ಉಸುಬಿನ ನೊಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ಲೆಬೊಟೊಮಸ್ ಜಾತಿಯ ನೊಣ. ಕೀಟವರ್ಗಕ್ಕೆ ಸೇರಿದ ಡಿಪ್ಟಿರ ಗಣದ ಸೈಕೊಡಿಡೆ ಕುಟುಂಬಕ್ಕೆ ಸೇರಿದೆ. ಇವು ಸಣ್ಣ ನೊಣಗಳು. ಉದ್ದ 11/2 -4 ಮಿ.ಮೀ.ಗಳಷ್ಟು ದೇಹದ ಮೇಲೆ ಕೂದಲಿನ ಹೊದಿಕೆ ಇದೆ. ಹೆಣ್ಣು ನೊಣಗಳಲ್ಲಿ ಮಾತ್ರ ಚುಚ್ಚುವ ಅಂಗಗಳಿವೆ. ಇವು ಕೆಲವು ಸರೀಸೃಪಗಳ ಮತ್ತು ಸ್ತನಿಗಳ ರಕ್ತವನ್ನಲ್ಲದೆ ಮನುಷ್ಯನ ರಕ್ತವನ್ನೂ ಹೀರುವುವು. ಕೆಲವು ಪ್ರಭೇದಗಳ ಗಂಡುನೊಣಗಳು ರಾತ್ರಿಯ ಕಾಲದಲ್ಲಿ ಗಾಳಿ ಹೆಚ್ಚಾಗಿ ಬೀಸದಿರುವಾಗ ಚುರುಕಾಗಿರುತ್ತವೆ.ಜೀವನಚಕ್ರ ಪೂರ್ತಿಯಾಗಲು ಸಾಧಾರಣವಾಗಿ ೭-೧೦ ವಾರಗಳು ಬೇಕು.

ಉಸುಬಿನ ನೊಣವಿನ ವಾಸುಸ್ಥಳ[ಬದಲಾಯಿಸಿ]

ಹಗಲು ಗಿಡಮರಗಳ ಮತ್ತು ಕಟ್ಟಗಳ ಕತ್ತಲುಪ್ರದೇಶಗಳಲ್ಲಿ ವಾಸಿಸುತ್ತವೆ. ಸಾಧಾರಣವಾಗಿ ಸದ್ದಿಲ್ಲದೆ ನಿಧಾನವಾಗಿ ಹಾರುತ್ತವೆ. ಕಲ್ಲುಗಳ ಕೆಳಗೆ, ಮರದ ಪೊಟರೆ, ಬಿಲ, ಇರುಕು ಜಾಗ, ಲಾಯ, ಕೋಳಿಗಳ ಗೂಡು-ಮುಂತಾದ ಪ್ರದೇಶಗಳಲ್ಲಿ, ಕತ್ತಲಿರುವ ತೇವವಿರುವ ಮತ್ತು ಪದಾರ್ಥಗಳು ಕೊಳೆಯುತ್ತಿರುವ ಸ್ಥಳಗಳಲ್ಲಿ ಮೊಟ್ಟೆಯಿಡುತ್ತವೆ. ನೀರಿನಲ್ಲಿ ಮೊಟ್ಟೆಗಳನ್ನಿಡುವುದಿಲ್ಲ. ಇಂಥ ಜಾಗಗಳಲ್ಲಿ ಲಾರ್ವಗಳಿಗೆ ಆಹಾರ ಸಿಗುತ್ತದೆ.

ರೋಗ[ಬದಲಾಯಿಸಿ]

ಫ್ಲೆಬೊಟೊಮಸ್ ಜಾತಿಯ ಪ್ರಭೇದಗಳು ಉಸುಬಿನ ನೊಣದ ಜ್ವರವನ್ನುಂಟು ಮಾಡುವ ಒಂದು ಜಾತಿಯ ಕ್ರಿಮಿಯನ್ನು ಹರಡಿ ಆ ಸಾಂಕ್ರಾಮಿಕಕ್ಕೆ ಕಾರಣವಾಗಿವೆ. (ನೋಡಿ- ಉಸುಬಿನ-ನೊಣದ-ಜ್ವರ). ಕಾಲಾ ಅಸಾರ್ ರೋಗ ಮೆಡಿಟರೇನಿಯನ್, ದಕ್ಷಿಣ ರಷ್ಯ, ಭಾರತ, ಚೀನ, ಮಧ್ಯ ಆಫ್ರಿಕ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಕಾಣಬರುತ್ತವೆ. ಈ ರೋಗ ಲೀಷ್ಮಾನಿಯ ಎಂಬ ಸೂಕ್ಷ್ಮಜೀವಿಗಳಿಂದ ಉಂಟಾಗುವುದು.ಪೌರಸ್ತ್ಯ ಹುಣ್ಣು ಸಹ ಲೀಷ್ಮೇನಿಯ ಸೂಕ್ಷ್ಮಜೀವಿಗಳಿಂದ ಉಂಟಾಗುವುದು. ಈ ರೋಗ ಚರ್ಮಕ್ಕೆ ಸೀಮಿತವಾಗಿದೆ. ಇದಕ್ಕೆ ದೆಹಲಿ ಬೊಬ್ಬೆ ಅಥವಾ ಬಾಗ್ದಾದ್ ಬೊಬ್ಬೆ ಎಂದು ಹೆಸರು.ಎಸ್ಟುಡಿಯ ರೋಗ ನಾಸಿಕ ಮತ್ತು ಬಾಯಪ್ರದೇಶಗಳಲ್ಲಿ ಲೀಷ್ಮೇನಿಯ ಸೂಕ್ಷ್ಮಜೀವಿಗಳಿಂದ ಉಂಟಾಗುವುದು. ಓರೋಯ ಜ್ವರ ಮತ್ತು ಪೆರ್ರುಗ ಪೆರುಯಾನ ರೋಗಗಳು ಬ್ಯಾಕ್ಟೀರಿಯದಿಂದ ಉಂಟಾಗುವುವು. ಈ ರೋಗಗಳು ದಕ್ಷಿಣ ಅಮೆರಿಕದಲ್ಲಿ ಕಾಣಬರುವುವು. ಓರೋಯ ಜ್ವರದಿಂದ ಅನೀಮಿಯವೂ ಪೆರ್ರುಗ ಪೆರುಯಾನದಿಂದ ಚರ್ಮದ ಮೇಲೆ ಗಂಟುಗಳೂ ಬರುವುವು.

ಉಲ್ಲೇಖ[ಬದಲಾಯಿಸಿ]

http://www.kanaja.in/2013/page/11/[ಶಾಶ್ವತವಾಗಿ ಮಡಿದ ಕೊಂಡಿ]