ವಿಷಯಕ್ಕೆ ಹೋಗು

ಉಷ್ಣಪರಿವರ್ತನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾವುದೇ ಪದಾರ್ಥಕ್ಕೆ ಉಷ್ಣ ಒದಗಿಸಿ ಅದನ್ನು ಬೇರೆ ಪದಾರ್ಥ ಅಥವಾ ಪದಾರ್ಥಗಳಾಗಿ ಪರಿವರ್ತಿಸುವ ಕ್ರಿಯೆ (ಪೈರಾಲಿಸಿಸ್). ಉಷ್ಣದೊಂದಿಗೆ ಬೇರೊಂದು ಪದಾರ್ಥವನ್ನೂ ಒದಗಿಸಿ ರಾಸಾಯನಿಕ ಪರಿವರ್ತನೆ ಉಂಟುಮಾಡಿದರೆ ಅದು ಉಷ್ಣಪರಿವರ್ತನೆ ಎನಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ಪದಾರ್ಥವನ್ನು ಆಕ್ಸಿಜನ್ನಿನೊಂದಿಗೆ ಕಾಯಿಸಿದರೆ ಆಗಬಹುದಾದ ಪರಿವರ್ತನೆಗೆ ದಹನ (ಕಂಬಸ್ಚನ್) ಎಂದೂ ಹೈಡ್ರೋಜನ್ನಿನೊಂದಿಗೆ ಕಾಯಿಸಿದರೆ ಆಗಬಹುದಾದ ಪರಿವರ್ತನೆಗೆ ಹೈಡ್ರೋಜನೀಕರಣ (ಹೈಡ್ರಾಜಿನೇಷನ್) ಎಂದೂ ಹೆಸರು. ಆದರೆ ಹಾಗೆ ಒದಗಿಸಿದ ಪದಾರ್ಥ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದೆ ಕೇವಲ ದ್ರಾವಕವಾಗಿ (ಸಾಲ್ವೆಂಟ್) ಅಥವಾ ವೇಗವರ್ಧಕವಾಗಿದ್ದುಕೊಂಡು (ಕೆಟಲಿಸ್ಟ್) ಪರಿವರ್ತನೆಗೆ ನೆರವು ನೀಡಿದರೆ ಆಗಲೂ ಆ ಕ್ರಿಯೆ ಉಷ್ಣಪರಿವರ್ತನೆಯೇ. ಈ ಬಗೆಯ ಕ್ರಿಯೆಯಿಂದ ಉಂಟಾಗುವ ಪದಾರ್ಥಗಳೇನಿದ್ದರೂ ಮೂಲಪದಾರ್ಥದಲ್ಲಿನ ಅಣುಪರಮಾಣುಗಳ ಪುನರ್ಯೋಜನೆಯಿಂದ ಉಂಟಾದವು.

ಕ್ರಿಯೆ ನಡೆಯುವ ರೀತಿ[ಬದಲಾಯಿಸಿ]

