ಉದ್ಯಮಕೂಟ

ವಿಕಿಪೀಡಿಯ ಇಂದ
Jump to navigation Jump to search


ಉದ್ಯಮಕೂಟ: ಎರಡು ಅಥವಾ ಹೆಚ್ಚು ಉದ್ಯಮಘಟಕಗಳ ತಾತ್ಕಾಲಿಕ ಅಥವಾ ಶಾಶ್ವತ ಏಕೀಕರಣ (ಕಾಂಬಿನೇಷನ್). ಉದ್ಯಮಕ್ಷೇತ್ರದಲ್ಲಿ ಬಂಡವಾಳದ ಮೊತ್ತವೂ ಉತ್ಪಾದನೆಯ ಗಾತ್ರವೂ ಅಧಿಕವಾದಂತೆಲ್ಲ ಇದರಲ್ಲಿ ನಿರತವಾದ ಘಟಕಗಳು ತಂತಮ್ಮಲ್ಲೇ ಸ್ಪರ್ಧೆ ನಡೆಯದಂತೆ ಪರಸ್ಪರವಾಗಿ ಏರ್ಪಡಿಸಿಕೊಂಡ ಒಡಂಬಡಿಕೆ, ಸಂಯೋಜನೆ, ವಿಲೀನತೆ. ಬಂಡವಾಳ ವ್ಯವಸ್ಥೆಯ ಆರಂಭಕಾಲದಲ್ಲಿ ಅದರ ಬೆಳೆವಣಿಗೆಗೆ ಪ್ರೋತ್ಸಾಹಕವಾಗಿದ್ದ ಅನಿರ್ಬಂಧಿತ ಸ್ಪರ್ಧೆಯ ಒಂದು ದೊಡ್ಡ ದೋಷವೆಂದರೆ ಅದಕ್ಷ ಹಾಗೂ ಕಡಿಮೆ ದಕ್ಷತೆಯ ಸಂಸ್ಥೆಗಳ ನಾಶ. ಯೋಗ್ಯತೆಯುಳ್ಳದ್ದು ಮಾತ್ರ ಉಳಿಯಬೇಕೆಂಬುದು ಒಳ್ಳೆಯ ಆದರ್ಶವಾದರೂ ವಾಸ್ತವ ಜಗತ್ತಿನಲ್ಲಿ ಅನೇಕ ವೇಳೆ ಇದರಿಂದ ಅನರ್ಥವೇ ಸಂಭವಿಸ ಬಹುದು. ಒಂದು ಸಂಸ್ಥೆಯನ್ನು ಮುಚ್ಚಿದಾಗ ಅದರಲ್ಲಿ ನಿಯೋಜಿಸಿದ ಬಂಡವಾಳ ವ್ಯರ್ಥವಾಗುವುದಲ್ಲದೆ ಅಲ್ಲಿದ್ದ ಉದ್ಯೋಗಸ್ಥರು ನಿರುದ್ಯೋಗಿಗಳಾಗಬಹುದು; ಅಮೂಲ್ಯ ಸಾಧನಗಳ ಪೋಲಾಗಬಹುದು. ಬೃಹದ್ ಗಾತ್ರದಲ್ಲಿ ಉತ್ಪಾದನೆ ಹಾಗೂ ವಹಿವಾಟುಗಳು ನಡೆಯುವ ಈ ಕಾಲದಲ್ಲಿ ಇದರಿಂದ ಸಂಭವಿಸುವ ಕಷ್ಟ ನಷ್ಟಗಳೆಷ್ಟೆಂಬುದನ್ನು ಊಹಿಸಿಕೊಳ್ಳಬಹುದು. ಸ್ಪರ್ಧೆಯ ಅನಿಶ್ಚಿತತೆಯನ್ನೂ ಅನರ್ಥಕಾರಿ ಪರಿಣಾಮಗಳನ್ನೂ ದಕ್ಷತೆಗೆ ಹೆಚ್ಚಿನ ಸ್ಥಾನಕೊಟ್ಟು ಲಾಭದ ಮಟ್ಟವನ್ನು ಅದುಮಿಡುವ ಪ್ರವೃತ್ತಿಗಳನ್ನೂ ನಿವಾರಿಸಿಕೊಳ್ಳುವುದೂ, ಸಂಸ್ಥೆಯ ಉತ್ಪಾದನೆ ವಹಿವಾಟುಗಳನ್ನು ಹೆಚ್ಚಿಸಿಕೊಂಡು