ಉಪಯುಕ್ತತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಯುಕ್ತತೆ: ಮಾನವನ ಬಯಕೆಗಳ ಪೂರೈಕೆಯಲ್ಲಿ ಸರಕು-ಸೇವೆಗಳಿಗೆ ಇರುವ ಸಾಮರ್ಥ್ಯ (ಯುಟಿಲಿಟಿ). ಅರ್ಥಶಾಸ್ತ್ರದ ಮುಖ್ಯ ಭಾವನೆಗಳಲ್ಲೊಂದು ಇದು ವಸ್ತುಗಳ ಅಂತರ್ಗತ ಗುಣವೇನೂ ಅಲ್ಲ. ಬಯಕೆಯ ಕಾರಣದಿಂದ ಜನಕ್ಕೂ ಅದಕ್ಕೂ ಇರುವ ಸಂಬಂಧದ ಸೂಚಕ.

ಬಳಕೆಮಾತಿನಲ್ಲಿ ಪ್ರಯೋಜನಗುಣವೂ ಒಂದೇ. ಇಲ್ಲಿ ನೈತಿಕದೃಷ್ಟಿ ಅಡಗಿರುತ್ತದೆ. ಒಂದು ವಸ್ತುವನ್ನು ಬಯಸುವುದೇತಕ್ಕೆ ಎಂಬುದರ ಮೇಲಿಂದ ಅದರ ಉಪಯುಕ್ತತೆಯನ್ನ ಳೆಯುವುದು ಸಾಮಾನ್ಯ. ನೈತಿಕ ಆಧಾರದ ಮೇಲೆ ಒಂದುವಸ್ತು ಇನ್ನೊಂದಕ್ಕಿಂತ ಹೆಚ್ಚು ಅಮೂಲ್ಯವೆನ್ನಬಹುದು. ಅಫೀಮು ಸೇವಿಸುವ ಚಟ ಇರುವವನಿಗೆ ಅದು ಪ್ರಯೋಜನಕಾರಿ ಯೆಂದು ಯಾರೂ ಹೇಳುವುದಿಲ್ಲ. ಒಂದು ಯಂತ್ರವೋ ಒಲೆಯೋ ಪ್ರಯೋಜನಕಾರಿ, ಆದರೆ ಒಂದು ಕಲಾಕೃತಿಯಿಂದ ಏನು ಪ್ರಯೋಜನವುಂಟು?-ಎಂದು ವಾದಿಸುವುದು ಸಾಧ್ಯ.

ಆದರೆ ಅರ್ಥಶಾಸ್ತ್ರಜ್ಞನ ದೃಷ್ಟಿಯಲ್ಲಿ ಇಂಥ ವಾದ ಅಪ್ರಕೃತ. ಒಂದು ಸರಕನ್ನು ಪಡೆಯುವುದಕ್ಕೂ ಸಿದ್ಧವಿರುವವರಿದ್ದಾರೆಂದೇ ಆತನ ದೃಷ್ಟಿಯಲ್ಲಿ ಅದು ಉಪಯುಕ್ತ. ಇಲ್ಲಿ ನೈತಿಕ ವಿವೇಚನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಶಬ್ದದ ಹಿಂದಿರುವ ನೈತಿಕದೃಷ್ಟಿಯ ಬಣ್ಣವನ್ನು ತಿಳಿಯುವ ಉದ್ದೇಶದಿಂದಲೇ ಪಾರೇಟೋ ಎಂಬ ಇಟಾಲಿಯನ್ ಅರ್ಥಶಾಸ್ತ್ರಜ್ಞ ತುಷ್ಟಿಗುಣ (ಓಫೆಲಿಮಿಟಿ) ಎಂಬ ಶಬ್ದ ಬಳಸಿದ.

