ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಜನನ೧೧೬೦
ಅಂಕಿತನಾಮಉರಿಲಿಂಗಪೆದ್ದಿಗಳರಸ
ಸಂಗಾತಿ(ಗಳು)ಉರಿಲಿಂಗಪೆದ್ದಿ


ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಈ ದಂಪತಿಗಳು ಮಹಾರಾಷ್ಟ್ರದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ ಮನ:ಪರಿವರ್ತನೆಗೊಂಡು, 'ಉರಿಲಿಂಗ ದೇವರೆಂಬ' ಗುರುವಿನಿಂದ ಗುರುದೀಕ್ಷೆ ಪಡೆದು ಶರಣನಾಗುವನು. ಇದರಿಂದ ಸಂತಸಗೊಂಡ ಕಾಳವ್ವೆ ತಾನೂ ಪತಿಯ ಹಾದಿಯಲ್ಲೆ ಮುನ್ನಡೆದಳು. ಈಕೆಯ ವಚನಗಳ ಅಂಕಿತ "ಉರಿಲಿಂಗಪೆದ್ದಿಗಳರಸ".

ವಚನಗಳ ವೈಶಿಷ್ಟ್ಯ[ಬದಲಾಯಿಸಿ]

ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಭೂಸುರರು ಕ್ರಮವಾಗಿ ಆನೆ, ಮಹಿಷ, ಅಶ್ವ ಮೊದಲಾದ ಪ್ರಾಣಿಗಳನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಲಿಯುಗದಲ್ಲಿ ಹೋತನನ್ನು ಬಲಿಕೊಟ್ಟು ಹೋಮ ಮಾಡಿದುದನ್ನು ಕಾಳವ್ವೆ ತನ್ನ ವಚನವೊಂದರಲ್ಲಿ ತಿಳಿಸುತ್ತಾ, ಮನುಷ್ಯ ಸೇವಿಸುವ ಆಹಾರದ ಮೇಲೆ ಜಾತಿಗಳನ್ನು ವಿಂಗಡಿಸುವುದನ್ನು ಖಂಡಿಸಿದ್ದಾಳೆ. ದೈವಗಳನ್ನು ಒಲಿಸಿಕೊಳ್ಳುವ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಹ ಘೋರ ಕೃತ್ಯವನ್ನು, ಜಾತೀಯತೆಯನ್ನು ತನ್ನ ವಚನಗಳ ಮೂಲಕ ಉಗ್ರವಾಗಿ ಖಂಡಿಸಿ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ. ಈಕೆಯ ೧೨ ವಚನಗಳು ಲಭ್ಯವಾಗಿವೆ.

ಕುರಿ-ಕೋಳಿ ಕಿರಿಮೀನು ತಿಂಬವರೆಲ್ಲ
ಕುಲಜ ಕುಲಜರೆಂದೆಂಬರು!
ಶಿವಗೆ ಪಂಚಾಮೃತವ ಕರೆವ ಪಶುವ
ತಿಂಬ ಮಾದಿಗ ಕೀಳುಜಾತಿಯೆಂಬರು
ಅವರೆಂತು ಕೀಳುಜಾತಿಯಾದರು ?
ಜಾತಿಗಳೇ ನೀವೇಕೆ ಕೀಳಾದಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ
ಶೋಭಿತವಾಯ್ತು ಅದೆಂತೆಂದಡೆ-
ಸಿದ್ಧಲಿಕೆಯಾಯ್ತು, ಸಗ್ಗಳೆಯಾಯ್ತು
ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು
ಶುದ್ಧವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ
ನಾಯಕ ನರಕ ತಪ್ಪದಯ್ಯ!
ಉರಿಲಿಂಗಪೆದ್ದಿಗಳರಸ ಇದನೊಲ್ಲನವ್ವಾ