ಬೃಹದ್ ಗಾತ್ರದ ಉತ್ಪಾದನೆಯ ನಾನಾ ಬಗೆಯ ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಳ್ಳುವುದೂ, ವ್ಯಾಪಾರಚಕ್ರದ ಏರಿಳಿತಗಳ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳುವಂಥ ಆರ್ಥಿಕಶಕ್ತಿ ಬೆಳೆಸಿಕೊಳ್ಳುವುದೂ ಈ ಬಗೆಯ ವ್ಯವಸ್ಥೆಗಳ ಹಿಂದಿರುವ ಉದ್ದೇಶ. ಸುಂಕದ ವ್ಯವಸ್ಥೆಯ ಪ್ರಭಾವ, ಒಟ್ಟಾಗಿ ಸೇರುವ ಸಹಜಪ್ರವೃತ್ತಿ, ಅನಿಶ್ಚಿತತೆಯ ಫಲವಾದ ನಷ್ಟ ಸಂಭವ, ಬೃಹತ್ತಿನ ಮೋಹ-ಇವು ಒಕ್ಕೂಟಕ್ಕೆ ಕಾರಣಗಳಾಗಬಹುದು. ಒಂದು ಕೈಗಾರಿಕೆಗೆ ಅಲ್ಲಿನ ಸರ್ಕಾರದಿಂದ ಸುಂಕದ ರಕ್ಷಣೆ ದೊರಕಿದಾಗ ಅದರ ಅಡಿಯಲ್ಲಿ ಹೊರಗಿನ ಸ್ಪರ್ಧೆಯ ಭಯವಿಲ್ಲದೆ ನೇರವಾಗಿ ಬೆಳೆದ ಸಂಸ್ಥೆಗಳು ತಂತಮ್ಮಲ್ಲೇ ಒಡಂಬಡಿಕೆಯಿಂದ ಒಕ್ಕೂಟ ರಚಿಸಿಕೊಂಡು ಭೀಮಶಕ್ತಿ ಗಳಿಸಬಹುದು. ಹೀಗೆ, ಕಾರಣವೇನೇ ಇರಲಿ, ನಿರುಪಾಧಿಕ ಸ್ಪರ್ಧೆಯ ನಿವಾರಣೆ ಅಥವಾ ನಿರ್ಮೂಲವೇ ಇಂಥ ಪ್ರಯತ್ನಗಳೆಲ್ಲದರ ಅಂತಿಮ ಪರಿಣಾಮ. ಉತ್ಪಾದನೆಯಲ್ಲಿ ನಿರತವಾದ ಘಟಕಗಳ ನಡುವೆ ಅಲ್ಪ ಸ್ವಲ್ಪ ಒಪ್ಪಂದವೂ ಇಲ್ಲದ ಯಾವ ಉತ್ಪಾದನ ಕ್ಷೇತ್ರವೂ ಇಂದು ಬಹುಶಃ ಕಾಣಸಿಗಲಿಕ್ಕಿಲ್ಲ. ಏಕವ್ಯಕ್ತಿ ಉದ್ಯಮಗಳು ಕ್ರಮವಾಗಿ ಪಾಲುದಾರಿಕೆಗೂ ಕೂಡು-ಬಂಡವಾಳ ಕಂಪನಿಗಳಿಗೂ ಎಡೆ ಕೊಟ್ಟಿರುವ ವಿಕಾಸದ ಹಾದಿಯಲ್ಲಿ ಉದ್ಯಮಕೂಟವೇ ಅಂತಿಮ ಘಟ್ಟ. ಈ ಬಗೆಯ ಸಂಘಟನೆಗೆ ಒಳಗಾದ ಘಟಕಗಳ ಸ್ವರೂಪಾನುಗುಣವಾಗಿ ಉದ್ಯಮಕೂಟ ಗಳನ್ನು ಮೂರು ತೆರನಾಗಿ ವಿಂಗಡಿಸುವುದು ಸಾಧ್ಯ : ೧. ಸಮತಲಕೂಟ (ವ್ಯಾಪಾರಕೂಟ) ಇಂಥ ಕೂಟದಲ್ಲಿ ಕೂಡುವ ಘಟಕಗಳು ಒಂದೇ ಬಗೆಯ ವ್ಯಾಪಾರ ಮಾಡುವಂಥವು; ಅಥವಾ ಒಂದೇ ಬಗೆಯ ಉದ್ಯಮದಲ್ಲಿ ನಿರತವಾಗಿರು ವಂಥವು (ಹಾರಿಝಾಂಟಲ್ ಕಾಂಬಿನೇಷನ್). ಉದಾಹರಣೆ: ಹಲವು ಕಾಗದ ಕಾರ್ಖಾನೆ ಗಳದೋ ಸಕ್ಕರೆ ಕಾರ್ಖಾನೆಗಳದೋ ಕೂಟ. ೨. ಉದಗ್ರಕೂಟ (ಅನುಕ್ರಮಕೂಟ) ಒಂದೇ ಕೈಗಾರಿಕೆಯಲ್ಲಿನ ನಾನಾ ಉತ್ಪಾದನ ಘಟ್ಟಗಳು, ಅಥವಾ ತಳದಿಂದ ಮೇಲುಮುಖವಾಗಿಯೋ ತುದಿಯಿಂದ ಕೆಳಮೊಗನಾಗಿಯೋ ಒಂದರೊಡನಿನ್ನೊಂದರ ಸಂಬಂಧವಿರುವ ನಾನಾ ಉದ್ಯಮಗಳು, ಅನುಕ್ರಮವಾಗಿ ಸೇರಿ ಸಂಭವಿಸಿದ ಕೂಟ (ವರ್ಟಿಕಲ್ ಕಾಂಬಿನೇಷನ್, ಸೀಕ್ವೆನ್ಸ್‌ ಕಾಂಬಿನೇಷನ್). ಉದಾಹರಣೆ: ಪ್ರಕಾಶನ ಸಂಸ್ಥೆಯೊಂದು ಮುದ್ರಣ ಸಂಸ್ಥೆಯೊಂದಿಗೂ ಅಚ್ಚುಕೂಟಉದ್ಯಮ ಕಾಗದದ ಕಾರ್ಖಾನೆಯೊಂದಿಗೂ ಮರದ ತಿಳ್ಳು (ವುಡ್ ಪಲ್ಪ್‌) ಕಾರ್ಖಾನೆಯೊಂದಿಗೂ ಕೂಡಿಕೆ. ೩ ವರ್ತುಲಕೂಟ (ಸಂಪುರಕಕೂಟ, ಮಿಶ್ರಕೂಟ) ಮೇಲೆ ಸೂಚಿಸಿದ ಯಾವ ಕ್ರಮವೂ ಇಲ್ಲದೆ, ಪರಸ್ಪರ ಸಂಬಂಧಿಗಳಾಗಿಲ್ಲದ ಉದ್ಯಮಗಳನ್ನು ಒಂದು ಮಾಡಿ ರಚಿಸಿದ ಕೂಟ (ಸಕುರ್ಯ್‌ಲರ್, ಕಾಂಪ್ಲಿಮೆಂಟರಿ ಅಥವಾ ಮಿಕ್ಸೆಡ್ ಕಾಂಬಿನೇಷನ್). ಉದಾಹರಣೆ: ಒಂದು ಹತ್ತಿ ಗಿರಣಿಯೂ ಒಂದು ಸಕ್ಕರೆ ಕಾರ್ಖಾನೆಯೂ ಒಂದು ರಸಾಯನ ವಸ್ತು ಕಾರ್ಖಾನೆಯೂ ಒಂದು ಕಬ್ಬಿಣದ ಕಾರ್ಖಾನೆಯೂ ಸೇರಿ ಆದ ಕೂಟ. ಒಂದೇ ಬಗೆಯ ವ್ಯಾಪಾರ ಅಥವಾ ಉದ್ಯಮದಲ್ಲಿ ನಿರತವಾದ ಸಂಸ್ಥೆಗಳ ನಡುವಣ ಸ್ಪರ್ಧೆಯನ್ನು ನಿವಾರಿಸಬೇಕೆಂಬ ಮುಖ್ಯ ಉದ್ದೇಶದಿಂದ ಸಮತಲಕೂಟ ಹುಟ್ಟಿಕೊಳ್ಳುತ್ತದೆ. ಉತ್ಪಾದನೆಯ ಇಳಿತ, ಸಮಾನ ಬೆಲೆ ನಿಗದಿ, ಸಮಾನ ಮಾರಾಟ ಮುಂತಾದ ಕ್ರಮಗಳಿಂದ ಸ್ಪರ್ಧೆಯನ್ನು ಮೊಟಕು ಮಾಡುವುದು ಇಂಥ ಕೂಟಗಳ ಉದ್ದೇಶ. ಬೃಹದ್ಗಾತ್ರೋತ್ಪಾದನೆಯ ಅನುಕೂಲ ಗಳನ್ನೆಲ್ಲ ಪಡೆಯುವುದು ಇದರಿಂದ ಸಾಧ್ಯ. ಉದಗ್ರಕೂಟದಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ಒಂದಾಗುವ ಘಟಕಗಳು ಬೇರೆ ಬೇರೆ ಪದಾರ್ಥಗಳನ್ನು ತಯಾರಿಸುತ್ತವೆ. ಸಮತಲಕೂಟದ ಇನ್ನೊಂದು ಅನುಕೂಲವೆಂದರೆ ಉತ್ಪಾದನ ಕಾರ್ಯದ ಸಂಯೋಜನೆ. ಕೆಲವು ಪರಿಣಿತರ ಸೇವೆಯನ್ನು ಘಟಕಕ್ಕಾಗಿ ಪಡೆಯುವುದು ಲಾಭದಾಯಕವಾಗದಾಗ ಈ ಕೂಟದಲ್ಲಿನ ಎಲ್ಲಾ ಉತ್ಪಾದನ ಘಟಕಗಳಿಗಾಗಿ ಅದನ್ನು ಪಡೆದುಕೊಳ್ಳಬಹುದು. ಆದರೆ ಸಮತಲ ಕೂಟದಲ್ಲಿ ಕೆಲವು ನ್ಯೂನತೆಗಳಿವೆ. ಮಾರಾಟದ ಪೇಟೆಗಳ ಬಗ್ಗೆ ಎಂದೆಂದೂ ಭರವಸೆ ಹೊಂದಿರುವುದು ಸಾಧ್ಯವಿಲ್ಲ. ಕೂಟದಲ್ಲಿ ಸೇರಿದ ಘಟಕಗಳಿಗೆ ಕಚ್ಚಾಸಾಮಗ್ರಿ ಸರಬರಾಯಿ ಸರ್ವದಾ ಸುಸೂತ್ರವಾಗಿ ನಡೆಯುವುದೆಂಬ ಭರವಸೆಯೂ ಇರುವುದಿಲ್ಲ. ಆದರೆ ಕಚ್ಚಾಸಾಮಗ್ರಿ ಕೊಳ್ಳುವವರ ನಡುವೆ ನಿರುಪಾಧಿಕ ಸ್ಪರ್ಧೆ ಇಲ್ಲದಿರುವುದರಿಂದ ಅದರ ಉತ್ಪಾದಕರ ಮೇಲೆ ಒತ್ತಾಯ ಹೇರಿ ಪ್ರಭಾವ ಬೆಳೆಸಿಕೊಳ್ಳುವುದು ಸಾಧ್ಯ. ಇವರಂತೆಯೇ ಕಚ್ಚಾಸಾಮಗ್ರಿ ಉತ್ಪಾದಕರೂ ಒಂದಾಗಿ ಕೂಟ ರಚಿಸಿಕೊಂಡರೆ ಆಗ ಈ ಎರಡು ಕೂಟಗಳ ನಡುವೆ ಪರಸ್ಪರ ಶಕ್ತಿ ಪರೀಕ್ಷೆಯಾಗಬಹುದು. ಸಮತಲ ಕೂಟದಿಂದ ಏಕಸ್ವಾಮ್ಯಗಳು ಉದಿಸಬಹುದು. ಸಿದ್ಧವಸ್ತುವಿನ ಸರಬರಾಯಿ ಹಾಗೂ ಬೆಲೆಗಳು ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ನಿರ್ಧಾರವಾಗುವ ಬದಲು ಈ ಕೂಟಗಳ ಹಿಡಿತಕ್ಕೆ ಸಿಕ್ಕಿ (ಅನುಭೋಗಿಗಳ) ಗ್ರಾಹಕರ ಹಿತಗಳಿಗೆ ಧಕ್ಕೆ ಬರಬಹುದು. ಉದಗ್ರಕೂಟಗಳಿಂದ ಪದಾರ್ಥಗಳ ಸಂಗ್ರಹ, ಕ್ರಯವಿಕ್ರಯ, ಸಾಗಣೆ ಮುಂತಾದವು ಗಳಲ್ಲಿ ಉಳಿತಾಯ ಸಾಧಿಸಬಹುದು. ಒಂದು ಹಂತದ ಸಿದ್ಧವಸ್ತುವೇ ಇನ್ನೊಂದು ಹಂತದ ಕಚ್ಚಾಸಾಮಗ್ರಿಯಾಗಿದ್ದು, ಈ ಪದಾರ್ಥಗಳು ಅನುಕ್ರಮವಾಗಿ ಬಳಸಲ್ಪಡುವುದರಿಂದ ಜಾಹೀರಾತಿನ ಖರ್ಚಾಗಲಿ ದೀರ್ಘಕಾಲದ ದಾಸ್ತಾನಿನ ಅಗತ್ಯವಾಗಲಿ ಇರುವುದಿಲ್ಲ. ಕೂಟದಲ್ಲಿ ಅತ್ಯಂತ ಬುಡದಲ್ಲಿರುವ ಸಂಸ್ಥೆ ವಿನಾ ಮಿಕ್ಕೆಲ್ಲ ಸಂಸ್ಥೆಗಳಿಗೂ ಕಚ್ಚಾಸಾಮಗ್ರಿ ದೊರಕುವ ಖಾತರಿಯಿರುತ್ತದೆ. ಮಾರುಕಟ್ಟೆಯಲ್ಲೂ ಪದಾರ್ಥ ವಿಕ್ರಯ ಮಾಡುವ ಸಮಸ್ಯೆ ಮುಖ್ಯವಾಗಿ ಅಗ್ರ ಘಟಕದ ಘಟ್ಟಕ್ಕೆ ಸೀಮಿತವಾಗಿರುತ್ತದೆ. ಆದರೆ ಈ ಕೂಟದಲ್ಲೂ ನ್ಯೂನತೆಗಳೂ ಇತಿಮಿತಿಗಳೂ ಇಲ್ಲದಿಲ್ಲ. ಈ ಕೂಟದ ನಾನಾ ಘಟ್ಟಗಳಲ್ಲಿ ಯಾವುದಾದರೂ ಒಂದು ಘಟ್ಟದಲ್ಲಿ ಏರುಪೇರು ಆದರೆ, ಆ ಕೂಟದ ಇಡಿಯ ಆರ್ಥಿಕ ವ್ಯವಸ್ಥೆಯೇ ಅಸ್ತವ್ಯಸ್ತವಾಗಬಹುದು. ಉತ್ಪಾದಕ ಘಟಕಗಳು ಬೇರೆ ಬೇರೆ ಘಟ್ಟವಾದ್ದರಿಂದ ಬೃಹದ್ಗಾತ್ರ ಉತ್ಪಾದನೆಯ ಅನುಕೂಲ ಹೆಚ್ಚಾಗಿ ಲಭಿಸುವುದಿಲ್ಲ. ವರ್ತುಲಕೂಟದ ಹುಟ್ಟು ಸಾಮಾನ್ಯವಾಗಿ ಆಕಸ್ಮಿಕ; ಅಥವಾ ಉದ್ಯಮ ಶಕ್ತಿ ಗಳಿಸಬೇಕೆಂಬ ದುರಾಸೆಯ ಫಲ. ದೊಡ್ಡ ಉದ್ಯಮಪತಿಗಳೂ ಬಂಡವಾಳಗಾರರೂ ಸಾಧ್ಯವಾದಷ್ಟು ಮಟ್ಟಿಗೆ ಕೈಗಾರಿಕೆಗಳ ಮೇಲೆ ಹಿಡಿತಹೊಂದಲೂ ಪ್ರಭಾವ ಬೀರಲೂ ಆಸಕ್ತಿ ಹೊಂದಿರುತ್ತಾರೆ. ಕೂಟದಲ್ಲಿ ಸೇರುವ ಘಟಕಗಳ ಆಯ್ಕೆಯ ಹಿಂದೆ ಯಾವ ತರ್ಕವಾಗಲಿ ಕ್ರಮವಾಗಲಿ ಇರುವುದಿಲ್ಲ. ಬಹಳ ಹೆಚ್ಚೆಂದರೆ, ಒಂದು