ಉಪಯುಕ್ತತೆಯನ್ನಳೆಯಲು ವಸ್ತುನಿಷ್ಠಾತ್ಮಕ ಸಾಧನವೇನೂ ಇಲ್ಲ. ಇದು ಸಂಪೂರ್ಣ ವಾಗಿ ಸ್ವಾನುಭವನಿಷ್ಠವಾದದ್ದು. ಆದ್ದರಿಂದ ಇದನ್ನಳೆಯುವುದು ಅಸಾಧ್ಯ. ಒಂದು ಗೊತ್ತಾದ ಪರಿಸ್ಥಿತಿಯಲ್ಲಿ ಒಂದು ಸರಕಿನ ಬಗ್ಗೆ ಒಬ್ಬ ವ್ಯಕ್ತಿ ಕಟ್ಟಿದ ಬೆಲೆಯೇ ಉಪಯುಕ್ತತೆ. ಉದಾಹರಣೆಗೆ ಶಾಲಿನ ಉಪಯುಕ್ತತೆಯ ಕಲ್ಪನೆ ಎಲ್ಲರಿಗೂ ಒಂದೇ ತೆರನಾಗಿರುವುದು ಸಾಧ್ಯವಿಲ್ಲ. ಒಬ್ಬನ ದೃಷ್ಟಿಯಲ್ಲೇ ಆದರೂ ಇದು ಋತುಮಾನಕ್ಕೆ ಅನುಗುಣವಾಗಿ ವ್ಯತ್ಯಾಸವಾಗಬಹುದು. ಒಬ್ಬನಲ್ಲಿ ಎಷ್ಟು ಶಾಲುಗಳಿರುತ್ತವೆಂಬುದರ ಮೇಲಿಂದಲೂ ಇದರ ಉಪಯುಕ್ತತೆ ನಿರ್ಣಯಿಸಲ್ಪಡುತ್ತದೆ.

ಈ ವಿವೇಚನೆಯ ಹಿನ್ನೆಲೆಯಲ್ಲಿ ಉಪಯುಕ್ತತೆಯ ಬಗ್ಗೆ ಕೆಲವು ಸೂತ್ರಗಳನ್ನು ಕೊಡುವುದು ಸಾಧ್ಯ. ಮೊದಲನೆಯದಾಗಿ ಒಂದು ಸರಕು ಉಪಯುಕ್ತತೆ ಹೊಂದಿದೆಯೆಂದ ಮಾತ್ರಕ್ಕೆ ಅದು ಅಪೇಕ್ಷಣೀಯವೆಂದು ಅರ್ಥವಲ್ಲ. ಅದಕ್ಕೆ ಒಬ್ಬನ ಬಯಕೆ ಪುರೈಸುವ ಗುಣವಿದ್ದರೆ ಸಾಕು. ಇದು ಪ್ರಧಾನ. ಉಳಿದದ್ದು ಗೌಣ.

ಅನೇಕ ಸರಕು ಸೇವೆಗಳನ್ನು ಹಸಿವು ಬಾಯಾರಿಕೆ ನಿವಾರಣೆ, ಚಳಿ ಮಳೆ ಬಿಸಿಲು ಗಾಳಿಗಳೆದುರು ರಕ್ಷಣೆ, ರೋಗ ನಿವಾರಣೆ ಇತ್ಯಾದಿ ಉದ್ದೇಶಗಳಿಗಾಗಿ ಬಯಸುವುದು ಸಾಮಾನ್ಯ. ಈ ಸಂದರ್ಭಗಳಲ್ಲಿ ಉಪಯುಕ್ತತೆ ನೋವನ್ನು ಹೋಗಲಾಡಿಸುವ, ದುಃಖ ನಿವಾರಣೆ ಮಾಡುವ ಗುಣ ಮಾತ್ರವಾಗಿರುತ್ತದೆ; ಆದ್ದರಿಂದ ಉಪಯುಕ್ತತೆ ಇದೆ ಎಂದ ಮಾತ್ರಕ್ಕೆ ಆ ಸರಕಿನ ಅನುಭೋಗದಿಂದ ನಿಶ್ಚಿತವಾಗಿ ಸಂತೋಷ ಉಂಟಾಗುವುದೆಂದು ಹೇಳಿದಂತಾಗುವುದಿಲ್ಲ. ಹೀಗೆ ಸರಕು ಸೇವೆಗಳ ಅನುಭೋಗ ಕೇವಲ ಸಂಕಟ ಪರಿಹಾರ ಕ್ಕಾಗಿರಲಿ ಅಥವಾ ಹೆಚ್ಚಿನ ಆನಂದ ಪಡೆಯುವುದಕ್ಕಾಗಿರಲಿ, ಕಪಟ್ಟದ್ದೆಂದು ಭಾವಿಸುವುಂಥ ದಾಗಿರಿಲಿ ಅಥವಾ ಒಳ್ಳೆಯದೇ ಎಂದು ಹೇಳಬಹುದಾದ್ದಾಗಿರಲಿ ಅದು ಒಬ್ಬ ವ್ಯಕ್ತಿಯ ಬಯಕೆಯ ಪೂರೈಕೆಗೆ ಅನುಗುಣವಾಗಿ ಉಪಯುಕ್ತತೆಯಿರುತ್ತದೆ. ಅಂದಮೇಲೆ ವ್ಯಕ್ತಿಯ ಬಯಕೆಯೇ ಉಪಯುಕ್ತತೆಗೆ ಆಧಾರ. ಇದು ಅನುಭೋಗಿಯ ಮನಸ್ಸಂಬಂಧವಾಚಕ.

ಉಪಯುಕ್ತತೆಯೆಂಬುದು ಸಾಪೇಕ್ಷವಾದದ್ದು. ಏಕೆಂದರೆ ಒಂದು ಕಾಲದಲ್ಲಿ ಹೆಚ್ಚು ಉಪಯುಕ್ತವಲ್ಲವೆನಿಸಿದ್ದಕ್ಕೆ ಇನ್ನೊಂದು ಕಾಲದಲ್ಲಿ ಹೆಚ್ಚು ಉಪಯುಕ್ತತೆ ಕೂಡಿ ಬರಬಹುದು. ಸಾಮಾನ್ಯವಾಗಿ ಹೇಳುವುದಾದರೆ ಚಳಿಗಾಲದಲ್ಲಿ ಉಣ್ಣೆ ಬಟ್ಟೆಯ, ಮಳೆಗಾಲದಲ್ಲಿ ಛತ್ರಿಗಳ, ಬೇಸಗೆಯಲ್ಲಿ ತಂಪು ಪಾನೀಯಗಳ ಉಪಯುಕ್ತತೆ ಹೆಚ್ಚುವುದೆಂದು ಹೇಳಬಹುದು. ಈ ಬಗೆಯ ಉಪಯುಕ್ತತೆಯನ್ನು ಕಾಲೋಪಯುಕ್ತತೆಯೆನ್ನಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕುಗಳನ್ನು ರವಾನಿಸುವುದರಿಂದ ಅವಕ್ಕೆ ಉಪಯುಕ್ತತೆ ಬರಬಹುದು. ಬೆಟ್ಟದ ಕಿಬ್ಬಿಯಲ್ಲಿ ಬೆಲೆಯಿಲ್ಲದೆ ಬಿದ್ದಿರುವ ಕಲ್ಲುಬಂಡೆಯನ್ನು ಒಡೆದು ಪಟ್ಟಣಕ್ಕೆ ತಂದರೆ ಅದಕ್ಕೆ ಉಪಯುಕ್ತತೆಯುಂಟು. ಇದು ಸ್ಥಳೋಪಯುಕ್ತತೆ, ಹೆಬ್ಬಂಡೆಯ ಕಗ್ಗಲ್ಲು ಹಾಗೆಯೇ ಬಿದ್ದಿದ್ದರೆ ಅದಕ್ಕೆ ಬೆಲೆಯಿಲ್ಲ. ಅದನ್ನು ಕಡಿದು ಚಪ್ಪಡಿಯಾಗಿಯೋ ಕಡಿದು ಮೂರ್ತಿ ಯಾಗಿಯೋ ಮಾಡಿದಾಗ ಅದಕ್ಕೆ ಉಪಯುಕ್ತತೆ. ಇದು ಆಕಾರೋಪಯುಕ್ತತೆ. ಸರಕುಗಳ ಈ ಮೂರು ಬಗೆಯ ಉಪಯುಕ್ತತೆಯ ನಿರ್ಮಾಣವೇ ಉತ್ಪಾದನೆಯ ಗುರಿ.

ಸರಕು ಸೇವೆಗಳ ಬೆಲೆಗಳಿಗೂ ಉಪಯುಕ್ತತೆಗೂ ನಿಕಟ ಸಂಬಂಧವಿರುವುದರಿಂದ ಅರ್ಥಶಾಸ್ತ್ರ ಅಧ್ಯಯನದಲ್ಲಿ ಉಪಯುಕ್ತತೆಯನ್ನು ಕುರಿತ ಭಾವನೆಗೆ ಹೆಚ್ಚು ಪ್ರಾಮುಖ್ಯವುಂಟು. ಅನುಭೋಗಿಯ ವೈಯಕ್ತಿಕ ಬಯಕೆಯ ಪೂರೈಕೆಯ ದೃಷ್ಟಿಯಿಂದ ಉದ್ಭವಿಸುವ ಇದರ ನಿರಪೇಕ್ಷ ಮಾಪನ ಸಾಧ್ಯವಿಲ್ಲವಾದರೂ ಅನುಭೋಗಿಗಳು ಉಪಯುಕ್ತತೆಯ ಆಧಾರದ ಮೇಲೆ ಸರಕುಗಳಿಗೆ ಬೆಲೆ ಕೊಡುವರೆಂದು ಹೇಳುವುದಾದರೆ ಸರಕುಗಳ ಉಪಯುಕ್ತೆಯನ್ನು ಬೆಲೆಗಳ ಮೂಲಕ ಸೂಚಿಸುವುದರಿಂದ ಒಂದು ರೀತಿಯಲ್ಲಿ ಅಳೆಯುವ ಪ್ರಯುತ್ನ ಮಾಡಬಹುದು. ಸರಕೊಂದರ ಉಪಯುಕ್ತತೆ ಇಷ್ಟೆಂದು ಅಳೆಯುವ ಮಾನದಂಡ ಹುಡುಕುವುದು ಕಷ್ಟವಾದರೂ ಅನುಭೋಗಿ ತೆಗೆದುಕೊಳ್ಳುವ ವಿವಿಧ ಸರಕುಗಳ ಉಪಯು ಕ್ತತೆಯನ್ನು ಹೋಲಿಸುವುದು ಸಾಧ್ಯ. ಕಿತ್ತಲೆಹಣ್ಣಿನ ಉಪಯುಕ್ತತೆ ಒಂದು ಸೇಬಿನ ಹಣ್ಣಿನ ಉಪಯುಕ್ತತೆಗೆ ಸಮ. ನಾಲ್ಕು ಕಿತ್ತಲೆ ಹಣ್ಣುಗಳಿಗೆ 1 ರೂಪಾಯಿ ಕೊಡುವುದರ ಬದಲು ಒಂದು ಸೇಬಿಗೆ 1 ರೂಪಾಯಿ ಕೊಟ್ಟೇವು; ಅಥವಾ ಅ, ಆ, ಇ, ಈ ಎಂಬ ನಾಲ್ಕು ಸರಕುಗಳ ಉಪಯುಕ್ತತೆಯನ್ನು ಹೋಲಿಸಿ ಅ>ಆ>ಇ>ಈ ಎಂಬುದಾಗಿ ಅವುಗಳ ಉಪಯುಕ್ತತೆಗಳನ್ನು ಸಾಪೇಕ್ಷವಾಗಿ ಸೂಚಿಸಬಹುದು; ಈ ಮೂಲಕ ಸರಕುಗಳ ಅನುಭೋಗದ ಬಗ್ಗೆ ಆದ್ಯತೆಯ ಅನುಕ್ರಮವನ್ನು ಹಾಕುವುದು ಸಾಧ್ಯ, ಉಪಯುಕ್ತತೆಯನ್ನು ಅಳೆಯಬಹುದೆಂಬ ಮತ್ತು ಹೋಲಿಸಬಹುದೆಂಬ ಊಹೆಗಳ ಮೇಲೆ ಅರ್ಥಶಾಸ್ತ್ರದಲ್ಲಿ ಅನೇಕ ಮೂಲಭೂತ ನಿಯಮಗಳನ್ನು ಸೃಜಿಸಲಾಗಿದೆ.

