ವಿಷಯಕ್ಕೆ ಹೋಗು

ಉಪನಾಟಕಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪನಾಟಕಗಳು: ಯುರೋಪ್ ನಲ್ಲಿ ಮಧ್ಯಯುಗದಲ್ಲಿ ಹುಟ್ಟಿದ ಒಂದು ಬಗೆಯ ಗೌಣ ನಾಟಕ (ಇಂಟರ್ಲೂಡ್).

ಇತಿಹಾಸ

[ಬದಲಾಯಿಸಿ]

ಮಧ್ಯಯುಗದ ಕಾಲದಲ್ಲಿ ಜನರು ಹೆಚ್ಚು ಹೆಚ್ಚು ಮನರಂಜನೆಯನ್ನು ಬಯಸಿದಾಗ, ನಾಟಕವೃತ್ತಿಸಂಘಗಳು ಹೆಚ್ಚು ಸಂಖ್ಯೆಯಲ್ಲಿ ಬೆಳೆದಾಗ ಈ ಜಾತಿಯ ಕಿರುನಾಟಕಗಳು ಹುಟ್ಟಿದವು. ನೀತಿನಾಟಕದಿಂದ (ಮೊರಾಲಿಟಿ ಪ್ಲೇ) ಉಪನಾಟಕ ಹುಟ್ಟಿತಾ ದರೂ ಇದರಲ್ಲಿ ಧರ್ಮ ಅಥವಾ ನೀತಿಬೋಧೆಯ ಉದ್ದೇಶವಿರಲಿಲ್ಲ. ಪ್ರ.ಶ. ೧೫ನೆಯ ಮತ್ತು 16ನೆಯ ಶತಮಾನಗಳಲ್ಲಿ ರಚಿತವಾದ ಈ ಉಪನಾಟಕಗಳಲ್ಲಿ ಅನೇಕವು ವಿನೋದದಿಂದ ಕೂಡಿದ, ಸರಳ ಕಾವ್ಯಶೈಲಿಯಲ್ಲಿ ರಚಿತವಾದ, ಪುಟ್ಟ ವಿಡಂಬನ ದೃಶ್ಯಗಳು. ಹಗುರವಾದ ಮನೋರಂಜನೆಯೇ ಇವುಗಳ ಉದ್ದೇಶ. ಭೋಜನಕೂಟಗಳಲ್ಲಿ ಔತಣಶಾಲೆಯ ನಡುಮನೆ ಯಲ್ಲಿ ಅಥವಾ ದೊಡ್ಡ ಉಪಾಹಾರ ಗೃಹಗಳ ಅಂಗಳದಲ್ಲಿ 4-5 ನಟರು ಕೂಡಿ ಈ ನಾಟಕಗಳನ್ನು ಅಭಿನಯಿಸುತ್ತಿದ್ದರು. ಅನೇಕ ವೇಳೆ, ಉದ್ದವಾದ ನೀತಿನಾಟಕದ ನಡುವೆ ದೊರೆಯುತ್ತಿದ್ದ ವಿರಾಮದಲ್ಲಿ ಸ್ವಲ್ಪ ವೈವಿಧ್ಯವನ್ನು ತರಲು ಈ ಪುಟ್ಟ ವಿನೋದ ದೃಶ್ಯಗಳನ್ನು ಅಭಿನಯಿಸುತ್ತಿದ್ದುದರಿಂದ ಇವುಗಳಿಗೆ ಉಪನಾಟಕಗಳೆಂದು ಹೆಸರು ಬಂತು.

ಉಪನಾಟಕಕ್ಕೆ ಒಳ್ಳೆಯ ಉದಾಹರಣೆಯೆಂದರೆ ಜಾನ್ ಹೇವುಡ್ (ಸು. 1497-1580) ರಚಿಸಿದ ದಿ ಫೋರ್ ಪೀಸ್. ಇದರಲ್ಲಿ ಪಕಾರದಿಂದ ಪ್ರಾರಂಭವಾಗುವ ಹೆಸರಿನ ನಾಲ್ಕು ಪಾತ್ರಗಳು ಬರುತ್ತವೆ. ಒಬ್ಬ ಯಾತ್ರಿಕ (ಪಾಮರ್), ಒಬ್ಬ ಕ್ಷಮಾಧಿಕಾರಿ (ಪಾರ್ಡನರ್), ಇನ್ನೊಬ್ಬ ಸಣ್ಣಪುಟ್ಟ ಸಾಮಾನುಗಳನ್ನು ಮಾರುವ ವರ್ತಕ (ಪೆಡ್ಲರ್), ಮತ್ತೊಬ್ಬ ಅಳಲೇಕಾಯಿ ಪಂಡಿತ (ಅಪಾತಿಕರಿ). ಈ ನಾಲ್ವರೂ ತಮ್ಮಲ್ಲಿ ಯಾರು ಅತಿ ದೊಡ್ಡ ಸುಳ್ಳು ಹೇಳಬಲ್ಲರೆಂದು ಪಣ ತೊಡುತ್ತಾರೆ. ತಾಳ್ಮೆ ತಪ್ಪಿದ್ದ ಹೆಣ್ಣನ್ನೇ ತನ್ನ ಜೀವಮಾನದಲ್ಲಿ ತಾನು ಕಾಣೆನೆಂದು ಶ್ಲೇಷಾತ್ಮಕವಾದ ಅತಿ ದೊಡ್ಡ ಸುಳ್ಳನ್ನು ಹೇಳಿ ಯಾತ್ರಿಕ ಪಣವನ್ನು ಗೆಲ್ಲುತ್ತಾನೆ.

ಕೇವಲ ವಿನೋದವೇ ಮುಖ್ಯವಾಗಿರುವ ಈ ಗೌಣನಾಟಕಗಳು ಬರಬರುತ್ತ ಚಾರಿತ್ರಿಕ ವಸ್ತುವನ್ನೂ ಅಳವಡಿಸಿಕೊಂಡವು. ಮೊಟ್ಟಮೊದಲು ಚರ್ಚಿನಲ್ಲಿ ಧರ್ಮ ಮತ್ತು ನೀತಿಬೋಧನೆ ಗೆಂದು ಉದ್ದೇಶಿಸಿದ ನಾಟಕರೂಪ ಕಾಲಕ್ರಮೇಣ ಚರ್ಚಿನ ಎಲ್ಲೆಯನ್ನುಲ್ಲಂಘಿಸಿ ಲೌಕಿಕ ಮನೋರಂಜನೆಯ ಸ್ವರೂಪವನ್ನು ಪಡೆಯಿತು. ಪ್ರಾಚೀನ ಪಾಶ್ಚಾತ್ಯ ನಾಟಕದ ಈ ಮೂಲರೂಪಗಳೇ ಮುಂದೆ ಎಲಿಝಬೆತ್ ಕಾಲದಲ್ಲಿ ವಿಪುಲವಾಗಿ ರಚಿತವಾದ ಉನ್ನತ ನಾಟಕಗಳಿಗೆ ನಾಂದಿಯಾದುವು.

ಇಂಟರ್ಲೂಡ್, ನಾಟಕದ ವಿಕಾಸದಲ್ಲಿ ಒಂದು ಮುಖ್ಯ ಘಟ್ಟ. ಮಿರಕಲ್, ಮೊರಾಲಿಟಿಗಳಲ್ಲಿ ಧರ್ಮ ಮತ್ತು ನೀತಿಗಳೇ ಪ್ರಧಾನವಾಗಿದ್ದವು. ಇದರಿಂದ ಉಪದೇಶವೇ ಮುಖ್ಯವಾಗಿತ್ತು. ಹೀಗಿದ್ದಷ್ಟು ಕಾಲ ನಾಟಕವು ಸ್ವತಂತ್ರವಾಗಿ ಬೆಳೆಯುವಂತಿರಲಿಲ್ಲ, ಮನುಷ್ಯ ಸ್ವಭಾವದಲ್ಲಿ ಆಸಕ್ತಿ ಬೆಳೆಯುವಂತಿರಲಿಲ್ಲ, ಇಂಟರ್ಲೂಡ್ ನಾಟಕಕಾರನ ಉಪದೇಶದ ಸಂಕೋಲೆಗಳನ್ನು ತೆಗೆದುಹಾಕಿತು, ಹಾಸ್ಯವನ್ನು ತಂದುಕೊಟ್ಟಿತು. ನಾಟಕ ಪ್ರಕಾರದ ವಿಕಾಸವನ್ನು ಸಾಧ್ಯ ಮಾಡಿಕೊಟ್ಟಿತು. ಅಲ್ಲದೆ ಆವರೆವಿಗೆ ಮಿರಕಲ್ಸ್‌ಗಳು, ತೊಕ್ಕಲಾಟಗಳನ್ನು ರಚಿಸುತ್ತಿದ್ದವರು ಕಥಾವಸ್ತುವಿಗೆ ಬೈಬಲನ್ನೂ ಸಂತರ ಜೀವನಗಳನ್ನೂ ಆಶ್ರಯಿಸುತ್ತಿದ್ದರು. ಹೀಗೆ ನಾಟಕಕಾರನು (ದ ಫೋರ್ ಪೀಸ್ ನಾಟಕವು ತೋರಿಸುವಂತೆ) ತನ್ನ ಕಥಾವಸ್ತುವನ್ನು ತಾನೇ ಸೃಷ್ಟಿಸಲು ಪ್ರಾರಂಭಿಸಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: