ಉಪದೇಶ ಭಾಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪದೇಶ ಭಾಷಣ: ನೀತಿನಿಷ್ಠೆ. ಧರ್ಮತತ್ತ್ವಗಳ ಬೋಧನೆ. ಪ್ರತಿಪಾದನೆಗಳನ್ನು ಉದ್ದೇಶವಾಗುಳ್ಳ ಭಾಷಣ (ಸರ್ಮನ್). ಇದೂ ಭಾಷಣದಷ್ಟೇ ಪ್ರಾಚೀನವಾದುದು. ಪ್ರಾಚೀನ ಗ್ರೀಕರಿಗೂ ಪ್ರಾಚೀನ ರೋಮನರಿಗೂ ಭಾಷಣ (ಸ್ಪೀಚ್; ಆರೇಷನ್) ಸುಸಂಸ್ಕೃತ ಜೀವನಕ್ಕೆ ಅತ್ಯಗತ್ಯವೆಂಬ ಅಭಿಮತವಿತ್ತು. ಭಾಷಣ ಕಲೆಯನ್ನು ಕಲಿಯುವುದಕ್ಕೆ ಅನೇಕರು ಮುಂಬರುತ್ತಿ ದ್ದರು; ಅದನ್ನು ಕಲಿಸುವ ಅನೇಕ ಉಪಾಧ್ಯಾಯರು ಇರುತ್ತಿದ್ದರು. ಭಾಷಣ ವಿಧಗಳು ವಿಂಗಡನೆಯಾಗಿ ಒಂದೊಂದು ವಿಧಕ್ಕೂ ನಿರ್ದಿಷ್ಟ ನಿಯಮಾವಳಿ ಕ್ರಮೇಣ ಏರ್ಪಾಡಾಗಿ ರೂಢಿಗೆ ಬಂತು. ಆ ವಿಧಗಳಲ್ಲಿ ಉಪದೇಶ ಭಾಷಣ ಪ್ರತ್ಯೇಕವಾಗಿ ಕಂಡುಬರುವುದಿಲ್ಲ. ಯೆಹೂದ್ಯರ ಧಾರ್ಮಿಕ ಮುಖಂಡರೂ ಯೇಸುಕ್ರಿಸ್ತನೂ ಜನರನ್ನು ಉದ್ದೇಶಿಸಿ ಮಾತನಾಡಿ ದರು ಎಂದು ಬೈಬಲ್ ತಿಳಿಸುತ್ತದೆ. ಕ್ರೈಸ್ತಮತ ಬೆಳೆದು ಚರ್ಚುವ್ಯವಸ್ಥೆ ಅಚ್ಚುಕಟ್ಟಾಗಿ ರೂಪಿತವಾದ ಅನಂತರ ಉಪದೇಶ ಭಾಷಣಕ್ಕೆ ನಿಯತ ಕಾರ್ಯಕ್ರಮದ ಸ್ಥಾನವೂ ಗೌರವವೂ ದಕ್ಕಿತು. (ಎಸ್.ವಿ.ಆರ್.) ವೇದೋಪನಿಷತ್ತುಗಳ ಕಾಲದಲ್ಲಿ ಉಪದೇಶ ಭಾಷಣ ಹೇಗಿರುತ್ತಿತ್ತು ಎಂಬುದಕ್ಕೆ ತೈತ್ತಿರೀಯೋಪನಿಷತ್ತಿನಲ್ಲಿ ಅತ್ಯುತ್ತಮವಾದ ಒಂದು ನಿದರ್ಶನ ದೊರೆಯುತ್ತದೆ: ವೇದವನ್ನು ಅಧ್ಯಾಪನೆ ಮಾಡಿ ಆಚಾರ್ಯ ಶಿಷ್ಯನಿಗೆ ಹೀಗೆ ಅನುಶಾಸನ ಮಾಡುತ್ತಾನೆ; ಸತ್ಯವನ್ನು ಹೇಳು. ಧರ್ಮವನ್ನು ಆಚರಿಸು. ಅಧ್ಯಯನದಲ್ಲಿ ಪ್ರಮಾದ ಮಾಡಬೇಡ. ಆಚಾರ್ಯನಿಗೆ ಇಷ್ಟವಾದ ಧನವನ್ನು ತಂದುಕೊಡು ಸಂತತಿಯನ್ನು ವಿಚ್ಛಿನ್ನಗೊಳಿಸಬೇಡ. ಸತ್ಯದಿಂದ ಕದಲದಿರು. ಧರ್ಮದಿಂದ ಕದಲದಿರು. ಕುಶಲದಿಂದ ಕದಲದಿರು. ಮಂಗಳಯುಕ್ತವಾದ ಕರ್ಮದಿಂದ ಕದಲದಿರು. ಸ್ವಾಧ್ಯಾಯ ಪ್ರವಚನಗಳಿಂದ ಕದಲದಿರು. ದೇವಪಿತೃ ಕಾರ್ಯದಿಂದ ಕದಲದಿರು. ತಾಯಿಯೇ ನಿನಗೆ ದೇವರಾಗಲಿ. ತಂದೆಯೇ ನಿನಗೆ ದೇವರಾಗಲಿ. ಅತಿಥಿಯೇ ನಿನಗೆ ದೇವರಾಗಲಿ. ಯಾವ ಕರ್ಮಗಳು ಅನಿಂದಿತವೋ ಅಂಥವನ್ನು ಸೇವಿಸಬೇಕು, ಉಳಿದವನ್ನು ಸೇವಿಸಬಾರದು. ನಮ್ಮಲ್ಲಿ ಯಾವ ಒಳ್ಳೆಯ ನಡತೆಗಳಿವೆಯೋ ಅವನ್ನೇ ಸೇವಿಸಬೇಕು, ಉಳಿದವನ್ನು ಸೇವಿಸಬಾರದು. ನಮಗಿಂತ ಉತ್ತಮರಾದ ಯಾವ ಯಾವ ಬ್ರಾಹ್ಮಣರಿರುವರೋ ಅವರನ್ನು ಆಸನಾದಿಪೂರ್ವಕ ಆದರಿಸಬೇಕು. ಇನ್ನು ಶ್ರೌತಸ್ಮಾರ್ತ ಕರ್ಮವಿಷಯದಲ್ಲಾಗಲಿ ಆಚಾರವಿಷಯದಲ್ಲಾಗಲಿ ಸಂಶಯವುಂಟಾದಾಗ ವಿಚಾರಕ್ಷಮರೂ ಕರ್ಮದಲ್ಲಿ ಸಮರ್ಥರೂ ಅಕ್ರೂರರೂ ಅಕಾಮಹತರೂ ಆದ ಬ್ರಾಹ್ಮಣರು ಹೇಗೆ ವರ್ತಿಸುವರೋ ಹಾಗೆಯೆ ನೀನು ಅಲ್ಲಿ ವರ್ತಿಸು. ಇದು ವಿಧಿ. ಇದು ಉಪದೇಶ. ಇದು ವೇದರಹಸ್ಯ. ಇದು ಈಶ್ವರಾಜ್ಞೆ. ಹೀಗೆ ಉಪಾಸಿಸಬೇಕು. ಹೀಗೆ ಇದು ಅನುಷ್ಠೇಯ.’ ಬರೆವಣಿಗೆ ಇನ್ನೂ ರೂಢಿಯಿರದ ಆ ಕಾಲದಲ್ಲಿ ಜ್ಞಾನಪರಂಪರೆ ತಲೆಯಿಂದ ತಲೆಗೆ ಮಾತಿನ ಮೂಲಕ ನಡೆದು ಬರುತ್ತಿತ್ತಾದ ಕಾರಣ ಈ ಭಾಷಣ ಅಂದಿನ ಮಾತಿನ ವೈಖರಿಯನ್ನು ಚೆನ್ನಾಗಿ ವ್ಯಕ್ತಪಡಿಸುತ್ತದೆ. ಇಲ್ಲಿನ ಉಪದೇಶವಸ್ತು ಎಷ್ಟು ಗಹನವೋ ಮಾತಿನ ಓಘ ಅಷ್ಟು ಸರಳ ಎಂಬುದು ಗಮನಾರ್ಹವಾದ ಅಂಶ. ಪುಟ್ಟ ಪುಟ್ಟ ವಾಕ್ಯಗಳ ಬಳಕೆ, ಅಭಿಪ್ರಾಯಗಳ ಪುನರಾವರ್ತನೆ, ನಡುನಡುವೆ ಉದ್ದನೆಯ ವಾಕ್ಯಗಳ ಸಂಯೋಜನೆ-ಇವುಗಳಿಂದಾಗಿ ಈ ಭಾಷಣ ಇಂದಿಗೂ ಮಾದರಿಯಾಗಿ ಉಳಿದಿದೆ. ಹೀಗೆಯೇ ಬೈಬಲ್ ನಲ್ಲಿ ಬರುವ ಅನೇಕ ಉಪದೇಶ ಭಾಷಣಗಳಲ್ಲಿ ಬಹು ಪ್ರಸಿದ್ಧವಾಗಿ ರುವ ಸರ್ಮನ್ ಆನ್ ದಿ ಮೌಂಟ್ ಎಂಬುದನ್ನು ಪರಾಮರ್ಶಿಸಬಹುದು. ಇದು ಏಸುವಿನ ಭಾಷಣಗಳಲ್ಲೆಲ್ಲ ಅತಿ ದೊಡ್ಡದು. ಇದರಲ್ಲಿ ಆತನ ಧಾರ್ಮಿಕ ಅಭಿಪ್ರಾಯಗಳೆಲ್ಲ ಕ್ರೋಡೀಕರಣಗೊಂಡಿವೆ. ಇಲ್ಲಿನ ಕೆಲವು ಅಂಶಗಳು ಸರ್ಮನ್ ಆನ್ ದಿ ಪ್ಲೇನ್ ಎಂಬಲ್ಲೂ ಬಂದಿವೆ. `ಬಡವರಿಗೇ ದೇವಕೃಪೆ ಒದಗುತ್ತದೆ. ಅವರು ದೇವರಾಜ್ಯದ ಪ್ರಜೆಗಳಾಗುತ್ತಾರೆ. ಅನುತಾಪ ಪಡುವವರಿಗೆ ದೇವಾನುತಾಪ ಸಿಗುತ್ತದೆ. ನಮ್ರಭಾವದಿಂದ ವಿನೀತರಾಗಿ ನಡೆವವರು ಈ ಜಗತ್ತನ್ನು ಆಳುತ್ತಾರೆ. ಧರ್ಮಕ್ಕಾಗಿ ಹಸಿದು ಬಾಯಾರುವವರಿಗೆ ತೃಪ್ತಿ ಸಿಕ್ಕೇ ಸಿಕ್ಕುತ್ತದೆ. ದಯಾಶೀಲರಿಗೆ ದೇವದಯೆ ಖಂಡಿತ ದೊರೆಯುತ್ತದೆ. ಹೃದಯ ಶುದ್ಧಿಯುಳ್ಳವರಿಗೆ ದೈವಸಾಕ್ಷಾತ್ಕಾರವಾಗುತ್ತದೆ. ಶಾಂತಿ ದೂತರಾಗಿ ದುಡಿವವರೇ ದೇವರ ಮಕ್ಕಳೆನಿಸುತ್ತಾರೆ. ಧರ್ಮಕ್ಕಾಗಿ ಆತ್ಮಾರ್ಪಣೆ ಮಾಡಿದವರಿಗೆ ಸ್ವರ್ಗ ನಿಜಕ್ಕೂ ಸಿಗುತ್ತದೆ’- ಹೀಗೆ ಮೊದಲಾಗುವ ಈ ಧರ್ಮಬೋಧೆ ವಿಸ್ತಾರವಾಗಿ ಬೆಳೆದು ಕ್ರೈಸ್ತಧರ್ಮದ ಸಾರವನ್ನೆಲ್ಲ ಸಂಗ್ರಹಿಸಿ ಹೇಳುತ್ತದೆ. ನೀತಿನಿಷ್ಠೆಯ ಬೋಧನೆಯೂ ಧರ್ಮತತ್ತ್ವಗಳ ಪ್ರತಿಪಾದನೆಯೂ ಉಪದೇಶ ಭಾಷಣದ ಮುಖ್ಯ ವಿಷಯವಷ್ಟೆ. ವಿಷಯ ನಿರೂಪಣೆಯ ವಿಧಾನಕ್ಕೆ ಮೊದಲಿನಿಂದಲೂ ಪ್ರಾಚೀನ ಗ್ರೀಕ್ ರೋಮನ್ ಭಾಷಣ ವಿಧಾನವೇ ಮೇಲ್ಪಂಕ್ತಿ. ಏತಕ್ಕೆಂದರೆ ಉಪದೇಶಕರೆಲ್ಲರೂ ಪ್ರಾಚೀನರು, ವಿಶೇಷ ಮುತುವರ್ಜಿಯಿಂದ ವೃದ್ಧಿಗೊಳಿಸಿ ಪರಿಷ್ಕರಿಸಿ ಅಚ್ಚುಕಟ್ಟಾಗಿ ಗ್ರಂಥಸ್ಥ ಮಾಡಿದ್ದ ಭಾಷಣವಿದ್ಯೆಯಲ್ಲಿ (ರೆಟೊರಿಕ್) ಪಂಡಿತರು. ಭಾಷಣವಿದ್ಯೆ ಯುರೋಪಿನಲ್ಲಿ ಇತ್ತೀಚಿನವರೆಗೂ ಶಾಲಾ ವಿದ್ಯಾಭ್ಯಾಸದ ಒಂದು ಪಠ್ಯಾಂಗವಾಗಿದ್ದುದನ್ನು ಮರೆಯಬಾರದು. ಲೌಕಿಕ ಭಾಷಣದ ರಚನಾ ಕ್ರಮವನ್ನೇ ಧಾರ್ಮಿಕ ಭಾಷಣವೂ ಅನುಸರಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ವಿಷಯ ಶೇಖರಣೆ, ಹಲವಂಶಗಳ ವ್ಯವಸ್ಥೆ, ಸಮರ್ಥವಾದ ನಿದರ್ಶನ, ಭಾಷಾಶೈಲಿ-ಇವು ನಾಲ್ಕನ್ನು ಉಪದೇಶಕ ಲಕ್ಷ್ಯವಿಟ್ಟು ಸಿದ್ಧಗೊಳಿಸತಕ್ಕದ್ದು. ಒಂದೊಂದು ಉಪದೇಶ ಭಾಷಣವೂ ಸಾರವತ್ತಾದ ಒಂದು ತತ್ತ್ವದ ಸುತ್ತ ಕಟ್ಟಿದ್ದಾಗಿರಬೇಕು. ಆ ತತ್ತ್ವ ಆದಿ ಮಧ್ಯ ಅಂತ್ಯದಲ್ಲಿ ಅಷ್ಟಿಷ್ಟು ನುಡಿ ವ್ಯತ್ಯಾಸದಿಂದ ಒತ್ತಿ ಹೇಳಲ್ಪಡಬೇಕು. ಒಂದೇ ತತ್ತ್ವದ ಪುನರುಕ್ತಿಯಾದರೂ ಉಕ್ತಿಜಾಣ್ಮೆಯಿಂದ ನೀರಸತೆಯನ್ನೂ ಬೇಸರಿಕೆಯನ್ನೂ ಕಡಿಮೆ ಮಾಡಬೇಕು ಅಥವಾ ಅಂದಗೊಳಿಸಬೇಕು. ನೀರಸತೆ ಉಪದೇಶ ಭಾಷಣಕ್ಕೆ ಸುಲಭವಾಗಿ ಅಂಟಿಕೊಳ್ಳುವ ಜಾಡ್ಯ. ವೈವಿಧ್ಯವೇ ಅದಕ್ಕೆ ಮದ್ದು. ಮುಂದಾವ ವಾಕ್ಯ ಕೇಳಬರುವುದೊ ಎಂಬ ಕುತೂಹಲ, ನಿರೀಕ್ಷೆ ಆಲಿಸುವವರಲ್ಲಿ ಕುಗ್ಗದಂತೆ ನೋಡಿಕೊಳ್ಳುವುದು ಉಪದೇಶಕನ ಕರ್ತವ್ಯ, ಹೊಣೆ, ಸಾರ್ಥಕತೆ. ಆದರೆ ಆಲಿಸುವವರ ಚಿತ್ತಾಹ್ಲಾದವನ್ನೇ ಗುರಿಯಾಗಿಟ್ಟುಕೊಂಡು ಉಪದೇಶಕ ಹಗುರ ಹಾಸ್ಯಕ್ಕೆ ಮನತೆತ್ತರೆ ಬೋಧೆಯ ಉದಾತ್ತತೆಗೆ ಭಂಗ ಉಂಟಾಗುತ್ತದೆ, ಗಾಂಭೀರ್ಯಕ್ಕೆ ಕುಂದುತಟ್ಟುತ್ತದೆ. ಹಾಸ್ಯವೆಂದರೆ ಕುಚೋದ್ಯವಲ್ಲ, ವಿನೋದವಲ್ಲ, ಗಹಗಹ ನಗುವಲ್ಲ; ಲಲಿತವೂ ಸುಂದರ ಮಂದವಿಸ್ಮಿತವನ್ನು ತರುವುದೂ ಆದ ಗಂಭೀರ ಹಾಸ್ಯ-ಎಂದು ಉಪದೇಶಕನೂ ಶ್ರೋತೃಗಳೂ ತಿಳಿಯತಕ್ಕದ್ದು. ಉಪದೇಶ ಭಾಷಣವೇತಕ್ಕೆ ಎಂದು ಕೆಲವರ ಆಕ್ಷೇಪ. ನಿಜವನ್ನು ಆಡು, ಒಳ್ಳೆಯದನ್ನು ಮಾಡು ಎಂಬ ನಾಲ್ಕು ಮಾತಿನಲ್ಲಿ ಸಮಸ್ತ ಉಪದೇಶವೂ ಅಡಗಿಲ್ಲವೆ, ಎಂದು ಅವರ ಹೇಳಿಕೆ ಇರಬಹುದು, ಆದರೂ ನವನಾಗರಿಕತೆಯ ದೇಶಗಳಲ್ಲೂ ಅದು ಇನ್ನೂ ರೂಢಿಯಲ್ಲಿದೆ. ಚರ್ಚಿನಲ್ಲೇ ಅಲ್ಲದೆ ವಿದ್ಯಾಶಾಲೆಗಳಲ್ಲೂ ಆಗಾಗ ಅದನ್ನು ಏರ್ಪಡಿಸುವ ವಾಡಿಕೆ ಇದ್ದೇ ಇದೆ. ಹಿಂದೆ ಬಲು ಉದ್ದವಾಗಿರುತ್ತಿದ್ದ ಉಪದೇಶ ಭಾಷಣ ಈಗ ಚಿಕ್ಕಚಿಕ್ಕದಾಗುತ್ತ ಬಂದಿದೆ. ಆಧುನಿಕ ತ್ವರಿತ ಜೀವನಕ್ಕೆ ಅದು ಅನುರೂಪ. (ಎಸ್.ವಿ.ಆರ್.)