ಉಪಯುಕ್ತತೆಯ ವಿಚಾರವಾಗಿ ಜರ್ಮನ್ ಅರ್ಥಶಾಸ್ತ್ರಜ್ಞ ಗಾಸೆನ್ (1810-58) ಎರಡು ಮುಖ್ಯ ಸೂತ್ರಗಳನ್ನು ರಚಿಸಿದ್ದಾನೆ. ಒಂದು, ಸರಕಿನ ಹೆಚ್ಚು ಹೆಚ್ಚು ಘಟಕಗಳನ್ನು ಪಡೆದಂತೆಲ್ಲ ಅದರ ಹೆಚ್ಚಿನ ಘಟಕದ ಉಪಯುಕ್ತತೆ ಆ ಸರಕಿನ ಒಟ್ಟು ಘಟಕಗಳೊಂದಿಗೆ ವಿಲೋಮ ಸಂಬಂಧ ಹೊಂದಿರುತ್ತದೆ (ನೋಡಿ-ಇಳಿಮುಖ-ಉಪಯುಕ್ತತೆಯ-ಸೂತ್ರ). ಒಂದು ಸರಕನ್ನು ನಾನಾ ಬಗೆಯಾಗಿ ಉಪಯೋಗಿಸಬಹುದಾಗಿದ್ದು ವಿವಿಧ ಬಯಕೆಗಳನ್ನು ಪುರೈಸುವಂಥದಾಗಿದ್ದರೆ, ಅದರಿಂದ ಗರಿಷ್ಠ ತೃಪ್ತಿ ದೊರಕುವಂತೆ ಆ ಸರಕಿಗಾಗಿ ಸ್ಪರ್ಧಿಸುತ್ತಿ ರುವ ಈ ನಾನಾ ಬಯಕೆಗಳ ತೃಪ್ತಿಗಾಗಿ ಯಾವ ಯಾವ ಪ್ರಮಾಣಗಳಲ್ಲಿ ವಿತರಣೆಮಾಡ ಬೇಕು?-ಎಂಬುದು ಗಾಸೆನ್ ವಿವೇಚನೆಗೆ ಒಳಗಾದ ಎರಡನೆಯ ವಿಚಾರ. ಆ ಸರಕಿನ ನಾನಾ ಉಪಯೋಗಗಳಿಗಾಗಿ ಅದನ್ನು ಬಳಸಿದಾಗ ಅದರ ಪ್ರತಿಯೊಂದು ಅಂಚಿನ ಘಟಕದಿಂದ ದೊರಕುವ ತೃಪ್ತಿಯೂ ಸಮನಾಗಿರುವ ಸ್ಥಿತಿಯೇ ಗರಿಷ್ಠ ತೃಪ್ತಿಯ ಸ್ಥಿತಿ.

ಅನೇಕ ಉಪಯೋಗಗಳಿಗೆ ವಿನಿಯೋಗಿಸಬಹುದಾದ ಸರಕು ಒಬ್ಬನಲ್ಲಿ ಇದ್ದರೆ ಈ ಸರಕನ್ನು ಅತ್ಯುತ್ತಮ ರೀತಿಯಲಿ-ಅಂದರೆ ಒಟ್ಟಿನಲ್ಲಿ ಗರಿಷ್ಠ ತೃಪ್ತಿತರುವಂತೆ-ಹಂಚಬೇಕಾದರೆ, ಪ್ರತಿಯೊಂದು ಉಪಯೋಗಕ್ಕೆ ಹಾಕಲಾಗುವ ಕೊನೆಯ ಘಟಕದ ಉಪಯುಕ್ತತೆ ಅಂದರೆ ಅಂಚಿನ ಉಪಯುಕ್ತತೆ ಸಮವಾಗಿರಬೇಕು.

