೆಯ ಜೊತೆಗೆ ಹಲವಾರು ವಾದನ ಕಲೆಗಳೂ ಕರಗತವಾಗಿವೆ. ಮಾಸ್ಟರ್‌ ಹಿರಣ್ಣಯ್ಯನವರ ಕಂಪನಿಯಲ್ಲಿ ಪಿಯಾನೋ ವಾದಕರಾಗಿ, ಕುಂಚಕಲಾವಿದರಾಗಿ, ಎನ್. ಶ್ರೀಕಂಠ ಮೂರ್ತಿಗಳ ನಾಟಕ ಕಂಪನಿಯಲ್ಲಿ ಹಾರ್ಮೋನಿಯಂ ವಾದಕರಾಗಿ ಉಮೇಶ್ ಖ್ಯಾತಿ ಗಳಿಸಿದ್ದರು. ಅವರು ಹಾಡಬಲ್ಲವರು ಕೂಡಾ.

'ಮಕ್ಕಳರಾಜ್ಯ'ದಲ್ಲಿ

[ಬದಲಾಯಿಸಿ]

೧೯೫೯ರಲ್ಲಿ ಅಭಿನಯಿಸಿದ್ದ ಇವರ ಚಂದ್ರಹಾಸನ ಪಾತ್ರ ಪಡೆದ ಜನಮೆಚ್ಚುಗೆಯಿಂದ ಬಿ. ಆರ್‌.ಪಂತುಲು ಅವರ ‘ಮಕ್ಕಳ ರಾಜ್ಯ’ ಚಲನ ಚಿತ್ರಕ್ಕಾಗಿ ಪ್ರಧಾನ ಪಾತ್ರಕ್ಕೆ ಆಯ್ಕೆಯಾದರು. ಇವರನ್ನು ಹೀಗೆ ಆಯ್ಕೆಮಾಡಿದ್ದವರು ಅಂದಿನ ದಿನದಲ್ಲಿ ಪಂತುಲು ಅವರ ಸಹಾಯಕರಾಗಿದ್ದ ಎಸ್. ಆರ್ ಪುಟ್ಟಣ್ಣ ಕಣಗಾಲರು. ಈ ಮಧ್ಯೆ ನಾಟಕಕಾರ ಎಚ್.ಕೆ. ಯೋಗಣ್ಣವರ ಉದಯ ಕಲಾ ನಾಟಕ ಮಂಡಲಿಯಲ್ಲಿ ಇವರು ಕೆಲ ಕಾಲ ನಟನಾ ವೃತ್ತಿಯಲ್ಲಿದ್ದರು.

ಚಿತ್ರರಂಗದಲ್ಲಿ ಹಾಸ್ಯನಟರಾಗಿ

[ಬದಲಾಯಿಸಿ]

ಮುಂದೆ ೧೯೭೪ರಲ್ಲಿ ಉಮೇಶ್, ಪುಟ್ಟಣ್ಣ ಕಣಗಾಲರ ‘ಕಥಾ ಸಂಗಮ’ ಚಲನ ಚಿತ್ರದ ತಿಮ್ಮರಾಯಿ ಪಾತ್ರಕ್ಕಾಗಿ ಉಮೇಶ್ ಆಯ್ಕೆಯಾದರು. ಇದಾದ ನಂತರ ಅವರ ಚಿತ್ರರಂಗದ ನಂಟು ಬೆಳೆಯುತ್ತಾ ಬಂದಿತು. ಗೋಲ್ ಮಾಲ್ ರಾಧಾಕೃಷ್ಣ, ಗುರು ಶಿಷ್ಯರು ಮುಂತಾದ ಚಿತ್ರಗಳಿಂದ ಇತ್ತೀಚಿನ ವೆಂಕಟ ಇನ್ ಸಂಕಟವರೆಗಿನ ಅವರ ಪಾತ್ರಗಳನ್ನು ಮೆಚ್ಚದಿರುವವರೇ ಇಲ್ಲ. ಇದುವರೆಗೂ ೩೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಉಮೇಶರದ್ದು..

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

'ಕಥಾಸಂಗಮದ' ಎಂಬ ಮೂರು ಕಥಾನಕಗಳ ಚಿತ್ರವಾದ ಮುನಿತಾಯಿಯಲ್ಲಿ 'ತಿಮ್ಮರಾಯಿ' ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ, ೧೯೯೪ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, ೧೯೯೭ರಲ್ಲಿ ಮಹಾನಗರ ಪಾಲಿಕೆ ಪ್ರಶಸ್ತಿ. ಆತ್ಮಚರಿತ್ರೆ ‘ಬಣ್ಣದ ಘಂಟೆ’ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಉಮೇಶರನ್ನು ಅರಸಿಬಂದಿವೆ. ಉಮೇಶರ ಐದು ದಶಕಗಳ ಚಿತ್ರರಂಗದಲ್ಲಿನ ಕಾಯಕವನ್ನು ಚಿತ್ರರಂಗವು ಗೌರವಿಸಿತು.

ಬಹುಮುಖ ಪ್ರತಿಭೆ

[ಬದಲಾಯಿಸಿ]

ಉಮೇಶರು ಹಲವಾರು ಪತ್ರಿಕೆಗಳ ಅಂಕಣ ಬರಹಗಾರರೂ ಹೌದು. ಅಮ್ಮಾವರ ಆಜ್ಞೆ, ಎಲ್ಲರೂ ನಮ್ಮವರೇ ಉಮೇಶರು ರಚಿಸಿದ ನಾಟಕಗಳು. ಕಿರುತೆರೆಗೆ ಬರೆದು ನಿರ್ದೇಶಿಸಿದ್ದು ನಮ್ಮೂರಲ್ಲೊಂದು ನಾಟಕ, ಸಮಸ್ಯೆಯ ಸರಮಾಲೆ, ರಿಜಿಸ್ಟರ್‌ ಫೋಸ್ಟ್, ಅಂಚು-ಸಂಚು, ಗೌಡತಿ ಗೌರಮ್ಮ, ಸಂಸಾರದಲ್ಲಿ SOMEಕ್ರಾಂತಿ, ಜೋಕ್ಸ್‌ಫಾಲ್ಸ್, ಗಲಿಬಿಲಿ ಸಂಸಾರ ಮುಂತಾದುವು.

ಉಮೇಶ್ ಎಂದರೆ ಹಿರಿಯರಿಗೂ ಗೌರವ

[ಬದಲಾಯಿಸಿ]

ಉಮೇಶ್ ಎಂದರೆ ಹಿರಿಯ ನಟರಿಗೂ ಗೌರವ. ರಾಜಕುಮಾರ್ ಅವರ ಕಟ್ಟ ಕಡೆಯ ಚಿತ್ರಗಳವರೆಗೆ ಬಹುತೇಕ ಚಿತ್ರಗಳಲ್ಲಿ ಉಮೇಶ್ ನಟಿಸಿದ್ದರು. ಒಮ್ಮೆ ಉಮೇಶರ ಹುಟ್ಟು ಹಬ್ಬ ಎಂದು ಅರಿತ ವಿಷ್ಣುವರ್ಧನ ಅವರು ಸಿನಿಮಾ ಸೆಟ್ಟಿನಲ್ಲೇ ಅವರ ಹುಟ್ಟುಹಬ್ಬ ಆಚರಿಸುವ ಏರ್ಪಾಡು ಮಾಡಿ ಈ ನಟನಿಗೆ ಗೌರವ ಸಲ್ಲುವಂತೆ ನಡೆದುಕೊಂಡರು. “ಅಂದಿನ ಕಪ್ಪು ಬಿಳುಪು ಜಗತ್ತಿನಿಂದ ಇಲ್ಲಿಯವರೆಗಿನ ಕನ್ನಡ ಚಿತ್ರರಂಗದ ಯಾತ್ರೆ ಅದ್ಬುತ. ಈ ಯಶಸ್ಸಿನ ಹಾದಿಯನ್ನು ನೋಡಿರುವ ನಾನೇ ಪುಣ್ಯವಂತ” ಎಂಬುದು ಉಮೇಶರ ಮಾತು.

ಅನಿವಾರ್ಯತೆ

[ಬದಲಾಯಿಸಿ]

ಬದುಕಿನ ಬಂಡಿಗಾಗಿ ಇಂತಹ ಹಿರಿಯವಯಸ್ಸಿನಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಲೇಬೇಕಾದ ಅನಿವಾರ್ಯತೆ ಉಮೇಶ್ ಅಂತಹ ಕಲಾವಿದರಿಗಿದೆ ಎಂಬುದು ಮತ್ತೊಂದು ವಾಸ್ತವ ಜಗತ್ತನ್ನು ತೆರೆದಿಡುತ್ತದೆ. ಇಂಥಹ ಹಿರಿಯರ ಹಿರಿತನದ ಬದುಕು ಸುಗಮವಾಗಿರಲಿ ಎಂಬುದು ಕಲಾಭಿಮಾನಿಗಳ ಹೃತ್ಪೂರ್ವಕ ಆಶಯ