ಹತ್ತಿಗಿರಣಿಯೂ ಕಾಗದದ ಕಾರ್ಖಾನೆಯೂ ಸಕ್ಕರೆ ಕಾರ್ಖಾನೆಯೂ ಯಂತ್ರ ಕಾರ್ಖಾನೆಯೂ ಕೂಟದಲ್ಲಿ ಸೇರಿದರೆ ಯಂತ್ರ ಕಾರ್ಖಾನೆ ಇತರ ಘಟಕಗಳಿಗೆ ಯಂತ್ರವನ್ನು ಒದಗಿಸಬಹುದು; ಹತ್ತಿಯ ಗಿರಣಿಯಿಂದ ಎಲ್ಲ ಕಾರ್ಖಾನೆಗಳ ಕಾರ್ಮಿಕರೂ ಬಟ್ಟೆ ಕೊಳ್ಳುವ ಸೌಲಭ್ಯ ಪಡೆಯಬಹುದು. ಈ ಮಾರಾಟದಲ್ಲಿ ಒಂದಾಗಿರುವ ಘಟಕಗಳಿಗೆ ದ್ರವ್ಯ ಸೌಲಭ್ಯವೂ ಒದಗಬಹುದು. ಕೂಟಗಳಲ್ಲಿ ಸೇರುವ ಘಟಕಗಳ ಉದ್ಯಮಗಳ ಸ್ವರೂಪದ ದೃಷ್ಟಿಯಿಂದಲೇ ಅಲ್ಲದೆ ಈ ಕೂಟಗಳ ರಚನೆಯ ದೃಷ್ಟಿಯಿಂದಲೂ ಇವನ್ನು ನಾನಾ ಗುಂಪುಗಳಾಗಿ ವಿಂಗಡಿಸುವುದು ಸಾಧ್ಯ. ಮಾರಾಟ ವಿಧಾನಗಳು, ಬೆಲೆ ನಿಯಂತ್ರಣ, ಪೇಟೆಯ ಹಂಚಿಕೆ, ಉತ್ಪತ್ತಿಯ ನಿಯಂತ್ರಣ ಮುಂತಾದವುಗಳ ವಿಚಾರವಾಗಿ ಸಂಸ್ಥೆಗಳು ತಂತಮ್ಮಲ್ಲೆ ಮಾಡಿಕೊಂಡ ಅನೌಪಚಾರಿಕ ಒಪ್ಪಂದಗಳು (ಇನ್ಫಾರ್ಮಲ್ ಅಗ್ರಿಮೆಂಟ್ಸ್‌) ಬಲು ಸಡಿಲ (ನೋಡಿ-ಒಪ್ಪಂದಗಳು,- ಅನೌಪಚಾರಿಕ). ಇವುಗಳ ಕಟ್ಟುಗಳನ್ನು ಮುರಿಯಲೂ ಸಾಧ್ಯ. ಇವು ಸಂಭಾವಿತರ ನಡುವಣ ಒಡಂಬಡಿಕೆಗಳು. ಇವಕ್ಕಿಂತ ಹೆಚ್ಚು ಬಿಗಿಯಾದ ಕೂಟಗಳು ಇವು : ೧ ಸಮುಚ್ಚಯಗಳು (ಪುಲ್ಸ್‌), ೨ ವ್ಯವಹಾರ ಕೂಟಗಳು ಅಥವಾ ಮಾರಾಟ ಕೂಟಗಳು (ಕಾರ್ಟೆಲ್ಸ್‌), ೩ ಕೂಟ ಸಂಸ್ಥೆಗಳು (ಟ್ರಸ್ಟ್ಸ್), ೪ ಹಿತಾಸಕ್ತಿ ಸಮುದಾಯ (ಕಮ್ಯೂನಿಟಿ ಆಫ್ ಇಂಟರೆಸ್ಟ್ಸ್ ), ೫ ಸೂತ್ರಧಾರೀ ಕಂಪನಿ (ಹೋಲ್ಡಿಂಗ್ ಕಂಪನಿ), ೬ ಸಮೇಕನ (ಕನ್ಸಾಲಿಡೇಷನ್) ಮತ್ತು ೭ ವ್ಯಾಪಾರ ಸಂಘಗಳು (ಟ್ರೇಡ್ ಅಸೋಸಿಯೇಷನ್ಸ್‌). ಇವುಗಳಿಗೆ ಆಯಾ ಶೀರ್ಷಿಕೆ ನೋಡಿ. (ಕೆ.ಆರ್.ಎಂ.ಎ.)