ಒಬ್ಬನಲ್ಲಿ 10 ರೂಪಾಯಿಗಳಿದ್ದು ಇದನ್ನು ಎರಡು ಉಪಯೋಗಗಳಿಗೆ ಹಾಕಬಹುದಾಗಿ ದ್ದರೆ ಈ ಎರಡು ಉಪಯೋಗಗಳಲ್ಲಿ ಒಂದೊಂದು ಘಟಕಕ್ಕೂ ಉಪಯುಕ್ತತೆ ಎಷ್ಟು ಇಳಿಯುವುದೆಂಬುದನ್ನು ಹೋಲಿಸಬೇಕಾಗುತ್ತದೆ. ಎರಡು ಸರಕುಗಳ ಮೇಲೆ ಮಾಡುವ ವೆಚ್ಚದಿಂದ ಲಭಿಸುವ ತೃಪ್ತಿ ಹೇಗಿದ್ದೀತೆಂಬುದರ ಊಹೆಯ ಅಂಕಗಳನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ:

ಮೇಲಿನ ಉದಾಹರಣೆಯಲ್ಲಿ ಒಂದನೆಯ ಸರಕಿನ ಮೇಲೆ ಮಾಡಲಾಗುವ 5ನೇ ರೂ. ವೆಚ್ಚದಿಂದಲೂ ಎರಡನೆಯ ಸರಕಿನ ಮೇಲೆ ಮಾಡಲಾಗುವ 4ನೇ ರೂ. ವೆಚ್ಚದಿಂದಲೂ ಲಭಿಸುವ ಅಂಚಿನ ತೃಪ್ತ ಒಂದೇ (3) ಆದ್ದರಿಂದ ಒಂದರ ಮೇಲೆ 5 ರೂ., ಎರಡರ ಮೇಲೆ 4 ರೂ. ವೆಚ್ಚ ಮಾಡುವುದರಿಂದ ಅನುಭೋಗಿಯ ತೃಪ್ತಿ ಪರಮಾವಧಿಯಾಗುತ್ತದೆ: ಆಗ ಒಟ್ಟು ತೃಪ್ತಿ 32+23=55. ಈ ಹಣವನ್ನು ಬೇರೆ ಯಾವ ರೀತಿ ಹಂಚಿದರೂ ಒಟ್ಟು ತೃಪ್ತಿ 55ಕ್ಕೆ ಕಡಿಮೆಯಾಗುವುದು. ಕೇವಲ ಹಣದ ವೆಚ್ಚಕ್ಕೆ ಮಾತ್ರವಲ್ಲದೆ ಈ ತತ್ತ್ವ ಅನೇಕ ಉಪಯೋಗಗಳಿಗಾಗಿ ಬಳಸಬಹುದಾದ ಯಾವ ಸರಕಿಗಾದರೂ ಅನ್ವಯವಾಗುತ್ತದೆ. ತಮ್ಮ ಹಣವನ್ನು ಯಾವ ರೀತಿ ವೆಚ್ಚ ಮಾಡಿದರೆ ಹೆಚ್ಚು ತೃಪ್ತಿ ದೊರಕುವುದೆಂದು ಅನುಭೋಗಿಗಳು ಲೆಕ್ಕಾಚಾರ ಮಾಡುವುದು ಸ್ವಾಭಾವಿಕ: ಅವರು ಮಾಡುವ ನಾನಾ ಬಗೆಯ ವೆಚ್ಚಗಳ ಅಂಚಿನ ಘಟಕಗಳು ಕೊಡುವ ತೃಪ್ತಿ ಒಂದೇ ಆದಾಗ ಮಾತ್ರ ಒಟ್ಟು ತೃಪ್ತಿ ಪರಮಾವಧಿ ಮಟ್ಟದ್ದಿರುತ್ತದೆ. ಹೀಗೆಯೇ ಉತ್ಪಾದಕರು ಶ್ರಮ, ಬಂಡವಾಳ ಇವುಗಳ ಪ್ರತಿ ಅದಲು ಬದಲು ಮಾಡುವರು. ಇಲ್ಲಿಯೂ ಅಂಚಿನ ಘಟಕಗಳ ಪ್ರತಿಫಲ ಸಮಾನತೆ ಇರುವ ಹಂಚಿಕೆಯೇ ಅತ್ಯುತ್ತಮವಾದದ್ದು. ಈ ಸೂತ್ರದಿಂದ ಅನುಭೋಗಿಗಳ ಹಾಗೂ ಉತ್ಪಾದಕರ ವರ್ತನೆಯ ಮುಖ್ಯಪ್ರವೃತ್ತಿಯನ್ನರಿಯಬಹುದು. ಅವರ ಅನೇಕ ಆರ್ಥಿಕ ನಿರ್ಣಯಗಳು ಉಪಯುಕ್ತತೆಯ ಅಳತೆ ಹೋಲಿಕೆಗಳನ್ನೇ ಅವಲಂಬಿಸಿದೆ (ನೋಡಿ-ಇಳಿಮುಖ-ಪ್ರತಿನಿಧಾನ-ಅಂಚು-ದರ-ಸೂತ್ರ). ಅರ್ಥ ಮೀಮಾಂಸೆಯಲ್ಲಿ ಉಪಯುಕ್ತತೆಯ ಭಾವನೆಗೆ ಪ್ರಮುಖವಾದ ಸ್ಥಾನಮಾನ ನೀಡಿದವರು ಆಸ್ಟ್ರಿಯನ್ ಪಂಥದ ಅರ್ಥಶಾಸ್ತ್ರಜ್ಞರು-ಮುಖ್ಯವಾಗಿ ಕಾರ್ಲ್‌ ಮೆಂಗರ್ ಮತ್ತು ಬಂ-ಬಾವೆರ್ಕ್.

ಉಪಯುಕ್ತತೆಯ ಭಾವನೆಯನ್ನು ಕುರಿತು ಮೊಟ್ಟಮೊದಲು ಚಿಂತನೆ ಮಾಡಿದವರು ಉಪಯುಕ್ತತಾವಾದಿಗಳು. ಇವರು ಜೆರೆಮಿ ಬೆಂಥಾಮ್ ಪಂಥದವರು. ಯಾವುದು ಸುಖ, ಯಾವುದು ಅಸುಖ, ಯಾವುದು ದುಃಖೋಪಾತ್ತ-ಎಂದು ಮುಂತಾಗಿ ಮಾನವ ನಡೆಸುವ ವಿವೇಚನೆಯೇ ಆರ್ಥಿಕವರ್ತನೆಗೆ ಆಧಾರವೆಂಬಂತೆ ಇವರು ವಾದಿಸಿದರು (ನೋಡಿ-ಉಪಯುಕ್ತತಾವಾದ). ಮನಃಶ್ಶಾಸ್ತ್ರದ ದೋಣಿಯಲ್ಲಿ ಒಂದು ಕಾಲನ್ನೂ ತತ್ತ್ವಶಾಸ್ತ್ರದಲ್ಲಿ ಇನ್ನೊಂದನ್ನೂ ಊರಿ ನಡೆದಿದ್ದ ಈ ಬಗೆಯ ವಾದವನ್ನು ಈ ಎರಡೂ ಕ್ಷೇತ್ರಗಳ ವಿಚಾರವಂತರು ತಳ್ಳಿಹಾಕಿದರು. ಅರ್ಥಶಾಸ್ತ್ರದಲ್ಲಿ ಈ ಬಗ್ಗೆ ವಿಚಾರ ಹರಿಸಿದವರು ಈ ಕಲ್ಪನೆಯ ಹಿಂದಿನ ನೈಜಸೃಷ್ಟಿಯನ್ನಷ್ಟೇ ಎತ್ತಿ ಹಿಡಿದರು. ಉಪಯುಕ್ತತೆಯ ಕಲ್ಪನೆಗೂ ಅದರ ಹಿಂದೆ ಇರತಕ್ಕ ಬಯಕೆಗಳ ರೂಪಕ್ಕೂ ಯಾವ ಸಂಬಂಧವೂ ಇಲ್ಲವೆಂದು ಶುಂಪೀಟರ್ ವಾದಿಸಿದ. ಇದು ಮಾನಸಿಕ ಮೌಲ್ಯಮಾಪನ ವಿಧಾನವಲ್ಲ; ಇದು ತರ್ಕಬದ್ಧ-ಎಂಬುದು ಆತನ ಅಭಿಪ್ರಾಯ. ಉಪಯುಕ್ತತೆಯನ್ನು ಅಳತೆ ಮಾಡಬಹುದೇ ಇಲ್ಲವೇ-ಎಂಬ ವಿಚಾರವಾಗಿಯೂ ಇದಮಿತ್ಥಂ ಎಂದು ಹೇಳುವ ಸ್ಥಿತಿ ಇನ್ನೂ ಬಂದಿಲ್ಲ. ಒಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಒಂದು ಸರಕಿನ ಬದಲು ಇನ್ನೊಂದು ಹೆಚ್ಚು ಉಪಯುಕ್ತವೆನ್ನಬಹುದು. ಈ ನಾನಾ ಸರಕುಗಳ ಘಟಕಗಳ ಆದ್ಯತಾಕ್ರಮವನ್ನು