ಉಪ್ಪಿನ ಕುದುರು ದೇವಣ್ಣ ಕಾಮತ್

ವಿಕಿಪೀಡಿಯ ಇಂದ
Jump to navigation Jump to search

ಉಪ್ಪಿನ ಕುದುರು ದೇವಣ್ಣ ಕಾಮತ್: 1888-1971. ಯಕ್ಷಗಾನ ಗೊಂಬೆಯಾಟ ದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದ ಕಲಾವಿದ. ಇಂದಿನ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಉಪ್ಪಿನಕುದುರುವಿನಲ್ಲಿ 1888 ಸೆಪ್ಟೆಂಬರ್ 17ರಂದು ಜನಿಸಿದರು. ಇವರ ಹಿರಿಯರು ಈ ಕಲೆಯನ್ನು ಪೋಷಿಸಿಕೊಂಡು ಬಂದದ್ದರಿಂದ ಇವರ ಮನೆತನಕ್ಕೆ ಭಾಗವತರ ಮನೆ ಎಂಬ ಹೆಸರು ಬಂತು. ಇವರ ತಂದೆ ವೆಂಕಟರಮಣ ಕಾಮತ್. ಆರಂಭದಲ್ಲಿ ಇವರಿಗೆ ಪ್ರಾಥಮಿಕ ಶಿಕ್ಷಣ ಮಾತ್ರ ದೊರೆತಿತ್ತು. ತಮ್ಮ ತಂದೆ ಹಾಗೂ ಅಜ್ಜ ಲಕ್ಷ್ಮಣಕಾಮತರಿಂದ ತರಬೇತಿ ಪಡೆದರು. ಅನಂತರ ಇವರು ತಮ್ಮ ಮಗ ಉಪ್ಪಿನಕುದುರು ಕೊಗ್ಗ ಕಾಮತರೊಂದಿಗೆ ಎನೋಡಿಏ ದೇಶದ ಬೇರೆ ಬೇರೆ ಭಾಗಗಳಲ್ಲಿ ಯಕ್ಷಗಾನ ಗೊಂಬೆಯಾಟದ ಪ್ರದರ್ಶನ ನೀಡಿ ಈ ಕಲೆಯ ಪ್ರಚಾರಕ್ಕೆ ಕಾರಣರಾದರು. ಇವರ ಪತ್ನಿ ರಾಧಾಬಾಯಿ. ಈ ದಂಪತಿಗಳಿಗೆ 3 ಗಂಡು, 3 ಹೆಣ್ಣು ಮಕ್ಕಳು. ದೇವಣ್ಣ ಕಾಮತರು ಸ್ವತಃ ಯಕ್ಷಗಾನ ಕಲೆಯಲ್ಲಿ ನುರಿತವರಾದುದರಿಂದ ರಾಮಾಯಣ, ಮಹಾಭಾರತದ ಪ್ರಸಂಗಗಳಿಗೆ ಗೊಂಬೆಯ ಕುಣಿತ ಹೊಂದಿಸಿ ಅದೊಂದು ಮನರಂಜನೆಯ ಆಟ ವಾಗುವಂತೆ ಮಾಡಿದರು. ಯಕ್ಷಗಾನ ವೇಷಭೂಷಣ ಮುಖವರ್ಣಿಕೆಗೆ ಹೊಂದುವ ಗೊಂಬೆಗಳನ್ನು ತಾವೇ ತಯಾರಿಸಿದರು. ಪಾತ್ರಗಳಿಗೆ ಸೂಕ್ತವಾದ ವಸ್ತ್ರಾಲಂಕಾರ ಮಾಡಿ, ಹಿನ್ನೆಲೆಯಲ್ಲಿ ಯಕ್ಷಗಾನ ಸಂಗೀತ ಅಳವಡಿಸಿ ಗೊಂಬೆಗಳೂ ಮನುಷ್ಯರಂತೆ ಹಾವಭಾವ ಪೂರ್ಣವಾಗಿ ಕುಣಿಯುವಂತೆ ಮಾಡುವಲ್ಲಿ ಯಶಸ್ವಿಯಾದರು. ದೊಡ್ಡ ಆಕಾರದ ಮೂರ್ತಿಗಳ ರಚನೆ ಮಾಡಿ ಅವುಗಳ ಚಲನವಲನಕ್ಕೆ ಯೋಗ್ಯವಾದ ಸೂತ್ರಗಳನ್ನು ಜೋಡಿಸಿದ್ದು ಇವರ ಬಹು ದೊಡ್ಡ ಸಾಧನೆ. 1966ರಲ್ಲಿ ದೆಹಲಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಮಂತ್ರಿತರಾದ ಇವರು ಅಂದಿನ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರಿಂದ ರಾಷ್ಟ್ರಪ್ರಶಸ್ತಿ ಪಡೆದರು. ಆರ್ಥಿಕ ತೊಂದರೆಗಳ ನಡುವೆಯೂ ಇವರು ಛಲ ಮತ್ತು ನಿಷ್ಠೆಯಿಂದ ಈ ಕಲಾ ಸಂಪ್ರದಾಯವನ್ನು ಉಳಿಸಲು ಮತ್ತು ಬೆಳೆಸಲು ತುಂಬ ಪರಿಶ್ರಮಿಸಿದರು. ಕಮಲಾ ದೇವಿ ಚಟ್ಟೋಪಾಧ್ಯಾಯರ ನಿರ್ದೇಶನದಲ್ಲಿ ಸೆಂಟ್ರಲ್ ಹ್ಯಾಂಡಿಕ್ರಾಫ್ಟ್‌ ಬೋರ್ಡಿನ ಸಹಾಯದಿಂದ ಯಕ್ಷಗಾನ ಗೊಂಬೆ ಯಾಟ ತರಬೇತಿ ಕೇಂದ್ರವನ್ನು ಆರಂಭಿಸಿ ಅನೇಕ ವಿದ್ಯಾರ್ಥಿಗಳಿಗೆ ಈ ಕಲೆಯ ಪರಿಚಯ ಮಾಡಿಕೊಟ್ಟರು. ಇವರು 1971 ಜುಲೈ 20ರಂದು ನಿಧನರಾದರು.