ಪದದ ಮೂಲ ಅರ್ಥಕ್ಕೆ ಪ್ರಾಶಸ್ತ್ಯ ನೀಡಿ ಉಷ್ಣದ ಸಹಾಯದಿಂದ ಯಾವ ಪದಾರ್ಥವನ್ನು ಪರಿವರ್ತಿಸಿದರೂ ಆ ಕ್ರಿಯೆಗೆ ಉಷ್ಣಪರಿವರ್ತನೆ ಎನ್ನಬಹುದು. ಆದರೆ ಸಾಮಾನ್ಯವಾಗಿ ಈ ಪದವನ್ನು ಬಳಸುವುದು ನೈಸರ್ಗಿಕವಾಗಿ ದೊರೆಯುವ ಸಂಕೀರ್ಣ ಇಂಗಾಲೀಯ ಪದಾರ್ಥಗಳ ವಿಷಯದಲ್ಲಿ ಮಾತ್ರ. ಪರಿವರ್ತನೆ ಹೊಂದುವ ಪದಾರ್ಥ ಒಂದೇ ಒಂದು ನಿರ್ದಿಷ್ಟ ಸಂಯುಕ್ತವಾಗಿದ್ದು, ಅದು ಕಾಯಿಸಿದಾಗ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳಾಗಿ ಒಡೆದರೆ ಆ ಕ್ರಿಯೆಯನ್ನು ಉಷ್ಣವಿಭಜನೆ (ಥರ್ಮಲ್ ಡೀಕಾಂಪೋಸಿಷನ್) ಎನ್ನುವುದು ವಾಡಿಕೆ. ಔದ್ಯೋಗಿಕ ಕ್ಷೇತ್ರದಲ್ಲಿ ಇಂದು ಉಷ್ಣಪರಿವರ್ತನೆಗೆ ಗುರಿಪಡಿಸುವ ಪದಾರ್ಥಗಳೆಂದರೆ ಮುಖ್ಯವಾಗಿ ಕಲ್ಲಿದ್ದಲು, ಮರ, ಕಲ್ಲೆಣ್ಣೆ (ಪೆಟ್ರೊಲಿಯಂ) ಮತ್ತು ನಿಸರ್ಗಾನಿಲ. ಔದ್ಯೋಗಿಕ ಪ್ರಾಮುಖ್ಯವುಳ್ಳ ಉಷ್ಣಪರಿವರ್ತನ ವಿಧಾನಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಉಷ್ಣತೆಯನ್ನು ಉಪಯೋಗಿಸುತ್ತಿರುತ್ತಾರೆ. ಒತ್ತಡ ಕೆಲವು ಸಂದರ್ಭಗಳಲ್ಲಿ ಹೆಚ್ಚಿಸುವುದು ಮತ್ತೆ ಕೆಲವು ಸಂದರ್ಭಗಳ ಕಡಿಮೆ ಮಾಡುವುದೂ ಉಂಟು. ಉಷ್ಣ ಪರಿವರ್ತನೆಗೆ ಗುರಿಪಡಿಸುವ ಪದಾರ್ಥ ಘನಸ್ಥಿತಿಯಲ್ಲಿರಬಹುದು ದ್ರವಸ್ಥಿತಿಯಲ್ಲಿರಬಹುದು ಇಲ್ಲವೇ ಅನಿಲಸ್ಥಿತಿಯಲ್ಲೂ ಇರಬಹುದು. ಕಲ್ಲಿದ್ದಲನ್ನು ಅಧಿಕ ಉಷ್ಣತೆಯಲ್ಲಿ (800ಲಿ-1000ಲಿ ಸೆ.) ಕಾಯಿಸುವುದೂ ಉಂಟು. ಕಡಿಮೆ ಉಷ್ಣತೆಯಲ್ಲಿ (500ಲಿ-800ಲಿ ಸೆ.) ಕಾಯಿಸುವುದೂ ಉಂಟು. ಅದರಿಂದ ಬರುವ ಮುಖ್ಯ ಉತ್ಪನ್ನಗಳು ಕೋಕ್, ಕಲ್ಲಿದ್ದಲ ಅನಿಲ ((ಕೋಲ್‍ಗ್ಯಾಸ್) ಮತ್ತು ಕಲ್ಲಿದ್ದಲು ಡಾಮರು (ಕೋಲ್‍ಟಾರ್). ಡಾಮರಿನಿಂದ ಬೆಂಜೀನ್, ಟಾಲ್ವೀನ್, ನ್ಯಾಫ್ತಲೀನ್, ಕ್ರೆಸಾಲುಗಳು ಮುಂತಾದ ರಾಸಾಯನಿಕಗಳನ್ನು ಬೇರ್ಪಡಿಸುತ್ತಾರೆ., ವರ್ಣದ್ರವಗಳು, ಔಷಧ ಪದಾರ್ಥಗಳು, ಪ್ಲಾಸ್ಟಿಕುಗಳು ಮುಂತಾದ ಅನೇಕ ಉಪಯುಕ್ತ ಪದಾರ್ಥಗಳ ತಯಾರಿಕೆಯಲ್ಲಿ ಈ ರಾಸಾಯನಿಕಗಳ ಉಪಯೋಗ ಇದೆ. ಮರವನ್ನು ಉಷ್ಣಪರಿವರ್ತನೆಗೊಳಪಡಿಸುವುದು ಮುಖ್ಯವಾಗಿ ಇದ್ದಲಿನ ತಯಾರಿಕೆ, ಮೆಥೆನಾಲ್, ಅಸಿಟಿಕ್ ಆಮ್ಲ ಮತ್ತು ಅಸಿಟೋನುಗಳು ಇದರಲ್ಲಿ ಬರುವ ಮುಖ್ಯ ಉಪೋತ್ಪನ್ನಗಳು.[೧]

ಉಲ್ಲೇಖನಗಳು[ಬದಲಾಯಿಸಿ]

  1. "ಉಷ್ಣ ಪರಿವರ್ತನೆ". marathi.bharatavani.in accessdate 29 Oct 2016. Archived from the original on 25 ಸೆಪ್ಟೆಂಬರ್ 2020. Retrieved 29 ಅಕ್ಟೋಬರ್ 2016.