ನಿರ್ದೇಶಿಸಬಹುದು. ಆದರೆ ಒಂದರಿಂದ ಇನ್ನೊಂದು ಎಷ್ಟು ಹೆಚ್ಚು ಉಪಯುಕ್ತ ಎಂಬುದನ್ನು ಅಳೆಯಲು ಸಾಧ್ಯವಿಲ್ಲ. ಇದು ಒಂದು ವಾದ. ಆದರೆ ಇನ್ನು ಕೆಲವರು ಇದು ಆಧಾರಭೂತ ಕಲ್ಪನೆಯೆಂದೂ ಇದನ್ನು ಮಾನಕವೊಂದರ ನೆರವಿನಿಂದ ಅಳೆಯಬಹುದೆಂದೂ ಹೇಳುತ್ತಾರೆ.

ನಾನಾ ಜನರ ಅನುಭವಕ್ಕೆ ಬಂದ ಉಪಯುಕ್ತತೆಗಳನ್ನು ಪರಸ್ಪರವಾಗಿ ಹೋಲಿಸ ಬಹುದೇ-ಎಂಬುದು ಅರ್ಥಶಾಸ್ತ್ರದಲ್ಲಿ ಇನ್ನೂ ತೀರ್ಮಾನವಾಗದಿರುವ ಇನ್ನೊಂದು ಪ್ರಶ್ನೆ. ಒಬ್ಬನ ವರಮಾನ ಹೆಚ್ಚಿದಂತೆ ಆತನಿಗೆ ಅದರ ಅಂಚಿನ ಘಟಕದ ಉಪಯುಕ್ತತೆ ಕಡಿಮೆಯಾಗುತ್ತದೆ. ಎಲ್ಲರ ತ್ಯಾಗವೂ ಒಂದೇ ಸಮನಾಗಿರಬೇಕಾದರೆ ವರಮಾನ ಹೆಚ್ಚಿದಂತೆಲ್ಲ ತೆರಿಗೆಯ ದರ ಹೆಚ್ಚಿಸಬೇಕು-ಎಂಬುದು ಸ್ವೀಕೃತಭಾವನೆ. ಒಬ್ಬ ವ್ಯಕ್ತಿಯ ವರಮಾನದ 10,000ದನೆಯ ರೂಪಾಯಿಗೂ ಇನ್ನೊಬ್ಬನ ವರಮಾನದ 10,000ದನೆಯದಕ್ಕೂ ಒಂದೇ ಉಪಯುಕ್ತತೆಯಿರುವುದೆಂಬ ಊಹೆಯೇ ತೆರಿಗೆ ದರಗಳಿಗೆ ಆಧಾರ. ವಾಸ್ತವವಾಗಿ ನೋಡಿದರೆ ಈ ಇಬ್ಬರ ವರಮಾನಗಳ ಅಂಚಿನ ಉಪಯುಕ್ತತೆಗಳೂ ಒಂದೇ ವೇಗದಲ್ಲಿ ಇಳಿಯುವು ವೆನ್ನಲಾಗುವುದಿಲ್ಲ. ಆದ್ದರಿಂದ ಇಂಥ ತಾತ್ತ್ವಿಕ ವಿವೇಚನೆಯಲ್ಲ ಒಂದು ಮಿತಿಯವರೆಗೆ ಮಾತ್ರ ಅನ್ವಯವಾಗಬಹುದೆಂಬ ವಾದವನ್ನೂ ಸಂಪೂರ್ಣವಾಗಿ ತಳ್ಳಿಹಾಕುವುದು ಸಾಧ್ಯವಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: